ಯೆಸ್ ಬ್ಯಾಂಕ್‌ನ 8,400 ಕೋಟಿ ರೂ. ಮೌಲ್ಯದ ಎಟಿ-1 ಬಾಂಡ್‌ಗಳ ರದ್ದತಿ ನಿರ್ಧಾರವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಐತಿಹಾಸಿಕ ತೀರ್ಪಿನಿಂದಾಗಿ ಬ್ಯಾಂಕ್ ಬಾಂಡ್‌ಗಳನ್ನು ಬಡ್ಡಿ ಸಮೇತ ಮರುಪಾವತಿಸುವುದು ಕಡ್ಡಾಯವಾಗಿದೆ.

ಮುಂಬೈ (ಅ.15): ದೇಶದ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ 'ಯೆಸ್ ಬ್ಯಾಂಕ್' (Yes Bank Ltd.) ಶೇರು ಮೌಲ್ಯದಲ್ಲಿ ಗುರುವಾರ, ಅಕ್ಟೋಬರ್ 15 ರಂದು ಬರೋಬ್ಬರಿ ಶೇಕಡಾ 10 ರಷ್ಟು ತೀವ್ರ ಕುಸಿತ ಕಂಡಿದೆ. 2020 ರ ಬ್ಯಾಂಕ್ ಪುನಶ್ಚೇತನ ಯೋಜನೆಯ ಭಾಗವಾಗಿ ಬ್ಯಾಂಕ್‌ನ ಆಡಳಿತಾಧಿಕಾರಿ ರದ್ದುಗೊಳಿಸಿದ್ದ (Write-off) ಬರೋಬ್ಬರಿ ₹8,400 ಕೋಟಿ ಮೌಲ್ಯದ 'ಅಡಿಷನಲ್ ಟೈರ್-1' (AT-1) ಬಾಂಡ್‌ಗಳ ನಿರ್ಧಾರವನ್ನು ರದ್ದುಪಡಿಸಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಈ ಆದೇಶ ಹೊರಬಿದ್ದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಯೆಸ್‌ ಬ್ಯಾಂಕ್ ಶೇರುಗಳು ತೀವ್ರ ಹಿನ್ನಡೆ ಅನುಭವಿಸಿವೆ.

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನಿಂದಾಗಿ ಯೆಸ್‌ ಬ್ಯಾಂಕ್, ತನ್ನ ಹಳೆಯ ₹8,400 ಕೋಟಿ ಮೊತ್ತದ ಎಟಿ-1 ಬಾಂಡ್‌ಗಳನ್ನು ಅವುಗಳ ನಿಗದಿತ ಶೇಕಡಾ 9% ಹಾಗೂ 9.5% ರಷ್ಟು ಬಡ್ಡಿ ದರದೊಂದಿಗೆ (Coupon Rate) ಮರುಪಾವತಿಸಿ ಮಾನ್ಯ ಮಾಡುವುದು ಕಡ್ಡಾಯವಾಗಿದೆ.

ಅಧಿಕಾರ ಮೀರಿದ ನಿರ್ಧಾರ ಎಂದ ಸುಪ್ರೀಂ ಕೋರ್ಟ್

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 2020 ರಲ್ಲಿ ಯೆಸ್‌ ಬ್ಯಾಂಕ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾಗ ಬ್ಯಾಂಕ್‌ನ ಆಡಳಿತಾಧಿಕಾರಿ ಎಟಿ-1 ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವ (Write-off) ನಿರ್ಧಾರ ಕೈಗೊಂಡಿದ್ದು ಸಂಪೂರ್ಣವಾಗಿ 'ಅಧಿಕಾರ ವ್ಯಾಪ್ತಿಯನ್ನು ಮೀರಿದ ಕೃತ್ಯ' ಹಾಗೂ ಆರ್‌ಬಿಐನ ಮಾಸ್ಟರ್ ಸರ್ಕ್ಯುಲರ್‌ಗೆ ವಿರುದ್ಧವಾದುದು ಎಂದು ಸ್ಪಷ್ಟಪಡಿಸಿದೆ.

ಯೆಸ್‌ ಬ್ಯಾಂಕ್ ತನ್ನ ಸುಗಮ ಆಡಳಿತ ಮತ್ತು ಆರ್ಥಿಕ ಚೇತರಿಕೆಗಾಗಿ 2016 ಮತ್ತು 2017 ರಲ್ಲಿ ಈ ಎಟಿ-1 ಬಾಂಡ್‌ಗಳನ್ನು ವಿತರಿಸಿ ಸಾರ್ವಜನಿಕರಿಂದ ಹಾಗೂ ಹೂಡಿಕೆದಾರರಿಂದ ಒಟ್ಟು ₹8,415 ಕೋಟಿ ಬಂಡವಾಳ ಸಂಗ್ರಹಿಸಿತ್ತು. ಆದರೆ 2020 ರ ರಕ್ಷಣೆ ಮತ್ತು ಪುನರ್ರಚನಾ ಕಾರ್ಯಾಚರಣೆಯ ಸಮಯದಲ್ಲಿ, ಬ್ಯಾಂಕ್‌ನ ಅಸ್ತಿತ್ವಕ್ಕೆ ಈ ಬಾಂಡ್‌ಗಳನ್ನು ರದ್ದುಗೊಳಿಸುವುದು ಅತ್ಯಗತ್ಯ ಎಂದು ಹೇಳಿ ಆಡಳಿತಾಧಿಕಾರಿ ಬಾಂಡ್‌ಗಳನ್ನು ಸಂಪೂರ್ಣ ರದ್ದುಗೊಳಿಸಿದ್ದರು.

ಸಾಮಾನ್ಯ ಹೂಡಿಕೆದಾರರಿಂದ ಕೋರ್ಟ್‌ಗೆ ಮೊರೆ

ಬ್ಯಾಂಕ್‌ನ ಈ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಿ ಬಾಂಡ್‌ದಾರರ ಪರವಾಗಿ 'ಆಕ್ಸಿಸ್ ಟ್ರಸ್ಟಿ ಸರ್ವಿಸಸ್' (Axis Trustee Services) ಕೋರ್ಟ್‌ ಮೆಟ್ಟಿಲೇರಿತ್ತು. ಬಾಂಡ್‌ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಬ್ಯಾಂಕ್ ಆಡಳಿತಾಧಿಕಾರಿಗೆ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲ, ಅಂತಹ ನಿರ್ಧಾರಗಳನ್ನು ಕೈಗೊಳ್ಳುವ ಸಂಪೂರ್ಣ ಹಕ್ಕು ಕೇವಲ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಮಾತ್ರ ಇದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಲಾಗಿತ್ತು.

ಬ್ಯಾಸೆಲ್-III (Basel-III) ನಿಯಮಾವಳಿಗಳ ಅಡಿಯಲ್ಲಿ ಎಟಿ-1 ಬಾಂಡ್‌ಗಳು ಹೈಬ್ರಿಡ್ ಬಂಡವಾಳ ಸಾಧನಗಳಾಗಿದ್ದು, ಬ್ಯಾಂಕ್ ದಿವಾಳಿಯಾಗುವ ಹಂತ ತಲುಪಿದಾಗ ನಷ್ಟವನ್ನು ಭರಿಸಲು ಇವುಗಳನ್ನು ಬಳಸಲಾಗುತ್ತದೆ. ಆದರೆ ಈ ರದ್ದತಿಯಿಂದಾಗಿ ಬಾಂಡ್ ಹೊಂದಿದ್ದ ಶೇಕಡಾ 97% ರಷ್ಟು ಸಾಮಾನ್ಯ ಸಣ್ಣ ಹೂಡಿಕೆದಾರರು ಹಾಗೂ ಹಿರಿಯ ನಾಗರಿಕರು ತಮ್ಮ ಸಂಪೂರ್ಣ ಅಸಲು ಹಣವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದರು.

2021-2022 ರಲ್ಲಿ ಮಾರುಕಟ್ಟೆ ನಿಯಂತ್ರಣ ಮಂಡಳಿ 'ಸೆಬಿ' (SEBI), ಯೆಸ್‌ ಬ್ಯಾಂಕ್‌ನ ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಅವರಿಗೆ ಸೂಕ್ತ ಅಪಾಯದ ಮಾಹಿತಿಗಳನ್ನು ನೀಡದೆ ಹಾಗೂ ಹಿರಿಯ ನಾಗರಿಕರಿಗೆ ತಪ್ಪು ಮಾಹಿತಿ ನೀಡಿ (Mis-selling) ಈ ಬಾಂಡ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಭಾರಿ ದಂಡ ವಿಧಿಸಿತ್ತು.

ಬಾಂಬೆ ಹೈಕೋರ್ಟ್ ತೀರ್ಪು ಮತ್ತು ಶೇರು ಮಾರುಕಟ್ಟೆ ಹಿನ್ನಡೆ

ಯೆಸ್‌ ಬ್ಯಾಂಕ್ ಆಡಳಿತಾಧಿಕಾರಿ ಕೈಗೊಂಡಿದ್ದ ಎಟಿ-1 ಬಾಂಡ್ ರದ್ದತಿ ನಿರ್ಧಾರವನ್ನು ಬಾಂಬೆ ಹೈಕೋರ್ಟ್ 2023 ರ ಜನವರಿಯಲ್ಲೇ ರದ್ದುಗೊಳಿಸಿ ತೀರ್ಪು ನೀಡಿತ್ತು. ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ ಬ್ಯಾಂಕ್ 2023 ರ ಮಾರ್ಚ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಮೇಲ್ಮನವಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿನ ಬೆನ್ನಲ್ಲೇ ಗುರುವಾರ ಯೆಸ್‌ ಬ್ಯಾಂಕ್ ಶೇರುಗಳು ಶೇಕಡಾ 10 ರಷ್ಟು ಇಳಿಕೆ ಕಂಡು ₹19.08 ಕ್ಕೆ ಕುಸಿದು ವಹಿವಾಟು ನಡೆಸುತ್ತಿವೆ. ಈ ಭಾರಿ ಇಳಿಕೆಯಿಂದಾಗಿ ಪ್ರಸಕ್ತ ವರ್ಷದಲ್ಲಿ (Year-to-Date) ಯೆಸ್‌ ಬ್ಯಾಂಕ್ ಶೇರುಗಳು ನೀಡಿದ್ದ ಗಳಿಕೆಯು ಸಂಪೂರ್ಣವಾಗಿ ಋಣಾತ್ಮಕ (Negative) ವಲಯಕ್ಕೆ ತಳ್ಳಲ್ಪಟ್ಟಿದೆ.