ಮೊರಾಕ್ಕೊ ಫೈನಲ್ ಕನಸು ಭಗ್ನ, ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್ ಫ್ರಾನ್ಸ್..!
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಫ್ರಾನ್ಸ್
ಮೊರಾಕ್ಕೊ ಎದುರು 2-0 ಅಂತರದ ಗೆಲುವು ದಾಖಲಿಸಿದ ಹಾಲಿ ಚಾಂಪಿಯನ್
ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಫ್ರಾನ್ಸ್-ಅರ್ಜೆಂಟೀನಾ ಫೈಟ್
ದೋಹಾ(ಡಿ.15): ಅದ್ಭುತ ಪ್ರದರ್ಶನದ ಮೂಲಕ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಮೊರಾಕ್ಕೊ ತಂಡದ ಗೆಲುವಿನ ನಾಗಾಲೋಟಕ್ಕೆ ಹಾಲಿ ಚಾಂಪಿಯನ್ ಫ್ರಾನ್ಸ್ ಬ್ರೇಕ್ ಹಾಕಿದೆ. ಥಿಯೋ ಹೆರ್ನಾಂಡೀಸ್ ಹಾಗೂ ರಂಡಲ್ ಕೊಲೊ ಬಾರಿಸಿದ ಆಕರ್ಷಕ ಗೋಲುಗಳ ನೆರವಿನಿಂದ ಫ್ರಾನ್ಸ್ ತಂಡವು 2-0 ಅಂತರದ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಲಗ್ಗೆಯಿಟ್ಟಿದೆ. ಈ ಮೂಲಕ ಭಾನುವಾರ(ಡಿ.18)ರಂದು ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಎದುರು ಪ್ರಶಸ್ತಿಗಾಗಿ ಕಾದಾಡಲಿದೆ.
ಇಲ್ಲಿನ ಅಲ್ ಬೈಯಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲ 5ನೇ ನಿಮಿಷದಲ್ಲಿ ಥಿಯೋ ಹೆರ್ನಾಂಡೀಸ್ ಆಕರ್ಷಕ ಗೋಲು ಬಾರಿಸುವ ಮೂಲಕ ಫ್ರಾನ್ಸ್ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಇದು ಮೊರಾಕ್ಕೊ ತಂಡವು ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಿಟ್ಟುಕೊಟ್ಟ ಮೊದಲ ಗೋಲು ಎನಿಸಿಕೊಂಡಿತು. ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಫ್ರಿಕಾ ಮತ್ತು ಅರಬ್ ತಂಡ ಎನಿಸಿಕೊಂಡಿದ್ದ ಮೊರಾಕ್ಕೊ ತಂಡವು, ಫೈನಲ್‌ಗೇರಲು ಹಾಲಿ ಚಾಂಪಿಯನ್ ಫ್ರಾನ್ಸ್ ಅವಕಾಶ ಮಾಡಿಕೊಡಲಿಲ್ಲ.
ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ನಾಲ್ಕನೇ ಬಾರಿಗೆ ಫಿಫಾ ವಿಶ್ವಕಪ್ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದೆ. ಒಂದು ವೇಳೆ ಫೈನಲ್‌ನಲ್ಲಿ ಫ್ರಾನ್ಸ್ ತಂಡವು ಅರ್ಜೆಂಟೀನಾ ಎದುರು ಗೆಲುವು ದಾಖಲಿಸಿದರೆ, 60 ವರ್ಷಗಳ ಬಳಿಕ ಸತತ ಎರಡು ಫಿಫಾ ವಿಶ್ವಕಪ್ ಜಯಿಸಿದ ಎರಡನೇ ತಂಡ ಎನ್ನುವ ಹಿರಿಮಗೆ ಫ್ರಾನ್ಸ್ ಪಾತ್ರವಾಗಲಿದೆ. ಈ ಮೊದಲು ಬ್ರೆಜಿಲ್ ತಂಡವು 1958 ಹಾಗೂ 1962ರಲ್ಲಿ ಸತತ ಎರಡು ಬಾರಿಗೆ ಫಿಫಾ ವಿಶ್ವಕಪ್ ಜಯಿಸಿ ದಾಖಲೆ ನಿರ್ಮಿಸಿತ್ತು. ಇದೀಗ ಆ ದಾಖಲೆ ಸರಿಗಟ್ಟಲು ಫ್ರಾನ್ಸ್‌ಗೆ ಸುವರ್ಣಾವಕಾಶವಿದೆ.
ಫಿಫಾ ವಿಶ್ವಕಪ್ ಫೈನಲ್ ಬಳಿಕ ಲಿಯೋನೆಲ್ ಮೆಸ್ಸಿ ನಿವೃತ್ತಿ: ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್..!
ಇದೀಗ ಡಿಸೆಂಬರ್ 18ರಂದು ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಹಾಗೂ ಫ್ರಾನ್ಸ್ ತಂಡದ ಮಾಂತ್ರಿಕ ಆಟಗಾರ ಕಿಲಿಯಾನ್ ಎಂಬಾಪೆ ಆಟವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಜಗತ್ತು ತುದಿಗಾಲಿನಲ್ಲಿ ನಿಂತಿದೆ.
ಮೊರಾಕ್ಕೊ ತಂಡವು ಗ್ರೂಪ್ ಹಂತದಲ್ಲಿ ಬಲಿಷ್ಠ ಬೆಲ್ಜಿಯಂ ತಂಡಕ್ಕೆ ಶಾಕ್ ನೀಡಿತ್ತು. ಇದಾದ ಬಳಿಕ ಪ್ರಶಸ್ತಿ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಸ್ಪೇನ್ ಹಾಗೂ ಪೋರ್ಚುಗಲ್ ತಂಡಗಳನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು. ಇದೀಗ ಶನಿವಾರ ನಡೆಯಲಿರುವ ಮೂರನೇ ಸ್ಥಾನಕ್ಕಾಗಿ ನಡೆಯುವ ಪೈಪೋಟಿಯಲ್ಲಿ ಮೊರಾಕ್ಕೊ ತಂಡವು ಕ್ರೊವೇಷಿಯಾ ತಂಡವನ್ನು ಎದುರಿಸಲಿದೆ.