ಫಿಫಾ ವಿಶ್ವಕಪ್‌ನ ನಾಕೌಟ್‌ ಪಂದ್ಯದಲ್ಲಿ ಮೆಕ್ಸಿಕೊ ತಂಡ ಈಕ್ವೆಡಾರ್‌ ವಿರುದ್ಧ 2-0 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ 40 ವರ್ಷಗಳ ಬಳಿಕ ನಾಕೌಟ್‌ ಪಂದ್ಯವೊಂದರಲ್ಲಿ ಗೆಲುವು ಸಾಧಿಸಿ, ತನ್ನ ದಶಕಗಳ ಗೆಲುವಿನ ಬರವನ್ನು ನೀಗಿಸಿಕೊಂಡಿದೆ.

ಮೆಕ್ಸಿಕೊ ಸಿಟಿ: ಬರೋಬ್ಬರಿ 40 ವರ್ಷಗಳ ಕಾಯುವಿಕೆ ಬಳಿಕ ಮೆಕ್ಸಿಕೊ ತಂಡ ಫಿಫಾ ವಿಶ್ವಕಪ್‌ನ ನಾಕೌಟ್‌ ಪಂದ್ಯವೊಂದರಲ್ಲಿ ಗೆಲುವು ಸಾಧಿಸಿದ್ದು, ಪ್ರಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ತಂಡ ಬುಧವಾರ ಈಕ್ವೆಡಾರ್‌ ವಿರುದ್ಧ ಅಂತಿಮ 32ರ ಸುತ್ತಿನಲ್ಲಿ 2-0 ಗೋಲಿನಿಂದ ಗೆಲುವು ಸಾಧಿಸಿತು. ಜೂಲಿಯನ್‌ ಕ್ವಿನೋನಸ್‌ ಹಾಗೂ ರೌಲ್ ಜಿಮೆನೆಜ್‌ ತಂಡದ ಪರ ಗೋಲು ದಾಖಲಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೆಕ್ಸಿಕೊ ಕೊನೆ ಬಾರಿ 1986ರಲ್ಲಿ ಅಂತಿಮ 16ರ ಸುತ್ತಿನಲ್ಲಿ ಗೆಲುವು ಸಾಧಿಸಿ, ಕ್ವಾರ್ಟರ್ ಫೈನಲ್‌ವರೆಗೂ ತಲುಪಿತ್ತು. ಆ ಬಳಿಕ 1994ರಿಂದ 2018ರ ವರೆಗೆ ತಂಡ ಸತತವಾಗಿ 7 ಬಾರಿ ಗುಂಪು ಹಂತದಿಂದ ನಾಕೌಟ್‌ ತಲುಪಿತ್ತು. ಆದರೆ ನಾಕೌಟ್‌ ಪಂದ್ಯದಲ್ಲಿ ಗೆದ್ದಿರಲಿಲ್ಲ. ಕಳೆದ ಬಾರಿ ತಂಡ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಈ ಬಾರಿ ತಂಡ ನಾಕೌಟ್‌ನ ಮೊದಲ ಪಂದ್ಯದಲ್ಲಿ ಜಯಗಳಿಸಿ 4 ದಶಕಗಳ ಗೆಲುವಿನ ಬರ ನೀಗಿಸಿದೆ.

ಬಿರುಗಾಳಿ: ಪಂದ್ಯ 1 ಗಂಟೆ ವಿಳಂಬ

ಬಿರುಗಾಳಿಯಿಂದಾಗಿ ಮೆಕ್ಸಿಕೊ ಸಿಟಿ ಕ್ರೀಡಾಂಗಣದಲ್ಲಿ ಮೆಕ್ಸಿಕೊ ಹಾಗೂ ಈಕ್ವೆಡಾರ್‌ ನಡುವಿನ ಪಂದ್ಯ 1 ಗಂಟೆ ವಿಳಂಬವಾಗಿ ಆರಂಭಗೊಂಡಿತು. ಕ್ರೀಡಾಂಗಣ ಸುತ್ತಮುತ್ತ ಭೀಕರ ಗಾಳಿ ಬೀಸುತ್ತಿದ್ದ ಕಾರಣ ಪಂದ್ಯ ನಿಗದಿತ ಸಮಯಕ್ಕೆ ಆರಂಭಗೊಳ್ಳಲಿಲ್ಲ. ಇತ್ತೀಚೆಗೆ ಫ್ರಾನ್ಸ್-ಇರಾಕ್‌ ನಡುವೆ ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯುತ್ತಿದ್ದ ಪಂದ್ಯ, ಮೊದಲಾರ್ಧದ ಬಳಿಕ ಬರೋಬ್ಬರಿ 2 ಗಂಟೆ 11 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು.

ಕೇನ್‌ 2 ಗೋಲು: ಕಾಂಗೊ ವಿರುದ್ಧ ಗೆದ್ದ ಇಂಗ್ಲೆಂಡ್‌ ಪ್ರಿ ಕ್ವಾರ್ಟರ್‌ಗೆ ಲಗ್ಗೆ

ಜಾರ್ಜಿಯಾ(ಅಮೆರಿಕ): ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊ ವಿರುದ್ಧ 2-1 ಗೋಲಿನ ಅಂತರದಲ್ಲಿ ಗೆದ್ದ ಇಂಗ್ಲೆಂಡ್‌, ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮಾಜಿ ಚಾಂಪಿಯನ್‌ ತಂಡ 13ನೇ ಬಾರಿ ಅಂತಿಮ 16ರ ಸುತ್ತು ತಲುಪಿದೆ. ಕಾಂಗೊ ತಂಡದ ಮೊದಲ ಪ್ರಿ ಕ್ವಾರ್ಟರ್‌ ಪ್ರವೇಶದ ಕನಸು ಭಗ್ನಗೊಂಡಿತು.

7ನೇ ನಿಮಿಷದಲ್ಲೇ ಬ್ರಿಯಾನ್‌ ಕಿಪೆಂಗ ಬಾರಿಸಿದ ಗೋಲಿನಿಂದಾಗಿ ಕಾಂಗೊ ಮುನ್ನಡೆ ಸಾಧಿಸಿತು. ಆ ಬಳಿಕ 75ನೇ ನಿಮಿಷದವರೆಗೂ ಇಂಗ್ಲೆಂಡ್‌ಗೆ ಗೋಲು ದಾಖಲಿಸಲಾಗಲಿಲ್ಲ. ಆ ಬಳಿಕ ಹ್ಯಾರಿ ಕೇನ್‌ ಜಾದೂ ಮಾಡಿದರು. 11 ನಿಮಿಷಗಳ ಅಂತರದಲ್ಲಿ 2 ಗೋಲು ದಾಖಲಿಸಿ ತಂಡದ ಗೆಲುವಿನ ರೂವಾರಿಯಾದರು. ತಂಡಕ್ಕೆ ಪ್ರಿ ಕ್ವಾರ್ಟರ್‌ನಲ್ಲಿ ಮೆಕ್ಸಿಕೊ ಸವಾಲು ಎದುರಾಗಲಿದೆ.