ಸ್ಯಾಫ್ ಕಪ್ ಫೈನಲ್‌ಗೇರಿದ ಭಾರತ; ಪೀಲೆ ದಾಖಲೆ ಮುರಿದ ಸುನಿಲ್ ಚೆಟ್ರಿ
* ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ
* ದಾಖಲೆಯ 8ನೇ ಕಪ್ ಮೇಲೆ ಕಣ್ಣಿಟ್ಟಿದೆ ಸುನಿಲ್ ಚೆಟ್ರಿ ಪಡೆ
* ಪೀಲೆ ದಾಖಲೆ ಅಳಿಸಿಹಾಕಿದ ಭಾರತ ಫುಟ್ಬಾಲ್ ನಾಯಕ ಚೆಟ್ರಿ
ಮಾಲೆ(ಅ.14): ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿ (SAFF Cup Championship) ಯ ಫೈನಲ್‌ಗೆ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ (Indian Football Team) ಬಲಿಷ್ಠ ಮಾಲ್ಡೀವ್ಸ್ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಬುಧವಾರ ನಡೆದ ರೌಂಡ್ ರಾಬಿನ್ ಹಂತದ ಅಂತಿಮ ಪಂದ್ಯದಲ್ಲಿ ಭಾರತ, ಹಾಲಿ ಚಾಂಪಿಯನ್ ಮಾಲ್ಡೀವ್ಸ್ ವಿರುದ್ದ 3-1 ಗೋಲುಗಳ ರೋಚಕ ಗೆಲುವು ಸಾಧಿಸಿ, 12ನೇ ಬಾರಿಗೆ ಫೈನಲ್‌ಗೇರಿತು.
ಅಕ್ಟೋಬರ್ 16ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ತಂಡವು ಪ್ರಶಸ್ತಿಗಾಗಿ ನೇಪಾಳ (Nepal) ವಿರುದ್ದ ಕಾದಾಟ ನಡೆಸಲಿದೆ. ಇದುವರೆಗೂ ಒಟ್ಟು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ದಾಖಲೆಯ 8ನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕೆ 33ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ (Manvir Singh) ಮೊದಲು ಗೋಲು ತದುಕೊಟ್ಟರು. ಆದರೆ ಅಲಿ ಅಶ್ವಾಫ್ 45ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಮಾಲ್ಡೀವ್ಸ್ ಸಮಬಲ ಸಾಧಿಸಿತು.
ಡುರಾಂಡ್ ಕಪ್: ಚೊಚ್ಚಲ ಬಾರಿಗೆ ಎಫ್‌ಸಿ ಗೋವಾ ಚಾಂಪಿಯನ್
ಮೊದಲಾರ್ಧದಲ್ಲಿ ಚೆಟ್ರಿ ಗೋಲು ಬಾರಿಸಲು ವಿಫಲರಾದರು. ಆದರೆ ದ್ವಿತಿಯಾರ್ಧದ 62 ಹಾಗೂ 71ನೇ ನಿಮಿಷದಲ್ಲಿ ಆಕರ್ಷಕ ಗೋಲು ಸಿಡಿಸಿದ ಭಾರತ ಪುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ (Sunil Chhetri), ಭಾರತದ ಗೆಲುವಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದರು. ಪಂದ್ಯದ ಕೊನೆಯ 10 ನಿಮಿಷಗಳಲ್ಲಿ ಮಾಲ್ಡೀವ್ಸ್(Maldives) ತಂಡಕ್ಕೆ ಗೋಲು ಬಾರಿಸಲು ಅವಕಾಶ ಸಿಕ್ಕಿತಾದರೂ, ಅದನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲವಾಯಿತು.
77ನೇ ಗೋಲು ಸಿಡಿಸಿ ದಿಗ್ಗಜ ಪೀಲೆ ದಾಖಲೆ ಸರಿಗಟ್ಟಿದ್ದ ಸುನಿಲ್ ಚೆಟ್ರಿ!
ಫೈನಲ್‌ವರೆಗೆ ಭಾರತ ಅಜೇಯ ಗೆಲುವಿನ ನಾಗಾಲೋಟ: 2021ನೇ ಸಾಲಿನ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡವು ಅಜೇಯವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಭಾರತ ಆಡಿದ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಡ್ರಾನೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ನೆರೆಯ ನೇಪಾಳ ತಂಡವು 4 ಪಂದ್ಯಗಳಲ್ಲಿ 2 ಗೆಲುವು 1 ಡ್ರಾ ಹಾಗೂ ಒಂದು ಸೋಲಿನೊಂದಿಗೆ 7 ಅಂಕಗಳ ಸಹಿತ ಎರಡನೇ ಸ್ಥಾನ ಪಡೆಯುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ಮಾಲ್ಡೀವ್ಸ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಕ್ರಮವಾಗಿ ಮೂರು, ನಾಲ್ಕು ಹಾಗೂ 5ನೇ ಸ್ಥಾನ ಪಡೆದಿವೆ.
ಪೀಲೆ ದಾಖಲೆ ಮುರಿದ ಸುನಿಲ್ ಚೆಟ್ರಿ:
ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಸುನಿಲ್ ಚೆಟ್ರಿ, ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾದ ಬ್ರೆಜಿಲ್‌ನ ಪೀಲೆ(92 ಪಂದ್ಯಗಳಲ್ಲಿ 77 ಗೋಲು) ಅವರ ದಾಖಲೆಯನ್ನು ಮುರಿದರು. ಸುನಿಲ್ ಚೆಟ್ರಿ ಭಾರತ ಪರ 124 ಪಂದ್ಯಗಳನ್ನಾಡಿ 79 ಗೋಲು ಬಾರಿಸುವ ಮೂಲಕ ಅತಿಹೆಚ್ಚು ಗೋಲು ಬಾರಿಸಿದವರ ಪಟ್ಟಿಯಲ್ಲಿ ಜಂಟಿ 6ನೇ ಸ್ಥಾನಕ್ಕೇರಿದ್ದಾರೆ.