ಬುರುಂಡಿ ಅಂತರ್ಯುದ್ಧದಿಂದ ಪಲಾಯನಗೈದು ತಾಂಜಾನಿಯಾದ ವಲಸಿಗ ಕ್ಯಾಂಪ್‌ನಲ್ಲಿ ಜನಿಸಿದ ನೆಸ್ಟೊರಿ ಇರಾಕುಂಡ, ಇಂದು ಆಸ್ಟ್ರೇಲಿಯಾ ಫುಟ್ಬಾಲ್ ತಂಡದ ಪ್ರಮುಖ ಆಟಗಾರ. ಫಿಫಾ ವಿಶ್ವಕಪ್‌ನಲ್ಲಿ ಟರ್ಕಿ ವಿರುದ್ಧ ಗೋಲು ಗಳಿಸುವ ಮೂಲಕ, ಅವರು ಆಸ್ಟ್ರೇಲಿಯಾ ಪರ ಗೋಲು ಹೊಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವ್ಯಾಂಕೋವರ್‌(ಕೆನಡಾ): ಅಂತರ್ಯುದ್ಧ ಪೀಡಿತ ಬುರುಂಡಿ, ಬಳಿಕ ತಾಂಜಾನಿಯಾದ ವಲಸಿಗ ಕ್ಯಾಂಪ್‌, ಆ ಮೇಲೆ ಆಸ್ಟ್ರೇಲಿಯಾದ ಪರ್ತ್‌, ಅಲ್ಲಿಂದ ಅಡಿಲೇಡ್‌...ಹೀಗೆ ವಿವಿಧ ದೇಶ, ನಗರಗಳಿಗೆ ವಲಸೆ ಹೋಗುತ್ತಲೇ ಇದ್ದ ಕುಟುಂಬದ ಕುಡಿಯೊಂದು ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಮಿಂಚು ಹರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಲಸಿಗ ಕುಟುಂಬದ ಕುಡಿ ನೆಸ್ಟೊರಿ ಇರಾಕುಂಡ ಈಗ ಆಸೀಸ್ ಗೆಲುವಿನ ರೂವಾರಿ

ಭಾನುವಾರ ಟರ್ಕಿ ವಿರುದ್ಧ ಪಂದ್ಯದಲ್ಲಿ ಆಸ್ಟ್ರೇಲಿಯಾದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ನೆಸ್ಟೊರಿ ಇರಾಕುಂಡ ಅವರ ಜೀವನ ಪಯಣ ಒಂದು ರೋಚಕ ಕತೆ. ಈ ಕತೆ ಶುರುವಾಗುವುದು ಬುರುಂಡಿ ದೇಶದಿಂದ. 1993ರಿಂದ 2005ರ ವರೆಗೂ ಬುರುಂಡಿ ಅಂತರ್ಯುದ್ಧದಿಂದ ತತ್ತರಿಸಿತ್ತು. ಆ ಕಾಲದಲ್ಲಿ ನೆಸ್ಟೊರಿ ಪೋಷಕರು ಬುರುಂಡಿ ತೊರೆದು ತಾಂಜಾನಿಯಾದ ಕಿಗೊಮಾ ನಗರದಲ್ಲಿ ನೆಲೆಸಿದ್ದರು. ಸಾವಿರಾರು ವಲಸಿಗರ ಜೊತೆ ನೆಸ್ಟೊರಿ ಪೋಷಕರು ಕೂಡಾ ವಲಸಿಗ ಕ್ಯಾಂಪ್‌ನಲ್ಲಿದ್ದರು. 2006ರಲ್ಲಿ ನೆಸ್ಟೊರಿ ಹುಟ್ಟಿದ್ದು ಕೂಡಾ ಅದೇ ಕ್ಯಾಂಪ್‌ನಲ್ಲಿ.

ಸಣ್ಣ ಮಗುವಾಗಿದ್ದಾಗಲೇ ನೆಸ್ಟೊರಿಯನ್ನು ಹೊತ್ತು, ಅವರ ಪೋಷಕರು ಆಸ್ಟ್ರೇಲಿಯಾಗೆ ತೆರಳಿದ್ದರು. ಆರಂಭದಲ್ಲಿ ಪರ್ತ್‌ನಲ್ಲಿ ನೆಲೆಸಿದ್ದ ಈ ಕುಟುಂಬ, ಬಳಿಕ ಆ ನಗರವನ್ನೂ ತೊರೆದು ಅಡಿಲೇಡ್‌ಗೆ ಬಂದಿತ್ತು. ಅಲ್ಲೇ ಆಡಿ ಬೆಳೆದ ನೆಸ್ಟೊರಿ ನೋಡ ನೋಡುತ್ತಲೇ ಪ್ರತಿಭಾವಂತ ಫುಟ್ಬಾಲಿಗನಾಗಿ ಬದಲಾದರು. 2022ರಲ್ಲಿ ಆಸ್ಟ್ರೇಲಿಯಾ ಅಂಡರ್‌-17 ತಂಡದಲ್ಲಿ ಸ್ಥಾನ ಪಡೆದ ಅವರು, 2024ರಲ್ಲಿ ಬೇಯರ್ನ್‌ ಮ್ಯೂನಿಚ್‌ ಕ್ಲಬ್‌ನ ಭಾಗವಾದರು. ಈ ಬಾರಿ ವಿಶ್ವಕಪ್‌ನಲ್ಲಿ ಗೋಲು ಬಾರಿಸುವ ಮೂಲಕ, ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪರ ಗೋಲು ಹೊಡೆದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗೆ ಈಗ ಕೇವಲ 20 ವರ್ಷ.

ಡಾರ್ಕ್‌ ಹಾರ್ಸ್‌ ಟರ್ಕಿ ವಿರುದ್ಧ ಗೆದ್ದ ಸಾಕರೂಸ್‌ ಆಸ್ಟ್ರೇಲಿಯಾ

ವ್ಯಾಂಕೋವರ್‌(ಕೆನಡಾ): 24 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ಗೆ ಮರಳಿರುವ, ಈ ಬಾರಿ ಟೂರ್ನಿಯ ‘ಡಾರ್ಕ್‌ ಹಾರ್ಸ್‌’ ಎನಿಸಿಕೊಂಡಿದ್ದ ಟರ್ಕಿಗೆ ಮೊದಲ ಪಂದ್ಯದಲ್ಲೇ ‘ಸಾಕರೂಸ್‌’ ಖ್ಯಾತಿಯ ಆಸ್ಟ್ರೇಲಿಯಾ ಸೋಲಿನ ಆಘಾತ ನೀಡಿದೆ. ಭಾನುವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.

2002ರಲ್ಲಿ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಿದ್ದ ಟರ್ಕಿ ಬಳಿಕ 5 ವಿಶ್ವಕಪ್‌ ತಪ್ಪಿಸಿಕೊಂಡಿತ್ತು. ಈ ಬಾರಿ ಶುಭಾರಂಭದ ಗುರಿಯೊಂದಿಗೆ ಕಣಕ್ಕಿಳಿದಿದ್ದ ತಂಡಕ್ಕೆ ಅದೃಷ್ಟ ಕೈಕೊಟ್ಟಿತು. ತಂಡ ಬಾರಿಸಿದ 8 ಹೊಡೆತಗಳನ್ನು ಆಸೀಸ್ ಗೋಲ್‌ಕೀಪರ್‌ ಪ್ಯಾಟ್ರಿಕ್‌ ಬೀಚ್‌ ಯಶಸ್ವಿಯಾಗಿ ತಡೆದರು. 27ನೇ ನಿಮಿಷದಲ್ಲಿ ನೆಸ್ಟೊರಿ ಇರಾಕುಂಡಾ ಮೂವರು ಡಿಫೆಂಡರ್‌ಗಳನ್ನು ಹಿಂದಿಕ್ಕಿ ಆಸೀಸ್‌ ಪರ ಮೊದಲ ಗೋಲು ದಾಖಲಿಸಿದರೆ, 75ನೇ ನಿಮಿಷದಲ್ಲಿ ಕೊನೊರ್‌ ಮೆಟ್ಕಾಲ್ಫ್‌ ಮತ್ತೊಂದು ಗೋಲು ಹೊಡೆದು ತಂಡದ ಗೆಲುವು ಖಚಿತಪಡಿಸಿಕೊಂಡರು. ಪಂದ್ಯದಲ್ಲಿ ಮೊರಾಕ್ಕೊ ತಂಡ ಚೆಂಡಿನ ಮೇಲೆ ಶೇ.72ರಷ್ಟು ಹಿಡಿತ ಸಾಧಿಸಿ, ಆಸೀಸ್‌ಗಿಂತ ಬರೋಬ್ಬರಿ 21(30-9) ಹೆಚ್ಚು ಶಾಟ್‌ ಪ್ರಯತ್ನಿಸಿದರೂ ಯಶಸ್ಸು ಮಾತ್ರ ಸಿಗಲಿಲ್ಲ.