ಫಿಫಾ ವಿಶ್ವಕಪ್‌ನ ಸಂಘರ್ಷಮಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ, ಪರಗ್ವೆ ವಿರುದ್ಧ ಫ್ರಾನ್ಸ್‌ 1-0 ಗೋಲಿನಿಂದ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕೀಲಿಯನ್‌ ಎಂಬಾಪೆ ಪೆನಾಲ್ಟಿ ಮೂಲಕ ಗಳಿಸಿದ ಏಕೈಕ ಗೋಲು ಪಂದ್ಯದ ಫಲಿತಾಂಶ ನಿರ್ಧರಿಸಿತು. ಈ ಗೆಲುವಿನೊಂದಿಗೆ ಫ್ರಾನ್ಸ್‌ 150 ವಿಶ್ವಕಪ್ ಗೋಲುಗಳ ಮೈಲಿಗಲ್ಲು ಸಾಧಿಸಿತು.

ಫಿಲಡೆಲ್ಫಿಯಾ(ಅಮೆರಿಕ): ಆಟಗಾರರ ನಡುವಿನ ಭಾರೀ ಸಂಘರ್ಷ, ವಾಗ್ವಾದಕ್ಕೆ ಸಾಕ್ಷಿಯಾದ ಈ ಬಾರಿ ಫಿಫಾ ವಿಶ್ವಕಪ್‌ನ 2ನೇ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಫ್ರಾನ್ಸ್‌ ತಂಡ ಪರಗ್ವೆ ವಿರುದ್ಧ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಸತತ 4ನೇ ಹಾಗೂ ಒಟ್ಟಾರೆ 10ನೇ ಬಾರಿ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. 2ನೇ ಬಾರಿ ಅಂತಿಮ 8ರ ಸುತ್ತು ಪ್ರವೇಶಿಸುವ ಪರಗ್ವೆ ಕನಸು ಭಗ್ನಗೊಂಡಿತು.

ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಗೋಲಿನ ಪ್ರಯತ್ನ ಕಂಡುಬರದಿದ್ದರೂ ಆಟಗಾರರ ನಡುವಿನ ಸಂಘರ್ಷ ಹೆಚ್ಚಿತ್ತು. ದ್ವಿತೀಯಾರ್ಧದಲ್ಲಿ ಎರಡೂ ತಂಡಗಳ ಆಟಗಾರರು ಮತ್ತಷ್ಟು ಉದ್ರಿಕ್ತರಾದಂತೆ ಕಂಡುಬಂದರು. ಪರಗ್ವೆ ಆಟಗಾರರ ಆಕ್ರಮಣಕಾರಿ ಆಟದಿಂದಾಗಿ 70ನೇ ನಿಮಿಷದಲ್ಲಿ ಫ್ರಾನ್ಸ್‌ಗೆ ಪೆನಾಲ್ಟಿ ಅವಕಾಶ ಲಭಿಸಿತು. ಅದನ್ನು ಗೋಲಾಗಿ ಪರಿವರ್ತಿಸಲು ಕೀಲಿಯನ್‌ ಎಂಬಾಪೆ ಯಶಸ್ವಿಯಾದರು. ಈ ಒಂದು ಗೋಲು ತಂಡದ ಫಲಿತಾಂಶವನ್ನು ನಿರ್ಧರಿಸಿತು. ಕಳೆದೆರಡು ಬಾರಿ ಫೈನಲ್‌ ತಲುಪಿದ್ದ 2 ಬಾರಿ ಚಾಂಪಿಯನ್‌ ಫ್ರಾನ್ಸ್‌ ತಂಡ ಗುರುವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಮೊರಾಕ್ಕೊ ವಿರುದ್ಧ ಸೆಣಸಾಡಲಿದೆ.

ಮೆಸ್ಸಿ vs ಎಂಬಾಪೆ ನಡುವೆ ಗೋಲ್ಡನ್‌ ಬೂಟ್‌ ರೇಸ್‌ ತೀವ್ರ

ಫ್ರಾನ್ಸ್‌ ತಾರೆ ಕೀಲಿಯನ್‌ ಎಂಬಾಪೆ ಹಾಗೂ ಅರ್ಜೆಂಟೀನಾದ ಮೆಸ್ಸಿ ನಡುವೆ ಈ ಬಾರಿ ಗೋಲ್ಡನ್‌ ಬೂಟ್‌(ಗರಿಷ್ಠ ಗೋಲು) ಪೈಪೋಟಿ ಹೆಚ್ಚಾಗಿದೆ. ಇವರಿಬ್ಬರೂ ಈ ವರ್ಷ ತಲಾ 7 ಗೋಲುಗಳನ್ನು ಬಾರಿಸಿದ್ದು, ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. 2022ರ ವಿಶ್ವಕಪ್‌ನಲ್ಲಿ ಎಂಬಾಪೆ ಗೋಲ್ಡನ್‌ ಬೂಟ್‌ ಗೆದ್ದಿದ್ದರೆ, ಮೆಸ್ಸಿ 2ನೇ ಸ್ಥಾನಿಯಾಗಿದ್ದರು.

--ಕಾವೇರಿದ ಪ್ರಿ ಕ್ವಾರ್ಟರ್‌ ಕದನ: ಹೆಚ್ಚಾಯ್ತು ಆಟಗಾರರ ಕಿತ್ತಾಟ

ಫಿಲಡೆಲ್ಫಿಯಾ(ಅಮೆರಿಕ): ಈ ಬಾರಿ ವಿಶ್ವಕಪ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಹಂತ ಆರಂಭಗೊಂಡಾಗಲೇ ಆಟಗಾರರ ನಡುವಿನ ಕಿತ್ತಾಟ ಹೆಚ್ಚಾಗಿದೆ. ಶುಕ್ರವಾರ ನಡೆದ 2 ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬರೋಬ್ಬರಿ 11 ಹಳದಿ ಕಾರ್ಡ್‌ ಪ್ರದರ್ಶಿಸಿದ್ದೇ ಇದಕ್ಕೆ ಸಾಕ್ಷಿ.

ಮೊರಾಕ್ಕೊ ಹಾಗೂ ಕೆನಡಾ ಪಂದ್ಯದಲ್ಲಿ ಆರಂಭದಲ್ಲೇ ಆಟಗಾರರು ಕಿತ್ತಾಟಕ್ಕೆ ಇಳಿದಿದ್ದು, ಮೊದಲಾರ್ಧದಲ್ಲೇ ಎಚ್ಚರಿಕೆ ರೂಪದಲ್ಲಿ 6 ಬಾರಿ ಹಳದಿ ಕಾರ್ಡ್‌ ತೋರಿಸಲಾಯಿತು. ಪಂದ್ಯದಲ್ಲಿ ಒಟ್ಟಾರೆ ಮೊರಾಕ್ಕೊಗೆ 4, ಕೆನಡಾಗೆ 4 ಬಾರಿ ಹಳದಿ ಕಾರ್ಡ್‌ ನೀಡಲಾಯಿತು. ಫ್ರಾನ್ಸ್‌-ಪರಗ್ವೆ ನಡುವಿನ ಪಂದ್ಯವಂತೂ ಸಂಪೂರ್ಣವಾಗಿ ಸಂಘರ್ಷಮಯವಾಗಿತ್ತು. ಆಟಗಾರರು ಪರಸ್ಪರ ಬೈದಾಡುವ, ದೂಡುವ ದೃಶ್ಯಗಳು ಸಾಮಾನ್ಯವಾಗಿತ್ತು. ಪಂದ್ಯ ಮುಗಿದ ಬಳಿಕ ಪರಗ್ವೆ ಗೋಲ್‌ಕೀಪರ್‌ ಒರ್ಲಾಂಡೊ ಗಿಲ್‌ ಹಸ್ತಲಾಘವ ನೀಡಲು ಮುಂದಾದಾಗ ಅದನ್ನು ಫ್ರಾನ್ಸ್‌ನ ಎಂಬಾಪೆ ನೋಡಿಯೂ ನೋಡದಂತೆ ಸಂಭ್ರಮಾಚರಣೆ ನಡೆಸುತ್ತಿದ್ದರು. ಆಗ ಎಂಬಾಪೆಗೆ ಹಿಂದಿನಿಂದಲೇ ಚೆಂಡನ್ನು ಎಸೆದು ಗಿಲ್ ಆಕ್ರೋಶ ಹೊರಹಾಕಿದರು.

ವಿಶ್ವಕಪ್‌ನಲ್ಲಿ 150 ಗೋಲು ಬಾರಿಸಿದ 4ನೇ ತಂಡ ಫ್ರಾನ್ಸ್‌

ಫಿಫಾ ವಿಶ್ವಕಪ್‌ನಲ್ಲಿ ಫ್ರಾನ್ಸ್ ತಂಡ 150ನೇ ಗೋಲಿನ ಮೈಲುಗಲ್ಲು ಸಾಧಿಸಿದೆ. ಈ ಸಾಧನೆ ಮಾಡಿದ 4ನೇ ತಂಡ ಎಂಬ ಖ್ಯಾತಿಗೆ ಪಾತ್ರವಾಯಿತು. ಈವರೆಗಿನ ಎಲ್ಲಾ ಆವೃತ್ತಿಗಳಲ್ಲೂ ಆಡಿರುವ ಏಕೈಕ ತಂಡ ಎನಿಸಿಕೊಂಡಿರುವ, 5 ಬಾರಿ ಚಾಂಪಿಯನ್‌ ಬ್ರೆಜಿಲ್‌ 246 ಗೋಲುಗಳೊಂದಿಗೆ ಅಗ್ರಸ್ಥಾನದಲ್ಲಿದೆ. 4 ಬಾರಿ ಚಾಂಪಿಯನ್‌ ಜರ್ಮನಿ 243, ಹಾಲಿ ಚಾಂಪಿಯನ್‌ ಅರ್ಜೆಂಟೀನಾ 163 ಗೋಲು ಬಾರಿಸಿವೆ.

07 ಗೋಲು: 2 ವಿಶ್ವಕಪ್‌ನಲ್ಲಿ ತಲಾ 7+ ಗೋಲು ಬಾರಿಸಿದ 2ನೇ ಆಟಗಾರ ಎಂಬಾಪೆ. ಅರ್ಜೆಂಟೀನಾದ ಮೆಸ್ಸಿ ಮೊದಲಿಗ.

ಇಂದಿನ ಪಂದ್ಯಗಳು(ಪ್ರಿ ಕ್ವಾರ್ಟರ್ ಫೈನಲ್‌)

ಇಂಗ್ಲೆಂಡ್‌-ಮೆಕ್ಸಿಕೊ, ಬೆಳಗ್ಗೆ 5.30ಕ್ಕೆ

ಪೋರ್ಚುಗಲ್‌-ಸ್ಪೇನ್‌, ರಾತ್ರಿ 12.30ಕ್ಕೆ