- Home
- Entertainment
- Cine World
- ಸೌತ್ ಸಿನಿಮಾ ಗೆಲ್ಲುತ್ತಿದೆ, ಉತ್ತರದ್ದು ಸೋಲುತ್ತಿದೆ ಅಂತ ನಾನು ಯೋಚಿಸೋಲ್ಲ: ಅಮೀರ್ ಖಾನ್ ಹೇಳಿದ 6 ಸೂತ್ರಗಳು!
ಸೌತ್ ಸಿನಿಮಾ ಗೆಲ್ಲುತ್ತಿದೆ, ಉತ್ತರದ್ದು ಸೋಲುತ್ತಿದೆ ಅಂತ ನಾನು ಯೋಚಿಸೋಲ್ಲ: ಅಮೀರ್ ಖಾನ್ ಹೇಳಿದ 6 ಸೂತ್ರಗಳು!
ದಕ್ಷಿಣದ ಸಿನಿಮಾ ಗೆಲ್ಲುತ್ತಿದೆ, ಉತ್ತರದ ಸಿನಿಮಾ ಗೆಲ್ಲುತ್ತಿಲ್ಲ ಅಂತ ನಾನು ಆಲೋಚಿಸುವುದಿಲ್ಲ. ನಾವು ಬಹುತೇಕರ ಮೂಲ ಭಾವಗಳನ್ನು ಸಿನಿಮಾದಲ್ಲಿ ತರುತ್ತಿಲ್ಲ. ದ್ವೇಷ ಒಂದು ತೀವ್ರ ಭಾವ. ಆದರೆ ನಾವು ಅನುಮಾನದ ಮೇಲೆ ಸಿನಿಮಾ ಮಾಡುತ್ತಿದ್ದೇವೆ.

1. ನಾನು ಸಿನಿಮಾ ಒಪ್ಪಿಕೊಳ್ಳುವಾಗ ಮೂರು ವಿಚಾರ ನೋಡುತ್ತೇನೆ. ಒಂದು ಸ್ಕ್ರಿಪ್ಟ್. ಇನ್ನೊಂದು ನಿರ್ದೇಶಕ. ಮತ್ತೊಂದು ನಿರ್ಮಾಪಕರು. ನನ್ನ ಮೊದಲ ಸಿನಿಮಾ ಆದ ಮೇಲೆ ನನಗೆ ಸಿಕ್ಕಾಪಟ್ಟೆ ಆಫರ್‌ಗಳು ಬಂತು. ನಾನು ಜಾಸ್ತಿ ಯೋಚಿಸದೆ ಹಲವು ಸಿನಿಮಾ ಒಪ್ಪಿಕೊಂಡೆ. ಎಲ್ಲವೂ ತೋಪಾದುವು. ಆಗ ನನಗೆ ಒಂದು ವಿಚಾರ ಅರ್ಥವಾಯಿತು. ಒಳ್ಳೆಯ ಸ್ಕ್ರಿಪ್ಟ್ ಮಾತ್ರವೇ ಮುಖ್ಯ ಅಲ್ಲ. ಒಬ್ಬ ನಿರ್ದೇಶಕ ಬೇಕು. ಅವನಿಗೆ ಕೆಲಸ ಗೊತ್ತಿರಬೇಕು. ತುಂಬಾ ಮುಖ್ಯವಾಗಿ ಒಳ್ಳೆಯ ನಿರ್ಮಾಪಕ ಇರಬೇಕು. ನಿರ್ದೇಶಕ ಒಂದು ರೊಮ್ಯಾಂಟಿಕ್ ಹಾಡಿನ ಬಗ್ಗೆ ಹೇಳಿದಾಗ ನಾನು ಕಾಶ್ಮೀರ ಕಣಿವೆಯ ಕಲ್ಪನೆ ಮಾಡಿಕೊಳ್ಳುತ್ತೇನೆ. ನಿರ್ದೇಶಕ ಖಂಡಾಲ ಘಾಟ್ ಯೋಚಿಸಿರುತ್ತಾನೆ. ಆದರೆ ನಿರ್ಮಾಪಕರು ಖರ್ಚು ಕಡಿಮೆಯಾಗಲಿ ಎಂದು ಯಾವುದೇ ಫಿಲ್ಮ್ ಸಿಟಿಯ ಕೆರೆಯ ದಡವನ್ನು ಆಲೋಚಿಸಿರುತ್ತಾರೆ. ಸ್ಕ್ರಿಪ್ಟ್‌ಗೆ ಏನು ಬೇಕೋ ಅದನ್ನು ಕೊಡುವ ನಿರ್ದೇಶಕ, ನಿರ್ಮಾಪಕ ಬಹಳ ಮುಖ್ಯ.
2. ನನ್ನ ಸಿನಿಮಾ ಸಾಲು ಸಾಲಾಗಿ ಸೋಲುತ್ತಿರುವಾಗ ನನಗೆ ಒಮ್ಮೆ ಮಹೇಶ್ ಭಟ್ ಸಿನಿಮಾ ಆಫರ್ ನೀಡಿದ್ದರು. ನನ್ನ ಕರಿಯರ್ ಪಾತಾಳಕ್ಕೆ ಹೋಗುತ್ತಿದ್ದ ಸಮಯದಲ್ಲಿ ಈ ಆಫರ್ ನನ್ನನ್ನು ಕೈಹಿಡಿದು ಎತ್ತಿಕೊಳ್ಳುತ್ತದೆ ಎಂದು ಬಹಳ ಖುಷಿ ಪಟ್ಟಿದ್ದೆ. ಹೋಗಿ ಕತೆ ಕೇಳಿದೆ. ಆದರೆ ಕತೆ ಇಷ್ಟವಾಗಲಿಲ್ಲ. ಒಂದು ದಿನ ಸಮಯ ಕೇಳಿದೆ. ನಾನಿದ್ದ ಕಷ್ಟದ ಪರಿಸ್ಥಿತಿಗೆ ಸಿನಿಮಾ ಒಪ್ಪಿಕೊಳ್ಳಬೇಕಿತ್ತು. ಮರುದಿನ ಹೋದೆ. ಮಹೇಶ್ ಭಟ್ ಅವರಿಗೆ ನೇರವಾಗಿ ಈ ಕತೆ ನನಗೆ ಇಷ್ಟವಾಗಲಿಲ್ಲ ಎಂದು ಹೇಳಿದೆ. ಆ ಸಿನಿಮಾ ಆಗಲಿಲ್ಲ. ಆದರೆ ಆ ಕಷ್ಟದ ದಿನಗಳಲ್ಲಿ ಕೂಡ ನಾನು ನೋ ಎನ್ನುವ ಧೈರ್ಯವನ್ನು ಉಳಿಸಿಕೊಂಡಿದ್ದೆ. ಹಾಗಾಗಿಯೇ ಇಷ್ಟು ದೂರ ನಡೆದುಬರಲು ಸಾಧ್ಯವಾಯಿತು ಅನ್ನಿಸುತ್ತದೆ.
aamir khan
3. ನಾನು ನನ್ನ ಪಾತ್ರಕ್ಕೆ ಏನು ಬೇಕು ಅಂತ ಆಲೋಚಿಸುವುದಿಲ್ಲ. ಆ ಸಿನಿಮಾಗೆ ಏನು ಬೇಕೋ ಅದನ್ನು ಆಲೋಚಿಸುತ್ತೇನೆ. ಒಂದು ಸಲ ಸ್ಕ್ರಿಪ್ಟ್ ನರೇಷನ್‌ಗೆ ಕುಳಿತಿದ್ದಾಗ ನಟಿಯೊಬ್ಬರು ನನಗೆ ಈ ಸಿನಿಮಾದಲ್ಲಿ ಒಂದೇ ಸಲ ಕಾಸ್ಟ್ಯೂಮ್ ಬದಲಿಸುವ ಅವಕಾಶ ಎಂದು ಹೇಳಿದ್ದರು. ನನಗೆ ಅಚ್ಚರಿಯಾಯಿತು. ಆ ಥರ ನನ್ನ ಪಾತ್ರದ ಬಗ್ಗೆಯೇ ಯೋಚಿಸಲು ನನ್ನಿಂದ ಸಾಧ್ಯವಿಲ್ಲ. ನಾನು ಒಟ್ಟು ಸಿನಿಮಾದ ಬಗ್ಗೆ, ಸಿನಿಮಾಗೆ ಏನು ಒಳ್ಳೆಯದಾಗಬೇಕು ಅನ್ನುವುದರ ಬಗ್ಗೆ ಆಲೋಚಿಸುತ್ತೇನೆ.
4. ದಕ್ಷಿಣದ ಸಿನಿಮಾ ಗೆಲ್ಲುತ್ತಿದೆ, ಉತ್ತರದ ಸಿನಿಮಾ ಗೆಲ್ಲುತ್ತಿಲ್ಲ ಅಂತ ನಾನು ಆಲೋಚಿಸುವುದಿಲ್ಲ. ನಾವು ಬಹುತೇಕರ ಮೂಲ ಭಾವಗಳನ್ನು ಸಿನಿಮಾದಲ್ಲಿ ತರುತ್ತಿಲ್ಲ. ದ್ವೇಷ ಒಂದು ತೀವ್ರ ಭಾವ. ಆದರೆ ನಾವು ಅನುಮಾನದ ಮೇಲೆ ಸಿನಿಮಾ ಮಾಡುತ್ತಿದ್ದೇವೆ. ಅನುಮಾನ ಹಗುರ ಭಾವ. ನಾವು ಗಾಢ ಭಾವಗಳ ಮೇಲೆ ಸಿನಿಮಾ ಮಾಡಬೇಕಿದೆ.
5. ಸ್ಮಾರ್ಟ್‌ಫೋನ್ ಬಂದ ಮೇಲೆ ಪ್ರೇಕ್ಷಕ ಬದಲಾಗಿದ್ದಾನೆ. ಅವನು ಒಂದು ಕ್ಷಣವೂ ಅತ್ತಿತ್ತ ಯೋಚಿಸದಂತೆ, ಫೋನ್ ತೆಗೆಯದಂತೆ ಸಿನಿಮಾ ಮಾಡಬೇಕಿದೆ. ನಮ್ಮ ಉದ್ಯಮ ಕೂಡ ವಿಚಿತ್ರವಾಗಿದೆ. ನಾವು ಒಂದು ಉತ್ಪನ್ನವನ್ನು ಥಿಯೇಟರ್‌ನಲ್ಲಿ ಮಾರಲು ಸಿದ್ಧಗೊಳಿಸಿರುತ್ತೇವೆ. ಜೊತೆಗೆ ನೀನು ಇಲ್ಲಿ ಉತ್ಪನ್ನ ತೆಗೆದುಕೊಳ್ಳದಿದ್ದರೆ ಕೆಲವು ದಿನಗಳ ಮೇಲೆ ನಿನ್ನ ಮನೆಗೇ ತಂದು ಉತ್ಪನ್ನ ಕೊಡುತ್ತೇವೆ ಎಂದು ಹೇಳುತ್ತಿದ್ದೇವೆ. ಯಾವುದೇ ಉದ್ಯಮ ಕೂಡ ಒಂದು ಉತ್ಪನ್ನವನ್ನು ಎರಡೆರಡು ಸಲ ನೀಡುವ ಕೆಲಸ ಮಾಡುವುದಿಲ್ಲ. ನಾವು ಮಾಡುತ್ತಿದ್ದೇವೆ. ಅದನ್ನು ಸರಿ ಮಾಡಬೇಕಿದೆ.
6. ನಾನು ಮಾರುಕಟ್ಟೆಗೆ ಏನು ಬೇಕೋ ಆಥರ ಸಿನಿಮಾ ಮಾಡುವುದಿಲ್ಲ. ಪ್ರೇಕ್ಷಕರಿಗೆ ಏನು ಬೇಕು ಅಂತ ಆಲೋಚಿಸುವುದಿಲ್ಲ. ನನಗೆ ತಟ್ಟಿದ ಕತೆಗಳನ್ನಷ್ಟೇ ಸಿನಿಮಾ ಮಾಡುತ್ತೇನೆ. ಆದ್ದರಿಂದ ಬಹುತೇಕ ಸಲ ಮಾರುಕಟ್ಟೆ ಹೇಗಿರುತ್ತದೋ ಅದಕ್ಕೆ ವಿರುದ್ಧವಾದ ಸಿನಿಮಾಗಳನ್ನೇ ಮಾಡಿದ್ದೇನೆ.