ಕೋಕಾ ಕೋಲಾ ಬದಿಗಿಟ್ಟು ನೀರು ಕುಡಿಯಲು ಸಲಹೆ ನೀಡಿದ ಕ್ರಿಸ್ಟಿಯಾನೊ ರೊನಾಲ್ಡೋ..!
* ಯೂರೋ ಕಪ್ ಟೂರ್ನಿಗೂ ಮುನ್ನ ಗಮನ ಸೆಳೆದ ಕ್ರಿಸ್ಟಿಯಾನೊ ರೊನಾಲ್ಡೋ
* ಕೋಕ್ ಬದಿಗಿಟ್ಟು ನೀರು ಕುಡಿಯಿರಿ ಎಂದು ಸಲಹೆ ಕೊಟ್ಟ ತಾರಾ ಆಟಗಾರ
* ರೊನಾಲ್ಡೋ ಸಂದೇಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ
ಪೋರ್ಚುಗಲ್(ಜೂ.16): ಯೂರೋ 2020 ಟೂರ್ನಿಯಲ್ಲಿ ಪೋರ್ಚುಗಲ್ ತನ್ನ ಮೊದಲ ಪಂದ್ಯ ಆಡುವ ಮುನ್ನ ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೊ ರೊನಾಲ್ಡೋ ಪ್ರೆಸ್ ಕಾನ್ಫರೆನ್ಸ್ ವೇಳೆ ಖ್ಯಾತ ತಂಪು ಪಾನೀಯವಾದ ಕೋಕಾ ಕೋಲಾ ಬಾಟಲಿಗಳನ್ನು ದೂರವಿಟ್ಟು, ನೀರು ಕುಡಿಯಿರಿ ಎಂದು ಹೇಳಿರುವ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪ್ರೆಸ್ ಕಾನ್ಫರೆನ್ಸ್ ವೇಳೆ ಟೇಬಲ್ ಮೇಲಿದ್ದ ಎರಡು ಕೋಕಾ ಕೋಲಾ ಬಾಟಲಿಯನ್ನು ದೂರವಿಟ್ಟು, ನೀರನ್ನು ಕುಡಿಯಿರಿ ಎಂದು ಮಾಧ್ಯಮದ ಮೂಲಕವೇ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಈ ಮಾಧ್ಯಮ ಸಂವಾದದಲ್ಲಿ ಪೋರ್ಚುಗಲ್ ತಂಡದ ಮ್ಯಾನೇಜರ್ ಫರ್ನಾಂಡೋ ಸ್ಯಾಂಟೋಸ್ ಸಹಾ ಹಾಜರಿದ್ದರು. ಪೋರ್ಚುಗಲ್ ಮ್ಯಾನೇಜರ್ ಎದುರು ಸಹ ಎರಡು ಕೋಕ್ ಬಾಟಲಿಗಳಿದ್ದವು, ಅದನ್ನು ಸ್ಯಾಂಟೋಸ್ ಪಕ್ಕಕ್ಕೆ ಸರಿಸಲಿಲ್ಲ.
ಯೂರೋ 2020 ಟೂರ್ನಿಗೆ ಕೋಕಾ ಕೋಲಾ ಕಂಪನಿ ಕೂಡಾ ಸಹಾ ಪ್ರಾಯೋಕತ್ವ ನೀಡಿದೆ. 5 ಬಾರಿ ಬಾಲನ್ ಡಿ ಓರ್ ಪ್ರಶಸ್ತಿ ವಿಜೇತ ರೊನಾಲ್ಡೋ ಅವರ ಈ ನಡೆಗೆ ಯೂರೋಪಿನ್ ಫುಟ್ಬಾಲ್ ಚಾಂಪಿಯನ್‌ಶಿಪ್ ಆಯೋಜಕರು ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ರೊನಾಲ್ಡೋ ಬಿಸಾಡಿದ್ದ ಆರ್ಮ್‌ಬ್ಯಾಂಡ್ 55 ಲಕ್ಷ ರುಪಾಯಿಗೆ ಹರಾಜು!
36 ವರ್ಷದ ರೊನಾಲ್ಡೋ 5ನೇ ಬಾರಿಗೆ ಯೂರೋ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಆಟಗಾರ ಎನ್ನುವ ದಾಖಲೆ ನಿರ್ಮಿಸಿದ್ದಾರೆ. ಇದೇ ವೇಳೆ ಯುವೆಂಟಸ್ ತಂಡ ತೊರೆದು ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸೇರಲಿದ್ದಾರೆ ಎನ್ನುವ ಗಾಳಿ ಸುದ್ದಿಗೂ ರೊನಾಲ್ಡೋ ತೆರೆ ಎಳೆದಿದ್ದಾರೆ.
ರೊನಾಲ್ಡೋ ಈ ನಡೆಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ಪತ್ರಕರ್ತ ರಾಜೇಶ್ ಕಾಲ್ರಾ ಈ ಕುರಿತಂತೆ ಟ್ವೀಟ್ ಮಾಡಿದ್ದು, ರೊನಾಲ್ಡೋ ಮಾಡಿದಂತೆಯೇ ಈ ಹಿಂದೆ ಭಾರತದ ದಿಗ್ಗಜ ಬ್ಯಾಡ್ಮಿಂಟನ್ ಪಟುವಾಗಿದ್ದ ಪುಲ್ಲೇಲಾ ಗೋಪಿಚಂದ್, ತಮ್ಮ ವೃತ್ತಿಜೀವನದ ಉನ್ನತ ಸ್ಥಾನದಲ್ಲಿದ್ದಾಗಲೇ ಪೆಪ್ಸಿ ಕಂಪನಿಯ ಬಾಟಲ್ ಅನ್ನು ಬದಿಗೆ ಸರಿಸಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
ಯೂರೋ ಟೂರ್ನಿಯಲ್ಲಿ ಪೋರ್ಚುಗಲ್ ಶುಭಾರಂಭ: ಕ್ರಿಸ್ಟಿಯಾನೊ ರೊನಾಲ್ಡೋ ಬಾರಿಸಿದ ಎರಡು ಮಿಂಚಿನ ಗೋಲುಗಳ ನೆರವಿನಿಂದ ಹಂಗೇರಿ ವಿರುದ್ದ ಪೋರ್ಚುಗಲ್ 3-0 ಅಂತರದಲ್ಲಿ ಗೆದ್ದು ಯೂರೋ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.