ಪತ್ನಿ ಅನುಷ್ಕಾ ಶರ್ಮಾ ಜೊತೆ ಲಂಡನ್‌ನಿಂದ ಮುಂಬೈಗೆ ಮರಳಿದ ವಿರಾಟ್ ಕೊಹ್ಲಿ. ಇದೇ ಸಮಯದಲ್ಲಿ ಭಾರತ ಪ್ರವಾಸದಲ್ಲಿರುವ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯನ್ನು ಕೊಹ್ಲಿ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕೋಲ್ಕತಾದಲ್ಲಿ ನಡೆದ ಮೆಸ್ಸಿ ಕಾರ್ಯಕ್ರಮದ ಗೊಂದಲದ ಬಗ್ಗೆಯೂ ಈ ಲೇಖನ ವಿವರಿಸುತ್ತದೆ.

ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜತೆಗೂಡಿ ಇಂದು ಬೆಳಗ್ಗೆ ಲಂಡನ್‌ನಿಂದ ಮುಂಬೈಗೆ ಬಂದಿಳಿದ್ದಾರೆ. ಇಲ್ಲಿನ ಕಲಿನ ಏರ್‌ಪೋರ್ಟ್‌ಗೆ ಬಂದಿಳಿದ ವಿರುಷ್ಕಾ ದಂಪತಿಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಲವು ಅಭಿಮಾನಿಗಳು, ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯನ್ನು ಭೇಟಿ ಮಾಡಲು ವಿರಾಟ್ ಕೊಹ್ಲಿ, ಭಾರತಕ್ಕೆ ಬಂದಿದ್ದಾರೆ ಎನ್ನುವ ಸುದ್ದಿ ಹಬ್ಬಿಸುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯ ಬಳಿಕ ವಿರಾಟ್ ಕೊಹ್ಲಿ, ಬಿಡುವಿನ ಸಮಯವನ್ನು ಎಂಜಾಯ್ ಮಾಡಲು ಲಂಡನ್‌ಗೆ ಹಾರಿದ್ದರು. ಆದರೆ ಲಿಯೋನೆಲ್ ಮೆಸ್ಸಿ, ಇಂದಿನಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ, ಲಂಡನ್‌ನಿಂದ ಭಾರತಕ್ಕೆ ಬಂದಿಳಿದಿದ್ದಾರೆ.

Scroll to load tweet…

ಇನ್ನು ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ, ಇಂದು ಮುಂಜಾನೆ ಕೋಲ್ಕತಾಗೆ ಬಂದಿಳಿದಿದ್ದರು. ಅಲ್ಲಿ ಸಾಲ್ಟ್‌ ಲೇಕ್ ಸ್ಟೇಡಿಯಂನಲ್ಲಿ ಅಭಿಮಾನಿಗಳನ್ನು ಭೇಟಿಯಾದ ಬಳಿಕ ಮೆಸ್ಸಿ, ತಮ್ಮದೇ 70 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಇದಾದ ಬಳಿಕ ಇಂದು ಸಂಜೆ ಹೈದರಾಬಾದ್‌ಗೆ ಬಂದಿಳಿಯಲಿರುವ ಮೆಸ್ಸಿ, ಅಲ್ಲಿ ಸ್ನೇಹಾರ್ಥ ಫುಟ್ಬಾಲ್ ಪಂದ್ಯವನ್ನು ಆಡಲಿದ್ದಾರೆ. ಇದಾದ ಬಳಿಕ ನಾಳೆ ಮುಂಬೈ ಪ್ರವಾಸ ಕೈಗೊಳ್ಳಲಿದ್ದಾರೆ. ಮುಂಬೈನಲ್ಲಿ ವಿರಾಟ್ ಕೊಹ್ಲಿ, ಮೆಸ್ಸಿಯವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Scroll to load tweet…

ಗೊಂದಲದ ಗೂಡಾದ ಮೆಸ್ಸಿ ಸಾಲ್ಟ್‌ ಲೇಕ್ ಸ್ಟೇಡಿಯಂ ಭೇಟಿ:

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಲಿಯೋನೆಲ್ ಮೆಸ್ಸಿಯನ್ನು ಕಣ್ತುಂಬಿಕೊಳ್ಳಲು ಕೋಲ್ಕತಾದ ಫುಟ್ಬಾಲ್ ಅಭಿಮಾನಿಗಳು ಸಾಲ್ಟ್‌ ಲೇಕ್ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದರು. ಸುಮಾರು 50 ಸಾವಿರ ಫುಟ್ಬಾಲ್ ಅಭಿಮಾನಿಗಳು 4000ದಿಂದ 12,000 ರುಪಾಯಿವರೆಗೆ ಹಣ ನೀಡಿ ಟಿಕೆಟ್ ಖರೀದಿಸಿ ಸಾಲ್ಟ್ ಲೇಕ್ ಸ್ಟೇಡಿಯಂ ಪ್ರವೇಶಿಸಿದ್ದರು. ಆದರೆ ರಾಜಕಾರಣಿಗಳು, ವಿವಿಐಪಿಗಳು ಮೆಸ್ಸಿಯನ್ನು ಸ್ಟೇಡಿಯಂನಲ್ಲಿ ಸುತ್ತುವರಿದು ಸೆಲ್ಫಿಗೆ ಮುಗಿಬಿದ್ದಿದ್ದರಿಂದ ಮೆಸ್ಸಿಯನ್ನು ಸರಿಯಾಗಿ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಮೆಸ್ಸಿ ಸಾಲ್ಟ್‌ ಲೇಕ್ ಸ್ಟೇಡಿಯಂನಲ್ಲಿನ ಕಾರ್ಯಕ್ರಮ ಕೇವಲ 22 ನಿಮಿಷಗಳಲ್ಲೇ ಕೊನೆಗೊಂಡಿತು. ಇದರಿಂದ ರೊಚ್ಚಿಗೆದ್ದ ಫ್ಯಾನ್ಸ್, ನೀರಿನ ಬಾಟಲ್‌ ಸ್ಟೇಡಿಯಂನತ್ತ ಎಸೆದು ಆಕ್ರೋಶ ಹೊರಹಾಕಿದರು.

ಆಕ್ರೋಶ ಹೊರಹಾಕಿದ ಮೆಸ್ಸಿ ಅಭಿಮಾನಿ

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಮೆಸ್ಸಿ ಅಭಿಮಾನಿಯೊಬ್ಬರು, 'ತುಂಬಾ ಭಯಾನಕ ಘಟನೆ. ಅವರು ಕೇವಲ 10 ನಿಮಿಷಗಳ ಕಾಲ ಬಂದರು. ಎಲ್ಲಾ ನಾಯಕರು ಮತ್ತು ಮಂತ್ರಿಗಳು ಅವರನ್ನು ಸುತ್ತುವರೆದರು. ನಮಗೆ ಏನೂ ಕಾಣಿಸಲಿಲ್ಲ. ಅವನು ಒಂದೇ ಒಂದು ಕಿಕ್ ಅಥವಾ ಒಂದೇ ಒಂದು ಪೆನಾಲ್ಟಿ ತೆಗೆದುಕೊಳ್ಳಲಿಲ್ಲ. ಅವರು ಶಾರುಖ್ ಖಾನ್ ಅವರನ್ನೂ ಕರೆತರುವುದಾಗಿ ಹೇಳಿದರು. ಅವರು ಯಾರನ್ನೂ ಕರೆತರಲಿಲ್ಲ. ಅವರು 10 ನಿಮಿಷಗಳ ಕಾಲ ಬಂದು ಹೊರಟುಹೋದರು. ತುಂಬಾ ಹಣ ಮತ್ತು ಸಮಯ ವ್ಯರ್ಥವಾಯಿತು. ನಮಗೆ ಏನೂ ಕಾಣಿಸಲಿಲ್ಲ.' ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಈ ಘಟನೆಯ ಕುರಿತಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಲಿಯೋನೆಲ್ ಮೆಸ್ಸಿ ಹಾಗೂ ಫುಟ್ಬಾಲ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಇನ್ನು ಕೋಲ್ಕತಾದ ಮೆಸ್ಸಿ ಕಾರ್ಯಕ್ರಮದ ಆಯೋಜಕ ಸತಾದ್ರು ದತ್ತ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.