* ಸ್ಯಾಫ್‌ ಕಪ್ ಫುಟ್ಬಾಲ್‌ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಭಾರತ-ನೇಪಾಳ ಕಾದಾಟ* ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ ಸುನಿಲ್ ಚೆಟ್ರಿ ಪಡೆ* ಸತತ 2 ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ಪುಟ್ಬಾಲ್ ತಂಡ

ಮಾಲೆ(ಅ.16): 7 ಬಾರಿ ಚಾಂಪಿಯನ್‌ ಭಾರತ, ಶನಿವಾರ ಸ್ಯಾಫ್‌ ಕಪ್‌ (SAFF Cup) ಫುಟ್ಬಾಲ್‌ ಟೂರ್ನಿ (Football) ಯ ಫೈನಲ್‌ನಲ್ಲಿ ನೇಪಾಳ ವಿರುದ್ಧ ಸೆಣಸಲಿದೆ. ಕೊನೆಯ ಎರಡು ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಫುಟ್ಬಾಲ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಸುನಿಲ್‌ ಚೆಟ್ರಿ (Sunil Chhetri) ಪಡೆ ಬಳಿಕ ಪುಟಿದೆದ್ದು, ನೇಪಾಳ ಹಾಗೂ ಮಾಲ್ಡೀವ್ಸ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿತ್ತು. 13 ಆವೃತ್ತಿಗಳಲ್ಲಿ 12ನೇ ಬಾರಿಗೆ ಫೈನಲ್‌ನಲ್ಲಿ ಆಡುತ್ತಿರುವ ಭಾರತವು ಫಿಫಾ ರ‍್ಯಾಂಕಿಂಗ್‌ (FIFA Rankings) ನಲ್ಲಿ 168ನೇ ಸ್ಥಾನದಲ್ಲಿರುವ ನೇಪಾಳವನ್ನು ಸೋಲಿಸಿ ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.

ಸ್ಯಾಫ್‌ ಕಪ್‌ ಫೈನಲ್‌ಗೇರಿದ ಭಾರತ; ಪೀಲೆ ದಾಖಲೆ ಮುರಿದ ಸುನಿಲ್‌ ಚೆಟ್ರಿ

ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿರುವ ನೇಪಾಳ (Nepal) ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಭಾರತ ಕೊನೆ ಬಾರಿಗೆ ಚಾಂಪಿಯನ್‌ ಆಗಿದ್ದು 2015ರಲ್ಲಿ. 2018ರಲ್ಲಿ ಮಾಲ್ಡೀವ್ಸ್‌ ವಿರುದ್ಧ ಸೋತು ರನ್ನರ್‌-ಅಪ್‌ ಆಗಿತ್ತು.

ಆಫ್ಘನ್‌ನಿಂದ 100 ಫುಟ್ಬಾಲಿಗರ ಸ್ಥಳಾಂತರ

ಲುಸ್ಸಾನೆ: ಅಫ್ಘಾನಿಸ್ತಾನದಿಂದ ಮಹಿಳಾ ಆಟಗಾರ್ತಿಯರು ಸೇರಿದಂತೆ ಸುಮಾರು 100 ಫುಟ್ಬಾಲಿಗರನ್ನು ಕತಾರ್‌ ಸಹಕಾರದೊಂದಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಷನ್‌(ಫಿಫಾ) (FIFA) ತಿಳಿಸಿದೆ. 

ಮಹಿಳೆಯರ ಕ್ರೀಡೆಯನ್ನು ನಿಷೇಧಿಸಿರುವ ತಾಲಿಬಾನ್‌ (Taliban) ನ ಕಿರುಕುಳದ ಭೀತಿಯಿಂದ ಸ್ಥಳಾಂತರ ಮಾಡಲಾಗಿದ್ದು, ಆಟಗಾರರನ್ನು ಸದ್ಯ ದೋಹಾ (Doha) ದಲ್ಲಿ ಇರಿಸಲಾಗಿದೆ. ಸೆಪ್ಟಂಬರ್‌ನಲ್ಲಿ ಅಫ್ಘಾನ್‌ ಮಹಿಳಾ ಫುಟ್ಬಾಲ್‌ (Afghanistan Women Football Team) ಆಟಗಾರ್ತಿಯರು ಪಾಕಿಸ್ತಾನಕ್ಕೆ ಪಲಾಯನಗೈದಿದ್ದರು. ಆದರೆ ಹಲವರು ಆಫ್ಘನ್‌ನಲ್ಲೇ ಬಾಕಿಯಾಗಿ ಸಂಕಷ್ಟಕ್ಕೊಳಗಾಗಿದ್ದರು.

ಪಾಕ್‌ನಲ್ಲಿ ಆಶ್ರಯ ಪಡೆದ ಆಫ್ಘನ್‌ ಫುಟ್ಬಾಲ್‌ ಆಟಗಾರ್ತಿಯರು..!

‘ಆಟಗಾರರ ಸುರಕ್ಷಿತ ಪ್ರಯಾಣಕ್ಕೆ ಸಹಕರಿಸಿದ ಕತರ್‌ ಸರ್ಕಾರಕ್ಕೆ ಧನ್ಯವಾದಗಳು. ಅವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಫಿಫಾ ಸಮಿತಿ ಕತಾರ್‌ ಸರ್ಕಾರದೊಂದಿಗೆ ಕಳೆದ ಆಗಸ್ಟ್‌ನಿಂದ ನಿಕಟ ಸಂಪರ್ಕದಲ್ಲಿದೆ. ಭವಿಷ್ಯದಲ್ಲಿ ಮತ್ತಷ್ಟು ಕ್ರೀಡಾಳುಗಳನ್ನು ಸ್ಥಳಾಂತರಿಸಲಾಗುವುದು’ ಎಂದು ಫಿಫಾ ತಿಳಿಸಿದೆ.

ಥಾಮಸ್‌, ಉಬರ್‌ ಕಪ್‌: ಕ್ವಾರ್ಟರ್‌ನಲ್ಲಿ ಸೋತ ಭಾರತ

ಅರ್ಹಸ್: ಭಾರತದ ಮಹಿಳೆಯರು ಮತ್ತು ಪುರುಷರ ತಂಡ ಕ್ರಮವಾಗಿ ಉಬರ್‌ ಕಪ್‌ ಹಾಗೂ ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ (Badminton) ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುವ ಮೂಲಕ ಅಭಿಯಾನ ಕೊನೆಗೊಳಿಸಿತು. 

ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌: ಭಾರತಕ್ಕೆ 5-0 ಭರ್ಜರಿ ಜಯ

ಶುಕ್ರವಾರ ಡೆನ್ಮಾರ್ಕ್ ವಿರುದ್ಧ ನಡೆದ ಥಾಮಸ್‌ ಕಪ್‌ ಕ್ವಾರ್ಟರ್‌ನಲ್ಲಿ ಭಾರತ 1-3ರಿಂದ ಸೋಲನುಭವಿಸಿತು. ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿ ಮಾತ್ರ ಗೆಲುವು ಸಾಧಿಸಿತು. ಸಿಂಗಲ್ಸ್‌ ಪಂದ್ಯಗಳಲ್ಲಿ ಕಿದಂಬಿ ಶ್ರೀಕಾಂತ್‌, ಸಾಯ್‌ ಪ್ರಣೀತ್‌ ಹಾಗೂ ಡಬಲ್ಸ್‌ನಲ್ಲಿ ಅರ್ಜುನ್‌-ಧ್ರುವ್‌ ಸೋಲುಂಡರು. ಗುರುವಾರ ನಡೆದಿದ್ದ ಉಬರ್‌ ಕಪ್‌ ಕ್ವಾರ್ಟರ್‌ನಲ್ಲಿ ಜಪಾನ್‌ ವಿರುದ್ಧ ಭಾರತದ ಮಹಿಳಾ ತಂಡ 0-3ರಲ್ಲಿ ಸೋಲನುಭವಿಸಿತ್ತು. ಸಿಂಗಲ್ಸ್‌ನಲ್ಲಿ ಮಾಳ್ವಿಕಾ, ಅದಿತಿ ಸೋತರೆ, ಡಬಲ್ಸ್‌ನಲ್ಲಿ ತನಿಶಾ-ರುತುಪರ್ಣಾ ಪರಾಭವಗೊಂಡರು.