ಸಣ್ಣ ಅಂಗಡಿಯಿಂದ ಲಾಭ ತೆಗೆದು ನಷ್ಟದಲ್ಲಿದ್ದ ವಿಜಯ್ ಮಲ್ಯ ಕಂಪೆನಿ ಖರೀದಿಸಿ 56,000 ಕೋಟಿಗೆ ಬೆಳೆಸಿದ ಸಹೋದರರು!
ಒಬ್ಬ ವಾಣಿಜ್ಯೋದ್ಯಮಿಯು ವ್ಯಾಪಾರದಲ್ಲಿ ದೊಡ್ಡ ಹೆಸರು ಮಾಡಲು, ಹೂಡಿಕೆ ಮಾಡಲು ಸರಿಯಾಗಿ ಮಾರುಕಟ್ಟೆ ಜ್ಞಾನ ಇರುವುದು ಬಹುಮುಖ್ಯ. ಅನೇಕ ಜನರು ಈ ನಿರ್ಧಾರವನ್ನು ತೆಗೆದುಕೊಳ್ಳಲು ಹೆಣಗಾಡುತ್ತಿರುವಾಗ ಈ ಸಹೋದರರು ಮುಳುಗುತ್ತಿದ್ದ ಕಂಪೆನಿಯನ್ನು ಖರೀದಿ ಮಾಡಿ ದೊಡ್ಡದಾಗಿ ಬೆಳಸಿದರು.
ಈ ಸಹೋದರ ಜೋಡಿಯು ವಿಫಲವಾದ ಆಸ್ತಿಯನ್ನು ಖರೀದಿ ಮಾಡಿ ಅದನ್ನು ದೊಡ್ಡ ಯಶಸ್ಸಿಗೆ ತೆಗೆದುಕೊಂಡು ಹೋದರು. ಅವರೇ ಕುಲದೀಪ್ ಸಿಂಗ್ ಧಿಂಗ್ರಾ ಮತ್ತು ಗುರ್ಬಚನ್ ಸಿಂಗ್ ಧಿಂಗ್ರಾ . ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ತಮ್ಮ ಅದೃಷ್ಟವನ್ನು ಬದಲಾಯಿಸಿದರು.
ಪಂಜಾಬ್‌ನ ಅಮೃತಸರದ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಧಿಂಗ್ರಾ ಸಹೋದರರು ವ್ಯಾಪಾರದ ಸಾಮಾನ್ಯ ಜ್ಞಾನದೊಂದಿಗೆ ಬೆಳೆದರು. ಅವರ ಅಜ್ಜ ಪೈಂಟ್ ಬಿಸಿನೆಸ್ ಆರಂಭಿಸಿದ್ದರು. ಸಹೋದರರಿಬ್ಬರೂ ದೆಹಲಿ ವಿಶ್ವವಿದ್ಯಾನಿಲಯದಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು ಮತ್ತು ಅಮೃತಸರದಲ್ಲಿ ಸಣ್ಣ ಅಂಗಡಿ ವ್ಯಾಪಾರಕ್ಕೆ ಮುಂದಾದರು.
1970 ರ ಹೊತ್ತಿಗೆ ಅವರ ಕುಟುಂಬದ ಪೈಂಟ್ ಅಂಗಡಿಯ ವಾರ್ಷಿಕ ವಹಿವಾಟು 10 ಲಕ್ಷ ರೂಪಾಯಿಗಳಾಗಿತ್ತು ಮತ್ತು ಕ್ರಮೇಣ ಅವರ ವ್ಯಾಪಾರವು ಬೆಳೆಯಲು ಪ್ರಾರಂಭಿಸಿತು, ಇದರ ಪರಿಣಾಮವಾಗಿ ಧಿಂಗ್ರಾ ಸಹೋದರರು 1980 ರ ದಶಕದಲ್ಲಿ ಸೋವಿಯತ್ ಒಕ್ಕೂಟಕ್ಕೆ ಅತಿದೊಡ್ಡ ಬಣ್ಣ ರಫ್ತುದಾರರಾದರು. ವಿದೇಶಗಳಲ್ಲಿ ಇವರ ಪೈಂಟ್ ಗೆ ಬೇಡಿಕೆ ಹೆಚ್ಚಿತು.
ಕುಲದೀಪ್ ಸಿಂಗ್ ಇನ್ನೂ ತೃಪ್ತರಾಗಿರಲಿಲ್ಲ ಮತ್ತು ಅವರ ವ್ಯವಹಾರವನ್ನು ಇನ್ನೂ ದೊಡ್ಡ ಎತ್ತರಕ್ಕೆ ಕೊಂಡೊಯ್ಯಲು ಬಯಸಿದ್ದರು. ಆ ಸಮಯದಲ್ಲಿ ವಿಜಯ್ ಮಲ್ಯ ಅವರ ಒಡೆತನದ ಯುಬಿ ಗ್ರೂಪ್‌ಗೆ ಸೇರಿದ ಬರ್ಗರ್ ಪೇಂಟ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅವರ ಗುರಿಯಾಗಿತ್ತು. ಅದರಂತೆ ನಷ್ಟದ ಹಾದಿಯಲ್ಲಿದ್ದ ಕಂಪೆನಿಯನ್ನು 1991ರಲ್ಲಿ ಖರೀದಿ ಮಾಡಿದರು.
ಅವರ ಯಶಸ್ವಿ ಬಹು-ಮಿಲಿಯನ್ ಡಾಲರ್ ವ್ಯವಹಾರದೊಂದಿಗೆ, ಇಬ್ಬರು ಒಡಹುಟ್ಟಿದವರು 2023 ರಲ್ಲಿ ತಲಾ ರೂ 25,000 ಕೋಟಿ ($3.1 ಬಿಲಿಯನ್) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಕುಲದೀಪ್ ಬರ್ಗರ್ ಪೇಂಟ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರೆ ಗುರ್ಬಚನ್ ಉಪಾಧ್ಯಕ್ಷರಾಗಿದ್ದಾರೆ.
ಗುರ್ಬಚನ್ ಮತ್ತು ಕುಲ್ದೀಪ್ ಅವರು ಫೋರ್ಬ್ಸ್ ಭಾರತದ ಶ್ರೀಮಂತ ಭಾರತೀಯರಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವದ ಬಿಲಿಯನೇರ್‌ಗಳ ಪಟ್ಟಿಯಲ್ಲಿ ನಿವ್ವಳ ಮೌಲ್ಯದ ಮೂಲಕ ಕೂಡ ಭಾರತೀಯರ ಪಟ್ಟಿಯಲ್ಲಿ ಸಹೋದರರಿದ್ದಾರೆ.