300 ಮೂನ್‌ಲೈಟರ್‌ಗಳನ್ನು ವಿಪ್ರೋ ಪತ್ತೆ ಮಾಡಿದ ರಹಸ್ಯ ಬಯಲಾಗಿದ್ದು, ಒಮ್ಮೆಗೆ 2 ಕಂಪನಿಯಲ್ಲಿ ಕೆಲಸ ಪತ್ತೆ ಮಾಡಲು ಪಿಎಫ್‌ ಖಾತೆ ನೆರವಾಗಿದೆ ಎನ್ನಲಾಗಿದೆ. ಡಿಜಿಟಲ್ ಇಂಡಿಯಾದಿಂದ ಇದು ಸಾದ್ಯವಾಗಿದೆ ಎಂದೂ ತಿಳಿದುಬಂದಿದೆ. 

ನವದೆಹಲಿ: 300ಕ್ಕೂ ಹೆಚ್ಚು ಉದ್ಯೋಗಿಗಳು ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಸಮಯದಲ್ಲೇ ಬೇರೆ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ಐಟಿ ಕಂಪನಿ ವಿಪ್ರೋ (Wipro) , ಇತ್ತೀಚೆಗೆ 300 ಸಿಬ್ಬಂದಿಗಳನ್ನು ಮನೆಗೆ ಕಳುಹಿಸಿತ್ತು. ಮೂನ್‌ಲೈಟಿಂಗ್‌ (Moonlighting) ಎಂದು ಹೇಳಲಾಗುವ ಈ ಕೆಲಸವನ್ನು ಕಂಪನಿ ಪತ್ತೆ ಮಾಡಿದ್ದು ಹೇಗೆ ಎಂಬ ವಿಷಯವನ್ನು ಅದು ಬಹಿರಂಗಪಡಿಸಿರಲಿಲ್ಲ. ಆದರೆ ಕಂಪನಿ, ಇಂಥ ಸಿಬ್ಬಂದಿಗಳನ್ನು ಪತ್ತೆ ಮಾಡಿದ್ದು ಹೇಗೆ ಎಂಬ ವಿಷಯವನ್ನು ರಾಜೀವ್‌ ಮೆಹ್ತಾ ಎಂಬ ಷೇರು ಹೂಡಿಕೆ ಟಿಪ್ಸ್‌ ನೀಡುವ ವ್ಯಕ್ತಿಯೊಬ್ಬರು ಟ್ವಿಟ್ಟರ್‌ (Twitter) ಮೂಲಕ ಹಂಚಿಕೊಂಡಿದ್ದಾರೆ.

ಪಿಎಫ್‌ ರಹಸ್ಯ:
ಎಲ್ಲಾ ಐಟಿ ಕಂಪನಿಗಳಲ್ಲೂ ಉದ್ಯೋಗಿಗಳಿಗೆ (Employees) ಭವಿಷ್ಯ ನಿಧಿ ಖಾತೆ ತೆರೆಯಲಾಗುತ್ತದೆ. ಇಂಥ ಖಾತೆ ತೆರೆಯಲು ಉದ್ಯೋಗಿಗಳ ಆಧಾರ್‌ ನಂಬರ್‌, ಪಾನ್‌ ನಂಬರ್‌ ಮೊದಲಾದವುಗಳ ನಮೂದು ಕಡ್ಡಾಯ. ಹೀಗಾಗಿ ಉದ್ಯೋಗಿಯೊಬ್ಬ 2 ಕಡೆ ಕೆಲಸ ಮಾಡುತ್ತಿದ್ದರೂ, ಆತನ ಎಲ್ಲಾ ಮಾಹಿತಿ ಅಧಿಕಾರಿಗಳಿಗೆ ಒಂದೇ ಕಡೆ ಸಿಗುತ್ತದೆ.

ಇದನ್ನು ಓದಿ: ಒಂದೇ ಸಮಯದಲ್ಲಿ 2 ಕಡೆ ಕೆಲಸ: Wipro 300 ಸಿಬ್ಬಂದಿ ವಜಾ

Scroll to load tweet…

ಮತ್ತೊಂದೆಡೆ ಪಿಎಫ್‌ (PF) ಅಧಿಕಾರಿಗಳು, ಯಾವುದಾದರೂ ಖಾತೆಗೆ ಆಕಸ್ಮಿಕವಾಗಿ ಹಣ ಪಾವತಿ ಮಾಡಲಾಗಿದೆಯೇ ಎಂಬುದನ್ನು ತಪಾಸಣೆ ಮಾಡಲು ನಿತ್ಯವೂ ಕಂಪ್ಯೂಟರ್‌ಗಳ ಮೂಲಕ ಕಣ್ಗಾವಲು ಇಟ್ಟಿರುತ್ತಾರೆ. ಇತ್ತೀಚೆಗೆ ಒಂದೇ ಆಧಾರ್‌, ಪಾನ್‌ ಸಂಖ್ಯೆಗೆ ಹಲವು ಬಾರಿ ಪಿಎಫ್‌ ಹಣ ಜಮೆ ಆಗಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಅವರು ವಿಪ್ರೋ ಕಂಪನಿಯನ್ನು ಸಂಪರ್ಕಿಸಿದ್ದರು ಎನ್ನಲಾಗಿದೆ. ಆಗ ಕಂಪನಿಗೆ ಮೂನ್‌ಲೈಟಿಂಗ್‌ ವಿಷಯ ಖಚಿತಪಟ್ಟು, ಒಮ್ಮೆಗೆ ಎರಡು ಕಡೆ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ತೆಗೆದು ಹಾಕಲಾಗಿತ್ತು ಎಂಬ ವಾದ ಮಂಡಿಸಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ವೇಳೆ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದ ವೇಳೆ ಮೂನ್‌ಲೈಟಿಂಗ್‌ ಪ್ರಕರಣ ಹೆಚ್ಚಾಗಿತ್ತು. ಕೆಲವರು ಒಮ್ಮೆಗೆ 5ಕ್ಕಿಂತ ಹೆಚ್ಚು ಕಂಪನಿಗಳಿಗೆ ಕೆಲಸ ಮಾಡುತ್ತಿದ್ದ ಆಘಾತಕಾರಿ ವಿಷಯವೂ ಪತ್ತೆಯಾಗಿತ್ತು.

ಇದನ್ನೂ ಓದಿ: ಏಕಕಾಲದಲ್ಲಿ ಎರಡೆರಡು ಕೆಲಸ, ಉದ್ಯೋಗಿಗಳಿಗೆ ಇನ್ಫೋಸಿಸ್ ಖಡಕ್ ವಾರ್ನಿಂಗ್!

ವಿಪ್ರೋ ಹೇಳಿದ್ದೇನು..?
ಕೋವಿಡ್‌ ವೇಳೆ ನಮ್ಮ ಕಂಪನಿಯ 300 ಸಿಬ್ಬಂದಿಗಳು, ನಮ್ಮ ಪ್ರತಿಸ್ಪರ್ಧಿ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದರು. ಇಂಥ ನಡತೆ ಕಾನೂನಿಗೆ ವಿರುದ್ಧವಾಗಿದ್ದು, ಅದರಂತೆ ನಾವು ಅಂಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದ್ದೇವೆ. ಮೂನ್‌ಲೈಟಿಂಗ್‌ ಕುರಿತು ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆಗೆ ಬದ್ಧ ಎಂದು ಸೆಪ್ಟೆಂಬರ್‌ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ ಸಂಸ್ಥೆಯ ಅಧ್ಯಕ್ಷ ರಿಶದ್‌ ಪ್ರೇಮ್‌ಜೀ ಹೇಳಿದ್ದರು.

ವಾಸ್ತವವೆಂದರೆ ಇಂದು ವಿಪ್ರೋಗಾಗಿ ಕೆಲಸ ಮಾಡುವವರು ಮತ್ತು ನಮ್ಮ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಿಗಾಗಿ ನೇರವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ನಿಖರವಾಗಿ ಇಂತಹ 300 ಜನರನ್ನು ನಾವು ಕಂಡುಹಿಡಿದಿದ್ದೇವೆ. ಇದು ಸಮಗ್ರತೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ರಿಶದ್‌ ಪ್ರೇಮ್‌ಜೀ ಅಭಿಪ್ರಾಯ ಪಟ್ಟಿದ್ದರು.

ಈ ಸಮಸ್ಯೆಯನ್ನು "ಮೋಸ" ಎಂದು ಪ್ರೇಮ್‌ಜೀ ತಮ್ಮ ಟ್ವಿಟ್ಟರ್‌ನಲ್ಲಿ ಸಮೀಕರಿಸಿದಾಗಿನಿಂದ 'ಮೂನ್‌ಲೈಟಿಂಗ್' ವಿಷಯವು ಐಟಿ ಉದ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಟೆಕ್ ಉದ್ಯಮದಲ್ಲಿ ಜನರು ಮೂನ್‌ಲೈಟ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆ ಇದೆ. ಇದು ಮೋಸವಾಗಿದೆ ಎಂದು ರಿಶದ್‌ ಪ್ರೇಮ್‌ಜೀ ಟ್ವೀಟ್‌ ಮಾಡಿದ್ದರು. ಪ್ರೇಮ್‌ಜೀ ಅವರ ಟ್ವೀಟ್ ಉದ್ಯಮದೊಳಗೆ ಬಲವಾದ ಪ್ರತಿಕ್ರಿಯೆಯನ್ನು ಹುಟ್ಟುಹಾಕಿತು. ನಂತರ, ಇನ್ಫೋಸಿಸ್‌ ಸೇರಿ ಅನೇಕ ಐಟಿ ಕಂಪನಿಗಳು ಇಂತಹ ಅಭ್ಯಾಸಗಳ ಬಗ್ಗೆ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿವೆ. 

ಇದನ್ನೂ ಓದಿ: ವಿಪ್ರೋ ಸಿಇಒಗೆ .79.8 ಕೋಟಿ ಭರ್ಜರಿ ವೇತನ: ಐಟಿ ವಲಯದಲ್ಲೇ ಹೆಚ್ಚು ಸಂಬಳ