ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ, ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಮತ್ತೊಂದು ಪಂದ್ಯದಲ್ಲಿ, ದಕ್ಷಿಣ ಕೊರಿಯಾ ತಂಡವು ಚೆಕ್ ಗಣರಾಜ್ಯದ ವಿರುದ್ಧ 2-1 ಗೋಲುಗಳಿಂದ ರೋಚಕ ಜಯ ಗಳಿಸಿದೆ.
ಮೆಕ್ಸಿಕೋ ಸಿಟಿ: ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಮೆಕ್ಸಿಕೋ, ಫಿಫಾ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿ ತನ್ನ ತವರಿನ ಅಭಿಮಾನಿಗಳಿಗೆ ಸಂಭ್ರಮಿಸಲು ಕಾರಣ ನೀಡಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರೀ ಒತ್ತಡದೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿದ ಮೆಕ್ಸಿಕೋ, 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ನಿಟ್ಟುಸಿರು ಬಿಟ್ಟಿತು.
4 ವರ್ಷಗಳ ಹಿಂದೆ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದ್ದ ಮೆಕ್ಸಿಕೋ, ಈ ಬಾರಿ ತವರಿನಲ್ಲೇ ಆಡುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ. ಹೀಗಾಗಿ, ತಂಡ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರಬೇಕಿದ್ದು ಅದರಲ್ಲೂ ಮೊದಲ ಪಂದ್ಯ ಬಹಳ ಮಹತ್ವ ಪಡೆದುಕೊಂಡಿತ್ತು.
80,824 ಪ್ರೇಕ್ಷಕರಿಂದ ತುಂಬಿದ್ದ ಕ್ರೀಡಾಂಗಣದಲ್ಲಿ ಪಂದ್ಯದ ಆರಂಭದಲ್ಲೇ ಮೆಕ್ಸಿಕೋ ಗೋಲಿನ ಖಾತೆ ತೆರೆಯಿತು. ಜ್ಯೂಲಿಯಾನ್ ಕ್ವಿನೊನೆಸ್ 9ನೇ ನಿಮಿಷದಲ್ಲಿ ಗೋಲು ಬಾರಿಸಿದಾಗ, ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಮುನ್ನಡೆ ಕಾಯ್ದುಕೊಂಡ ಮೆಕ್ಸಿಕೋಗೆ ದ್ವಿತೀಯಾರ್ಧದಲ್ಲಿ 2ನೇ ಗೋಲು ದೊರೆಯಿತು. 66ನೇ ನಿಮಿಷದಲ್ಲಿ ಆಕರ್ಷಕ ಹೆಡ್ಡರ್ ಮೂಲಕ ರಾಲ್ ಜಿಮಿನೆಜ್ ಗೋಲು ಗಳಿಸಿದರು. ಇದು ಮೆಕ್ಸಿಕೋ ಪರ ಅವರ 46ನೇ ಗೋಲಾದರೂ, 3ನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಅವರ ಮೊದಲ ಗೋಲು.
ಮೆಕ್ಸಿಕೋ ಬಳಿ ಈಗ 3 ಅಂಕಗಳಿದ್ದು, ‘ಎ’ ಗುಂಪಿನ ತನ್ನ ಮುಂದಿನ ಪಂದ್ಯವನ್ನು ಜೂ.18ರಂದು ದಕ್ಷಿಣ ಕೊರಿಯಾ ಎದುರು ಆಡಲಿದೆ.
ಪಂದ್ಯದಲ್ಲಿ 3 ರೆಡ್‌ಕಾರ್ಡ್!
ಮೆಕ್ಸಿಕೋ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಭಾರೀ ಪೈಪೋಟಿಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಒಟ್ಟು 3 ಆಟಗಾರರು ರೆಡ್ ಕಾರ್ಡ್ (ಪಂದ್ಯದಿಂದ ಅಮಾನತು)ಗೆ ಗುರಿಯಾದರು. 90+2ನೇ ನಿಮಿಷದಲ್ಲಿ ಮೆಕ್ಸಿಕೋನ ಸೀಸಾರ್ ಮಾಂಟೆಸ್ ಮೈದಾನದಿಂದ ಹೊರ ದಬ್ಬಿಸಿಕೊಂಡರೆ, ದಕ್ಷಿಣ ಆಫ್ರಿಕಾದ ಯಯಾ ಸಿಥೋಲೆ (50ನೇ ನಿಮಿಷ), ಥೆಂಬಾ ಜ್ವಾನೆ (84ನೇ ನಿಮಿಷ) ಸಹ ರೆಡ್ ಕಾರ್ಡ್ ಪಡೆದರು.
ಚೆಕ್ ಗಣರಾಜ್ಯವನ್ನು 2-1ರಲ್ಲಿ ಮಣಿಸಿದ ದಕ್ಷಿಣ ಕೊರಿಯಾ
ಗ್ವಾಡಲಜರ (ಮೆಕ್ಸಿಕೋ): ಫಿಫಾ ವಿಶ್ವಕಪ್‌ನಲ್ಲಿ ದಕ್ಷಿಣ ಕೊರಿಯಾ ಸಹ ಶುಭಾರಂಭ ಮಾಡಿದೆ. ಮೊದಲ ದಿನ 2ನೇ ಪಂದ್ಯದಲ್ಲಿ ಕೊರಿಯಾ, ಚೆಕ್ ಗಣರಾಜ್ಯದ ವಿರುದ್ಧ 2-1 ಗೋಲುಗಳ ಗೆಲುವು ಸಾಧಿಸಿತು. ಪಂದ್ಯದ ಮೊದಲಾರ್ಧದಲ್ಲಿ ಚೆಂಡಿನ ಮೇಲೆ ನಿಯಂತ್ರಣಕ್ಕಾಗಿ ಎರಡೂ ತಂಡಗಳು ಪೈಪೋಟಿ ನಡೆಸಿದವು. ಆದರೂ ಮೊದಲ 45 ನಿಮಿಷಗಳಲ್ಲಿ ಗೋಲು ದಾಖಲಾಗಲಿಲ್ಲ.
59ನೇ ನಿಮಿಷದಲ್ಲಿ ಚೆಕ್ ಗಣರಾಜ್ಯ ಖಾತೆ ತೆರೆಯಿತು. ನಾಯಕ ಲಡಿಸ್ಲಾವ್ ಕ್ರೇಸಿ ಪೆನಾಲ್ಟಿ ಏರಿಯಾದಿಂದ ಅಮೋಘ ಹೆಡ್ಡರ್ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಮೊದಲು ಗೋಲು ಬಿಟ್ಟುಕೊಟ್ಟರೂ, ದಕ್ಷಿಣ ಕೊರಿಯಾ ಧೃತಿಗೆಡಲಿಲ್ಲ. 67ನೇ ನಿಮಿಷದಲ್ಲಿ ಹ್ವಾಂಗ್ ಇನ್-ಬಿಯೊಮ್, ಚೆಕ್‌ನ ಇಬ್ಬರು ಆಟಗಾರರನ್ನು ದಾಟಿ ಆಕರ್ಷಕ ಗೋಲು ದಾಖಲಿಸಿದರು.
ಬಳಿಕ 80ನೇ ನಿಮಿಷದಲ್ಲಿ ಅಂಕಣದ ಬಲ ಭಾಗದಿಂದ ಒ ಹ್ಯುನ್ ಗ್ಯುಗೆ ಪಾಸ್ ನೀಡಿದ ಹ್ವಾಂಗ್ ಇನ್-ಬಿಯೊಮ್ ತಂಡದ ಮತ್ತೊಂದು ಗೋಲಿಗೆ ಕಾರಣರಾದರು.
01ನೇ ಜಯ: 2010ರ ಬಳಿಕ ದ.ಕೊರಿಯಾ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಗೆದ್ದಿದ್ದು ಇದೇ ಮೊದಲು.
03ನೇ ಬಾರಿ: ದ.ಕೊರಿಯಾ ವಿಶ್ವಕಪ್‌ನಲ್ಲಿ ಸತತ 3ನೇ ಬಾರಿಗೆ ಯುರೋಪಿಯನ್ ಎದುರಾಳಿಯನ್ನು ಸೋಲಿಸಿದೆ. 2018ರಲ್ಲಿ ಜರ್ಮನಿ, 2022ರಲ್ಲಿ ಪೋರ್ಚುಗಲ್ ವಿರುದ್ಧ ಗೆದ್ದಿತ್ತು.

