Asianet Suvarna News Asianet Suvarna News

FIFA World Cup: ಸೆಮಿಫೈನಲ್‌ನಲ್ಲಿ ಸೋಲು, ಫ್ರಾನ್ಸ್‌ ರಸ್ತೆಗಳಲ್ಲಿ ಮೊರಾಕ್ಕೊ ಫ್ಯಾನ್ಸ್‌ ದಾಂಧಲೆ 14 ವರ್ಷದ ಹುಡುಗ ಸಾವು!

ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಮೊರಾಕ್ಕೊ ತಂಡ ಫ್ರಾನ್ಸ್‌ ವಿರುದ್ಧ ಸೋಲು ಕಂಡ ಬೆನ್ನಲ್ಲಿಯೇ, ಫ್ರಾನ್ಸ್‌ನಲ್ಲಿ ಮೊರಾಕ್ಕೊ ಅಭಿಮಾನಗಳು ದಾಂಧಲೆ ನಡೆಸಿದ್ದಾರೆ. ಫ್ರಾನ್ಸ್‌ನೊಂದಿಗೆ ಬೆಲ್ಜಿಯಂ, ನೆದರ್ಲೆಂಡ್‌ನಲ್ಲೂ ಮೊರಾಕ್ಕೊ ದೇಶದ ಫ್ಯಾನ್ಸ್‌ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Fifa World Cup semifinal loss France and Morocco fans clash with police Teenage boy killed san
Author
First Published Dec 16, 2022, 2:50 PM IST

ಪ್ಯಾರಿಸ್‌ (ಡಿ.16): ಫಿಫಾ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮೊರಾಕ್ಕೊ ತಂಡ ಫ್ರಾನ್ಸ್‌ ವಿರುದ್ಧ 2-0ಯಿಂದ ಸೋಲು ಕಂಡ ಬೆನ್ನಲ್ಲಿಯೇ, ಮೊರಾಕ್ಕೊ ದೇಶದ ಅಭಿಮಾನಿಗಳು ಫ್ರಾನ್ಸ್‌ ಸೇರಿದಂತೆ ಹಲವಾರು ಯುರೋಪಿಯನ್‌ ರಾಷ್ಟ್ರಗಳ ಪ್ರದೇಶದಲ್ಲಿ ದಾಂಧಲೆ ಎಬ್ಬಿಸಿದ್ದಾರೆ. ಇದರಲ್ಲಿ 14 ವರ್ಷದ ಬಾಲಕನೊಬ್ಬ ಸಾವು ಕಂಡಿದ್ದಾನೆ. ಗುರುವಾರ ಕತಾರ್‌ನಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್‌ ಪಂದ್ಯದಲ್ಲಿ ಮೊರಾಕ್ಕೊ ದೇಶ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿತ್ತು. 1912 ರಿಂದ 1956ರವರೆಗೆ ಫ್ರಾನ್ಸ್‌ ದೇಶದ ವಸಹಾತುವಾಗಿದ್ದ ಮೊರಾಕ್ಕೊ ಬಳಿಕ ಸ್ವಾತಂತ್ರ್ಯ ಪಡೆದುಕೊಂಡಿತ್ತು. ಹಾಗಾಗಿ ಈ ಪಂದ್ಯ ಮೊರಾಕ್ಕೊ ದೇಶದವರ ಪಾಲಿಗೆ ರಾಜಕೀಯ ಹಾಗೂ ಭಾವನಾತ್ಮಕ ವಿಚಾರವಾಗಿತ್ತು. ಅದಲ್ಲದೆ, ಇಡೀ ಅರಬ್‌ ರಾಷ್ಟ್ರಗಳು ಮೊರಾಕ್ಕೊ ಬೆಂಬಲಕ್ಕೆ ನಿಂತಿದ್ದವು. ಎರಡೂ ತಂಡಗಳ ಬೆಂಬಲಿಗರು ಪಂದ್ಯದ ನಂತರ ಫ್ರೆಂಚ್ ನಗರಗಳಲ್ಲಿ ಸಂಭ್ರಮದಿಂದ ಇದನ್ನು ಆಚರಣೆ ಮಾಡಿದ್ದಾರೆ. ಆದರೆ, ಬೆಲ್ಜಿಯಂನ ಬ್ರಸೆಲ್ಸ್‌, ನೆದರ್ಲೆಂಡ್‌ನ ಆಂಸ್ಟರ್‌ಡ್ಯಾಮ್‌ ಹಾಗೂ ಫ್ರಾನ್ಸ್‌ನ ಲ್ಯಾನ್‌ ನಗರದಲ್ಲಿ ಅಡಚಣೆಗಳು ಉಂಟಾಗಿದ್ದವು. ಮಾಂಟ್‌ ಪೆಲಿಯರ್‌ನಲ್ಲಿ ಪ್ರತಿಭಟನೆಯ ವೇಳೆ 14 ವರ್ಷದ ಬಾಲಕನ ಮೇಲೆ ಕಾರ್‌ ಹರಿದು ಸಾವು ಕಂಡಿದ್ದಾನೆ.


ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆತ ಸಾವು ಕಂಡಿದ್ದಾನೆ ಎಂದು ಫ್ರೆಂಚ್‌ ಅಧಿಕಾರಿಗಳು ಹೇಳಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಫ್ರೆಂಚ್‌ ಧ್ವಜವನ್ನು ಕಾರ್‌ನ ಕಿಟಕಿಯಿಂದ ಹಾರಿಸುತ್ತಾ ಬರುವ ವ್ಯಕ್ತಿಗಳನ್ನು ಅಡ್ಡ ಹಾಕುವ ದೊಡ್ಡ ಗುಂಪು, ಅವರ ಬಳಿಯಲ್ಲಿದ್ದ ಧ್ವಜವನ್ನು ಕಸಿದು ಪುಂಡಾಟ ನಡೆಸಿವೆ. ನಂತರ ಕಾರು ಗುಂಪಿನ ಕಡೆಗೆ ತಿರುಗಿ ಹಲವಾರು ಜನರಿಗೆ ಡಿಕ್ಕಿ ಹೊಡೆದಿದೆ. ಸ್ಥಳದಿಂದ ವಾಹನ ಪತ್ತೆಯಾಗಿದ್ದರೆ, ಚಾಲಕನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಲಿಯಾನ್‌ನಲ್ಲಿ  ಬಂಧನ: ಮಾಂಟ್‌ಪೆಲ್ಲಿಯರ್‌ನ ಉತ್ತರದಲ್ಲಿರುವ ಲಿಯಾನ್‌ನಲ್ಲಿ, ಪೊಲೀಸ್‌ ಅಧಿಕಾರಿಗಳು ಮತ್ತು ಬೆಂಬಲಿಗರ ನಡುವೆ ನಡುಬೀದಿಯಲ್ಲಿ ಚಕಮಕಿ ನಡೆದಿವೆ. ಎಂಟು ಜನರನ್ನು ಬಂಧಿಸಲಾಗಿದೆ ಮತ್ತು ಏಳು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಂಧಿತರಲ್ಲಿ ಇಬ್ಬರು ಬಲಪಂಥೀಯ ಗುಂಪಿನ ಸದಸ್ಯರು ಎಂದು ಫ್ರೆಂಚ್ ಸುದ್ದಿ ವಾಹಿನಿ BFMTV ವರದಿ ಮಾಡಿದೆ. ರಾತ್ರಿಯ ವೇಳೆ ಇಲ್ಲಿ ಜಗಳ ತಾರಕಕ್ಕೇರಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊರಾಕ್ಕೊ ಫೈನಲ್ ಕನಸು ಭಗ್ನ, ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್ ಫ್ರಾನ್ಸ್‌..!

ಬ್ರಸೆಲ್ಸ್ ಮತ್ತು ಆಂಸ್ಟರ್‌ಡ್ಯಾಮ್‌ನಲ್ಲೂ ಚಕಮಕಿ: ಬ್ರಸೆಲ್ಸ್‌ನಲ್ಲಿ ಸುಮಾರು 100 ಫುಟ್‌ಬಾಲ್ ಅಭಿಮಾನಿಗಳು ಪೊಲೀಸರೊಂದಿಗೆ ಚಕಮಕಿಗೆ ಇಳಿದಿದ್ದಾರೆ. ಇದರಲ್ಲಿ ಹೆಚ್ಚಿನವರು ಮೊರಾಕ್ಕೊ ದೇಶದ ಧ್ವಜಗಳನ್ನು ಮೈಮೇಲೆ ಹಾಕಿಕೊಂಡಿದ್ದರು. ಗಲಭೆಯಾಗುವ ಸೂಚನೆ ಸಿಕ್ಕ ಹಿನ್ನಲೆಯಲ್ಲಿ ಸ್ಥಳೀಯ ಪೊಲೀಸರು ಕೂಡ ಅಲರ್ಟ್‌ ಆಗಿದ್ದರು. ಈ ವೇಳೆ, ಪಟಾಕಿಗಳು, ಕಾರ್ಡ್‌ಬೋರ್ಡ್‌ ಬಾಕ್ಸ್‌, ಕಸದ ಬಾಕ್ಸ್‌ಗಳನ್ನು ಪೊಲೀಸರ ಮೇಲೆ ಎಸೆದ ಘಟನೆ ನಡೆದಿದೆ. ಪೊಲೀಸರು ಈ ವೇಳೆ ಅಶ್ರುವಾಯು ಹಾಗೂ ಜಲಫಿರಂಗಿ ಮೂಲಕ ಉದ್ರಿಕ್ತರನ್ನು ಚದುರಿಸಿದ್ದಾರೆ.

ತಾಯಿ ಜೊತೆ ಮೊರಾಕ್ಕೊ ಫುಟ್ಬಾಲಿಗ ಸೋಫಿಯಾನ್‌ ಬೂಫಾಲ್‌ ಸಂಭ್ರಮ!

ಇನ್ನು ನೆದರ್ಲೆಂಡ್‌ನ ಆಂಸ್ಟರ್‌ಡ್ಯಾಮ್‌ನಲ್ಲೂ ಇದೇ ರೀತಿಯ ಘಟನೆ ನಡೆದಿದ್ದು, 100ಕ್ಕೂ ಅಧಿಕ ಫುಟ್‌ಬಾಲ್‌ ಅಭಿಮಾನಿಗಳು ಪೊಲೀಸರ ಜೊತೆ ಗಲಭೆಗೆ ಇಳಿದಿದ್ದಾರೆ. ತಕ್ಷಣವೇ ಎಮರ್ಜೆನ್ಸಿ ಆರ್ಡರ್‌ ದಾಖಲಿಸಿದ ಪೊಲೀಸರು, ಗಲಭೆ ವಿರೋಧಿ ಪಡೆಯನ್ನು ಕಣಕ್ಕಿಳಿಸಿತ್ತು. ಪೊಲೀಸರ ಮೇಲೆ ಪಟಾಕಿ ಎಸೆದ ಮೂವರು ಅಪ್ರಾಪ್ತ ಯುವಕರನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios