ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ಮುಂಬೈನಲ್ಲಿ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಸಹ ಆಟಗಾರರನ್ನು ಬದಿಗೆ ಸರಿಸಿ, ಅನುಮತಿ ಇಲ್ಲದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅವರ ವರ್ತನೆಯು ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಮುಂಬೈ: ಮಹರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಹಾಗೂ ಗಾಯಕಿ ಅಮೃತಾ ಫಡ್ನವೀಸ್, ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಅವರ ಬಳಿ ಮುಗಿಬಿದ್ದು ಮೂರು ಬಾರಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು, ಇದೀಗ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಮೃತಾ ಅವರ ನಡೆಯನ್ನು ಇಲ್ಲಿದಂತೆ ಟ್ರೋಲ್ ಮಾಡಲಾರಂಭಿಸಿದ್ದಾರೆ.
ಹೌದು, ಮೂರು ದಿನಗಳ ಪ್ರವಾಸಕ್ಕೆ ಭಾರತಕ್ಕೆ ಬಂದಿರುವ ಅರ್ಜೆಂಟೀನಾದ ಫುಟ್ಬಾಲ್ ಲೆಜೆಂಡ್ ಮೆಸ್ಸಿ, ಕೋಲ್ಕತಾ ಹಾಗೂ ಹೈದರಾಬಾದ್ ಪ್ರವಾಸ ಮುಗಿಸಿ ಎರಡನೇ ದಿನ ಮುಂಬೈಗೆ ಬಂದಿದ್ದರು. ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಮಹಾರಾಷ್ಟ್ರ ಸಿಎಂ ಪತ್ನಿ ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತಿಯಿದ್ದ ಅಮೃತಾ ಫಡ್ನವೀಸ್, ಬಾಯಲ್ಲಿ ಚಿವಿಂಗ್ ಗಮ್ ಜಗಿಯುತ್ತಾ, ಫುಟ್ಬಾಲ್ ಆಟಗಾರ ಲೂಯಿಸ್ ಸುವಾರೆಜ್ ಅವರ ಅನುಮತಿಯನ್ನೂ ಕೇಳದೆ ನಿರ್ಲಜ್ಜವಾಗಿ ಮೆಸ್ಸಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನೆಟ್ಟಿಗರ ಆಕ್ರೋಶಕ್ಕೆ ಮಹಾರಾಷ್ಟ್ರ ಸಿಎಂ ಪತ್ನಿ ಗುರಿ
ಮೆಸ್ಸಿಯ ದೀರ್ಘಕಾಲದ ಸ್ನೇಹಿತರಲ್ಲಿ ಒಬ್ಬರಾದ ಮತ್ತು ಎಫ್‌ಸಿ ಬಾರ್ಸಿಲೋನಾ ತಂಡದ ಸಹ ಆಟಗಾರ ಸುವಾರೆಜ್ ಅವರನ್ನು ಸೆಲ್ಫಿಯಿಂದ ಅಸಭ್ಯವಾಗಿ ದೂರ ನಿಲ್ಲಿಸಿ, ಮೆಸ್ಸಿ ಜತೆ ಅಮೃತ ಸೆಲ್ಫಿ ಕ್ಲಿಕ್ಕಿಸಿಕೊಂಡ ರೀತಿ ಅಭಿಮಾನಿಗಳನ್ನು ಕೆರಳಿಸಿದೆ. ಅರ್ಜೆಂಟೀನಾದ ಮತ್ತೊಬ್ಬ ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ ಮತ್ತು ಮೆಸ್ಸಿಯ ಸ್ನೇಹಿತ ರೊಡ್ರಿಗೋ ಡಿ ಪಾಲ್ ಅವರನ್ನು ಬದಿಗೆ ಸರಿಸಿ ಅಮೃತಾ, ಮೆಸ್ಸಿಯ ಅನುಮತಿಯನ್ನೂ ಪಡೆಯದೇ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಮೆಸ್ಸಿ, ರೊಡ್ರಿಗೋ ಡಿ ಪಾಲ್ ಮತ್ತು ಲೂಯಿಸ್ ಸುವಾರೆಜ್ ಕ್ರೀಡಾಂಗಣದಲ್ಲಿ ಹಾಜರಿದ್ದ ಅಭಿಮಾನಿಗಳನ್ನು ಸ್ವಾಗತಿಸಿದರೆ, ದೇವೇಂದ್ರ ಫಡ್ನವೀಸ್ ಮತ್ತು ಸಚಿನ್ ತೆಂಡೂಲ್ಕರ್ ವಿಶೇಷವಾಗಿ ಸಿದ್ಧಪಡಿಸಲಾದ ವೇದಿಕೆಯಲ್ಲಿ ಉಳಿದುಕೊಂಡಿದ್ದರು. ಇನ್ನು ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಮೆಸ್ಸಿ ಸಮ್ಮುಖದಲ್ಲಿ ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರನ್ನು ಸನ್ಮಾನಿಸಿದ್ದಕ್ಕಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ಸಹ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಫಡ್ನವೀಸ್ ಪತ್ನಿ ಅಮೃತಾ!
ಇನ್ನು ಅಮೃತಾ ಫಡ್ನವೀಸ್ ಅವರ ಈ ಧಾಷ್ಟ್ಯದ ವರ್ತನೆಯ ಬಗ್ಗೆ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ರೋಷನ್ ರೈ ಎನ್ನುವವರು ಅಮೃತಾ ಅವರೇ ನಿಮ್ಮ ಆಟಿಟ್ಯೂಡ್ ಹೇಗಿದೆಯೆಂದರೇ, ಮೆಸ್ಸಿಯೇ ನಿಮ್ಮ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದಿದ್ದಾರೆ ಎನ್ನುವಂತಿದೆ ಎಂದು ಟ್ರೋಲ್ ಮಾಡಿದ್ದಾರೆ. ಇನ್ನು ವೆನಿಶಾ ಎನ್ನುವ ನೆಟ್ಟಿಗರೊಬ್ಬರು ಇದು ನಾಚಿಕೆಗೇಡಿನ ವರ್ತನೆ ಎಂದು ಟ್ರೋಲ್ ಮಾಡಿದ್ದಾರೆ.
ಇನ್ನು ಪುನಿತಾ ತೊರಸ್ಕರ್ ಎನ್ನುವವರು, ಆ ಕಾರ್ಯಕ್ರಮದಲ್ಲಿ ನೀವು ಚೀವಿಂಗ್ ಗಮ್ ಜಗಿಯುವ ಅಗತ್ಯವಿತ್ತಾ? ಅದೊಂದು ಥರ ಛಪ್ರಿ ಥರ ಇತ್ತು ಎಂದು ಟ್ರೋಲ್ ಮಾಡಿದ್ದಾರೆ.


