ತಾಯಿ ಜೊತೆ ಮೊರಾಕ್ಕೊ ಫುಟ್ಬಾಲಿಗ ಸೋಫಿಯಾನ್ ಬೂಫಾಲ್ ಸಂಭ್ರಮ!
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪೋರ್ಚುಗಲ್‌ಗೆ ಶಾಕ್ ನೀಡಿದ ಮೊರಾಕ್ಕೊ
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಸೆಮೀಸ್ ಪ್ರವೇಶಿಸಿದ ಮೊರಾಕ್ಕೊ
ಗೆಲುವಿನ ಬೆನ್ನಲ್ಲೇ ತಾಯಿಯ ಜತೆ ಸಂಭ್ರಮಾಚರಣೆ ಮಾಡಿದ ಮೊರಾಕ್ಕೊ ತಾರಾ ಫುಟ್ಬಾಲಿಗ
ದೋಹಾ(ಡಿ.12): ದೋಹಾ: ಯೂಸುಫ್ ಎನ್-ನೆಸ್ರಿ ಬಾನೆತ್ತರಕ್ಕೆ ಜಿಗಿದು ಮನಮೋಹಕ ಹೆಡ್ಡರ್ ಮೂಲಕ ಬಾರಿಸಿದ ಗೋಲು ಮೊರಾಕ್ಕೊವನ್ನು ಫಿಫಾ ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿಗೆ ಸೆಮಿಫೈನಲ್‌ಗೇರಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಪೋರ್ಚುಗಲ್ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಿದ ಮೊರಾಕ್ಕೊ, ಮತ್ತೊಂದು ಆಘಾತಕಾರಿ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ಸ್ಪೇನ್, ಬ್ರೆಜಿಲ್ ಬಳಿಕ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದ್ದ ಪೋರ್ಚುಗಲ್ ಸಹ ಆಘಾತಕಾರಿ ಸೋಲಿನ ಬಳಿಕ ಟೂರ್ನಿಗೆ ವಿದಾಯ ಹೇಳಿದೆ. ಪ್ರಿ ಕ್ವಾರ್ಟರ್‌ನಲ್ಲಿ 6-1 ಗೋಲುಗಳ ಅಬ್ಬರದ ಜಯ ಸಾಧಿಸಿ ಮೆರೆದಿದ್ದ ಪೋರ್ಚುಗಲ್, ಮೊರಾಕ್ಕೊ ರಕ್ಷಣಾ ಪಡೆಯನ್ನು ಭೇದಿಸಿ ಒಂದೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.
ಪೋರ್ಚುಗಲ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ತಂಡ ರೋಚಕ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ ಬಳಿಕ, ಮೊರಾಕ್ಕೊ ಆಟಗಾರ ಸೋಫಿಯಾನ್ ಬೂಫಾಲ್ ಸ್ಟ್ಯಾಂಡ್‌್ಸನಲ್ಲಿದ್ದ ತಮ್ಮ ತಾಯಿಯನ್ನು ಮೈದಾನಕ್ಕೆ ಕರೆತಂದು ಅವರೊಂದಿಗೆ ಡ್ಯಾನ್ಸ್ ಮಾಡುತ್ತಾ ಸಂಭ್ರಮಿಸಿದರು. ಅವರ ಸಂಭ್ರಮಾಚರಣೆಯ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಮೊರಾಕ್ಕೊ ಮ್ಯಾಜಿಕ್‌ಗೆ ಮಣಿದ ಪೋರ್ಚುಗಲ್!
ಪಂದ್ಯದ 42ನೇ ನಿಮಿಷದಲ್ಲೇ ನೆಸ್ರಿ ಗೋಲು ಗಳಿಸಿ ಮೊರಾಕ್ಕೊಗೆ ಮುನ್ನಡೆ ತಂದುಕೊಟ್ಟರು. ದ್ವಿತೀಯಾರ್ಧದಲ್ಲಿ ರೊನಾಲ್ಡೋ ಕಣಕ್ಕಿಳಿದರೂ ಪೋರ್ಚುಗಲ್‌ನ ಅದೃಷ್ಟಬದಲಾಗಲಿಲ್ಲ. ಸಮಬಲ ಸಾಧಿಸಿ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ಯಲು ಸಹ ಪೋರ್ಚುಗಲ್‌ಗೆ ಸಾಧ್ಯವಾಗಲಿಲ್ಲ. ಮೊದಲ ಸೋಲು: ಪೋರ್ಚುಗಲ್‌ಗೆ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಇದು ಮೊದಲು ಸೋಲು. ಈ ಹಿಂದೆ 1966, 2006ರಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದಾಗ ತಂಡ ಸೆಮೀಸ್ ಪ್ರವೇಶಿಸಿತ್ತು.
ಸೆಮೀಸ್‌ಗೇರಿದ ಆಫ್ರಿಕಾ ಖಂಡದ ಮೊದಲ ತಂಡ!
ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಆಫ್ರಿಕಾ ಖಂಡದ ಮೊದಲ ತಂಡ ಎನ್ನುವ ಹಿರಿಮೆಗೆ ಮೊರಾಕ್ಕೊ ಪಾತ್ರವಾಗಿದೆ. ಈ ಮೊದಲು ಆಫ್ರಿಕಾದ 3 ತಂಡಗಳು ಕ್ವಾರ್ಟರ್ ಫೈನಲ್‌ವರೆಗಷ್ಟೇ ತಲುಪಿದ್ದವು. 1990ರಲ್ಲಿ ಕ್ಯಾಮರೂನ್, 2002ರಲ್ಲಿ ಸೆನೆಗಲ್, 2010ರಲ್ಲಿ ಘಾನಾ ಅಂತಿಮ 8ರ ಸುತ್ತಿನಲ್ಲಿ ಸೋತಿದ್ದವು.
FIFA World Cup ಇಂಗ್ಲೆಂಡ್‌ಗಿಲ್ಲ ಅದೃಷ್ಟ, ಸೆಮೀಸ್‌ಗೆ ಫ್ರಾನ್ಸ್ ಲಗ್ಗೆ..!
ವಿಶ್ವಕಪ್ ಗೆಲ್ಲದೇ ರೊನಾಲ್ಡೋ ವಿದಾಯ?
ಈ ಶತಮಾನದ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರೆನಿಸಿರುವ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವಕಪ್ ಗೆಲ್ಲದೇ ತಮ್ಮ ವೃತ್ತಿಬದುಕು ಮುಕ್ತಾಯಗೊಳಿಸುವುದು ಬಹುತೇಕ ಖಚಿತ. ರೊನಾಲ್ಡೋಗೀಗ 37 ವರ್ಷ ವಯಸ್ಸು. ಅವರೀಗಾಗಲೇ ತಮ್ಮ ವೃತ್ತಿಬದುಕಿನ ಕೊನೆಯ ಹಂತದಲ್ಲಿದ್ದಾರೆ. ಮುಂದಿನ ವಿಶ್ವಕಪ್ ವೇಳೆಗೆ ಅವರಿಗೆ 41 ವರ್ಷ ವಯಸ್ಸಾಗಲಿದ್ದು, ಮತ್ತೊಂದು ವಿಶ್ವಕಪ್ ಆಡುವುದು ತೀರಾ ಅನುಮಾನ.