ಕೀಲಿಯನ್ ಎಂಬಾಪೆ ಅವರ ಎರಡು ಗೋಲುಗಳ ನೆರವಿನಿಂದ ಫ್ರಾನ್ಸ್‌, ಸ್ವೀಡನ್‌ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿ ಫಿಫಾ ವಿಶ್ವಕಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಎಂಬಾಪೆ ವಿಶ್ವಕಪ್‌ನಲ್ಲಿ 18 ಗೋಲುಗಳನ್ನು ಪೂರೈಸಿದರೆ, ಫ್ರಾನ್ಸ್ ಸತತ 5 ಪಂದ್ಯಗಳಲ್ಲಿ 3+ ಗೋಲು ಗಳಿಸಿದ ದಾಖಲೆ ಬರೆಯಿತು.

ಈಸ್ಟ್‌ ರುಥರ್‌ಫೋರ್ಡ್‌(ಅಮೆರಿಕ): ಕೀಲಿಯನ್ ಎಂಬಾಪೆ ಮತ್ತೆರಡು ಗೋಲು ಬಾರಿಸಿದ್ದು, ಈ ಮೂಲಕ ಫ್ರಾನ್ಸ್‌ ತಂಡವನ್ನು ಈ ಬಾರಿ ಫಿಫಾ ಫುಟ್ಬಾಲ್‌ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಮಂಗಳವಾರ ಮಧ್ಯರಾತ್ರಿ ನಡೆದ ಪಂದ್ಯದಲ್ಲಿ ತಂಡಕ್ಕೆ ಸ್ವೀಡನ್‌ ವಿರುದ್ಧ 3-0 ಗೋಲಿನಿಂದ ಭರ್ಜರಿ ಗೆಲುವು ಲಭಿಸಿತು.

45ನೇ ನಿಮಿಷದಲ್ಲಿ ಮೊದಲು ಗೋಲು ದಾಖಲಿಸಿದ ಎಂಬಾಪೆ, ಫ್ರಾನ್ಸ್‌ನ ಖಾತೆ ತೆರೆದರು. 53ನೇ ನಿಮಿಷದಲ್ಲಿ ಬ್ರಾಡ್ಲಿ ಬಾರ್ಕೊಲಾ ತಂಡದ ಪರ 2ನೇ ಗೋಲು ಬಾರಿಸಿದರು. 74ನೇ ನಿಮಿಷದಲ್ಲಿ ಎಂಬಾಪೆ ಮತ್ತೊಂದು ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಈ ಬಾರಿ ಆಡಿರುವ 4 ಪಂದ್ಯಗಳ ಪೈಕಿ 3ರಲ್ಲಿ ತಲಾ 2 ಗೋಲು ದಾಖಲಿಸಿದ್ದಾರೆ. ತಂಡ ಅಂತಿಮ 16ರ ಸುತ್ತಿನಲ್ಲಿ ಪರಗ್ವೆ ವಿರುದ್ಧ ಸೆಣಸಾಡಲಿದ್ದು, ಗೆಲುವಿನ ವಿಶ್ವಾಸದಲ್ಲಿದೆ.

ಸತತ 4ನೇ ಬಾರಿ ಪ್ರಿ ಕ್ವಾರ್ಟರ್‌ಗೆ:

2 ಬಾರಿ ಚಾಂಪಿಯನ್ ಫ್ರಾನ್ಸ್ ತಂಡ ಸತತ 4ನೇ ಹಾಗೂ ಒಟ್ಟಾರೆ 11ನೇ ಬಾರಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. 2018ರಲ್ಲಿ ಚಾಂಪಿಯನ್‌ ಆಗಿದ್ದ ತಂಡ ಕಳೆದ ಬಾರಿ ಫೈನಲ್‌ನಲ್ಲಿ ಸೋತಿತ್ತು. ಈ ಬಾರಿಯೂ ಫೈನಲ್‌ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ.

ವಿಶ್ವಕಪ್‌ನಲ್ಲಿ ಎಂಬಾಪೆ 18 ಗೋಲು: 2ನೇ ಗರಿಷ್ಠ

ಫ್ರಾನ್ಸ್‌ನ 27 ವರ್ಷದ ಎಂಬಾಪೆ ಈ ವಿಶ್ವಕಪ್‌ನಲ್ಲಿ 6ನೇ ಗೋಲು ದಾಖಲಿಸಿದ್ದಾರೆ. ಒಟ್ಟಾರೆ ಫಿಫಾ ವಿಶ್ವಕಪ್‌ನಲ್ಲಿದು 18ನೇ ಗೋಲು. ಈ ಮೂಲಕ ವಿಶ್ವಕಪ್‌ನ ಗರಿಷ್ಠ ಗೋಲ್‌ ಸ್ಕೋರರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅವರು 3 ವಿಶ್ವಕಪ್‌ನ, 18 ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ. 6ನೇ ವಿಶ್ವಕಪ್‌ ಆಡುತ್ತಿರುವ ಅರ್ಜೆಂಟೀನಾದ ಲಿಯೋನಲ್‌ ಮೆಸ್ಸಿ 29 ಪಂದ್ಯಗಳಲ್ಲಿ 19 ಗೋಲು ದಾಖಲಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ತಲಾ 3 ಗೋಲು: ಫ್ರಾನ್ಸ್‌ ದಾಖಲೆ

ಫಿಫಾ ವಿಶ್ವಕಪ್‌ನಲ್ಲಿ ಸತತ 5 ಪಂದ್ಯಗಳಲ್ಲಿ ತಲಾ 3 ಅಥವಾ ಅದಕ್ಕಿಂತ ಹೆಚ್ಚು ಗೋಲು ಬಾರಿಸಿದ ಮೊದಲ ತಂಡ ಎಂಬ ಖ್ಯಾತಿಗೆ ಫ್ರಾನ್ಸ್ ಪಾತ್ರವಾಗಿದೆ. ಕಳೆದ ಬಾರಿ ಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ 3-3 ಗೋಲು ದಾಖಲಿಸಿದ್ದ ಫ್ರಾನ್ಸ್‌, ಈ ಬಾರಿ ಸೆನೆಗಲ್‌ ವಿರುದ್ಧ 3-1, ಇರಾಕ್‌ ವಿರುದ್ಧ 3-0, ನಾರ್ವೆ ವಿರುದ್ಧ 4-1, ಸ್ವೀಡನ್‌ ವಿರುದ್ಧ 3-0 ಗೋಲು ದಾಖಲಿಸಿದೆ.

ಇಂದಿನ ಪಂದ್ಯಗಳು

ಅಮೆರಿಕ-ಬೋಸ್ನಿಯಾ, ಬೆಳಗ್ಗೆ 5.30ಕ್ಕೆ

ಸ್ಪೇನ್‌-ಆಸ್ಟ್ರಿಯಾ, ರಾತ್ರಿ 1.30ಕ್ಕೆ

ಪೋರ್ಚುಗಲ್‌-ಕ್ರೊವೇಷಿಯಾ, ನಸುಕಿನ 4.30ಕ್ಕೆ(ಶುಕ್ರ)