ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ತಮ್ಮ ಭಾರತ ಪ್ರವಾಸದ ಭಾಗವಾಗಿ ಮುಂಬೈಗೆ ಭೇಟಿ ನೀಡಿದರು. ಈ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮತ್ತು ಫುಟ್ಬಾಲ್ ನಾಯಕ ಸುನಿಲ್ ಚೆಟ್ರಿ ಅವರನ್ನು ಭೇಟಿಯಾಗಿ, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.
ಮುಂಬೈ: ಅರ್ಜೆಂಟೀನಾದ ದಿಗ್ಗಜ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿಯ G.O.A.T ಇಂಡಿಯಾ ಪ್ರವಾಸದ 2ನೇ ದಿನ ಮುಂಬೈನಲ್ಲಿ ನಡೆಯಿತು. ಭಾನುವಾರ ಸಂಜೆ ಐತಿಹಾಸಿಕ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಸ್ಸಿ, ಲೂಯಿಸ್ ಸುವಾರೆಜ್, ರೋಡ್ರಿಗೋ ಡಿ ಪಾಲ್ ಪಾಲ್ಗೊಂಡರು.
ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ಭಾರತೀಯ ಫುಟ್ಬಾಲ್‌ನ ದಿಗ್ಗಜ ಸುನಿಲ್ ಚೆಟ್ರಿಯನ್ನು ಮೆಸ್ಸಿ ಭೇಟಿಯಾದರು. ಚೆಟ್ರಿಯನ್ನು ಅಪ್ಪಿಕೊಂಡು, ಅವರೊಂದಿಗೆ ಮಾತುಕತೆ ನಡೆಸಿದ ಮೆಸ್ಸಿ ಬಳಿಕ ತಮ್ಮ ಅರ್ಜೆಂಟೀನಾ ಜೆರ್ಸಿಯನ್ನು ಚೆಟ್ರಿಗೆ ಉಡುಗೊರೆಯಾಗಿ ನೀಡಿದರು.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಫುಟ್ಬಾಲ್ ಪ್ರತಿಭಾನ್ವೇಷಣೆಗೆ ಆರಂಭಿಸಿರುವ ‘ಮಹಾದೇವ’ ಯೋಜನೆಗೆ ಸಿಎಂ ದೇವೇಂದ್ರ ಫಡ್ನವೀಸ್ ಜೊತೆ ಮೆಸ್ಸಿ ಚಾಲನೆ ನೀಡಿದರು.
ಭಾರತದ ಫುಟ್ಬಾಲಿಗರಾದ ನಿಖಿಲ್ ಪೂಜಾರಿ, ರಾಹುಲ್ ಭೇಕೆ, ಚಿಂಗ್ಲೆನ್‌ಸಾನಾ, ಬಾಲಾ ದೇವಿ ಸಹ ಮೆಸ್ಸಿಯನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.
ಮೆಸ್ಸಿಗೆ ಜೆರ್ಸಿ ಕೊಟ್ಟ ಸಚಿನ್, ಸಚಿನ್‌ಗೆ ಚೆಂಡು ನೀಡಿದ ಮೆಸ್ಸಿ!
ಸಚಿನ್ ತೆಂಡುಲ್ಕರ್ 2011ರ ಏಕದಿನ ವಿಶ್ವಕಪ್‌ನಲ್ಲಿ ತಾವು ಧರಿಸಿದ್ದ ಜೆರ್ಸಿಯೊಂದರ ಮೇಲೆ ತಮ್ಮ ಹಸ್ತಾಕ್ಷರ ಹಾಕಿ, ಅದನ್ನು ಮೆಸ್ಸಿಗೆ ಉಡುಗೊರೆಯಾಗಿ ನೀಡಿದರು. ಮೆಸ್ಸಿ ಕೂಡ 2022ರ ಫಿಫಾ ವಿಶ್ವಕಪ್‌ನಲ್ಲಿ ಬಳಕೆಯಾದ ಫುಟ್ಬಾಲ್‌ವೊಂದನ್ನು ಸಚಿನ್‌ಗೆ ಗಿಫ್ಟ್ ನೀಡಿದರು.
ಇಂದು ಮೋದಿ ಭೇಟಿ
ಮೆಸ್ಸಿ ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ರಾಜ್ಯಸಭಾ ಸದಸ್ಯ, ಎಐಎಫ್‌ಎಫ್ ಮಾಜಿ ಅಧ್ಯಕ್ಷ ಪ್ರಫುಲ್ ಪಟೇಲ್ ನಿವಾಸಕ್ಕೆ ತೆರಳಿ ಅಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಇ.ಡಿ. ಮುಖ್ಯಸ್ಥ ರಾಹುಲ್ ನವೀನ್ ಸೇರಿ ಹಲವು ಗಣ್ಯರನ್ನು ಭೇಟಿಯಾಗಲಿದ್ದಾರೆ. ಆನಂತರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ವಿರಾಟ್ ಕೊಹ್ಲಿ ಸಹ ಇರಲಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ಮೆಸ್ಸಿ ನೇರ ವಿಮಾನ ನಿಲ್ದಾಣಕ್ಕೆ ತೆರಳಿ ಭಾರತಕ್ಕೆ ಗುಡ್‌ಬೈ ಹೇಳಲಿದ್ದಾರೆ.
ಮೆಸ್ಸಿ ಕಾರ್ಯಕ್ರಮ ಆಯೋಜಕನನ್ನು ಫ್ಲೈಟಿಂದ ಇಳಿಸಿ ಬಂಧಿಸಿದ ಪೊಲೀಸ್!
ಕೋಲ್ಕತಾ: ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿಯನ್ನು ನೋಡಲಾಗದೆ ರೊಚ್ಚಿಗೆದ್ದ ಅಭಿಮಾನಿಗಳು ದಾಂಧಲೆ ನಡೆಸಿದ ಪ್ರಕರಣದಲ್ಲಿ ಶನಿವಾರ, ಕಾರ್ಯಕ್ರಮದ ಆಯೋಜಕ ಸದತ್ರು ದತ್ತ ಅವರನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದರು. ಭಾನುವಾರ ಅವರನ್ನು ಕೋರ್ಟ್‌ಗೆ ಹಾಜರು ಪಡಿಸಲಾಯಿತು. ಕೋರ್ಟ್ ಸದತ್ರು ಅವರಿಗೆ ಜಾಮೀನಿ ನಿರಾಕರಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಶನಿವಾರ ಸಾಲ್ಟ್ ಲೇಕ್ ಕ್ರೀಡಾಂಗಣದಿಂದ ಮೆಸ್ಸಿ ಹಾಗೂ ಅವರ ಜೊತೆಗಾರರನ್ನು ಕರೆದುಕೊಂಡು ಸದತ್ರು ಹೈದ್ರಾಬಾದ್‌ಗೆ ಹೊರಟ್ಟಿದ್ದರು. ಆದರೆ ಕೋಲ್ಕತಾ ಪೊಲೀಸರು ಏರ್ಪೋರ್ಟ್‌ಗೆ ತೆರಳಿ, ವಿಮಾನ ಏರಿದ್ದ ಸದತ್ರುರನ್ನು ಕೆಳಕ್ಕಿಳಿಸಿ ವಶಕ್ಕೆ ಪಡೆದಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ತನಿಖೆ ಆರಂಭ: ಸಾಲ್ಟ್ ಲೇಕ್ ಕ್ರೀಡಾಂಗಣದ ದಾಂಧಲೆ ಪ್ರಕರಣದ ತನಿಖೆಯನ್ನು ಬಂಗಾಳ ಸರ್ಕಾರ ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆಶಿಮ್ ಕುಮಾರ್‌ರ ನೇತೃತ್ವದಲ್ಲಿ ನಡೆಸಲು ನಿರ್ಧರಿಸಿದೆ. ಅವರು ಭಾನುವಾರ ಕ್ರೀಡಾಂಗಣಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಂಗಾಳ ರಾಜ್ಯಪಾಲ ಆನಂದ ಬೋಸ್ ಕೂಡ ಕ್ರೀಡಾಂಗಣಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸಿದರು.


