- Home
- Business
- ಈ ದೀಪಾವಳಿಗೆ ನಿಮ್ಮ ಮಕ್ಕಳಿಗಾಗಿ ಸ್ವೀಟ್, ದುಬಾರಿ ಬಟ್ಟೆ ಬೇಡ, ಈ ಷೇರುಗಳನ್ನೇ ಗಿಫ್ಟ್ ಕೊಡಿ! ಮಕ್ಕಳ ಭವಿಷ್ಯಕ್ಕೆ ಸಂಪತ್ತು ಸೃಷ್ಟಿಸುತ್ತೆ!
ಈ ದೀಪಾವಳಿಗೆ ನಿಮ್ಮ ಮಕ್ಕಳಿಗಾಗಿ ಸ್ವೀಟ್, ದುಬಾರಿ ಬಟ್ಟೆ ಬೇಡ, ಈ ಷೇರುಗಳನ್ನೇ ಗಿಫ್ಟ್ ಕೊಡಿ! ಮಕ್ಕಳ ಭವಿಷ್ಯಕ್ಕೆ ಸಂಪತ್ತು ಸೃಷ್ಟಿಸುತ್ತೆ!
ದೀಪಾವಳಿ ಹಬ್ಬಕ್ಕಾಗಿ ಮಕ್ಕಳಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ದುಬಾರಿ ಬಟ್ಟೆ, ಸುಟ್ಟು ಬೂದಿಯಾಗುವ ಪಟಾಕಿ ಕೊಡಿಸಲು ಬದಲು ಮ್ಯೂಚುವಲ್ ಫಂಡ್ ಯುನಿಟ್, ಷೇರುಗಳನ್ನ ಗಿಫ್ಟ್ ಆಗಿ ನೀಡಿದ್ರೆ ಹೇಗೆ? ಇದರಿಂದ ಮಕ್ಕಳ ಭವಿಷ್ಯಕ್ಕೆ ಸಂಪತ್ತು ಸೃಷ್ಟಿಯಾಗುತ್ತದೆ.. ಈ ಬಗ್ಗೆ ಐಡಿಯಾಗಳು ಇಲ್ಲಿವೆ.

ದೀಪಾವಳಿಗೆ ಮ್ಯೂಚುವಲ್ ಫಂಡ್, ಷೇರುಗಳನ್ನೇ ಉಡುಗೊರೆಯಾಗಿ ನೀಡಿ
ಭಾರತೀಯ ಪೋಷಕರು ತಮ್ಮ ಮಕ್ಕಳು ಸುಖವಾಗಿರಲು ಸಾಕಷ್ಟು ಖರ್ಚು ಮಾಡುತ್ತಾರೆ. ಮಕ್ಕಳ ಪ್ರತಿ ಬೇಡಿಕೆಯನ್ನ ನಿರಾಕರಿಸುವುದಿಲ್ಲ, ಹಬ್ಬಗಳಿಗೆ ದುಬಾರಿ ಬಟ್ಟೆ, ಸೈಕಲ್, ಬೈಕ್, ದೀಪಾವಳಿಗೆ ಸಾವಿರಾರು ರೂಪಾಯಿಯ ಪಟಾಕಿ, ಸ್ವೀಟ್ ಖರೀದಿಸಿ ತರುತ್ತಾರೆ. ಇದರಿಂದ ಮಕ್ಕಳು ಸಂತೋಷವಾಗಿರುತ್ತಾರೆ ಎಂಬ ಭಾವನೆ ಪೋಷಕರದ್ದು. ಆದರೆ ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯ, ಅವರಿಗೆ ಭವಿಷ್ಯಕ್ಕೆ ಉಪಯೋಗವಾಗುವ ಸಂಪತ್ತು ಸೃಷ್ಟಿಸುವ ಬಗ್ಗೆ ಯೋಚಿಸುವುದೇ ಇಲ್ಲ. ಆಗಿಂದಾಗ್ಗೆ ಖರ್ಚು ಮಾಡುವುದೇ ಮಕ್ಕಳನ್ನು ಸುಖವಾಗಿಡುವುದು ಎಂದು ಕೊಂಡಿದ್ದಾರೆ. ಮಕ್ಕಳಿಗೆ ಸಾಕಷ್ಟು ಹಣ ಖರ್ಚು ಮಾಡುವ ಬದಲು ಮಕ್ಕಳ ಭವಿಷ್ಯಕ್ಕಾಗಿ ಅಷ್ಟೇ ಹಣ ಉಳಿತಾಯ ಮಾಡಿದ್ರೆ ಅದೆಷ್ಟು ಉಪಯೋಗಕ್ಕೆ ಬರುತ್ತದಲ್ಲವೇ?
ಹೌದು, ಈ ಬಾರಿ ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಈ ಬಾರಿ ದೀಪಾವಳಿಗಾಗಿ ಹಣ ಖರ್ಚು ಮಾಡುವ ಬದಲು ನಿಮ್ಮ ಮಕ್ಕಳಿಗೆ ಪ್ರೀತಿ ಪಾತ್ರರಿಗೆ ಚಿನ್ನ, ಬೆಳ್ಳಿ, ಸಾವಿರಾರು ಬೆಲೆಯ ಬಟ್ಟೆ, ಸ್ವೀಟ್ ಬಾಕ್ಸ್, ದುಬಾರಿ ವಸ್ತುಗಳನ್ನ ನೀಡುವ ಬದಲು ಷೇರುಗಳು ಅಥವಾ ಮ್ಯೂಚುವಲ್ ಫಂಡ್ ಯುನಿಟ್‌ಗಳ ಗಿಫ್ಟ್ ನೀಡಿ. ಏಕೆಂದರೆ ಸ್ವೀಟ್ ಖಾಲಿಯಾಗಬಹುದು, ಬಟ್ಟೇ ಹರಿದುಹೋಗಬಹುದು, ಪಟಾಕಿ ಸಿಡಿದು ಕ್ಷಣಾರ್ಥದಲ್ಲಿ ಬೂದಿಯಾಗಬಹುದು.ಆದರೆ ನೀವು ನೀಡುವ ಇಂತಹ ಈ ಗಿಫ್ಟ್ ಮಕ್ಕಳ, ಪ್ರೀತಿಪಾತ್ರರ ಭವಿಷ್ಯಕ್ಕಾಗಿ ಸಂಪತ್ತನ್ನ ಸೃಷ್ಟಿಸಲು ಮೊದಲ ಹೆಜ್ಜೆಯಾಗುತ್ತದೆ!
ದೀಪಾವಳಿಗೆ ಪಟಾಕಿ, ಸಿಹಿ ತಿಂಡಿ ಬೇಡ, ಷೇರು ನೀಡಿ
ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳನ್ನು ಇತರರಿಗೆ ಉಡುಗೊರೆಯಾಗಿ ನೀಡುವ ಮೊದಲು ಅವುಗಳನ್ನು ಹೇಗೆ ಟ್ರಾನ್ಸ್‌ಫರ್ ಮಾಡಲಾಗುತ್ತೆ, ಅದರಿಂದ ಉಂಟಾಗುವ ತೆರಿಗೆ ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆ ಬಗ್ಗೆ ಇಲ್ಲಿ ವಿವರವಾಗಿ ತಿಳಿಸಲಾಗಿದೆ.
ಹಾಗಾದರೆ ಬೇರೆಯವರಿಗೆ ಷೇರುಗಳನ್ನ ಗಿಫ್ಟ್ ಆಗಿ ನೀಡುವುದು ಹೇಗೆ??
ಭಾರತದಲ್ಲಿ ಷೇರುಗಳು, ಮ್ಯೂಚುವಲ್ ಫಂಡ್‌ಗಳನ್ನುಉಡುಗೊರೆಯಾಗಿ ನೀಡಲು ಅದರದ್ದೇ ಆದ ನಿಯಮಗಳಿವೆ. ಮುಖ್ಯವಾಗಿ ಈ ಇಂತಹ ಉಡುಗೊರೆ ನೀಡುವಾಗ ಕುಟುಂಬದ ಸದಸ್ಯರಿಗೆ ನೀಡಲಾಗಿದೆಯೇ ಅಥವಾ ಸ್ನೇಹಿತರು ಅಥವಾ ಸಂಬಂಧಿಕರಲ್ಲದ ವ್ಯಕ್ತಿಗಳಿಗೆ ನೀಡಲಾಗಿದೆಯೇ ಎಂಬುದರ ಆಧಾರದ ಮೇಲೆ ತೆರಿಗೆಯ ನಿಯಮಗಳು ಬದಲಾಗಬಹುದು.
ನಿಮ್ಮ ಪೋರ್ಟ್‌ಫೋಲಿಯೊದಲ್ಲಿರುವ ಷೇರುಗಳನ್ನು ನಿಮ್ಮ ಪೋಷಕರು, ಒಡಹುಟ್ಟಿದವರು ಅಥವಾ ಸಂಗಾತಿಗೆ ಅಥವಾ ಬೇರೆ ಯಾವುದೇ ವ್ಯಕ್ತಿಗೆ ಗಿಫ್ಟ್ ನೀಡಬೇಕು ಅನಿಸಿದರೆ ಸಾಮಾನ್ಯವಾಗಿ ನೀವು ಅವುಗಳನ್ನು ಮಾರಾಟ ಮಾಡುವ ಬದಲು ನೇರವಾಗಿ ಟ್ರಾನ್ಸ್‌ಫರ್ ಮಾಡಬಹುದು. ಇದಕ್ಕಾಗಿನ ಷೇರುಗಳನ್ನು ನೀಡುವವರು ಮತ್ತು ಪಡೆಯುವವರು ಇಬ್ಬರೂ ಡಿಮ್ಯಾಟ್ (Demat) ಖಾತೆಯನ್ನು ಹೊಂದಿರಬೇಕು. ಷೇರುದಾರರು ತಮ್ಮ ಬ್ರೋಕರ್ ಅಥವಾ ಡಿಪಾಸಿಟರಿ ಪಾರ್ಟಿಸಿಪೆಂಟ್ (Depository Participant) ಮೂಲಕ 'ಆಫ್-ಮಾರುಕಟ್ಟೆ ಟ್ರಾನ್ಸ್‌ಫರ್(off-market transfer) ಮಾಡಬಹುದು. ಇದಕ್ಕೆ, ಷೇರುಗಳನ್ನು ಪಡೆಯುವವರ ಡಿಮ್ಯಾಟ್ ಅಕೌಂಟ್ ಸರಿಯಾದ ವಿವರ ಹಾಗೂ ಅಗತ್ಯ ಟ್ರಾನ್ಸ್‌ಫರ್ ಸೂಚನೆಗಳನ್ನ ನೀಡಬೇಕಾಗುತ್ತೆ.
ಮ್ಯೂಚುವಲ್ ಫಂಡ್‌ಗಳನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡಬಹುದೇ?
ಯೆಸ್, ಮ್ಯೂಚುವಲ್ ಫಂಡ್ ಯುನಿಟ್‌ಗಳನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡಬಹುದು. ಆದರೆ ಟ್ರಾನ್ಸ್‌ಫರ್ ಪ್ರೊಸೆಸ್ ಆ ಯುನಿಟ್‌ಗಳು ಡಿಮ್ಯಾಟ್ ಖಾತೆಯಲ್ಲಿವೆಯೇ ಅಥವಾ 'ಸ್ಟೇಟ್‌ಮೆಂಟ್ ಆಫ್ ಅಕೌಂಟ್' (SoA) ರೂಪದಲ್ಲಿವೆಯೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಒಂದು ವೇಳೆ ಡಿಮ್ಯಾಟ್ ಖಾತೆಯಲ್ಲಿದ್ದರೆ ಯುನಿಟ್‌ಗಳನ್ನು ಡೆಪಾಸಿಟರಿ (Depository) ಮೂಲಕ ವರ್ಗಾಯಿಸಬಹುದು. SoA ರೂಪದಲ್ಲಿರುವ ಯುನಿಟ್‌ಗಳ ವಿಷಯಕ್ಕೆ ಬಂದರೆ ಮ್ಯೂಚುವಲ್ ಫಂಡ್ ಸಂಸ್ಥೆ, ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ ಏಜೆಂಟ್ (RTA) ಹಾಗೂ 'MF ಸೆಂಟ್ರಲ್' (MF Central) ನಿಗದಿಪಡಿಸಿದ ನಿಯಮಗಳು ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕಾಗುತ್ತದೆ. ಎಲ್ಲಾ ಮ್ಯೂಚುವಲ್ ಫಂಡ್ ಯೋಜನೆಗಳಿಗೂ ಎಲ್ಲ ರೀತಿಯ ವರ್ಗಾವಣೆ ಸೌಲಭ್ಯಗಳು ಲಭ್ಯವಿರುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.
₹50,000 ಮೀರಿದ ಗಿಫ್ಟ್ ಯಾವಾಗ ತೆರಿಗೆಗೆ ಒಳಪಡುತ್ತವೆ?
ಆದಾಯ ತೆರಿಗೆ ಕಾಯಿದೆ, 2025ರ ಸೆಕ್ಷನ್ 92ರ ಅಡಿಯಲ್ಲಿ, ನೀವು ಸಂಬಂಧಿಕರಲ್ಲದ ವ್ಯಕ್ತಿಯೊಬ್ಬರಿಂದ ಷೇರುಗಳು ಮತ್ತು ಸೆಕ್ಯೂರಿಟಿಗಳಂತಹ ನಿರ್ದಿಷ್ಟ ಆಸ್ತಿಗಳನ್ನು ಯಾವುದೇ ಹಣ ಪಾವತಿಸದೆ ಉಡುಗೊರೆಯಾಗಿ ಪಡೆದರೆ ಮತ್ತು ಒಂದು ಆರ್ಥಿಕ ವರ್ಷದಲ್ಲಿ ಅಂತಹ ಆಸ್ತಿಗಳ ಒಟ್ಟು fair market value ₹50,000 ಮೀರಿದರೆ, ಆಗ ಆ ಸಂಪೂರ್ಣ ಮೊತ್ತವು ತೆರಿಗೆಗೆ ಒಳಪಡಬಹುದು (ಕೇವಲ ₹50,000 ಮೀರಿದ ಭಾಗ ಮಾತ್ರವಲ್ಲದೆ, ಇಡೀ ಮೊತ್ತವೇ ತೆರಿಗೆಗೆ ಒಳಪಡಬಹುದು. ಆದರೆ ನಿರ್ದಿಷ್ಟ ಸಂಬಂಧಿಕರಿಂದ ಪಡೆಯುವ ಉಡುಗೊರೆಗಳಿಗೆ ಈ ನಿಯಮದಿಂದ ವಿನಾಯಿತಿ ಇದೆ. ಈ ವರ್ಗದಲ್ಲಿ ಸಂಗಾತಿ, ಸಹೋದರ-ಸಹೋದರಿಯರು, ಪೋಷಕರು, ಮಕ್ಕಳು ಮತ್ತು ಕಾನೂನಿನ ಪ್ರಕಾರ ವ್ಯಾಖ್ಯಾನಿಸಲಾದ ಇತರ ಕೆಲವು ಸಂಬಂಧಿಕರು ಸೇರುತ್ತಾರೆ.
ಷೇರುಗಳ ಮಾರಾಟದ ಮೇಲೆ ತೆರಿಗೆ ಪಾವತಿಸಲು ಯಾರು ಹೊಣೆಗಾರರು?
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಅಥವಾ HUF ನಿಂದ ಬಂಡವಾಳ ಆಸ್ತಿಯನ್ನು ಉಡುಗೊರೆಯಾಗಿ ನೀಡುವುದನ್ನು ಕೆಲವು ಷರತ್ತುಗಳನ್ನು ಪೂರೈಸಿದರೆ, ಬಂಡವಾಳ ಲಾಭ ತೆರಿಗೆಯ ಉದ್ದೇಶಕ್ಕಾಗಿ 'ಮಾರಾಟ' ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಸ್ವೀಕರಿಸುವವರು ತರುವಾಯ ಈ ಷೇರುಗಳನ್ನು ಅಥವಾ ಮ್ಯೂಚುಯಲ್ ಫಂಡ್ ಯುನಿಟ್‌ಗಳನ್ನು ಮಾರಾಟ ಮಾಡಿದಾಗ ತೆರಿಗೆ ಹೊಣೆಗಾರಿಕೆ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ಮೂಲ ಮಾಲೀಕರ ಸ್ವಾಧೀನ ವೆಚ್ಚವನ್ನು ಸಾಮಾನ್ಯವಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಲ್ಲದೆ, ಆಸ್ತಿಯನ್ನು ಸಂಗಾತಿಗೆ ಅಥವಾ ಅಪ್ರಾಪ್ತ ಮಗುವಿಗೆ ಉಡುಗೊರೆಯಾಗಿ ನೀಡಿದರೆ 'ಆದಾಯವನ್ನು ಒಟ್ಟುಗೂಡಿಸುವ' ನಿಬಂಧನೆಗಳು ಅನ್ವಯಿಸಬಹುದು.
ಗಮನಿಸಿ: ಏಷ್ಯಾನೆಟ್ ಸುವರ್ಣ ನ್ಯೂಸ್ ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಐಪಿಒಗಳು (IPOs) ಅಥವಾ ಸರಕುಗಳ (commodities) ಕುರಿತು ಯಾವುದೇ ಹೂಡಿಕೆ ಸಲಹೆಯನ್ನು ನೀಡುವುದಿಲ್ಲ. ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ತಿಳುವಳಿಕೆಗಾಗಿ ಮಾತ್ರ. ಯಾವುದೇ ಹೂಡಿಕೆ ಮಾಡುವ ಮೊದಲು ದಯವಿಟ್ಟು ನಿಮ್ಮ ಆರ್ಥಿಕ ಸಲಹೆಗಾರರನ್ನು ಸಂಪರ್ಕಿಸಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

