2026ರ ಫಿಫಾ ವಿಶ್ವಕಪ್‌ನಲ್ಲಿ ನಿರೀಕ್ಷೆ ಮೂಡಿಸಿರುವ 10 ಪ್ರಮುಖ ಆಟಗಾರರ ಪಟ್ಟಿಯನ್ನು ಈ ಲೇಖನವು ಒದಗಿಸುತ್ತದೆ. ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಅನುಭವಿಗಳಿಂದ ಹಿಡಿದು, ಕೀಲಿಯನ್ ಎಂಬಾಪೆ ಮತ್ತು ಲ್ಯಾಮಿನೆ ಯಮಲ್ ಅವರಂತಹ ಯುವ ಸೂಪರ್‌ಸ್ಟಾರ್‌ಗಳವರೆಗೆ, ಈ ಆಟಗಾರರು ಫುಟ್ಬಾಲ್ ಜಗತ್ತನ್ನು ಆಳುವ ಸಾಮರ್ಥ್ಯ ಹೊಂದಿದ್ದಾರೆ.

ನಾಸಿರ್‌ ಸಜಿಪ, ಕನ್ನಡಪ್ರಭ

ಫುಟ್ಬಾಲ್‌ ಎಂದರೆ ಅದು ಬರೀ ತಂಡಗಳ ನಡುವಿನ ಕಾಳಗವಲ್ಲ. ಅಂಗಳದಲ್ಲಿ ಚೆಂಡಿನ ಮೇಲೆ ಹಿಡಿತದ ಜೊತೆಗೆ ಜಾಗತಿಕ ಮಟ್ಟದ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆದ ಆಟಗಾರರ ಮಾಂತ್ರಿಕ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡುವ ಸೂಪರ್‌ ಶೋ. ಅವರ ಆಟವನ್ನು ಕಣ್ತುಂಬಿಕೊಳ್ಳಲು ನಿದ್ದೆ, ಕೆಲಸ ಬಿಟ್ಟು ಕಾತರದಿಂದ ಕಾಯುವ ಫುಟ್ಬಾಲ್‌ ಪ್ರೇಮಿಗಳಿದ್ದಾರೆ. ಈ ಬಾರಿ ಫಿಫಾ ವಿಶ್ವಕಪ್‌ನಲ್ಲೂ ಮ್ಯಾಜಿಕ್‌ ಮಾಡಬಲ್ಲ, ನಿರೀಕ್ಷೆಯ ಭಾರವನ್ನೇ ಹೊತ್ತುಕೊಂಡಿರುವ ಮಾಂತ್ರಿಕ ಆಟಗಾರರಿದ್ದಾರೆ. ಇನ್ನೊಂದಿಷ್ಟು ವರ್ಷ ಫುಟ್ಬಾಲ್‌ ಜಗತ್ತನ್ನು ಆಳುವ ಮುನ್ಸೂಚನೆ ನೀಡಿರುವ ಯುವ ಸೂಪರ್‌ಸ್ಟಾರ್‌ಗಳಿದ್ದಾರೆ. 2026ರ ವಿಶ್ವಕಪ್‌ನಲ್ಲಿ ಭರವಸೆ ಮೂಡಿಸಿರುವ 10 ಆಟಗಾರರ ಪಟ್ಟಿ ‘ಕನ್ನಡಪ್ರಭ’ ನಿಮ್ಮ ಮುಂದಿಡುತ್ತಿದೆ.

ಲಿಯೋನಲ್‌ ಮೆಸ್ಸಿ(ಅರ್ಜೆಂಟೀನಾ)

ಕಳೆದ ಒಂದೂವರೆ ದಶಕದಿಂದ ಫುಟ್ಬಾಲ್‌ ಜಗತ್ತನ್ನು ಆಳುತ್ತಿರುವ, ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಜೆಂಟೀನಾ ದಿಗ್ಗಜ. ಈ ತಲೆಮಾರಿನ ಫುಟ್ಬಾಲ್‌ ಪ್ರೇಮಿಗಳ ಪಾಲಿಗೆ ಇವರೇ ಸೂಪರ್‌ಸ್ಟಾರ್‌. ವೃತ್ತಿ ಬದುಕಿನಲ್ಲಿ 900+ ಗೋಲು, 8 ಬ್ಯಾಲನ್‌ ಡಿ ಓರ್‌ ಪ್ರಶಸ್ತಿ, 44 ಪ್ರಮುಖ ಟ್ರೋಫಿಗಳ ಸರದಾರ. 2022ರಲ್ಲಿ ಅರ್ಜೆಂಟೀನಾವನ್ನು ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿಸುವುದರ ಜೊತೆಗೆ, ತಮ್ಮ ಜೀವನದ ಅತ್ಯಂತ ದೊಡ್ಡ ಕನಸು ನನಸಾಗಿಸಿದ್ದರು. 38 ವರ್ಷದ ಮೆಸ್ಸಿಗೆ ಇದು ಬಹುತೇಕ ಕೊನೆ ವಿಶ್ವಕಪ್‌. ಹೀಗಾಗಿಯೇ ಅವರ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಫಿಫಾ ವಿಶ್ವಕಪ್‌ನಲ್ಲಿ 13 ಗೋಲು ಬಾರಿಸಿದ್ದು, 4ನೇ ಗರಿಷ್ಠ ಎನಿಸಿಕೊಂಡಿದೆ.

ಕ್ರಿಸ್ಟಿಯಾನೊ ರೊನಾಲ್ಡೊ(ಪೋರ್ಚುಗಲ್‌)

ಪೋರ್ಚುಗಲ್‌ನ ತಮ್ಮ ಗ್ರಾಮದಿಂದ ಹಿಡಿದು ಭಾರತದ ಯಾವುದೋ ಕುಗ್ರಾಮ, ಸ್ಲಮ್‌ಗಳ ಜನರನ್ನೂ ಆಯಸ್ಕಾಂತದಂತೆ ಫುಟ್ಬಾಲ್‌ನತ್ತ ಸೆಳೆದ ಈ ತಲೆಮಾರಿನ ಶ್ರೇಷ್ಠ ಫುಟ್ಬಾಲಿಗ. ಫುಟ್ಬಾಲ್‌ನಲ್ಲಿ ಗರಿಷ್ಠ ಗೋಲು(970+) ಬಾರಿಸಿದ ಆಟಗಾರ. ಫುಟ್ಬಾಲ್‌ ಅಂಗಳದಲ್ಲಿ ಬಹುತೇಕ ಎಲ್ಲಾ ಟ್ರೋಫಿಗಳನ್ನು ಗೆದ್ದಿದ್ದರೂ ಅವರಿಗೆ ವಿಶ್ವಕಪ್‌ ಗಗನಕುಸುಮವಾಗಿಯೇ ಉಳಿದಿದೆ. ಅಷ್ಟೇ ಏಕೆ, ಅವರಾಡುವ ಪೋರ್ಚುಗಲ್‌ ತಂಡವೂ ಒಮ್ಮೆ ಕೂಡಾ ಟ್ರೋಫಿ ಗೆದ್ದಿಲ್ಲ. ಹೀಗಾಗಿಯೇ ಈ ಬಾರಿ ಅವರಿಂದ ಫುಟ್ಬಾಲ್‌ ಪ್ರೇಮಿಗಳಿಗೆ ದೊಡ್ಡ ನಿರೀಕ್ಷೆ ಇದೆ. ಮೆಸ್ಸಿಯಂತೆ ರೊನಾಲ್ಡೊ ಅವರಿಗೂ ಇದು ಕೊನೆ ವಿಶ್ವಕಪ್‌ ಆಗುವುದು ಬಹುತೇಕ ಖಚಿತ.

ಕೀಲಿಯನ್‌ ಎಂಬಾಪೆ(ಫ್ರಾನ್ಸ್)

ಈ ಬಾರಿ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿರುವ ಸೂಪರ್‌ಸ್ಟಾರ್‌ಗಳಲ್ಲಿ 27 ವರ್ಷದ ಕೀಲಿಯನ್‌ ಎಂಬಾಪೆಗೆ ಅಗ್ರಸ್ಥಾನ. ಆಕರ್ಷಣೀಯ ವೇಗ, ಚೆಂಡಿನ ಮೇಲಿನ ಪ್ರಬಲ ಹಿಡಿತ, ಅಮೋಘ ಗೋಲ್‌ ಫಿನಿಶಿಂಗ್‌ ಇವರ ಸಾಮರ್ಥ್ಯ. ಕಳೆದ ಬಾರಿ ಫೈನಲ್‌ನಲ್ಲಿ ಹ್ಯಾಟ್ರಿಕ್‌ ಗೋಲಿನ ಮೂಲಕ ಅರ್ಜೆಂಟೀನಾದ ಬೆವರಿಳಿಸಿದ್ದ ಎಂಬಾಪೆ ಈಗ 2ನೇ ವಿಶ್ವಕಪ್‌ ಆಡಲು ಸಜ್ಜಾಗಿದ್ದಾರೆ. ಪ್ರತಿಷ್ಠಿತ ಲಾ ಲಿಗಾ ಲೀಗ್‌ನಲ್ಲಿ ಈ ಬಾರಿ ರಿಯಲ್‌ ಮ್ಯಾಡ್ರಿಡ್‌ ಪರ 25 ಗೋಲು ಬಾರಿಸಿದ್ದು, ಲೀಗ್‌ನ ಅಗ್ರಸ್ಕೋರರ್‌. ಈ ವಿಶ್ವಕಪ್‌ನಲ್ಲಿ ಗೋಲ್ಡನ್‌ ಬೂಟ್‌ ಗೆಲ್ಲುವ ಸಂಭಾವ್ಯ ಆಟಗಾರರಲ್ಲಿ ಎಂಬಾಪೆ ಮುಂಚೂಣಿಯಲ್ಲಿದ್ದಾರೆ.

ಲ್ಯಾಮಿನೆ ಯಮಲ್‌(ಸ್ಪೇನ್‌)

ಫುಟ್ಬಾಲ್‌ ಪ್ರೇಮಿಗಳನ್ನು ಬೆರಗುಗಳಿಸುವಂತಹ ಡ್ರಿಬ್ಲಿಂಗ್‌ ಮತ್ತು ಟ್ಯಾಲೆಂಟ್‌ ಹೊಂದಿರುವ, ‘ಮುಂದಿನ ಮೆಸ್ಸಿ’ ಎಂದೇ ಕರೆಸಿಕೊಳ್ಳುವ 18 ವರ್ಷದ ಯುವ ಸೂಪರ್‌ಸ್ಟಾರ್‌. ಈ ಬಾರಿ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಆಟಗಾರ. ಬ್ಯಾಲನ್‌ ಡಿ’ಓರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಅತಿ ಕಿರಿಯ(17 ವರ್ಷ) ಆಟಗಾರ. ಮೆಸ್ಸಿ ದಶಕಗಳ ಕಾಲ ಬಾರ್ಸಿಲೋನಾ ತಂಡವನ್ನು ಶ್ರೇಷ್ಠ ತಂಡಗಳ ಸಾಲಿನಲ್ಲಿ ನಿಲ್ಲಿಸಿದ್ದರೆ, ಈಗ ಆ ತಂಡಕ್ಕೆ ಯಮಲ್‌ ಆಸ್ತಿ. 2025-26ರಲ್ಲಿ ಬಾರ್ಸಿಲೋನಾ ಪರ 45 ಪಂದ್ಯದಲ್ಲಿ 24 ಗೋಲು, 18 ಅಸಿಸ್ಟ್‌ ಮಾಡಿದ್ದಾರೆ. ಈ ಬಾರಿ ಲಾ ಲಿಗಾ ಲೀಗ್‌ನ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ.

ನೇಯ್ಮರ್‌(ಬ್ರೆಜಿಲ್)

ನೇಯ್ಮರ್‌ ಜೂನಿಯರ್ ಈ ಪೀಳಿಗೆಯ ಅತ್ಯಂತ ಪ್ರತಿಭಾನ್ವಿತ, ಅಷ್ಟೇ ಪ್ರಚಾರದಲ್ಲಿರುವ ಮತ್ತು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಫುಟ್ಬಾಲ್ ಆಟಗಾರರಲ್ಲಿ ಒಬ್ಬರು. ಮೆಸ್ಸಿ, ರೊನಾಲ್ಡೊ ಸಾಲಿನಲ್ಲಿ ಗುರುತಿಸಿಕೊಳ್ಳುವ ಆಟಗಾರನಾಗಿದ್ದರೂ ಗಾಯದ ಸಮಸ್ಯೆ ಅವರನ್ನು ಇನ್ನಿಲ್ಲದಂತೆ ಕಾಡಿದೆ. ಇದರ ಹೊರತಾಗಿಯೂ ಬ್ರೆಜಿಲ್‌ನ ಸಾರ್ವಕಾಲಿಕ ಗರಿಷ್ಠ(79 ಗೋಲು) ಸ್ಕೋರರ್ ಎನಿಸಿಕೊಂಡಿದ್ದಾರೆ. ಈ ಬಾರಿ ಅವರು ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದರೂ ಗಾಯದ ಸಮಸ್ಯೆಯಿಂದಾಗಿ ಅವರು ಆಡುವುದೇ ಅನುಮಾನ ಎನ್ನಲಾಗುತ್ತಿದೆ. ಆಡಿದರೆ ಬ್ರೆಜಿಲ್‌ಗೆ ಬಲ ತುಂಬುವುದು ಖಚಿತ.

ಎರ್ಲಿಂಗ್‌ ಹಾಲಂಡ್‌(ನಾರ್ವೆ)

ಆಧುನಿಕ ಫುಟ್ಬಾಲ್‌ನ ಅಸಾಧಾರಣ ಸ್ಟ್ರೈಕರ್‌ಗಳಲ್ಲಿ ಒಬ್ಬರೆಂದು ಕರೆಸಿಕೊಳ್ಳುವ ನಾರ್ವೆಯ ಸ್ಟಾರ್‌ ಫುಟ್ಬಾಲಿಗ ಎರ್ಲಿಂಗ್‌ ಹಾಲಂಡ್‌. ಚೆಂಡನ್ನು ತಮ್ಮ ಚಾಕಚಕ್ಯತೆಯಿಂದ ಅತ್ಯಾಕರ್ಷಕವಾಗಿ ಗೋಲು ಪೆಟ್ಟಿಗೆಗೆ ಸೇರಿಸುವ ವಿಶೇಷ ಪ್ರತಿಭೆ. ಎತ್ತರ(6.4), ವೇಗ, ಶಕ್ತಿ, ದೇಹ ಸಾಮರ್ಥ್ಯ...ಹೀಗೆ ಫುಟ್ಬಾಲಿಗನಿಗೆ ಏನೆಲ್ಲಾ ಬೇಕೊ ಅದೆಲ್ಲವನ್ನೂ ಹೊಂದಿರುವ ತಾರಾ ಆಟಗಾರ. ಪ್ರೀಮಿಯರ್‌ ಲೀಗ್‌ನಲ್ಲಿ ವೇಗವಾಗಿ 100 ಗೋಲು(111 ಪಂದ್ಯ) ಗಳಿಸಿದ ಫುಟ್ಬಾಲಿಗ. 2025-26ರಲ್ಲಿ ಮ್ಯಾಚೆಂಸ್ಟರ್‌ ಸಿಟಿ ಪರ 27 ಗೋಲು, 8 ಅಸಿಸ್ಟ್‌ ಮಾಡಿದ್ದಾರೆ. ಅವರು ನಾರ್ವೆ ತಂಡದಲ್ಲೂ ಮಿಂಚು ಹರಿಸಿದ್ದು, ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತ್ಯಂತ ವೇಗವಾಗಿ 50 ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯಿದೆ.

--

ಹ್ಯಾರಿ ಕೇನ್‌(ಇಂಗ್ಲೆಂಡ್‌)

ಇಂಗ್ಲೆಂಡ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲಿಗರಲ್ಲಿ ಒಬ್ಬರು ಹ್ಯಾರಿ ಕೇನ್‌. ಈಗ ವಯಸ್ಸು 32 ವರ್ಷ. ಇಂಗ್ಲೆಂಡ್‌ನ ಗರಿಷ್ಠ ಗೋಲ್‌ ಸ್ಕೋರರ್‌(79). ವೃತ್ತಿಪರ ಫುಟ್ಬಾಲ್‌ನಲ್ಲಿ 500 ಗೋಲು ಬಾರಿಸಿದ ಮೊದಲ ಇಂಗ್ಲೆಂಡ್‌ ಆಟಗಾರ. ಟೊಟೆನ್‌ಹ್ಯಾಮ್‌ ಕ್ಲಬ್‌ನ ಗರಿಷ್ಠ ಸ್ಕೋರರ್‌(280 ಗೋಲು). ಗೋಲು ಗಳಿಕೆ ಮಾತ್ರವಲ್ಲದೆ ಚೆಂಡು ಪಾಸ್‌, ಗೋಲಿನ ಅವಕಾಶ ಸೃಷ್ಟಿಸುವುದರಲ್ಲಿ ಕೇನ್‌ ಅದ್ವಿತೀಯ ಆಟಗಾರ. ಎರಡೂ ಕಾಲು, ಹೆಡರ್‌ ಮೂಲಕವೂ ಗೋಲು ಬಾರಿಸುವ ಸಾಮರ್ಥ್ಯವಿದೆ. 2018ರ ಫಿಫಾ ವಿಶ್ವಕಪ್‌ನಲ್ಲಿ ಗೋಲ್ಡನ್‌ ಬೂಟ್‌ ವಿಜೇತ ಕೇನ್‌, ಈ ಬಾರಿಯೂ ಮ್ಯಾಜಿಕ್‌ ಮಾಡಬಲ್ಲರೇ ಎಂಬುದನ್ನು ಕಾದು ನೋಡಬೇಕು.

ವಿನೀಶಿಯಸ್‌ ಜೂನಿಯರ್‌(ಬ್ರೆಜಿಲ್‌)

ಫುಟ್ಬಾಲ್‌ ಅಂಗಳದ ಅತ್ಯಂತ ಚುರುಕಿನ ಹಾಗೂ ಮಿಂಚಿನ ಆಟಗಾರ. ಹೈ ಸ್ಪೀಡ್‌ ಮತ್ತು ಪಂದ್ಯದ ಮೇಲಿನ ಬಿಗ್‌ ಇಂಪ್ಯಾಕ್ಟ್‌ ಅವರ ಐಡೆಂಟಿಟಿ. 25 ವರ್ಷದ ವಿನೀಶಿಯಸ್‌ ಈ ಬಾರಿ ಬ್ರೆಜಿಲ್‌ ತಂಡದ ಅತ್ಯಂತ ಪ್ರಮುಖ ಆಟಗಾರ. 2025-26ರ ಲಾ ಲಿಗಾ ಆವೃತ್ತಿಯಲ್ಲಿ 16 ಗೋಲು, 5 ಅಸಿಸ್ಟ್‌ ಮಾಡಿದ್ದಾರೆ. ರಿಯಲ್‌ ಮ್ಯಾಡ್ರಿಡ್‌ ತಂಡಕ್ಕೆ ಚಾಂಪಿಯನ್ಸ್‌ ಲೀಗ್‌, ಲಾ ಲಿಗಾ ಸೇರಿ ಪ್ರಮುಖ ಟ್ರೋಫಿ ಗೆಲ್ಲಿಸಿಕೊಟ್ಟಿರುವ ಪ್ರತಿಭಾವಂತ ಫುಟ್ಬಾಲಿಗ. ಈ ಬಾರಿ ವಿಶ್ವಕಪ್‌ನಲ್ಲಿ ರೋಡ್ರಿಗೋ ಸಿಲ್ವ ಹಾಗೂ ಎಂಡ್ರಿಕ್‌ ಜೊತೆಗೂಡಿ ಬ್ರೆಜಿಲ್‌ ತಂಡಕ್ಕೆ ಕಪ್ ಗೆಲ್ಲಿಸಿಕೊಡುವ ಭರವಸೆ ಹುಟ್ಟಿಸಿದ್ದಾರೆ.

ಜುಡ್‌ ಬೆಲ್ಲಿಂಗ್‌ಹ್ಯಾಮ್‌(ಇಂಗ್ಲೆಂಡ್‌)

ಸದ್ಯ ಫುಟ್ಬಾಲ್‌ ಅಂಗಳದಲ್ಲಿ ಶ್ರೇಷ್ಠ ಮತ್ತು ಪರಿಪೂರ್ಣ ಆಟಗಾರರಲ್ಲಿ ಒಬ್ಬರು ಬೆಲ್ಲಿಂಗ್‌ಹ್ಯಾಮ್‌. ಎಲ್ಲಾ ಮಾದರಿಯಲ್ಲೂ ಪಂದ್ಯದ ಮೇಲೆ ಇಂಪ್ಯಾಕ್ಟ್‌ ಮಾಡಬಲ್ಲ 22ವರ್ಷದ ಯುವ ತಾರೆ. ಮನಮೋಹಕ ಡ್ರಿಬ್ಲಿಂಗ್‌, ವೇಗದ ರನ್‌, ನಿಖರ ಪಾಸ್‌, ಮಿಂಚಿನ ಟ್ಯಾಕಲ್‌, ಬಲಿಷ್ಠ ಹೊಡೆತ ಇವರ ಪ್ಲಸ್‌ ಪಾಯಿಂಟ್‌. 2024ರ ಬ್ಯಾಲನ್‌ ಡಿ’ಓರ್‌ ಪ್ರಶಸ್ತಿ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದರು. ಫೀಲ್ಡ್‌ನಲ್ಲಿ ಅವರ ಎನರ್ಜಿಗೆ ಸರಿಸಾಟಿಯಾಗಬಲ್ಲ ಆಟಗಾರರು ತೀರಾ ಕಡಿಮೆ. ರಿಯಲ್‌ ಮ್ಯಾಡ್ರಿಡ್‌ ತಂಡದ ಸ್ಟಾರ್‌ ಆಟಗಾರರಲ್ಲಿ ಒಬ್ಬರಾಗಿರುವ ಬೆಲ್ಲಿಂಗ್‌ಹ್ಯಾಮ್‌, ಈ ಬಾರಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡದ ಟ್ರಂಪ್‌ಕಾರ್ಡ್‌ ಆಗುವುದರಲ್ಲಿ ಅನುಮಾನವಿಲ್ಲ.

-ಒಸ್ಮಾನ್‌ ಡಾಂಬೆಲೆ(ಫ್ರಾನ್ಸ್)

ಮೆಸ್ಸಿ, ರೊನಾಲ್ಡೋ ಯುಗದಲ್ಲಿ ಬ್ಯಾಲನ್‌ ಡಿ’ಓರ್‌ ಪ್ರಶಸ್ತಿ(2025) ಗೆದ್ದ ಅಪರೂಪದ, ಅಷ್ಟೇ ಆಕ್ರಮಣಕಾರಿ ಆಟಗಾರ ಒಸ್ಮಾನ್‌ ಡಾಂಬೆಲೆ. ಗೋಲಿನ ಅವಕಾಶವೇ ಇಲ್ಲದಿದ್ದ ಸಂದರ್ಭದಲ್ಲೂ ಚೆಂಡನ್ನು ಗೋಲು ಪೆಟ್ಟಿಗೆಯತ್ತ ಕೊಂಡೊಯ್ಯಬಲ್ಲ, ಯಾವುದೇ ಶ್ರೇಷ್ಠ ಡಿಫೆಂಡರ್‌ಗೂ ಸವಾಲೊಡ್ಡಬಲ್ಲ ಫುಟ್ಬಾಲ್‌ ಅಂಗಳದ ಚಿರತೆ. 2018ರಲ್ಲಿ ವಿಶ್ವಕಪ್‌ ಗೆದ್ದ ತಂಡದಲ್ಲಿದ್ದ ಡಾಂಬೆಲೆ, ಈ ಬಾರಿ ಎಂಬಾಪೆ ಜೊತೆಗೂಡಿ ಮತ್ತೊಮ್ಮೆ ಮ್ಯಾಜಿಕ್‌ ಮಾಡಲು ಕಾಯುತ್ತಿದ್ದಾರೆ. ಈ ವಿಶ್ವಕಪ್‌ನಲ್ಲಿ ಗೋಲ್ಡನ್‌ ಬಾಲ್‌ ಗೆಲ್ಲುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ 29 ವರ್ಷದ ಡಾಂಬೆಲೆ ಮುಂಚೂಣಿಯಲ್ಲಿದ್ದಾರೆ.