ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಗೋವಾ ಎಫ್‌ಸಿ ನಡುವಿನ ರೋಚಕ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಗೆಲುವಿಗಾಗಿ ದಿಟ್ಟ ಹೋರಾಟ ನೀಡಿದ ಗೋವಾ ಹಾಗೂ ನಾರ್ತ್ ಈಸ್ಟ್ ಕೊನೆಯ ಕ್ಷಣದಲ್ಲಿ ಪಂದ್ಯ ಡ್ರಾಮೂಲಕ ಕೊನೆಗೊಂಡಿತು. 

ಗುವಾಹಟಿ(ನ.01): ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಎಫ್ ಸಿ ಗೋವಾ ತಂಡದ ನಡುವಿನ ಹೋರಾಟ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೆಲುವಿಗಾಗಿ ಉಭಯ ತಂಡಗಳು ಕಠಿಣ ಹೋರಾಟ ನೀಡಿತು. ನಾರ್ತ್ ಈಸ್ಟ್ ಯುನೈಟೆಡ್ ಪರ ಅಸಮೋಹ್ ಗ್ಯಾನ್ ( 54 ನೇ ನಿಮಿಷ) ಮತ್ತು ರೆಡೀಮ್ ತ್ಲ್ಯಾಂಗ್ ( 74 ನಿಮಿಷ) ಗೋಲು ಗಳಿಸಿದರೆ, ಗೋವಾ ಪರ ಹ್ಯೂಗೋ ಬೌಮಸ್ ( 31ನೇ ನಿಮಿಷ) ಹಾಗೂ ಮನ್ವಿರ್ ಸಿಂಗ್ ( 90+ ನೇ ನಿಮಿಷ) ಗೋಲು ಗಳಿಸಿದರು. ಹೀಗಾಗಿ 2-2 ಗೋಲುಗಳಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

ಇದನ್ನೂ ಓದಿ: ISL ಫುಟ್ಬಾಲ್: ಚೆನ್ನೈಗೆ ಮತ್ತೆ ಸೋಲಿನ ಆಘಾತ,ATKಗೆ ಗೆಲುವಿನ ಪುಳಕ!

ಮುನ್ನಡೆದ ನಾರ್ತ್ ಈಸ್ಟ್
ಹಿಂದಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಗೆ ಜಯ ತಂದುಕೊಟ್ಟಿದ್ದ ರೆಡೀಮ್ ತ್ಲ್ಯಾಂಗ್ 74 ನಿಮಿಷದಲ್ಲಿ ಗೋಳು ಗಳಿಸಿ ಆತಿಥೇಯ ಗೋವಾಕ್ಕೆ ಅಚ್ಚರಿ ಮೂಡಿಸಿದರು. ಮಾರ್ಟಿನ್ ಚಾವೇಸ್ ನೀಡಿದ ಪಾಸ್ ಮೂಲಕ ತ್ಲ್ಯಾಂಗ್ ಗೋಲು ಗಳಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿದರು. ಈ ಹಂತದಲ್ಲಿ ದಾಖಲಾದ ಈ ಗೋಲು ಗೋವಾ ತಂಡವನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿತು.

ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲು​ಗ​ಳಲ್ಲಿ ಡ್ರಾ!

ಸಮಬಲ ಸಾಧಿಸಿದ ಗ್ಯಾನ್ 
ಪ್ರಥಮಾರ್ಧದಲ್ಲಿ ಸಿಕ್ಕ ಸುವರ್ಣ ಅವಕಾಶವನ್ನು ಕೈ ಚೆಲ್ಲಿದ್ದ ಅಸಮೋಹ್ ಗ್ಯಾನ್ ದ್ವಿತೀಯಾರ್ಧದ 54ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು 1-1 ಸಮಬಲಗೊಳಿಸಿದರು,. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದ ಗ್ಯಾನ್ ತಾವು ಮಾಡಿದ ತಪ್ಪನ್ನು ತಿದ್ದಿಕೊಂಡು ತಂಡಕ್ಕೆ ಯಶಸ್ಸು ತಂದುಕೊಟ್ಟರು. ಆ ನಂತರ ಜಾಕಿಚಾಂದ್ ಸಿಂಗ್ ಗೋಲು ಗಳಿಸಿ ಗೋವಾ ತಂಡಕ್ಕೆ ಮುನ್ನಡೆ ಕಲ್ಪಿಸುವವರಿದ್ದರು, ಆದರೆ, ಸುಭಾಶಿಶ್ ರಾಯ್ ಉತ್ತಮ ರೀತಿಯಲ್ಲಿ ತಡೆದು ಗೋವಾದ ಪ್ರಯತ್ನವನ್ನು ಹುಸಿಗೊಳಿಸಿದರು. 

ಗೋವಾ ಮೇಲುಗೈ
ಆತಿಥೇಯ ನಾರ್ತ್ ಈಸ್ಟ್ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದರೆ, ಗೋವಾ ಸಿಕ್ಕ ಅವಕಾಶದಲ್ಲಿ ಗೋಲು ಗಳಿಸಿತು. ಹ್ಯೂಗೋ ಬೌಮೋಸ್ 31ನೇ ನಿಮಿಷದಲ್ಲಿ ಗಳಿಸಿದ ಗೋಲು ಪ್ರವಾಸಿ ಗೋವಾಕ್ಕೆ ಮುನ್ನಡೆ ಸಿಕ್ಕಿತು. 34ನೇ ನಿಮಿಷದಲ್ಲಿ ಅಸಮೋಹ್ ಗ್ಯಾನ್ ಗೋಲು ಗಳಿಸುವ ಉತ್ತಮ ಅವಕಾಶವನ್ನು ಕಳೆದುಕೊಂಡರು. ನಂತರ ಸಿಕ್ಕ ಅವಕಾಶಗಳಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹಲವಾರು ಅವಕಾಶಗಳನ್ನು ನಿರ್ಮಿಸಿಕೊಂಡರೂ ಸಮಬಲಕ್ಕೆ ಸಾಧ್ಯವಾಗಲಿಲ್ಲ. ಮೌರ್ತದಾ ಫಾಲ್ ನೀಡಿದ ಪಾಸ್ ಗ್ಯಾನ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಚೆಂಡಿನ ನಿಯಂತ್ರಣ ಸಾಧಿಸಿದ ಗ್ಯಾನ್ ಗೆ ಗೋಲು ಗಳಿಸಲು ಇಷ್ಟು ಉತ್ತಮ ಅವಕಾಶ ಮುಂದಿನ ಅವಧಿಯಲ್ಲಿ ಸಿಗುವುದು ಸಂಶಯ ಅನಿಸುವಷ್ಟು ಆ ಅವಕಾಶ ಗೋಲು ಗಳಿಕೆಗೆ ಉತ್ತಮವಾಗಿತ್ತು. ಆದರೆ ಚೆಂಡು ಗೋಲ್ ಬಾಕ್ಸ್ ನ ಬಾರ್ ಗೆ ತಗುಲಿ ಗೋಲ್ ಕೀಪರ್ ಕೈ ಸೇರಿತ್ತು.