ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಕೋಲ್ಕತಾಗೆ ಆಗಮಿಸಿದ್ದು, ಬಿಗಿ ಭದ್ರತೆಯಲ್ಲಿ ಹಯಟ್ ರೆಗೆನ್ಸಿ ಹೋಟೆಲ್‌ ತಲುಪಿದ್ದಾರೆ. ಅವರ ವಾಸ್ತವ್ಯಕ್ಕಾಗಿ ಇಡೀ ಫ್ಲೋರ್ ಸೀಲ್ ಮಾಡಲಾಗಿದ್ದು, ಅವರ ಐಷಾರಾಮಿ ಸೂಟ್‌ನ ವಿವರಗಳು ಮತ್ತು ಅಭಿಮಾನಿಗಳ ಸಂಭ್ರಮವನ್ನು ಈ ಲೇಖನ ವಿವರಿಸುತ್ತದೆ.

ಕೋಲ್ಕತಾ: ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮೂರು ದಿನಗಳ ಪ್ರವಾಸಕ್ಕೆ ಭಾರತಕ್ಕೆ ಬಂದಿಳಿದಿದ್ದಾರೆ. ಕೋಲ್ಕತಾದ ಏರ್‌ಪೋರ್ಟ್‌ನಿಂದ ಬಿಗಿ ಬಂದೋಬಸ್ತ್‌ನಲ್ಲಿ ಇಂದು ಮುಂಜಾನೆ 3.30ರ ಸುಮಾರಿಗೆ ಹೋಟೆಲ್‌ಗೆ ಬಂದು ಸೇರಿಕೊಂಡರು. ಹೋಟೆಲ್‌ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ನೆರೆದಿದ್ದರಿಂದ ಹಿಂಬಾಗಿಲಿನ ಮೂಲಕ ಮೆಸ್ಸಿ ಹೋಟೆಲ್‌ ತಲುಪಿದರು.

ಏರ್‌ಪೋರ್ಟ್‌ನ ಸಿಬ್ಬಂದಿಗಳು ಮಾತ್ರ ನಿನ್ನೆ ತಡರಾತ್ರಿ ಮೆಸ್ಸಿಯವರನ್ನು ಹತ್ತಿರದಿಂದ ಕಣ್ತುಂಬಿಕೊಂಡ ಅದೃಷ್ಟವಂತರು ಎನಿಸಿಕೊಂಡರು. ಗಲ್ಫ್‌ಸ್ಟ್ರೀಮ್‌ ವಿ ಏರ್‌ಕ್ರಾಫ್ಟ್‌ ಮೂಲಕ ಕೋಲ್ಕತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೆಸ್ಸಿ ಕಪ್ಪು ಸೂಟ್ ಮೇಲೆ ಬಿಳಿ ಟಿ ಶರ್ಟ್ ತೊಟ್ಟು ಕಾಣಿಸಿಕೊಂಡಿದ್ದರು.

ಮೆಸ್ಸಿ ಉಳಿದುಕೊಂಡ ಹೋಟೆಲ್‌ ಹಯಟ್ ರೆಗೆನ್ಸಿ:

ಲಿಯೋನೆಲ್ ಮೆಸ್ಸಿ ಹೋಟೆಲ್ ಪ್ರವೇಶಿಸುತ್ತಿದ್ದಂತೆಯೇ "ಮೆಸ್ಸಿ! ಮೆಸ್ಸಿ!" ಎಂದು ಕೂಗುತ್ತಾ ಅಭಿಮಾನಿಗಳು ಕಾರಿಡಾರ್‌ಗಳಲ್ಲಿ ಓಡುತ್ತಿದ್ದಂತೆ ಹಯಾತ್ ರೀಜೆನ್ಸಿ ಹೋಟೆಲ್ ಲಾಬಿ ಅಸ್ತವ್ಯಸ್ತವಾಯಿತು. ಆ ಶಬ್ದಗಳು ಮುಂಜಾನೆವರೆಗೂ ಮುಂದುವರೆದಿತ್ತು. ಪಿಟಿಐ ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಲಿಯೋನೆಲ್ ಮೆಸ್ಸಿ ಉಳಿದುಕೊಂಡ 730ರ ರೂಮ್ ಒಂದು ಸಲ ತಪಾಸಣೆ ನಡೆಸಿದರು. ಮೆಸ್ಸಿಗೆ ಯಾವುದೇ ಅಡಚಣೆಯಾಗದೇ ಇರಲಿ ಎನ್ನುವ ಉದ್ದೇಶದಿಂದ ಇಡೀ ಏಳನೇ ಫ್ಲೋರ್ ಸಂಪೂರ್ಣವಾಗಿ ಸೀಲ್‌ ಮಾಡಲಾಗಿತ್ತು.

ಹಯಟ್ ರೆಗೆನ್ಸಿ ವಿಶೇಷತೆ ಏನು? ಒಂದು ದಿನದ ಚಾರ್ಜ್ ಎಷ್ಟು?

ಕೊಠಡಿಯ ನಿಖರವಾದ ದರವನ್ನು ಖಚಿತವಾಗಿ ಹೇಳಲು ಸಾಧ್ಯವಾಗದಿದ್ದರೂ, ಹೋಟೆಲ್‌ನ ಅಧಿಕೃತ ವೆಬ್‌ಸೈಟ್ ಡಿಸೆಂಬರ್ 13 (ಶನಿವಾರ) ಕ್ಕೆ ಅಧ್ಯಕ್ಷೀಯ ಸೂಟ್ (ಅಡುಗೆಮನೆ, ಪ್ರತ್ಯೇಕ ಕುಳಿತುಕೊಳ್ಳುವ ಪ್ರದೇಶ, ಪ್ರತ್ಯೇಕ ಕೆಲಸದ ಪ್ರದೇಶ ಮತ್ತು ಎಂಟು ಆಸನಗಳ ಊಟದ ಪ್ರದೇಶದೊಂದಿಗೆ) ಲಭ್ಯವಿಲ್ಲ ಎಂದು ತೋರಿಸಿದೆ. ಇನ್ನು ಡಿಸೆಂಬರ್ 14ಕ್ಕೆ, ಒಂದು ರಾತ್ರಿಗೆ ಅದರ ವೆಚ್ಚ ಬರೋಬ್ಬರಿ 1,42,500 ರೂ. ಡಿಪ್ಲೊಮ್ಯಾಟಿಕ್ ಸೂಟ್ ಒಂದು ರಾತ್ರಿಗೆ ಸುಮಾರು 1,12,500 ರೂ. ವೆಚ್ಚವಾಗುತ್ತದೆ. ರೀಜೆನ್ಸಿ ಎಕ್ಸಿಕ್ಯುಟಿವ್ ಸೂಟ್ ಒಂದು ರಾತ್ರಿಗೆ ಸುಮಾರು 51,000 ರೂ., ಆದರೆ ರೀಜೆನ್ಸಿ ಸೂಟ್ ಕಿಂಗ್ ಒಂದು ರಾತ್ರಿಗೆ ಸುಮಾರು 38,000 ರೂ. ಇದನ್ನು ಪರಿಗಣಿಸಿದರೆ, ಮೆಸ್ಸಿ ಈ ಐಷಾರಾಮಿ ಸೂಟ್‌ಗಳಲ್ಲಿ ಒಂದರಲ್ಲಿ ತಂಗುವ ಸಾಧ್ಯತೆಯಿದೆ.

ಹಯಾಟ್ ರೀಜೆನ್ಸಿ ಲಾಬಿ ಅರ್ಜೆಂಟೀನಾದ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಆಕಾಶ-ನೀಲಿ ಜೆರ್ಸಿಗಳು, ಸ್ಕಾರ್ಫ್‌ಗಳು ಮತ್ತು ಧ್ವಜಗಳಿಂದ ಕೂಡಿತ್ತು.

ಭದ್ರತೆ ಉತ್ತುಂಗದಲ್ಲಿದ್ದಾಗಲೂ, ಅದನ್ನು ನಿಭಾಯಿಸಬಲ್ಲ ಕೆಲವು ಅಭಿಮಾನಿಗಳು ಮೆಸ್ಸಿಗೆ ಸಾಧ್ಯವಾದಷ್ಟು ಹತ್ತಿರದಲ್ಲಿಯೇ ಇರಲು ಹೋಟೆಲ್‌ನಲ್ಲಿ ಕೊಠಡಿಗಳನ್ನು ಬುಕ್ ಮಾಡಿದ್ದರು.

ಮೆಸ್ಸಿ ಜೊತೆ ಫೋಟೋ ತೆಗೆಸಲು 60 ಜನರಿಂದ ತಲಾ 10 ಲಕ್ಷದ ಟಿಕೆಟ್‌!

ಹೈದರಾಬಾದ್‌: ಅರ್ಜೆಂಟೀನಾ ಫುಟ್ಬಾಲ್‌ ತಾರೆ ಲಿಯೋನಲ್‌ ಮೆಸ್ಸಿ ಶನಿವಾರ ಮಧ್ಯರಾತ್ರಿ ಕೋಲ್ಕತಾಗೆ ಆಗಮಿಸಿದ್ದು, 3 ದಿನಗಳ ಕಾಲ ಭಾರತ ಪ್ರವಾಸದಲ್ಲಿರಲಿದ್ದಾರೆ. ಶನಿವಾರ ಕೋಲ್ಕತಾದಲ್ಲಿ ಕಾರ್ಯಕ್ರಮಗಳನ್ನು ಮುಗಿಸಿದ ಬಳಿಕ ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ. ಅಲ್ಲಿ ಮೆಸ್ಸಿ ಜೊತೆ ಫೋಟೋ ತೆಗೆಸಿಕೊಳ್ಳಲು 100 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ತಲಾ ₹10 ಲಕ್ಷದ ಟಿಕೆಟ್‌ಗಳನ್ನೂ ಇಡಲಾಗಿತ್ತು. ‘ಈವರೆಗೂ ಮೆಸ್ಸಿ ಜೊತೆ ಫೋಟೋಗಾಗಿ 60 ಮಂದಿ ತಲಾ ₹10 ಲಕ್ಷದ ಟಿಕೆಟ್‌ ಪಡೆದುಕೊಂಡಿದ್ದಾರೆ ಎಂದು ‘ಗೋಟ್‌ ಟೂರ್‌’ ಸಲಹೆಗಾರ್ತಿ ಪಾರ್ವತಿ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮದ ಭಾಗವಾಗಿ ಮೆಸ್ಸಿ ಕೆಲ ಕಾಲ ಫುಟ್ಬಾಲ್‌ ಆಡಲಿದ್ದು, ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಕೂಡಾ ಪಾಲ್ಗೊಳ್ಳಲಿದ್ದಾರೆ. ಬಳಿಕ ಮೆಸ್ಸಿ ಭಾನುವಾರ ಮುಂಬೈ, ಸೋಮವಾರ ನವದೆಹಲಿಗೆ ತೆರಳಲಿದ್ದಾರೆ.