ಪೆನಾಲ್ಟಿ ಕಿಂಗ್ ಕ್ರೊವೇಷಿಯಾ ಫಿಫಾ ವಿಶ್ವಕಪ್‌ನಲ್ಲಿ ಆಘಾತಕಾರಿ ಫಲಿತಾಂಶ ದಾಖಲಿಸಿದೆ. ಐದು ಬಾರಿಯ ಫಿಫಾ ವಿಶ್ವಕಪ್ ಚಾಂಪಿಯನ್, ದಕ್ಷಿಣ ಅಮೆರಿಕದ ದೈತ್ಯ ಟೀಮ್ ಬ್ರೆಜಿಲ್‌ಗೆ ಆಘಾತ ನೀಡುವ ಮೂಲಕ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.
ದೋಹಾ (ಡಿ. 10): ಫಿಫಾ ವಿಶ್ವಕಪ್‌ನಿಂದ ಹೊರಬೀಳುವ ಹಂತದಲ್ಲಿ ಭರ್ಜರಿಯಾಗಿ ತಿರುಗೇಟು ನೀಡಿದ ಪೆನಾಲ್ಟಿ ಕಿಂಗ್ ಕ್ರೊವೇಷಿಯಾ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಿದೆ. ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವನ್ನು ಪೆನಾಲ್ಟಿಯಲ್ಲಿ 4-2 ರಿಂದ ಮಣಿಸಿದ ಪುಟ್ಟ ಕ್ರೊವೇಷಿಯಾ ದೇಶ ನಾಲ್ಕರ ಹಂತಕ್ಕೆ ಪ್ರವೇಶಿಸಿದೆ. ಇದರೊಂದಿಗೆ ಆರನೇ ಬಾರಿಗೆ ಫಿಫಾ ವಿಶ್ವಕಪ್ ಚಾಂಪಿಯನ್ ಎನಿಸಿಕೊಳ್ಳುವ ಗುರಿಯಲ್ಲಿದ್ದ ಬ್ರೆಜಿಲ್ ತಂಡ ಇದಕ್ಕಾಗಿ ಇನ್ನೂ ನಾಲ್ಕು ವರ್ಷ ಕಾಯಬೇಕಾಗಿದೆ. ಬ್ರೆಜಿಲ್ ಕೊನೆಯ ಬಾರಿಗೆ ಫಿಫಾ ವಿಶ್ವಕಪ್ ಗೆದ್ದಿದ್ದು 20 ವರ್ಷಗಳ ಹಿಂದೆ. ನಿಗದಿತ ಸಮಯದಲ್ಲಿ ಎರಡೂ ತಂಡಗಳು ಗೋಲು ರಹಿತ ಡ್ರಾ ಸಾಧಿಸಿದ್ದರಿಂದ ಫಲಿತಾಂಶ ನಿರ್ಣಯಕ್ಕಾಗಿ 30 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗಿತ್ತು. ಇದರಲ್ಲಿ ಮೊದಲ ಅವಧಿಯ ಆಟದ ಎಕ್ಸ್ಟ್ರಾ ಟೈಮ್‌ನಲ್ಲಿ ನೇಮಾರ್ ಆಕರ್ಷಕ ಗೋಲು ಸಿಡಿಸಿದರು. ಈ ವೇಳೆ ಬ್ರೆಜಿಲ್ ಸೆಮಿಫೈನಲ್‌ಗೇರುವುದು ಬಹುತೇಕ ನಿಶ್ಚಿತ ಎಂದೇ ಅಂದುಕೊಳ್ಳಲಾಗಿತ್ತು. ಆದರೆ, 117ನೇ ನಿಮಿಷದಲ್ಲಿ ಪೆಟ್ಕೋವಿಕ್ ಬಾರಿಸಿದ ಅವಿಸ್ಮರಣೀಯ ಗೋಲು ಕ್ರೊವೇಷಿಯಾ ತಂಡವನ್ನು ಗೆಲುವಿನ ಹೋರಾಟದಲ್ಲಿ ಇರಿಸಿದ್ದು ಮಾತ್ರವಲ್ಲದೆ ತಂಡವನ್ನು ಸೆಮಿಫೈನಲ್‌ಗೇರಿಸಲು ಕೂಡ ನೆರವಾಯಿತು.
ಸೆಮಿಫೈನಲ್ ಪಂದ್ಯದಲ್ಲಿ ಕ್ರೊವೇಷಿಯಾ ತಂಡ ಅರ್ಜೆಂಟೀನಾ ಹಾಗೂ ನೆದರ್ಲೆಂಡ್ಸ್ ನಡುವಿನ ವಿಜೇತರನ್ನು ಎದುರಿಸಲಿದೆ. 117ನೇ ನಿಮಿಷದಲ್ಲಿ ಬ್ರನೋ ಪೆಟ್ಕೋವಿಕ್ ಬಾರಿಸಿದ ಗೋಲು ಇಡೀ ಪಂದ್ಯದಲ್ಲಿ ಟಾರ್ಗೆಟ್‌ನತ್ತ ಕ್ರೊವೇಷಿಯಾ ಬಾರಿಸಿದ ಏಕೈಕ ಶಾಟ್ ಎನಿಸಿತ್ತು. ಪೆನಾಲ್ಟಿ ಶೂಟೌಟ್‌ನ ಮೊದಲ ಶಾಟ್‌ನಲ್ಲಿಯೇ ಬ್ರೆಜಿಲ್ ಹಿನ್ನಡೆ ಕಂಡಿತು. ರೋಡ್ರೆಗೋ ಬಾರಿಸಿದ ಶಾಟ್‌ಅನ್ನು ಡೊಮಿನಿಕ್ ಲಿವಾಕೋವಿಕ್ ಆಕರ್ಷಕವಾಗಿ ತಡೆದರೆ, ಕ್ರೊವೇಷಿಯಾ ಪರ ನಿಕೋಲಾ ವ್ಲಾಸಿಕ್, ಲೋವ್ರೋ ಮೇಜರ್, ಲೂಕಾ ಮಾಡ್ರಿಕ್, ಮಿಸಾಲೊವ್ ಒರ್ಸಿಕ್ ಪೆನಾಲ್ಟಿಯಲ್ಲಿ ಯಶಸ್ವಿಯಾಗಿ ಗೋಲು ಸಿಡಿಸಿದರು. ಬ್ರೆಜಿಲ್ ಪರವಾಗಿ ಸಿಸಿಮಿರೋ ಹಾಗೂ ಪೆಡ್ರೋ ಗೋಲು ಸಿಡಿಸಿದರೆ, ಮಾರ್ಕಿವಿನಸ್ ಗೋಲನ್ನು ಲಿವಾಕೋವಿಕ್ ಸೇವ್ ಮಾಡುವುದರೊಂದಿಗೆ ಕ್ರೊವೇಷಿಯಾ ಅದ್ಭುತ ಗೆಲುವು ಕಂಡಿತು.
FIFA World Cup ಲಿಯೋನೆಲ್ ಮೆಸ್ಸಿಯ ಅರ್ಜೆಂಟೀನಾ ಡಚ್ ಸವಾಲಿಗೆ ಸಿದ್ಧ
ಈ ಗೆಲುವಿನೊಂದಿಗೆ ಕ್ರೊವೇಷಿಯಾ ತಂಡ ವಿಶ್ವಕಪ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದಂತಾಗಿದೆ. ಇನ್ನೊಂದೆಡೆ ಬ್ರೆಜಿಲ್ ತಂಡ 5 ಪಂದ್ಯಗಳ ಪೈಕಿ 3ರಲ್ಲಿ ಮಾತ್ರವೇ ಗೆಲುವು ಕಂಡಿದೆ. ಕ್ರೊವೇಷಿಯಾ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ಆಡಿದ ಕಳೆದ ಆರುವ ಪಂದ್ಯಗಳ ಪೈಕಿ 5 ಪಂದ್ಯ ಎಕ್ಸ್‌ಟ್ರಾ ಟೈಮ್‌ನಲ್ಲಿ ನಿರ್ಧಾರವಾಗಿದ್ದರೆ, ನಾಲ್ಕು ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ ನಿರ್ಧಾರವಾಗಿದೆ. ಜಯದೊಂದಿಗೆ ಕ್ರೊವೇಷಿಯಾ ಕೂಡ ಸತತ 2ನೇ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಸಾಧನೆ ಮಾಡಿದಂತಾಗಿದೆ. ಕಳೆದ ಆವೃತ್ತಿಯಲ್ಲಿ ಕ್ರೊವೇಷಿಯಾ ರನ್ನರ್‌ಅಪ್ ಆಗಿತ್ತು.
FIFA World Cup ವಿಶ್ವಕಪ್ ಕ್ವಾರ್ಟರ್ ಫೈನಲ್ ಕಣ ರೆಡಿ..!
ಪೀಲೆ ದಾಖಲೆ ಸರಿಗಟ್ಟಿದ ನೇಮರ್: ಪಂದ್ಯದ ಹೆಚ್ಚುವರಿ ನಿಮಿಷದಲ್ಲಿ ಗೋಲು ಸಿಡಿಸಿದ ಬ್ರೆಜಿಲ್‌ನ ಸೂಪರ್ ಸ್ಟಾರ್ ಆಟಗಾರ ದಿಗ್ಗಜ ಫುಟ್‌ಬಾಲ್ ತಾರೆ ಪೀಲೆ ಅವರ ದಾಖಲೆ ಸರಿಗಟ್ಟಿದರು. ಇದು ನೇಮರ್ ಅವರಿಗೆ ರಾಷ್ಟ್ರೀಯ ತಂಡದ ಪರವಾಗಿ 77ನೇ ಗೋಲು ಎನಿಸಿದೆ. ಪೀಲೆ ಕೂಡ ರಾಷ್ಟ್ರೀಯ ತಂಡದ ಪರವಾಗಿ 77 ಗೋಲು ಸಿಡಿಸಿದ್ದರು.
