ISL ಫುಟ್ಬಾಲ್: ಚೆನ್ನೈಗೆ ಮತ್ತೆ ಸೋಲಿನ ಆಘಾತ,ATKಗೆ ಗೆಲುವಿನ ಪುಳಕ!
ಇಂಡಿಯನ್ ಫುಟ್ಬಾಲ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ನರಾದ ಎಟಿಕೆ ಹಾಗೂ ಚೆನ್ನೈಯನ್ ಎಫ್‌ಸಿ ಹೋರಾಟ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ ಸೋಲಿನಿಂದ ಕಂಗೆಟ್ಟಿರುವ ಚೆನ್ನೈಯನ್ ಎಫ್‌ಸಿ ಸೋಲಿನಿಂದ ಹೊರಬರಲು ಸಾಧ್ಯವಾಗಿಲ್ಲ.
ಚೆನ್ನೈ(ಅ.30): ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿ ಎಟಿಕೆ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಆರಂಭಿಕ ಪಂದ್ಯದಲ್ಲಿ ಮುಗ್ಗರಿಸಿದ್ದ ಎಟಿಕೆ, ಇದೀಗ ಸತತ 2ನೇ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಡೇವಿಡ್ ವಿಲಿಯಮ್ಸ್ 48ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಮಾಜಿ ಚಾಂಪಿಯನ್ ಎಟಿಕೆ, ಚೆನ್ನೈಯಿನ್ ಎಫ್ ಸಿ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲುಗಳಲ್ಲಿ ಡ್ರಾ!
ವಿಲಿಯಮ್ಸ್ ಗಳಿಸಿದ ಗೋಲು ಇಂಡಿಯನ್ ಸೂಪರ್ ಲೀಗ್ ನಲ್ಲಿನ 1,000ನೇ ಗೋಲಾಗಿತ್ತು. ಚೆನ್ನೈ ಸತತ ಮೂರನೇ ಪಂದ್ಯದಲ್ಲೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಚೆನ್ನೈಯಿನ್ ತಂಡ ಈ ಬಾರಿಯ ISL ಟೂರ್ನಿಯಲ್ಲಿ ಚೇತರಿಸಿಕೊಳ್ಳಲಿದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ, ಮೇಲಕ್ಕೇರುವ ಬದಲು ತಂಡ ಕೆಳಮುಖದ ಪ್ರಯಾಣ ಆರಂಭಿಸಿರುವುದು ಚೆನ್ನೈ ಫುಟ್ಬಾಲ್ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಆದರೆ ಚೆನ್ನೈಯಿನ್ ಪುಟಿದೇಳುವ ಸಾಮರ್ಥ್ಯ ಹೊಂದಿದೆ. ಚೆನ್ನೈಯಿನ್ ಆಟಗಾರರು ಸಿಕ್ಕ ಅವಕಾಶವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗಿರುವುದು ಸೋಲಿಗೆ ಪ್ರಮುಖ ಕಾರಣ. ಇದುವರೆಗೂ ಮನೆಯಂಗಣದಲ್ಲಿ ಹೆಚ್ಚಿನ ತಂಡಗಳು ಯಶಸ್ಸು ಕಂಡಿವೆ. ಹಾಗೆ ನೋಡಿದರೆ, ಚೆನ್ನೈಯಿನ್ ಇನ್ನೂ ಕಳೆದ ಬಾರಿಯ ಆಘಾತದಿಂದ ಚೇತರಿಸಿಕೊಳ್ಳಬೇಕಿದೆ.
ಇದನ್ನೂ ಓದಿ: ISL; ಕೋಲ್ಕತಾ ಆರ್ಭಟಕ್ಕೆ ಶರಣಾದ ಹೈದರಾಬಾದ್
ಸಮಬಲದ ಪ್ರಥಮಾರ್ಧ
ಎಟಿಕೆ ತಂಡ ಚೆನ್ನೈಯಿನ್ ವಿರುದ್ಧ ಪ್ರಥಮಾರ್ಧದಲ್ಲಿ ಪ್ರಭುತ್ವ ಸಾಧಿಸಿತ್ತು, ಆದರೆ ಗೋಲು ಗಳಿಸುವಲ್ಲಿ ವಿಫಲವಾಯಿತು. ಪಂದ್ಯ ಆರಂಭಗೊಂಡ ಮೂರನೇ ನಿಮಿಷದಲ್ಲಿ ಚೆನ್ನೈ ತಂಡಕ್ಕೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು.ನೆರಿಜುಸ್ ವಾಲ್ಸ್ಕಿಸ್ ಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು, ಆದರೆ ಗುರಿ ತಪ್ಪಿತ್ತು. ಡ್ರಾಗೊಸ್ ಫಿರ್ರ್ಚುಲೆಸ್ಕ್ಯೂ ಬಲ ಭಾಗದಲ್ಲಿ ಬಂದ ಚೆಂಡನ್ನು ಉತ್ತಮ ರೀತಿಯಲ್ಲಿ ಪಾಸ್ ಮಾಡಿದರು. ಎಡ್ವಿನ್ ವನ್ಸ್ಪುಲ್ ಇನ್ನೂ ಉತ್ತಮ ರೀತಿಯಲ್ಲಿ ನಿರ್ಜುಸ್ ಗೆ ನೀಡಿದರು. ಮೇಲಿನಿಂದ ಸಾಗಿ ಬಂದ ಚೆಂಡನ್ನು ಹೆಡರ್ ಮೂಲಕ ಗೋಲು ಗಳಿಸಲೆತ್ನಿಸಿದರು, ಅದು ಉತ್ತಮ ಅವಕಾಶವೂ ಆಗಿತ್ತು. ಆದ್ರೆ ನಿರ್ಜುಸ್ ಅವರ ತಲೆಗೆ ತಗುಲಿದ ಚೆಂಡು ಗೋಲ್ ಬಾಕ್ಸ್ ನ ಅಂಚಿಂದ ಮೇಲೆ ಸಾಗಿ ಹೋಯಿತು.
ಎಟಿಕೆ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಆರು ಗೋಲು ಗಳಿಸಿ ಪ್ರಭುತ್ವ ಸಾಧಿಸಿದೆ. ಹೈದರಾಬಾದ್ ವಿರುದ್ಧ 5-0 ಅಂತರದಲ್ಲಿ ಗೆದ್ದು ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಆ ಪಂದ್ಯದಲ್ಲಿ ಡೇವಿಡ್ ವಿಲಿಯಮ್ಸ್ ಹಾಗೂ ಎಡು ಗಾರ್ಸಿಯಾ ತಲಾ ಎರಡು ಗೋಲು ಗಳಿಸಿ ಜಯದ ರೂವಾರಿ ಎನಿಸಿದ್ದರು.