ಅರ್ಜೆಂಟೀನಾ ಮಣಿಸಿದ ಸೌದಿಗೆ ಭರ್ಜರಿ ಗಿಫ್ಟ್, ತಂಡದ ಪ್ರತಿಯೊಬ್ಬರಿಗೆ 9 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು!
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೋಲಿಸಿದ ಸೌದಿ ಅರೆಬಿಯಾ ತಂಡಕ್ಕೆ ಪ್ರಶಂಸೆಗಳ ಸುರಿಮಳೆ ಇನ್ನೂ ನಿಂತಿಲ್ಲ. ಈ ಗೆಲುವಿನಿಂದ ಹಿರಿ ಹಿರಿ ಹಿಗ್ಗಿರುವ ಸೌದಿ ದೊರೆ ಭರ್ಜರಿ ಘೋಷಣೆ ಮಾಡಿದ್ದಾರೆ. ಸೌದಿ ತಂಡದ ಪ್ರತಿಯೊಬ್ಬ ಸದಸ್ಯರಿಗೆ 9 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ.
ಖತಾರ್(ನ.25): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೌದಿ ಅರೆಬಿಯಾ ಹಾಗೂ ಅರ್ಜೆಂಟೀನಾ ನಡುವಿನ ಪಂದ್ಯ ಮುಗಿದು ನಾಲ್ಕು ದಿನಗಳಾಗಿದೆ. ಇದಾದ ಬಲಿಕ ಹಲವು ರೋಚಕ ಪಂದ್ಯಗಳು ನಡೆದಿದೆ. ಆದರೆ ಈ ಪಂದ್ಯದ ಅಮಲು ಇನ್ನೂ ಇಳಿದಿಲ್ಲ. ಕಾರಣ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೌದಿ 2-1 ಗೋಲುಗಳ ಅಂತರದಿಂದ ಮಣಿಸಿತ್ತು. ಇದು ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಗೆಲುವಿನ ಬೆನ್ನಲ್ಲೇ ಸೌದಿ ಅರೆಬಿಯಾದಲ್ಲಿ ಸರ್ಕಾರಿ ರಜೆ ಘೋಷಿಸಲಾಗಿತ್ತು. ಸೌದಿ ಅರೆಬಿಯಾ ಸಂತಸ ಇಷ್ಟಕ್ಕೆ ನಿಂತಿಲ್ಲ. ಇದೀಗ ಸೌದಿ ದೊರೆ ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್, ಅರ್ಜೆಂಟೀನಾ ಸೋಲಿಸಿ ಸೌದಿಗೆ ಹೆಮ್ಮೆ ತಂದ ತಂಡದ ಪ್ರತಿಯೊಬ್ಬ ಸದಸ್ಯರಿಗೆ ರೋಲ್ಸ್ ರಾಯ್ಸ್ ಫಾಂಟಮ್ ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ.
ರೋಲ್ಸ್ ರಾಯ್ಸ್ ಫಾಂಟಮ್ ಕಾರಿನ ಬೆಲೆ ಭಾರತದಲ್ಲಿ 8.99 ಕೋಟಿ ರೂಪಾಯಿಯಿಂದ 10.48 ಕೋಟಿ ರೂಪಾಯಿ(ಎಕ್ಸ್ ಶೋರೂಂ). ಮೂಲಗಳ ಪ್ರಕಾರ ಸೌದಿ ದೊರೆ ಟಾಪ್ ಮಾಡೆಲ್ ರೋಲ್ಸ್ ರಾಯ್ಸ್ ಫಾಂಟಮ್ ಕಾರು ನೀಡಲು ಮುಂದಾಗಿದ್ದಾರೆ. ಇದರ ಬೆಲೆ 10.48 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದು ವಿಶ್ವದ ಐಷಾರಾಮಿ ಕಾರಾಗಿದೆ.
ಈ ದುಬಾರಿ ಕಾರನ್ನು ಸೌದಿ ಅರೆಬಿಯಾದ ತಂಡದ ಪ್ರತಿಯೊಬ್ಬ ಸದಸ್ಯರಿಗೆ ನೀಡಲು ಸೌದಿ ರಾಜಕುಮಾರ ಆದೇಶ ನೀಡಿದ್ದಾರೆ. ತಂಡದ ಕೋಚ್, ಮ್ಯಾನೇಜರ್, ಸಹಾಯಕ ಸಿಬ್ಬಂದಿಗಳಿಗೂ ಕಾರು ಗಿಫ್ಟ್ ಸಿಗಲಿದೆ. ಇದು ಅತ್ಯಂತ ದುಬಾರಿ ಉಡುಗೊರೆ ಎಂದೇ ಹೇಳಲಾಗುತ್ತಿದೆ.
ಸೌದಿ ಡಿಫೆನ್ಸ್ ಮುಂದೆ ಮಂಕಾದ ಮೆಸ್ಸಿ ಬಳಗ
ಟೂರ್ನಿಯ ಹಾಟ್ ಫೇವರಿಟ್ ಎನಿಸಿಕೊಂಡಿದ್ದ 2 ಬಾರಿ ಚಾಂಪಿಯನ್ ಅರ್ಜೆಂಟೀನಾ ತಂಡ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳಿಂದ ಅಚ್ಚರಿಯ ಸೋಲುಭವಿಸಿದೆ. ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಓಟಕ್ಕೂ ಈ ಪಂದ್ಯದಲ್ಲಿ ಬ್ರೇಕ್ ಬಿತ್ತು. ಇದರೊಂದಿಗೆ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾದ ನಾಕೌಟ್ ಹಾದಿಗೆ ಹಿನ್ನಡೆಯುಂಟಾಗಿದ್ದು, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.48ನೇ ನಿಮಿಷದಲ್ಲಿ ಸಲೇಹ್ ಅಲ್‌ಶೆಹರಿ ಸೌದಿ ಪರ ಮೊದಲ ಗೋಲು ಬಾರಿಸಿದರೆ, ಬಳಿಕ 5 ನಿಮಿಷಗಳ ಅಂತರದಲ್ಲಿ ಸಲೇಂ ಅಲ್ದಾವ್ಸಾರಿ ಮತ್ತೊಂದು ಗೋಲು ದಾಖಲಿಸಿ ಸೌದಿಯ ಗೆಲುವಿಗೆ ಕಾರಣರಾದರು. ಬಳಿಕ ಒತ್ತಡದಿಂದಲೇ ಆಟವಾಡಿದ ಅರ್ಜೆಂಟೀನಾ ಹಲವು ಅವಕಾಶಗಳನ್ನು ತಪ್ಪಿಸಿಕೊಂಡಿತು. ಮೆಸ್ಸಿಯ ಫ್ರೀ ಕಿಕ್ ಕೂಡಾ ಗೋಲು ಪೆಟ್ಟಿಗೆಗೆ ಸೇರಲಿಲ್ಲ. ಗೆಲುವಿನ ಬಳಿಕ ಸೌದಿ ಆಟಗಾರರು ಮೈದಾನದುದ್ದಕ್ಕೂ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.
FIFA World Cup ಅರ್ಜೆಂಟೀನಾವನ್ನು ಮಣಿಸಿದ ಬೆನ್ನಲ್ಲೇ ಒಂದು ದಿನ ರಜೆ ಘೋಷಿಸಿದ ಸೌದಿ ದೊರೆ..!
ಪಂದ್ಯದ ಆರಂಭದಲ್ಲಿ ಸೌದಿಯ ಆಕ್ರಮಣಕಾರಿ ಆಟದ ನಡುವೆಯೂ ಅರ್ಜೆಂಟೀನಾ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಮೆಸ್ಸಿ ಹಿಂದೆ ಬೀಳಲಿಲ್ಲ. ಬಳಿಕ ಮತ್ತಷ್ಟುಗೋಲಿನ ಅವಕಾಶಗಳು ಅರ್ಜೆಂಟೀನಾಕ್ಕೆ ಒದಗಿ ಬಂದರೂ ಅದಕ್ಕೆ ಸೌದಿ ಗೋಲ್‌ಕೀಪರ್ ಮೊಹಮದ್ ಅಲೊವೈಸ್ ಅದಕ್ಕೆ ಅವಕಾಶ ನೀಡಲಿಲ್ಲ. ಒಟ್ಟು 14 ಬಾರಿ ಗೋಲಿಗೆ ಪ್ರಯತ್ನಿಸಿದರೂ ತಂಡಕ್ಕೆ ಅದೃಷ್ಟಕೈಹಿಡಿಯಲಿಲ್ಲ. ಬಲಿಷ್ಠ ರಕ್ಷಣಾ ಪಡೆಯ ಮೂಲಕ ಮೆಸ್ಸಿ ಬಳಗವನ್ನು ಕಟ್ಟಿಹಾಕುವಲ್ಲಿ ಸೌದಿ ಯಶಸ್ವಿಯಾಯಿತು.