2026ರ ಫಿಫಾ ವಿಶ್ವಕಪ್‌ನ ಟಿಕೆಟ್ ದರಗಳು ಲಕ್ಷಗಳನ್ನು ದಾಟಿದ್ದು, ಫೈನಲ್ ಪಂದ್ಯದ ಟಿಕೆಟ್‌ಗೆ ₹10 ಲಕ್ಷಕ್ಕೂ ಅಧಿಕ ಬೆಲೆ ನಿಗದಿಪಡಿಸಲಾಗಿದೆ. ಇದರೊಂದಿಗೆ, ವಾಹನ ಪಾರ್ಕಿಂಗ್ ಪಾಸ್‌ಗಳು ಮತ್ತು ಕೆಲವು ದೇಶಗಳ ಪ್ರೇಕ್ಷಕರಿಗೆ ವಿಧಿಸಲಾಗಿರುವ ದುಬಾರಿ ವೀಸಾ ಠೇವಣಿ ಪಂದ್ಯ ವೀಕ್ಷಣೆಯನ್ನು ಅತ್ಯಂತ ದುಬಾರಿಯಾಗಿಸಿದೆ.

ನ್ಯೂಯಾರ್ಕ್: 2026ರ ಜೂನ್‌-ಜುಲೈನಲ್ಲಿ ಅಮೆರಿಕ, ಮೆಕ್ಸಿಕೋ, ಕೆನಡಾದಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್‌ ವಿಶ್ವಕಪ್‌ನ ಟಿಕೆಟ್‌, ಪಾರ್ಕಿಂಗ್ ಪಾಸ್ ಬೆಲೆ ನೋಡಿದರೆ ನೀಡಿ ಬೆರಗಾಗುವುದು ಖಚಿತ. ಬಹುತೇಕ ಪಂದ್ಯಗಳ ಟಿಕೆಟ್‌ ಬೆಲೆ ಲಕ್ಷ ದಾಟುತ್ತಿದ್ದು, ಪಾರ್ಕಿಂಗ್‌ ಪಾಸ್‌ ಬೆಲೆ ಕೂಡಾ ಗಗನಕ್ಕೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೂ.11ರ ವಿಶ್ವಕಪ್‌ ಉದ್ಘಾಟನಾ ಪಂದ್ಯದ ಕೆಟಗರಿ-1 ಟಿಕೆಟ್‌ ಬೆಲೆ ₹2.76 ಲಕ್ಷ ಇದೆ. ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್‌ ಪಂದ್ಯಕ್ಕೆ ಕೆಟಗರಿ-1 ಟಿಕೆಟ್‌ ಮೌಲ್ಯ 10,999 ಅಮೆರಿಕನ್‌ ಡಾಲರ್‌(ಸುಮಾರು 10.18 ಲಕ್ಷ ರು.) ಇದೆ. ಇದೇ ಪಂದ್ಯದ ಕೆಟಗರಿ-2 ಟಿಕೆಟ್‌ಗೆ ₹4.88 ಲಕ್ಷ, ಕೆಟಗರಿ-3 ಟಿಕೆಟ್‌ಗೆ ₹5.35 ಲಕ್ಷ ಬೆಲೆ ನಿಗದಿಪಡಿಸಲಾಗಿದೆ.

ಪಾರ್ಕಿಂಗ್‌ ದುಬಾರಿ:

ಅಮೆರಿಕದ ಕ್ರೀಡಾಂಗಣದಲ್ಲಿ ವಾಹನ ಪಾರ್ಕಿಂಗ್‌ ವೆಚ್ಚ ದುಬಾರಿಯಾಗಿದೆ. ಕ್ಯಾಲಿಫೋರ್ನಿಯಾ ಕ್ರೀಡಾಂಗಣದ ಪಾರ್ಕಿಂಗ್‌ ಪಾಸ್‌ ಬೆಲೆ ₹27,821 ಇದೆ. ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಇದರ ಬೆಲೆ ₹20,866. ಇನ್ನು, ಹಾಸ್ಟನ್‌ ಕ್ರೀಡಾಂಗಣದಲ್ಲಿ ದೊಡ್ಡ ವಾಹನ ಪಾರ್ಕಿಂಗ್‌ ಮಾಡಬೇಕಿದ್ದರೆ ₹64,917 ಪಾವತಿಸಬೇಕಾಗುತ್ತದೆ. ಬಹುತೇಕ ಕ್ರೀಡಾಂಗಣಗಳ ಪಾರ್ಕಿಂಗ್‌ ಬೆಲೆ, ಭಾರತದ ಅಹಮದಾಬಾದ್‌ನಲ್ಲಿ ಐಪಿಎಲ್‌ ಫೈನಲ್‌ ಪಂದ್ಯದ 9 ಸಾಮಾನ್ಯ ಟಿಕೆಟ್‌ಗಳಿಗಿಂತಲೂ ಹೆಚ್ಚಿರುವುದು ಗಮನಾರ್ಹ.

ಕೆಲ ವಿದೇಶಿಗರಿಗೆ ₹14 ಲಕ್ಷ ಠೇವಣಿ!

ಅಮೆರಿಕದಲ್ಲಿ ಈ ಬಾರಿ ವಿಶ್ವಕಪ್‌ ಪಂದ್ಯ ವೀಕ್ಷಿಸಬೇಕಿದ್ದರೆ ಕೆಲ ವಿದೇಶಿಗರು ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ. ಅಲ್ಜೀರಿಯಾ, ಗ್ರೆನಡಾ, ಭೂತಾನ್‌, ಜಿಂಬಾಬ್ವೆ ಸೇರಿ 50 ದೇಶಗಳ ಜನರು ಅಮೆರಿಕ ಪ್ರವೇಶಕ್ಕೆ ಪ್ರವಾಸಿ ವೀಸಾ ಪಡೆಯಲು 15000 ಡಾಲರ್‌(ಅಂದಾಜು ₹13.9 ಲಕ್ಷ) ಠೇವಣಿ ಪಾವತಿಸಬೇಕು. ಹೀಗಾಗಿ, ಅಲ್ಜೀರಿಯಾ, ಸೆನೆಗಲ್‌ ಸೇರಿದಂತೆ ಈ ಬಾರಿ ವಿಶ್ವಕಪ್‌ ಆಡುವ ಕೆಲ ತಂಡಗಳ ಅಭಿಮಾನಿಗಳು ಅಮೆರಿಕದಲ್ಲಿ ಪಂದ್ಯ ವೀಕ್ಷಿಸಲು ಸುಮಾರು ₹20 ಲಕ್ಷ(ಟಿಕೆಟ್‌ ಸೇರಿ) ಹೊಂದಿರಬೇಕಾಗುತ್ತದೆ.

ಗೋವಾದ ವಿರುದ್ಧ 2-0 ಗೋಲಲ್ಲಿ ಗೆದ್ದ ಬಿಎಫ್‌ಸಿ

ಮಡ್ಗಾಂವ್‌: ಇಂಡಿಯನ್‌ ಸೂಪರ್ ಲೀಗ್‌(ಐಎಸ್‌ಎಲ್‌) ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ 4ನೇ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಶನಿವಾರ ತಂಡ ಎಫ್‌ಸಿ ಗೋವಾ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯಗಳಿಸಿತು. ಇದರೊಂದಿಗೆ ತಂಡ 7 ಪಂದ್ಯಗಳಲ್ಲಿ 14 ಅಂಕ ಗಳಿಸಿದೆ. ಗೋವಾ 7 ಪಂದ್ಯಗಳಲ್ಲಿ ಮೊದಲ ಸೋಲು ಕಂಡಿದೆ. ತಂಡ 2ರಲ್ಲಿ ಗೆದ್ದು, 4ರಲ್ಲಿ ಡ್ರಾ ಮಾಡಿಕೊಂಡಿದೆ.

ಪಂದ್ಯದಲ್ಲಿ ಬಿಎಫ್‌ಸಿ ಪರ ಸುನಿಲ್‌ ಚೆಟ್ರಿ 3ನೇ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ಒದಗಿಸಿದರು. ಬಳಿಕ ಹೆಚ್ಚುವರಿ ಸಮಯದಲ್ಲಿ ನಮ್ಗ್ಯಾಲ್‌ ಭುಟಿಯಾ ದಾಖಲಿಸಿದ ಗೋಲು ಬಿಎಫ್‌ಸಿ ಗೆಲುವಿನ ಅಂತರ ಹೆಚ್ಚಿಸಿತು. ಬಿಎಫ್‌ಸಿ ತನ್ನ ಮುಂದಿನ ಪಂದ್ಯದಲ್ಲಿ ಏ.11ರಂದು ಕಂಠೀರವ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್‌ ವಿರುದ್ಧ ಆಡಲಿದೆ.