FIFA World Cup ಅರ್ಜೆಂಟೀನಾವನ್ನು ಮಣಿಸಿದ ಬೆನ್ನಲ್ಲೇ ಒಂದು ದಿನ ರಜೆ ಘೋಷಿಸಿದ ಸೌದಿ ದೊರೆ..!
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೇಂಟೀನಾ ಎದುರು ರೋಚಕ ಜಯ ಸಾಧಿಸಿದ ಸೌದಿ ಅರೇಬಿಯಾ
ಸೌದಿ ಅರೇಬಿಯಾ ತಂಡವು ಅರ್ಜೆಂಟೀನಾ ಎದುರು 2-1 ಗೋಲುಗಳ ಗೆಲುವು
ಸೌದಿ ಅರೇಬಿಯಾದಾದ್ಯಂತ ಒಂದು ದಿನ ರಾಷ್ಟ್ರೀಯ ರಜೆ ಘೋಷಣೆ
ನವದೆಹಲಿ(ನ.23): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೌದಿ ಅರೇಬಿಯಾ ತಂಡವು ಅರ್ಜೆಂಟೀನಾ ಎದುರು 2-1 ಗೋಲುಗಳ ಗೆಲುವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಮಣಿಸಿದ ಬೆನ್ನಲ್ಲೇ ಸೌದಿ ಅರೇಬಿಯಾದಾದ್ಯಂತ ಒಂದು ದಿನ ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸೌದಿ ಅರೇಬಿಯಾ ದೊರೆ ಸಲ್ಮಾನ್, ಎಲ್ಲಾ ಸರ್ಕಾರಿ ಹಾಗೂ ಖಾಸಗಿ ನೌಕರರಿಗೆ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಇದರ ಜತೆಗೆ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಸದ್ಯ ಗಲ್ಫ್ ರಾಷ್ಟ್ರಗಳಲ್ಲಿ, ಅಂತಿಮ ಹಂತದ ಪರೀಕ್ಷೆಗಳು ನಡೆಯುತ್ತಿವೆ. ಆ ಪರೀಕ್ಷೆಗಳು ಪುನರ್ ನಿಗದಿಪಡಿಸಲಾಗುವುದು ಎಂದು ತಿಳಿದುಬಂದಿದೆ.
ರಾಯಲ್ ಕೋರ್ಟ್ ಮತ್ತು ಸೌದಿ ಅರೇಬಿಯಾ ಜನರಲ್ ಎಂಟರ್‌ಟೈನ್‌ಮೆಂಟ್ ಮುಖ್ಯಸ್ಥ ಟುರ್ಕಿ ಅಲ್-ಶೇಖ್, ಮಂಗಳವಾರ ಸೌದಿ ಅರೇಬಿಯಾದ ಪ್ರಮುಖ ಥೀಮ್ ಪಾರ್ಕ್ ಹಾಗೂ ಎಂಟರ್‌ಟೈನ್‌ಮೆಂಟ್ ಸೆಂಟರ್‌ಗಳ ಟಿಕೆಟ್ ದರ ಒಂದು ದಿನದ ಮಟ್ಟಿಗೆ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.
ಹೇಗಿತ್ತು ಅರ್ಜೆಂಟೀನಾ-ಸೌದಿ ಅರೇಬಿಯಾ ಪಂದ್ಯ..?
ಟೂರ್ನಿಯ ಹಾಟ್ ಫೇವರಿಟ್ ಎನಿಸಿಕೊಂಡಿದ್ದ 2 ಬಾರಿ ಚಾಂಪಿಯನ್ ಅರ್ಜೆಂಟೀನಾ ತಂಡ ಸೌದಿ ಅರೇಬಿಯಾ ವಿರುದ್ಧ ಮಂಗಳವಾರ 1-2 ಗೋಲುಗಳಿಂದ ಅಚ್ಚರಿಯ ಸೋಲುಭವಿಸಿತು. ಅರ್ಜೆಂಟೀನಾದ 36 ಪಂದ್ಯಗಳ ಅಜೇಯ ಓಟಕ್ಕೂ ಈ ಪಂದ್ಯದಲ್ಲಿ ಬ್ರೇಕ್ ಬಿತ್ತು. ಇದರೊಂದಿಗೆ ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾದ ನಾಕೌಟ್ ಹಾದಿಗೆ ಹಿನ್ನಡೆಯುಂಟಾಗಿದ್ದು, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
FIFA World Cup ಅರ್ಜೆಂಟೀನಾಕ್ಕೆ ಸೌದಿ ಮರ್ಮಾಘಾತ..! ಮೆಸ್ಸಿ ಪಡೆಗೆ ನಾಕೌಟ್ ಹಾದಿ ಕಠಿಣ
ಪಂದ್ಯದ ಆರಂಭದಲ್ಲಿ ಸೌದಿಯ ಆಕ್ರಮಣಕಾರಿ ಆಟದ ನಡುವೆಯೂ ಅರ್ಜೆಂಟೀನಾ ಚೆಂಡಿನ ಮೇಲೆ ಹಿಡಿತ ಸಾಧಿಸಿತ್ತು. 10ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಮೆಸ್ಸಿ ಹಿಂದೆ ಬೀಳಲಿಲ್ಲ. ಬಳಿಕ ಮತ್ತಷ್ಟುಗೋಲಿನ ಅವಕಾಶಗಳು ಅರ್ಜೆಂಟೀನಾಕ್ಕೆ ಒದಗಿ ಬಂದರೂ ಅದಕ್ಕೆ ಸೌದಿ ಗೋಲ್‌ಕೀಪರ್ ಮೊಹಮದ್ ಅಲೊವೈಸ್ ಅದಕ್ಕೆ ಅವಕಾಶ ನೀಡಲಿಲ್ಲ. ಒಟ್ಟು 14 ಬಾರಿ ಗೋಲಿಗೆ ಪ್ರಯತ್ನಿಸಿದರೂ ತಂಡಕ್ಕೆ ಅದೃಷ್ಟಕೈಹಿಡಿಯಲಿಲ್ಲ. ಬಲಿಷ್ಠ ರಕ್ಷಣಾ ಪಡೆಯ ಮೂಲಕ ಮೆಸ್ಸಿ ಬಳಗವನ್ನು ಕಟ್ಟಿಹಾಕುವಲ್ಲಿ ಸೌದಿ ಯಶಸ್ವಿಯಾಯಿತು.
ತಿರುಗಿಬಿದ್ದ ಸೌದಿ:
ದ್ವಿತೀಯಾರ್ಧದಲ್ಲಿ ಮತ್ತಷ್ಟುಗೋಲುಗಳ ಮೂಲಕ ಪಂದ್ಯ ತನ್ನದಾಗಿಸಿಕೊಳ್ಳುವ ಅರ್ಜೆಂಟೀನಾ ಕನಸಿಗೆ ಆರಂಭದಲ್ಲೇ ಸೌದಿ ಆಟಗಾರರು ಆಘಾತ ನೀಡಿದರು. 48ನೇ ನಿಮಿಷದಲ್ಲಿ ಸಲೇಹ್ ಅಲ್‌ಶೆಹರಿ ಸೌದಿ ಪರ ಮೊದಲ ಗೋಲು ಬಾರಿಸಿದರೆ, ಬಳಿಕ 5 ನಿಮಿಷಗಳ ಅಂತರದಲ್ಲಿ ಸಲೇಂ ಅಲ್ದಾವ್ಸಾರಿ ಮತ್ತೊಂದು ಗೋಲು ದಾಖಲಿಸಿ ಸೌದಿಯ ಗೆಲುವಿಗೆ ಕಾರಣರಾದರು. ಬಳಿಕ ಒತ್ತಡದಿಂದಲೇ ಆಟವಾಡಿದ ಅರ್ಜೆಂಟೀನಾ ಹಲವು ಅವಕಾಶಗಳನ್ನು ತಪ್ಪಿಸಿಕೊಂಡಿತು. ಮೆಸ್ಸಿಯ ಫ್ರೀ ಕಿಕ್ ಕೂಡಾ ಗೋಲು ಪೆಟ್ಟಿಗೆಗೆ ಸೇರಲಿಲ್ಲ. ಗೆಲುವಿನ ಬಳಿಕ ಸೌದಿ ಆಟಗಾರರು ಮೈದಾನದುದ್ದಕ್ಕೂ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.