ಮಹತ್ವದ ಘಟ್ಟದತ್ತ ಫಿಫಾ ವಿಶ್ವಕಪ್ ಟೂರ್ನಿಫುಟ್ಬಾಲ್ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ ಸೆಣಸಾಟಕ್ಕೆ ವೇದಿಕೆ ಸಜ್ಜು32 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲೀಗ ಪ್ರಶಸ್ತಿ ರೇಸ್‌ನಲ್ಲಿ 8 ತಂಡಗಳು ಉಳಿದಿವೆ

ದೋಹಾ(ಡಿ.08): ಫುಟ್ಬಾಲ್‌ ವಿಶ್ವಕಪ್‌ ಆರಂಭಗೊಂಡು ಇನ್ನೂ ಎರಡೂವರೆ ವಾರವಷ್ಟೇ ಆಗಿದೆ, ಆದರೆ ಟೂರ್ನಿ ಆಗಲೇ ನಿರ್ಣಾಯಕ ಘಟ್ಟಗೆ ಬಂದು ನಿಂತಿದೆ. ಈ ವರ್ಷ ಕೇವಲ 28 ದಿನಗಳಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತಿದ್ದು, ಒಂದು ಪಂದ್ಯದ ಫಲಿತಾಂಶದ ಗುಂಗಿನಿಂದ ಹೊರಬರುವ ಮೊದಲೇ ಮತ್ತೊಂದು ಅಚ್ಚರಿ ಅಥವಾ ಆಘಾತಕಾರಿ ಫಲಿತಾಂಶ ಹೊರಬೀಳಲಿದೆ.

ಶುಕ್ರವಾರದಿಂದ ಕ್ವಾರ್ಟರ್‌ ಫೈನಲ್‌ ಹಂತ ಆರಂಭಗೊಳ್ಳಲಿದೆ. ವಿಶ್ವಕಪ್‌ ಗೆಲ್ಲುವ ಕನಸು ಹೊತ್ತ 32 ತಂಡಗಳು ಆರಂಭಿಕ ಹಂತದಲ್ಲಿ 8 ವಿವಿಧ ಗುಂಪುಗಳಲ್ಲಿ ಸೆಣಸಿದ್ದವು. ಈಗ ಪ್ರಶಸ್ತಿ ರೇಸ್‌ನಲ್ಲಿ 8 ತಂಡಗಳಷ್ಟೇ ಉಳಿದಿವೆ. ಹಾಲಿ ಚಾಂಪಿಯನ್‌ ಫ್ರಾನ್ಸ್‌, ದಾಖಲೆಯ 5 ಬಾರಿಯ ಚಾಂಪಿಯನ್‌ ಬ್ರೆಜಿಲ್‌, 2 ಬಾರಿ ವಿಶ್ವಕಪ್‌ ಗೆದ್ದಿದ್ದರೂ ಮೆಸ್ಸಿ ನಾಯಕತ್ವದಲ್ಲಿ ಮೊದಲ ಪ್ರಶಸ್ತಿಗೆ ಕಾಯುತ್ತಿರುವ ಅರ್ಜೆಂಟೀನಾ, 56 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿರುವ ಇಂಗ್ಲೆಂಡ್‌, ಇನ್ನು ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನೆದರ್‌ಲೆಂಡ್‌್ಸ, ಮೊರಾಕ್ಕೊ, ಪೋರ್ಚುಗಲ್‌, ಕ್ರೊವೇಷಿಯಾ ಕ್ವಾರ್ಟರ್‌ ಫೈನಲ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿಯಲಿವೆ.

ಕ್ವಾರ್ಟರ್‌ ಫೈನಲ್‌ನಲ್ಲಿ ರೋಚಕ ಮುಖಾಮುಖಿ!

ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಭಾರೀ ಕುತೂಹಲ ಮೂಡಿಸಿವೆ. ಮೊದಲ ಕ್ವಾರ್ಟರ್‌ನಲ್ಲಿ ಬ್ರೆಜಿಲ್‌ಗೆ ಕ್ರೊವೇಷಿಯಾ ಎದುರಾಗಲಿದೆ. ಪ್ರಿ ಕ್ವಾರ್ಟರಲ್ಲಿ ಕೊರಿಯಾ ವಿರುದ್ಧ ಬ್ರೆಜಿಲ್‌ 4-1ರಲ್ಲಿ ಅಧಿಕಾರಯುತ ಜಯ ಸಾಧಿಸಿದರೆ, ಕ್ರೊವೇಷಿಯಾ ಪೆನಾಲ್ಟಿಶೂಟೌಟ್‌ನಲ್ಲಿ ಜಪಾನ್‌ ವಿರುದ್ಧ ಗೆದ್ದು ಮುನ್ನಡೆದಿತ್ತು. 2ನೇ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಅರ್ಜೆಂಟೀನಾ ಹಾಗೂ ನೆದರ್‌ಲೆಂಡ್‌್ಸ ಸೆಣಸಲಿವೆ. ಎರಡೂ ತಂಡಗಳಿಗೆ ಪ್ರಿ ಕ್ವಾರ್ಟರ್‌ನಲ್ಲಿ ಕಠಿಣ ಪೈಪೋಟಿ ಎದುರಾಗಲಿಲ್ಲ. ಆಸ್ಪ್ರೇಲಿಯಾ ವಿರುದ್ಧ ಅರ್ಜೆಂಟೀನಾ ಗೆದ್ದರೆ, ಅಮೆರಿಕವನ್ನು ನೆದರ್‌ಲೆಂಡ್‌್ಸ ಬಗ್ಗುಬಡಿದಿತ್ತು.

FIFA World Cup 8ರ ಸುತ್ತಿಗೆ ಪೋರ್ಚುಗಲ್‌ ಲಗ್ಗೆ, ಸ್ವಿಟ್ಜರ್‌ಲೆಂಡ್‌ ಎದುರು ಭರ್ಜರಿ ಜಯಭೇರಿ

ರೊನಾಲ್ಡೋ ಆಡದಿದ್ದರೂ 6-1ರಲ್ಲಿ ಸ್ವಿಜರ್‌ಲೆಂಡ್‌ಗೆ ಸೋಲುಣಿಸಿದ ಪೋರ್ಚುಗಲ್‌ಗೆ ಮೊರಾಕ್ಕೊ ಎದುರಾಗಲಿದೆ. ಸ್ಪೇನ್‌ ವಿರುದ್ಧ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿ ಶೂಟೌಟ್‌ನಲ್ಲಿ ಅಚ್ಚರಿ ಗೆಲುವು ಸಾಧಿಸಿದ ಮೊರಾಕ್ಕೊ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಲು ಹಪಹಪಿಸುತ್ತಿದೆ. ಪ್ರಿ ಕ್ವಾರ್ಟರ್‌ನಲ್ಲಿ ನಿರಾಯಾಸವಾಗಿ ಗೆದ್ದ ಫ್ರಾನ್ಸ್‌ ಹಾಗೂ ಇಂಗ್ಲೆಂಡ್‌ ನಡುವಿನ ಕ್ವಾರ್ಟರ್‌ ಫೈನಲ್‌ ಎಲ್ಲರ ಕುತೂಹಲ ಕೆರಳಿಸಿದೆ. ಎರಡೂ ತಂಡಗಳಲ್ಲಿ ತಾರಾ ಆಟಗಾರರ ದಂಡೇ ಇದ್ದು, ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.

ಕ್ವಾರ್ಟರ್‌ ಫೈನಲ್‌ ವೇಳಾಪಟ್ಟಿ

ಪಂದ್ಯ ದಿನಾಂಕ ಸಮಯ

ಬ್ರೆಜಿಲ್‌-ಕ್ರೊವೇಷಿಯಾ ಡಿ.9 ರಾತ್ರಿ 8.30

ಅರ್ಜೆಂಟೀನಾ-ನೆದರ್‌ಲೆಂಡ್ಸ್ ಡಿ.9 ರಾತ್ರಿ 12.30

ಪೋರ್ಚುಗಲ್‌-ಮೊರಾಕ್ಕೊ ಡಿ.10 ರಾತ್ರಿ 8.30

ಫ್ರಾನ್ಸ್‌-ಇಂಗ್ಲೆಂಡ್‌ ಡಿ.10 ರಾತ್ರಿ 12.30