ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಉತ್ಸಾಹಿ ಸೌದಿ ಅರೇಬಿಯಾ ತಂಡ 2014ರ ವಿಶ್ವಕಪ್‌ ಫೈನಲಿಸ್ಟ್‌ ಹಾಗೂ ವಿಶ್ವದ ಬಲಾಢ್ಯ ತಂಡಗಳಲ್ಲಿ ಒಂದಾದ ಅರ್ಜೆಂಟೀನಾವನ್ನು ಮಣಿಸಿತ್ತು. ಈ ಬಾರಿಯ ವಿಶ್ವಕಪ್‌ನ ಅತ್ಯಂತ ಮಹಾ ಫಲಿತಾಂಶ ಎಂದೇ ಇದನ್ನು ಬಣ್ಣಿಸಲಾಗಿದೆ.

ದೋಹಾ (ನ.25): ವಿಶ್ವ ಫುಟ್‌ಬಾಲ್‌ನಲ್ಲಿ ಅರ್ಜೆಂಟೀನಾಗೂ, ಸೌದಿ ಅರೇಬಿಯಾ ತಂಡಕ್ಕೂ ಅಜಗಜಾಂತರ ವ್ಯತ್ಯಾಸ. ಹೀಗಿದ್ದಾಗ ಸೌದಿ ಅರೇಬಿಯಾ, ಅರ್ಜೆಂಟೀನಾ ತಂಡವನ್ನು ಸೋಲಿಸುವ ಮಾತು ಕನಸಿನಲ್ಲೂ ಅಸಾಧ್ಯ ಎನ್ನಲಾಗಿತ್ತು. ಆದರೆ, ಈ ಬಾರಿ ಫಿಫಾ ವಿಶ್ವಕಪ್‌ನ ಅತ್ಯಂತ ಅಚ್ಚರಿಯ ಫಲಿತಾಂಶದಲ್ಲಿ ಸೌದಿ ಅರೇಬಿಯಾ, ದಕ್ಷಿಣ ಅಮೆರಿಕದ ಬಲಾಢ್ಯ ಟೀಮ್‌ ಅರ್ಜೆಂಟೀನಾಕ್ಕೆ ಮಣ್ಣುಮುಕ್ಕಿಸಿದಾಗ ಎಲ್ಲರಿಗೂ ಅಚ್ಚರಿ. ಫುಟ್‌ಬಾಲ್‌ನ ಪರಮ ಅಭಿಮಾನಿಗಳು ಕೂಡ ಇಂಥದ್ದೊಂದು ಫಲಿತಾಂಶಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರು. ಸ್ವತಃ ಸೌದಿ ಅರೇಬಿಯಾಕ್ಕೂ ಈ ಫಲಿತಾಂಶ ನಂಬಲು ಸಾಧ್ಯವಾಗಿರಲಿಲ್ಲ. ಸೌದಿಯ ದೊರೆ ಖುಷಿಯಿಂದ ಕುಪ್ಪಳಿಸಿ ಹೋಗಿದ್ದ. ಇಡೀ ದೇಶಕ್ಕೆ ಒಂದು ದಿನ ರಜೆಯನ್ನು ಘೋಷಿಸಿಬಿಟ್ಟಿದ್ದ. ಹೀಗಿರುವಾಗ ಸೌದಿ ಅರೇಬಿಯಾ 2-1 ರಿಂದ ಅರ್ಜೆಂಟೀನಾವನ್ನು ಮಣಿಸಿದ್ದು ಹೇಗೆ ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ತಂಡದ ಆಟ ಎಷ್ಟು ಉತ್ತಮವಾಗಿತ್ತೋ, ತಂಡದ ಮ್ಯಾನೇಜರ್‌ ಆಗಿರುವ ಹರ್ವ್‌ ರೆನಾರ್ಡ್‌ ಹಾಫ್‌ ಟೈಮ್‌ನಲ್ಲಿ ತಂಡದ ಡ್ರೆಸಿಂಗ್‌ ರೂಮ್‌ನಲ್ಲಿ ನೀಡಿದ ಅತ್ಯಂತ ಸ್ಫೂರ್ತಿದಾಯಕ ಟೀಮ್‌ ಟಾಕ್‌ನ ಮಾತು ಕೂಡ ತಂಡದ ಆಟಗಾರರ ಮೇಲೆ ಪರಿಣಾಮ ಬೀರಿತ್ತು. ಮೊದಲ ಅವಧಿ ಮುಗಿಸಿ ತಂಡದ ಆಟಗಾರರು ಡ್ರೆಸಿಂಗ್‌ ರೂಮ್‌ಗೆ ಬಂದ ಬೆನ್ನಲ್ಲಿಯೇ, ಇಡೀ ತಂಡದ ಮೇಲೆ ರೇಗಾಡಿದ್ದ ಫ್ರಾನ್ಸ್‌ನ ಮಾಜಿ ಆಟಗಾರ, ಎಲ್ಲರೂ ಒಂದು ಮಾತನ್ನು ಅರ್ಥ ಮಾಡಿಕೊಳ್ಳಬೇಕು. ನೀವ್ಯಾರು ಇಲ್ಲಿ ಲಿಯೋನೆಲ್‌ ಮೆಸ್ಸಿ ಜೊತೆ ಫೋಟೋ ತೆಗೆಸಿಕೊಳ್ಳೋಕೆ ಬಂದಿಲ್ಲ, ದೇಶಕ್ಕೋಸ್ಕರ ಆಡುತ್ತಿದ್ದೀರಿ ಎಂದು ಹೇಳಿದ ಮಾತುಗಳು ಆಟಗಾರರ ಮೇಲೆ ಪರಿಣಾಮ ಬೀರಿದ್ದವು.

Scroll to load tweet…


ಹಾಫ್‌ ಟೈಮ್‌ ಟಾಕ್‌ನಲ್ಲಿ ಹೆರ್ವ್‌ ರೆನಾರ್ಡ್‌ ಆಡಿರುವ ಮಾತುಗಳ ದೃಶ್ಯಾವಳಿಗಳು ವೈರಲ್‌ ಆಗಿವೆ. ಪಂದ್ಯ ಆರಂಭವಾದ ಬರೀ 10 ನಿಮಿಷದಲ್ಲಿಯೇ ಸೌದಿ ಅರೇಬಿಯಾ ಹಿನ್ನಡೆ ಕಂಡಿತ್ತು. ಪೆನಾಲ್ಟಿ ಅವಕಾಶದಲ್ಲಿ ಲಿಯೋನೆಲ್‌ ಮೆಸ್ಸಿ ವಿಶ್ವಕಪ್‌ ಫೈನಲ್ಸ್‌ನಲ್ಲಿ ತಮ್ಮ 7ನೇ ಗೋಲು ದಾಖಲು ಮಾಡಿದ್ದರು. ಬಲಿಷ್ಠ ತಂಡದ ವಿರುದ್ಧ ಆಟವಾಡುವಂಥ ಸಂದರ್ಭದಲ್ಲಿ ಸಾಮಾನ್ಯವಾಗಿ ಟೀಮ್‌ ಮ್ಯಾನೇಜರ್‌ಗಳು ಬ್ರೇಕ್‌ ಟೈಮ್‌ನಲ್ಲಿ ತಂಡವನ್ನು ಸಮಾಧಾನ ಮಾಡಲು ಪ್ರಯತ್ನ ಮಾಡುತ್ತಾರೆ. ಸೋತರೂ ತೊಂದರೆಯಿಲ್ಲ. ಹೀನಾಯವಾಗಿ ಸೋಲೋದು ಬೇಡ ಎನ್ನುವ ಭಾವನೆ ಅವರಲ್ಲಿರುತ್ತದೆ. ಆದರೆ, ರೆನಾರ್ಡ್‌ ಮಾತ್ರ, ತನ್ನ ತಂಡದ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದರು. ಇಡೀ ಆಟಗಾರರಿಗೆ ಮೈದಾನದಲ್ಲಿ ತೋರಿದ ನಿರ್ವಹಣೆಯನ್ನು ಇಂಚಿಂಚಾಗಿ ವಿವರಿಸಿ ಟೀಕೆ ಮಾಡುತ್ತಿದ್ದರೆ, ಆಟಗಾರರ ಮುಖದಲ್ಲಿ ದ್ವೇಷದ ಭಾವನೆ ಮೂಡುತ್ತಿತ್ತು.

ಅದರಲ್ಲೂ ಒಂದು ಸಂದರ್ಭದಲ್ಲಂತೂ 54 ವಷದ ಮ್ಯಾನೇಜರ್‌, ನೀವೆಲ್ಲಾ ಯಾವ ರೀತಿಯ ಪ್ಲೇಯರ್‌ಗಳೆಂದರೆ, ಮೆಸ್ಸಿ ಜೊತೆ ಆಡೋದಕ್ಕಲ್ಲ, ಫೋಟೋ ತೆಗೆಸಿಕೊಳ್ಳಲಷ್ಟೇ ಲಾಯಕ್ಕು ಎಂದಿದ್ದರು. ತಂಡ 2ನೇ ಅವಧಿಯ ಆಟದಲ್ಲಿ ಕನಿಷ್ಠ ಪಂದ್ಯ ಹೋರಾಟ ತೋರುತ್ತದೆ ಎನ್ನುವ ನಂಬಿಕೆಯೂ ನನಗಿಲ್ಲ ಎಂದು ತಂಡದ ಆಟಗಾರರಿಗೆ ಮೂದಲಿಸುತ್ತಲೇ ಸ್ಪೂರ್ತಿ ತುಂಬಿದ್ದರು.

ಮೈದಾನದ ಮಧ್ಯದಲ್ಲಿ ಮೆಸ್ಸಿ ಬಾಲ್‌ ಹಿಡಿದು ಓಡುತ್ತಿದ್ದಾರೆ ಎಂದರೆ, ನೀವು ಅವರ ಮುಂದೆ ಸುಮ್ಮನೆ ನಿಂತುಕೊಳ್ಳೋದಲ್ಲ. ಡಿಫೆನ್ಸ್‌ನವರು ಹೋರಾಡಬೇಕು. ಅವರನ್ನು ಆ ವಿಭಾಗದಲ್ಲಿ ಮಾರ್ಕ್‌ ಮಾಡಬೇಕು. ಇಲ್ಲದೇ ಇದ್ದರೆ ಒಂದು ಕೆಲಸ ಮಾಡಿ ಈಗ ಮೈದಾನಕ್ಕೆ ಹೋಗುವಾಗ ಫೋನ್‌ ತೆಗೆದುಕೊಂಡು ಹೋಗಿ ಅವರೊಂದಿಗೆ ಫೋಟೋ ತೆಗೆದುಕೊಳ್ಳಿ.
ನೀವಂತೂ ಪಂದ್ಯದಲ್ಲಿ ಕಮ್‌ಬ್ಯಾಕ್‌ ಮಾಡುವ ರೀತಿ ಕಾಣುತ್ತಿಲ್ಲ. ನೀವು ಹಾಗೆ ಮಾಡುವ ಭಾವನೆ ನನಗಿಲ್ಲ. ನೀವೆಲ್ಲಾ ರಿಲಾಕ್ಸ್‌ ಆಗಿ ಆಡ್ತಿದ್ದೀರಿ. ಕಮ್‌ ಆನ್‌. ಇದು ವಿಶ್ವಕಪ್‌. ನಿಮ್ಮ ಎಲ್ಲಾ ಶಕ್ತಿಯನ್ನು ಇಲ್ಲಿ ನೀಡಿ..!

FIFA World Cup: ಕತಾರ್‌ ವಿಶ್ವಕಪ್‌ನಲ್ಲಿ ಸೋದರರ ಸವಾಲ್‌! ಸ್ಪೇನ್‌ ಪರ ನಿಕೋ, ಘಾನಾ ಪರ ಇನಾಕಿ ಆಟ

ರೆನಾರ್ಡ್‌ ಅವರ ಪ್ಯಾಷನೇಟಿಕ್‌ ಮಾತನ್ನು ತಂಡದ ಸಿಬ್ಬಂದಿಯೊಬ್ಬ ಅಷ್ಟೇ ಪರಿಣಾಮಕಾರಿಯಾಗಿ ಅರೇಬಿಕ್‌ನಲ್ಲಿ ಟ್ರಾನ್ಸ್‌ಲೇಟ್‌ ಮಾಡಿದ್ದರು. ಗೆಲುವಿಗಾಗಿ ನಿಮ್ಮಲ್ಲಿ ಏನೇನು ಮಾಡಲು ಸಾಧ್ಯ ಅದೆಲ್ಲವನ್ನೂ ಮಾಡಿ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಕೊನೆ ಮಾಡಿದ್ದರು.

FIFA World Cup: ಇಂಗ್ಲೆಂಡ್‌, ನೆದರ್‌ಲೆಂಡ್ಸ್‌ಗೆ ಸತತ 2ನೇ ಜಯದ ಗುರಿ

ರೆನಾರ್ಡ್‌ ಅವರ ಮಾತು ಕೇಳಿದ ಬಳಿಕ ಮೈದಾನಕ್ಕಿಳಿದ ತಂಡ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ನಿರ್ವಹಣೆ ಮೂಲಕ ಅಚ್ಚರಿಯ ಫಲಿತಾಂಶ ದಾಖಲು ಮಾಡಿತ್ತು. ಪಂದ್ಯ ಆರಂಭವಾದ ಮೂರನೇ ನಿಮಿಷದಲ್ಲಿ ಅಲೇಹ್‌ ಆಶ್ಲೆಹರಿ ಗೋಲು ಸಿಡಿಸುವ ಮೂಲಕ ಸಮಬಲ ಸಾಧಿಸಲು ಯಶ ಕಂಡಿದ್ದರು. ಅದಾದ 53 ನಿಮಿಷಗಳ ಬಳಿಕ ಸಲೇಮ್‌ ಆಲ್ದಾವ್‌ಸರಿ ವಿಶ್ವಕಪ್‌ನ ಅತ್ಯಂತ ಶ್ರೇಷ್ಠ ಗೋಲು ಬಾರಿಸಿ ಸೌದಿ ಅರೇಬಿಯಾಕ್ಕೆ ಗೆಲುವು ನೀಡಿದ್ದರು.