ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಯವರ ಕೋಲ್ಕತಾ ಭೇಟಿಯು ರಾಜಕೀಯ ಮೇಲಾಟ ಮತ್ತು ದುರಾಡಳಿತದಿಂದಾಗಿ ಗದ್ದಲ, ಗಲಾಟೆಯಲ್ಲಿ ಅಂತ್ಯಗೊಂಡಿತು. ದುಬಾರಿ ಟಿಕೆಟ್ ಖರೀದಿಸಿದ್ದ ಸಾವಿರಾರು ಅಭಿಮಾನಿಗಳು ನಿರಾಸೆಗೊಂಡು ದಾಂಧಲೆ ನಡೆಸಿದರು, ಇದರಿಂದಾಗಿ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು.
ಕೋಲ್ಕತಾ: ‘ಸಿಟಿ ಆಫ್ ಜಾಯ್’ ಕೋಲ್ಕತಾಗೆ ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿಯ ಬಹುನಿರೀಕ್ಷಿತ ಭೇಟಿ ರಾಜಕೀಯ ಮೇಲಾಟ, ದುರಾಡಳಿತ, ಅಭಿಮಾನಿಗಳಿಂದ ಭಾರೀ ಗಲಾಟೆ, ಗದ್ದಲದಿಂದ ಮುಕ್ತಾಯಗೊಂಡಿತು.
G.O.A.T ಟೂರ್ ಹೆಸರಿನಲ್ಲಿ ಆಯೋಜನೆಗೊಂಡಿರುವ ಖಾಸಗಿ ಕಾರ್ಯಕ್ರಮದ ಮೊದಲ ಚರಣ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಮೆಸ್ಸಿಯನ್ನು ನೋಡಲು ₹4000ನಿಂದ ₹20000 ವರೆಗೂ ಪಾವತಿಸಿ ಟಿಕೆಟ್ ಖರೀದಿಸಿ, ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಆಗಮಿಸಿದ್ದ 50000ಕ್ಕೂ ಹೆಚ್ಚು ಜನರಿಗೆ ಸಿಕ್ಕಿದ್ದು ನಿರಾಸೆ ಮಾತ್ರ.
ರಾಜಕಾರಣಿಗಳು, ವಿವಿಐಪಿಗಳು ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದನ್ನು ನೋಡಿ ಮೆಸ್ಸಿ ಹಾಗೂ ಅವರೊಂದಿಗೆ ಆಗಮಿಸಿರುವ ಉರುಗ್ವೆಯ ದಿಗ್ಗಜ ಫುಟ್ಬಾಲಿಗ, ಮೆಸ್ಸಿಯ ಆಪ್ತ ಸ್ನೇಹಿತ ಲೂಯಿಸ್ ಸುವಾರೆಜ್, ಅರ್ಜೆಂಟೀನಾದ ಫುಟ್ಬಾಲಿಗ ರೊಡ್ರಿಗೊ ಡಿ ಪಾಲ್ ಅಸಹಾಯಕಾರಿ ನಿಂತರು. ಬಂಗಾಳದ ಕ್ರೀಡಾ ಸಚಿವ ಆರೂಪ್ ಬಿಸ್ವಾಸ್, ಮೆಸ್ಸಿಯ ಮೇಲೆ ಕೈ ಹಾಕಿ, ಅವರನ್ನು ಎಳೆದಾಡುವ ದೃಶ್ಯಗಳು ಕಂಡುಬಂದವು. ಅಲ್ಲದೇ, ತಮ್ಮ ಕಚೇರಿ ಸಿಬ್ಬಂದಿ, ಆಪ್ತರ ಜೊತೆ ಫೋಟೋ ತೆಗಿಸಿಕೊಳ್ಳುವಂತೆ ಮೆಸ್ಸಿಯನ್ನು ಒತ್ತಾಯಿಸಿದ್ದು ಸಹ ಸ್ಪಷ್ಟವಾಗಿ ಕಾಣುತ್ತಿತ್ತು. ಈ ದೃಶ್ಯಗಳು ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ರೊಚ್ಚಿಗೇಳುವಂತೆ ಮಾಡಿತು.
ತಮ್ಮ ಮುಂದೆ ಇಷ್ಟೆಲ್ಲಾ ಹೈಡ್ರಾಮಾ ನಡೆಯುತ್ತಿದ್ದರೂ, ವಿಚಲಿತರಾಗದ ಮೆಸ್ಸಿ, ನಗುಮುಖದೊಂದಿಗೆ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಆದರೆ, ಮೆಸ್ಸಿ ಎಲ್ಲಿದ್ದಾರೆ ಎನ್ನುವುದು ಮಾತ್ರ ಸ್ಟ್ಯಾಂಡ್ಸ್‌ನಲ್ಲಿದ್ದ ಅಭಿಮಾನಿಗಳಿಗೆ ಕಾಣುತ್ತಿರಲಿಲ್ಲ.
ಪೂರ್ವನಿಗದಿಯಂತೆ, ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಮೆಸ್ಸಿ 1 ಗಂಟೆ ಕಾಲ ಇರಬೇಕಿತ್ತು. ಆದರೆ ಕಾರ್ಯಕ್ರಮ ಕೇವಲ 22 ನಿಮಿಷಕ್ಕೆ ಮೊಟುಕುಗೊಂಡಿತು. ಭಾರೀ ಭದ್ರತೆಯೊಂದಿಗೆ ಮೆಸ್ಸಿಯನ್ನು ಕ್ರೀಡಾಂಗಣದಿಂದ ಹೋಟೆಲ್‌ಗೆ ಕರೆದೊಯ್ಯಲಾಯಿತು.
ಮೆಸ್ಸಿ ನಿರ್ಗಮಿಸುತ್ತಿದ್ದಂತೆ ಅಭಿಮಾನಿಗಳು ಕ್ರೀಡಾಂಗಣದಲ್ಲಿದ್ದ ಚೇರ್, ಬ್ಯಾರಿಕೇಡ್‌ಗಳನ್ನು ಒಡೆದು ಹಾಕಿದರು. ಮೈದಾನಕ್ಕೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳನ್ನು ಒಡೆದು, ಕಿತ್ತು ಹಾಕಿ ದಾಂಧಲೆ ನಡೆಸಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಕೆಲವರ ಮೇಲೆ ಲಾಠಿ ಚಾರ್ಜ್ ಸಹ ನಡೆಯಿತು.
ಈ ನಡುವೆ ‘ಗೋಟ್’ (GOAT) ಟೂರ್ ಆಯೋಜಕ ಸತದ್ರು ದತ್ತರನ್ನು ಮೊದಲು ವಶಕ್ಕೆ ಪಡೆದ ಕೋಲ್ಕತಾ ಪೊಲೀಸರು, ಬಳಿಕ ಅವರನ್ನು ಬಂಧಿಸಿ ವಿಚಾರಣೆಗೆ ಕರೆದೊಯ್ದರು.
ಇನ್ನು ಕ್ರೀಡಾಂಗಣದಿಂದ ಹೋಟೆಲ್‌ಗೆ ತೆರಳಿದ ಮೆಸ್ಸಿ, ಅಲ್ಲಿಂದ ಹೈದರಾಬಾದ್‌ಗೆ ಪ್ರಯಾಣಿಸಿದರು. ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ತಲಾ 10 ಲಕ್ಷ ರು. ಪಾವತಿಸಿದ್ದ 60 ಮಂದಿ ಜೊತೆ ಮೆಸ್ಸಿ ಫೋಟೋಗೆ ಪೋಸ್ ನೀಡಿದರು.
ಇಂದು ಮುಂಬೈಗೆ, ನಾಳೆ ಮೋದಿ ಭೇಟಿ
ಮೆಸ್ಸಿ ಭಾನುವಾರ ಮುಂಬೈನಲ್ಲಿ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಶಾರುಖ್ ಖಾನ್ ಸೇರಿ ಹಲವು ಬಾಲಿವುಡ್ ತಾರೆಯರು ಸಹ ಭಾಗಿಯಾಗಲಿದ್ದಾರೆ. ಸೋಮವಾರ ನವದೆಹಲಿಗೆ ತೆರಳಲಿರುವ ಮೆಸ್ಸಿ, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ಮೆಸ್ಸಿ 70 ಅಡಿ ಪ್ರತಿಮೆ ಅನಾವರಣ
ಗಲಾಟೆ ಮಧ್ಯೆಯೇ ಮೆಸ್ಸಿ ತಮ್ಮ 70 ಅಡಿ ಪ್ರತಿಮೆಯನ್ನು ವರ್ಚುವಲ್ ಆಗಿ ಅನಾವರಣಗೊಳಿಸಿದರು. ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲೇ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಬಾಲಿವುಡ್ ತಾರೆ ಶಾರುಖ್ ಖಾನ್ ಸಹ ಇದ್ದರು.
ಮಮತಾ, ಶಾರುಖ್‌ಗೆ ಕ್ರೀಡಾಂಗಣಕ್ಕಿಲ್ಲ ಎಂಟ್ರಿ!
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಪರಿಸ್ಥಿತಿ ಹೇಗಿತ್ತು ಎಂದರೆ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಾಲಿವುಡ್ ತಾರೆ ಶಾರುಖ್ ಖಾನ್‌ಗೂ ಕ್ರೀಡಾಂಗಣಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಶಾರುಖ್ ಗೇಟ್ ಬಳಿಯೇ ಕಾದು ನಿಂತರೆ, ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಾಂಧಲೆಯ ವಿಚಾರ ತಿಳಿದು ದಾರಿ ಮಧ್ಯೆಯೇ ಮಮತಾ ಯೂ-ಟರ್ನ್ ಮಾಡಿ ವಾಪಸಾದರು.
ಮಮತಾ ಕ್ಷಮೆಯಾಚನೆ
ಸಾಲ್ಟ್ ಲೇಕ್‌ನಲ್ಲಿನ ಅವ್ಯವಸ್ಥೆ, ದಾಂಧಲೆಗೆ ಬಗ್ಗೆ ಸಾಮಾಜಿಕ ತಾಣ ‘ಎಕ್ಸ್’ನಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಅಭಿಮಾನಿಗಳು ಹಾಗೂ ಮೆಸ್ಸಿಯ ಕ್ಷಮೆಯಾಚಿಸಿದ್ದಾರೆ. ಈ ದುರ್ಘಟನೆಯಿಂದಾಗಿ ಬಹಳ ನೋವಾಗಿರುವುದಾಗಿ ತಿಳಿಸಿದ್ದಾರೆ.
ಮೆಸ್ಸಿಗೆ ಭರ್ಜರಿ ಸ್ವಾಗತ!
ಲಿಯೋನೆಲ್ ಮೆಸ್ಸಿ, ಸುವಾರೆಜ್, ರೊಡ್ರಿಗೋ ಡಿ ಪಾಲ್ ಶನಿವಾರ ಬೆಳಗ್ಗಿನ ಜಾವ 2.30ಕ್ಕೆ ಕೋಲ್ಕತಾಕ್ಕೆ ಬಂದಿಳಿದರು. ಅವರನ್ನು ಸ್ವಾಗತಿಸಲು ಏರ್‌ಪೋರ್ಟ್‌ನಲ್ಲೇ ಭಾರೀ ಸಂಖ್ಯೆಯ ಜನ ಸೇರಿದ್ದರು. ಬಿಗಿ ಭದ್ರತೆಯಲ್ಲಿ ವಿವಿಐಪಿ ಗೇಟ್ ಮೂಲಕ ಮೆಸ್ಸಿಯನ್ನು ಹೋಟೆಲ್‌ಗೆ ಕರೆದೊಯ್ಯಲಾಯಿತು.
ಮೆಸ್ಸಿ ಉಳಿದ ಹೋಟೆಲ್‌ನಲ್ಲೇ ರೂಂ ಪಡೆದ ಅಭಿಮಾನಿಗಳು!
ಕೋಲ್ಕತಾದ ಹಯಾತ್ ರೆಜೆನ್ಸಿ ಹೋಟೆಲ್‌ನಲ್ಲಿ ಮೆಸ್ಸಿಗೆ ಕೊಠಡಿ ಕಾಯ್ದಿರಿಸಲಾಗಿತ್ತು. ಒಂದು ಇಡೀ ಮಹಡಿ ಮೆಸ್ಸಿ ಹಾಗೂ ಅವರ ಜೊತೆಗಾರರಿಗೆ ಮೀಸಲಿಟ್ಟು ಭಾರೀ ಭದ್ರತೆ ಕೈಗೊಳ್ಳಲಾಗಿತ್ತು. ಮೆಸ್ಸಿಯನ್ನು ನೋಡಲು ಇದೇ ಹೋಟೆಲ್‌ನಲ್ಲಿ 2-3 ದಿನಗಳ ಹಿಂದೆಯೇ ನೂರಾರು ಅಭಿಮಾನಿಗಳು ರೂಂ ಪಡೆದಿದ್ದರು ಎನ್ನುವ ಕುತೂಹಲಕಾರಿ ವಿಷಯ ತಿಳಿದುಬಂದಿದೆ.
ಮದುವೆ ಮುಂದೂಡಿ ಮೆಸ್ಸಿ ನೋಡಲು ಬಂದವಗೆ ನಿರಾಸೆ!
ಕೋಲ್ಕತಾದಲ್ಲಿ ಸಾವಿರಾರು ಅಭಿಮಾನಿಗಳು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಮೆಸ್ಸಿ ನೋಡಲು ಬಂದಿದ್ದರು. ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸಾಧ್ಯವಾಗದೆ ಅವರೆಲ್ಲಾ ನೋವು ತೋಡಿಕೊಂಡಿದ್ದಾರೆ. ‘ನನ್ನ ಒಂದು ತಿಂಗಳ ಸಂಬಳ ಖರ್ಚು ಮಾಡಿ ಟಿಕೆಟ್ ಪಡೆದು ಬಂದಿದ್ದೇನೆ. ಆದರೆ ಮೆಸ್ಸಿ ನೋಡಲಾಗಲಿಲ್ಲ’ ಎಂದು ಒಬ್ಬ ಅಭಿಮಾನಿ ಬೇಸರ ವ್ಯಕ್ತಪಡಿಸಿದರೆ, ‘ಇಂದು ನನ್ನ ಮದುವೆ ನಿಗದಿಯಾಗಿತ್ತು. ಆದರೆ ಮದುವೆ ಮುಂದೂಡಿ ಬಂದೆ, ಮೆಸ್ಸಿ ಕಾಣಲಿಲ್ಲ’ ಎಂದು ಮತ್ತೊಬ್ಬ ನೋವಿನಿಂದ ನುಡಿದಿದ್ದಾನೆ.
ಹೈದ್ರಾಬಾದ್‌ನಲ್ಲಿ ಮೆಸ್ಸಿ ಜತೆ ಸಿಎಂ ರೇವಂತ್ ರೆಡ್ಡಿ ಫುಟ್ಬಾಲ್!
ಶನಿವಾರ ಸಂಜೆ ಮೆಸ್ಸಿ ಹೈದ್ರಾಬಾದ್‌ನಲ್ಲಿ ಕಾಣಿಸಿಕೊಂಡರು. ಕೋಲ್ಕತಾ ಘಟನೆ ಬಳಿಕ ಹೈದ್ರಾಬಾದ್‌ನಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿತ್ತು. ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೆಸ್ಸಿ ಜೊತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಫುಟ್ಬಾಲ್ ಆಡಿದರು. ಕೆಲ ಮಕ್ಕಳ ಜೊತೆಗೂ ಮೆಸ್ಸಿ ಫುಟ್ಬಾಲ್ ಆಡಿ ಖುಷಿಪಟ್ಟರು. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯನ್ನೂ ಸಹ ಮೆಸ್ಸಿ ಭೇಟಿಯಾದರು.


