ಎಎಫ್‌ಸಿ ಕಪ್: ಎಟಿಕೆ ಎದುರು ಮುಗ್ಗರಿಸಿದ ಬೆಂಗಳೂರು ಎಫ್‌ಸಿ
* ಎಎಫ್‌ಸಿ ಕಪ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಬೆಂಗಳೂರು ಎಫ್‌ಸಿ
* ಎಟಿಕೆ ಮೋಹನ್ ಬಗಾನ್ ತಂಡಕ್ಕೆ 2-0 ಅಂತರದಲ್ಲಿ ಗೆಲುವು
* ಬಿಎಫ್‌ಸಿ ಎಂದುರು ಸಂಪೂರ್ಣ ಪ್ರಾಬಲ್ಯ ಮೆರೆದ ಎಟಿಕೆ
ಮಾಲೆ(ಆ.19): ನಾಯಕ ರಾಯ್ ಕೃಷ್ಣ ಹಾಗೂ ಡಿಫೆಂಡರ್ ಸುಭಾಷಿಸ್ ಬೋಸ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಎಫ್‌ಸಿ ತಂಡವನ್ನು 2-0 ಅಂತರದಲ್ಲಿ ಮಣಿಸುವ ಮೂಲಕ ಎಟಿಕೆ ಮೋಹನ್ ಬಗಾನ್ ತಂಡವು ಎಎಫ್‌ಸಿ ಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ನ್ಯಾಷನಲ್ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ 'ಡಿ' ಗುಂಪಿನ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಗಾನ್ ತಂಡವು ಪಂದ್ಯದುದ್ದಕ್ಕೂ ಸುನಿಲ್ ಚೆಟ್ರಿ ಬಳಗದೆದುರು ಸಂಪೂರ್ಣ ಪಾರಮ್ಯ ಮೆರೆಯಿತು. 'ಡಿ' ಗುಂಪಿನಲ್ಲಿ ಬಿಎಫ್‌ಸಿ, ಎಟಿಕೆ, ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಹಾಗೂ ಮಾಲ್ಡೀವ್ಸ್‌ನ ಮಾಝಿಯಾ ಸ್ಪೋರ್ಟ್ಸ್ ತಂಡಗಳಿವೆ. ಪಂದ್ಯದ 39ನೇ ನಿಮಿಷದಲ್ಲಿ ಬಿಎಫ್‌ಸಿ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರನ್ನು ವಂಚಿಸಿ ಗೋಲು ದಾಖಲಿಸುವ ಮೂಲಕ ನಾಯಕ ಎಟಿಕೆ ತಂಡಕ್ಕೆ ಗೋಲಿನ ಖಾತೆ ತೆರೆದರು.
ಫುಟ್ಬಾಲ್ ಎಎಫ್‌ಸಿ ಕಪ್: ಇಂದು ಬಿಎಫ್‌ಸಿ-ಎಟಿಕೆ ಸೆಣಸು
ಆರಂಭಿಕ ಗೋಲಿನ ಬಳಿಕ ಮತ್ತಷ್ಟು ಅಕ್ರಮಣಕಾರಿ ಪ್ರದರ್ಶನ ತೋರಿದ ಎಟಿಕೆ ಮೋಹನ್ ಬಗಾನ್ 46ನೇ ನಿಮಿಷದಲ್ಲಿ ಸುಭಾಷಿಸ್ ಬೋಸ್ ಮತ್ತೊಂದು ಗೋಲು ಬಾರಿಸುವ ಮೂಲಕ ಎಟಿಕೆ ತಂಡಕ್ಕೆ ಸ್ಪಷ್ಟ ಮೇಲುಗೈ ಒದಗಿಸಿಕೊಟ್ಟರು. ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ಗೋಲು ಬಾರಿಸಲು ಸಾಕಷ್ಟು ಯತ್ನಿಸಿತಾದರೂ ಯಶಸ್ವಿಯಾಗಲಿಲ್ಲ. ಇದರೊಂದಿಗೆ 2019ರ ಬಳಿಕ ಇಂಡಿಯನ್ ಸೂಪರ್ ಲೀಗ್ ಸೇರಿದಂತೆ ಯಾವ ಟೂರ್ನಿಯಲ್ಲೂ ಬಿಎಫ್‌ಸಿ ತಂಡಕ್ಕೆ ಎಟಿಕೆ ಮೊಹನ್ ಬಗಾನ್ ತಂಡವನ್ನು ಮಣಿಸಲು ಸಾಧ್ಯವಾಗಲಿಲ್ಲ.