ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ತಮ್ಮ ಭಾರತ ಪ್ರವಾಸದ ವೇಳೆ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಅವರ ಸ್ಪ್ಯಾನಿಶ್ ಭಾಷಣವನ್ನು ಭಾಷಾಂತರಿಸುವಾಗ, ಭಾಷಾಂತರಕಾರರೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು 'ಪ್ರಧಾನ ಮಂತ್ರಿ' ಎಂದು ತಪ್ಪಾಗಿ ಉಲ್ಲೇಖಿಸಿದ್ದು ವೈರಲ್ ಆಗಿದೆ.
ಬೆಂಗಳೂರು: ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ, ಮೂರು ದಿನಗಳ ಭಾರತ ಪ್ರವಾಸದಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಈ ವೇಳೆ ಕೆಲ ಕಾಲ ಮೆಸ್ಸಿ ಫುಟ್ಬಾಲ್ ಆಟದಲ್ಲಿ ತಮ್ಮ ಕಾಲ್ಚಳಕ ತೋರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇನ್ನು ಇದೇ ವೇಳೆ ಭಾಷಾಂತರಿಯೊಬ್ಬರು ಹೈದರಾಬಾದ್‌ನ ಉಪ್ಪಳ ಸ್ಟೇಡಿಯಂನಲ್ಲಿ ಆಡಿದ ಒಂದು ಮಾತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತಕ್ಕೆ ಬಂದಿಳಿದ ಲಿಯೋನೆಲ್ ಮೆಸ್ಸಿ, ಸ್ಪ್ಯಾನಿಶ್‌ನಲ್ಲಿಯೇ ಮಾತನಾಡಿದ್ದರು. ಅದನ್ನು ಭಾಷಾಂತರಿಯೊಬ್ಬರು ಸ್ಪ್ಯಾನಿಶ್‌ನಿಂದ ಇಂಗ್ಲೀಶ್‌ಗೆ ಟ್ರಾನ್ಸ್‌ಲೇಟ್ ಮಾಡಿದರು. ಈ ವೇಳೆ ಆ ಟ್ರಾನ್ಸ್‌ಲೇಟರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು "ಪ್ರಧಾನ ಮಂತ್ರಿ" ಎಂದು ತಪ್ಪಾಗಿ ಕರೆದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
G.O.A.T. India Tour ಭಾಗವಾಗಿ ಲಿಯೋನೆಲ್ ಮೆಸ್ಸಿ, ಮೊದಲ ದಿನ ಕೋಲ್ಕತಾ ಪ್ರವಾಸ ಮುಗಿಸಿ ಸಂಜೆ ಹೈದರಾಬಾದ್‌ಗೆ ಬಂದಿಳಿದಿದ್ದರು. ಉಪ್ಪಳದಲ್ಲಿ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ತಮ್ಮನ್ನು ಅದ್ದೂರಿಯಾಗಿ ಸ್ವಾಗತಿಸಿದ ಅಭಿಮಾನಿಗಳಿಗೆ ಮೆಸ್ಸಿ ಸ್ಪ್ಯಾನಿಶ್ ಭಾಷೆಯಲ್ಲಿ ಅಭಿನಂದಿಸಿದ್ದರು. ಅದನ್ನು ಟ್ರಾನ್ಸ್‌ಲೇಟರ್ ಇಂಗ್ಲೀಶ್‌ನಲ್ಲಿ ಭಾಷಾಂತರಿಸಿದರು. ಈ ವೇಳೆ ಟ್ರಾನ್ಸ್‌ಲೇಟರ್ ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನಿ ಎಂದು ಕರೆದರು. ಅದು ಆ ಸಮಯದಲ್ಲಿ ನೇರ ಪ್ರಸಾರದಲ್ಲಿ ವೀಕ್ಷಿಸುತ್ತಿದ್ದ ಅಭಿಮಾನಿಗಳು ತಕ್ಷಣ ಗಮನಿಸಲಿಲ್ಲ. ಆದರೆ ಇದಾದ ಬಳಿಕ ಈ ವಿಡಿಯೋ ಕ್ಲಿಪ್ ಗಮನಕ್ಕೆ ಬಂದಿದ್ದು, ಇದೀಗ ವೈರಲ್ ಆಗುತ್ತಿದೆ.
ಹೈದ್ರಾಬಾದ್‌ನಲ್ಲಿ ಮೆಸ್ಸಿ ಜತೆ ಸಿಎಂ ರೇವಂತ್ ರೆಡ್ಡಿ ಫುಟ್ಬಾಲ್!
ಶನಿವಾರ ಸಂಜೆ ಮೆಸ್ಸಿ ಹೈದ್ರಾಬಾದ್‌ನಲ್ಲಿ ಕಾಣಿಸಿಕೊಂಡರು. ಕೋಲ್ಕತಾ ಘಟನೆ ಬಳಿಕ ಹೈದ್ರಾಬಾದ್‌ನಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿತ್ತು. ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೆಸ್ಸಿ ಜೊತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಫುಟ್ಬಾಲ್ ಆಡಿದರು. ಕೆಲ ಮಕ್ಕಳ ಜೊತೆಗೂ ಮೆಸ್ಸಿ ಫುಟ್ಬಾಲ್ ಆಡಿ ಖುಷಿಪಟ್ಟರು.
ನಾವು ಏನು ಸಾಧಿಸಲು ಹೊರಟಿದ್ದೇವೆ?: ಮೆಸ್ಸಿ ಕಾರ್ಯಕ್ರಮ ಬಗ್ಗೆ ಬಿಂದ್ರಾ!
ನವದೆಹಲಿ: ಲಿಯೋನೆಲ್ ಮೆಸ್ಸಿ ಭಾರತ ಪ್ರವಾಸ ವೇಳೆ ಉದ್ಯಮಿಗಳು, ರಾಜಕಾರಣಿಗಳು, ಅಭಿಮಾನಿಗಳು ನಡೆದುಕೊಂಡ ರೀತಿ ಬಗ್ಗೆ ಒಲಿಂಪಿಕ್ ಚಿನ್ನ ವಿಜೇತ ಭಾರತೀಯ ಶೂಟರ್ ಅಭಿನವ್ ಬಿಂದ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇವಲ ಕೆಲ ಕ್ಷಣ ಕಳೆಯಲು, ಫೋಟೋ ಕ್ಲಿಕ್ಕಿಸಿಕೊಳ್ಳಲು ಕೋಟ್ಯಂತರ ರುಪಾಯಿ ಖರ್ಚು ಮಾಡಿದ್ದನ್ನು ನೋಡಿ ಬೇಸರವಾಗಿದೆ. ಆ ಹಣವನ್ನು ದೇಶದಲ್ಲಿ ಕ್ರೀಡಾಭಿವೃದ್ಧಿ ಬಳಸಬಹುದಿತ್ತು ಎಂದು ‘ಎಕ್ಸ್’ನಲ್ಲಿ ಬರೆದುಕೊಂಡಿರುವ ಬಿಂದ್ರಾ, ಸ್ಟಾರ್‌ಗಳ ಆರಾಧನೆ ಒಳ್ಳೆಯದಲ್ಲ ಎಂದಿದ್ದಾರೆ.
ನಾನು ದುಃಖದಲ್ಲಿದ್ದಾಗ ಮೆಸ್ಸಿಯೇ ಮದ್ದು: ಚೆಟ್ರಿ!
ನವದೆಹಲಿ: ಲಿಯೋನೆಲ್ ಮೆಸ್ಸಿಯನ್ನು ಭಾನುವಾರ ಮುಂಭೈನಲ್ಲಿ ಭೇಟಿಯಾಗಿದ್ದ ಭಾರತದ ಫುಟ್ಬಾಲ್ ದಿಗ್ಗಜ ಸುನಿಲ್ ಚೆಟ್ರಿ, ತಮ್ಮ ಭೇಟಿ ಬಗ್ಗೆ ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ‘ಮೆಸ್ಸಿ ನಮ್ಮ ಕ್ರೀಡೆಗೆ ನೀಡಿರುವ ಕೊಡುಗೆಗಳಿಗೆ ಅವರಿಗೆ ಧನ್ಯವಾದ ಹೇಳಲು ಅವಕಾಶ ಸಿಕ್ಕಿದ್ದು ಬಣ್ಣಿಸಲಾಗದ ಅನುಭವ. ಅದೊಂದು ಕನಸು ಹಾಗೂ ಜವಾಬ್ದಾರಿ ಎರಡೂ ಕೂಡ ಆಗಿತ್ತು. ನಾನು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಮುಂಬೈಗೆ ಪ್ರಯಾಣಿಸಲು ಸಾಧ್ಯವಿರಲಿಲ್ಲ. ಆದರೂ ಮೆಸ್ಸಿ ಭೇಟಿ ಅವಕಾಶ ತಪ್ಪಿಸಿಕೊಳ್ಳಲು ನನ್ನ ಮನಸು ಒಪ್ಪಲಿಲ್ಲ. ನಾನು ಯಾವಾಗ ದುಃಖದಲ್ಲಿದ್ದರೂ ಮೆಸ್ಸಿಯೇ ನನಗೆ ಮದ್ದು. ಅವರೇ ಸ್ಫೂರ್ತಿ’ ಎಂದು ಚೆಟ್ರಿ ಬರೆದುಕೊಂಡಿದ್ದಾರೆ.


