ಚಿನ್ನದ ಬೆಲೆ ಇಳಿಕೆ ಯಾವಾಗ? ಆರ್ಥಿಕ ತಜ್ಞ ವಿಜಯ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ
ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಬೆಳ್ಳಿ ದರವೂ ಗಣನೀಯವಾಗಿ ಏರಿಕೆಯಾಗಿದೆ. ಅಮೆರಿಕ-ವೆನೆಜುವೆಲಾ ನಡುವಿನ ಉದ್ವಿಗ್ನತೆಯಂತಹ ಜಾಗತಿಕ ಕಾರಣಗಳಿಂದ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಚಿನ್ನದತ್ತ ಮುಖ ಮಾಡುತ್ತಿದ್ದು, ಇದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಸಾರ್ವಕಾಲಿಕ ಗರಿಷ್ಠ ದರ
ಹಳದಿ ಲೋಹ ಚಿನ್ನ ಸಾರ್ವಕಾಲಿಕ ಗರಿಷ್ಠ ದರಕ್ಕೆ ತಲುಪಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1,45,690 ರೂಪಾಯಿಗೆ ಏರಿಕೆಯಾಗಿದೆ. ಒಂದು ಗ್ರಾಂ ಚಿನ್ನ ಬೇಕೆಂದ್ರೂ ನೀವು 14,569 ರೂಪಾಯಿ ಪಾವತಿಸಬೇಕಾಗುತ್ತದೆ. ಇಂದು 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 1,910 ರೂ.ಗಳಷ್ಟು ಏರಿಕೆ ಕಂಡು ಬಂದಿದೆ.
ಬೆಳ್ಳಿ ದರದಲ್ಲಿಯೂ ಏರಿಕೆ
ಚಿನ್ನದ ಜೊತೆಯಲ್ಲಿಯೂ ಬೆಳ್ಳಿ ದರಗಳು ಏರಿಕೆಯತ್ತವೇ ಮುಖ ಮಾಡಿವೆ. ಇಂದು 1 ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರೂ.ಗಳಷ್ಟು ಹೆಚ್ಚಳವಾಗಿದೆ. 10 ಗ್ರಾಂ ಬೆಳ್ಳಿ ಬೆಲೆ 3,050 ರೂಪಾಯಿ ಆಗಿದೆ. ಜನವರಿ 16ರಂದು ಮಾತ್ರ ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿತ್ತು.
ಚಿನ್ನದ ಬೆಲೆ ಏರಿಕೆಗೆ ಕಾರಣ ಏನು?
ಡಿಸೆಂಬರ್‌ನಲ್ಲಿ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡು ಬಂದಿತ್ತು. ಆದ್ರೆ 2026ರ ಆರಂಭದಿಂದಲೇ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಉದ್ವಿಗ್ನತೆ ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದೆ.
ಷೇರು ಮಾರುಕಟ್ಟೆ
ಈ ಜಾಗತಿಕ ಬೆಳವಣಿಗೆಯಿಂದ ಹೂಡಿಕೆದಾರರು ಷೇರು ಮಾರುಕಟ್ಟೆಯಂತಹ ಅಪಾಯಕಾರಿ ಸ್ವತ್ತುಗಳಿಂದ ದೂರ ಸರಿದು ಚಿನ್ನದಂತಹ ಸುರಕ್ಷಿತ ಹೂಡಿಕೆಗಳತ್ತ ಮುಖ ಮಾಡುತ್ತಿದ್ದಾರೆ. ಈ ಕಾರಣದಿಂದ ದೇಶಿಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ.
ಚಿನ್ನದ ದರ ಹೇಗೆ ನಿರ್ಧಾರ ಆಗುತ್ತೆ?
ಯುದ್ಧ, ರಾಜಕೀಯ ಉದ್ವಿಗ್ನತೆ ಅಥವಾ ಆರ್ಥಿಕ ಬಿಕ್ಕಟ್ಟುಗಳಂತಹ ಜಾಗತಿಕ ಘಟನೆಗಳು ಸಂಭವಿಸಿದಾಗಲೆಲ್ಲಾ ಚಿನ್ನದ ಬೇಡಿಕೆ ಹೆಚ್ಚಾಗುತ್ತದೆ. ಇತ್ತೀಚೆಗೆ ಅಮೆರಿಕಾ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ. ಇದೆಲ್ಲದರ ಜೊತೆ ರೂಪಾಯಿ ಮೌಲ್ಯ ಕುಸಿತ, ಸಂಭಾವ್ಯ ಯುಎಸ್ ಬಡ್ಡಿದರ ಕಡಿತ, ಹಣದುಬ್ಬರ, ಭಾರತದಲ್ಲಿ ಮದುವೆ-ಹಬ್ಬದ ಸೀಸನ್ ಸಹ ಚಿನ್ನ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತವೆ.
ಇದನ್ನೂ ಓದಿ: 2000ರಲ್ಲಿ ₹1 ಲಕ್ಷಕ್ಕೆ ಚಿನ್ನ ಖರೀದಿಸಿದ್ದರೆ, ಇಂದು ನಿಮ್ಮ ಬಳಿ ಎಷ್ಟು ಹಣ ಇರುತ್ತಿತ್ತು ಗೊತ್ತಾ?
ಚಿನ್ನದ ಬೆಲೆ ಇಳಿಕೆ ಯಾವಾಗ?
ಇಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆರ್ಥಿಕ ತಜ್ಞ ವಿಜಯ್, ಇರಾನ್ ಮತ್ತು ವೆನಿಜುವೆಲಾ ವಿರುದ್ಧ ಅಮೆರಿಕಾ ದಾಳಿ ನಡೆಸುತ್ತಿದೆ. ಇದು ಯುದ್ದ ಸನ್ನಿವೇಶ ಆಗಿರೋದರಿಂದ ಹೂಡಿಕೆದಾರರು ಚಿನ್ನ ಖರೀದಿಸುತ್ತಿದ್ದಾರೆ. ಇಡೀ ಈ ವರ್ಷ ಚಿನ್ನದ ಬೆಲೆ ಹೆಚ್ಚಾಗುತ್ತಿರುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿನ ಯುದ್ಧದ ತೀವ್ರತೆ ಕಡಿಮೆಯಾದ ನಂತರವೇ ಬೆಲೆಯಲ್ಲಿ ಕುಸಿತ ಕಾಣುವ ಸಾಧ್ಯತೆಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಬಂಗಾರದ ಬೆಲೆ ₹1.5 ಲಕ್ಷ ದಾಟಿದರೂ ಭಯಬೇಡ; ಚಿನ್ನದ ಮೇಲಿನ ಸಾಲಕ್ಕೆ ಫೆ.1ರವರೆಗೆ ಕಾದವರಿಗೆ ಗುಡ್‌ನ್ಯೂಸ್ ಪಕ್ಕಾ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

