ಮಧ್ಯಪ್ರದೇಶದ ಫುಟ್‌ಬಾಲ್ ಕೋಚ್ ಪರಮ್, 10 ಲಕ್ಷ ರೂ. ವೈಯಕ್ತಿಕ ಸಾಲ ಮಾಡಿ ಗ್ರಾಮೀಣ ಹೆಣ್ಣುಮಕ್ಕಳಿಗೆ ತರಬೇತಿ ನೀಡಿದ್ದಾರೆ. ಅವರ ನಿಸ್ವಾರ್ಥ ಪ್ರಯತ್ನದ ಫಲವಾಗಿ, 'ಡಿಸ್ಟ್ರಿಕ್ಟ್ ರೈಸೇನ್ ಫುಟ್‌ಬಾಲ್ ಕ್ಲಬ್' ಇಂಡಿಯನ್ ವುಮೆನ್ಸ್ ಲೀಗ್ (IWL) ಟೈಯರ್-2 ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ.

ರೈಸೇನ್ (ಮಧ್ಯಪ್ರದೇಶ): ಇದು ಕೇವಲ ಕ್ರೀಡೆಯ ಸುದ್ದಿಯಲ್ಲ, ಗುರಿ ತಲುಪುವ ಛಲ ಮತ್ತು ಗುರುವಿನ ನಿಸ್ವಾರ್ಥ ಸೇವೆಯ ಅದ್ಭುತ ಗಾಥೆ. ಮಧ್ಯಪ್ರದೇಶದ 36 ವರ್ಷದ ಫುಟ್‌ಬಾಲ್ ಕೋಚ್ ಒಬ್ಬರು ಬರೋಬ್ಬರಿ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲ ಮಾಡಿ, ಗ್ರಾಮೀಣ ಭಾಗದ ಬಡ ಹೆಣ್ಣುಮಕ್ಕಳಿಗೆ ತರಬೇತಿ ನೀಡಿದ್ದಾರೆ. ಅವರ ಈ ಸಾಹಸಕ್ಕೆ ಪ್ರತಿಫಲ ಎಂಬಂತೆ, ಈ ತಂಡವು ಈಗ ಇಂಡಿಯನ್ ವುಮೆನ್ಸ್ ಲೀಗ್ (IWL) ಟೈಯರ್-2 ಕ್ಕೆ ಐತಿಹಾಸಿಕ ಪ್ರವೇಶ ಪಡೆದಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಎನ್‌ಐಎಸ್ (NIS) ಪ್ರಮಾಣಿತ ಕೋಚ್ ಆಗಿರುವ ಪರಮ್ ಎಂಬುವವರು ರೈಸೇನ್ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿಭಾನ್ವಿತ ಹೆಣ್ಣುಮಕ್ಕಳ ಬೆನ್ನಿಗೆ ನಿಂತವರು. ಯಾವುದೇ ಕಂಪನಿಗಳ ಬೆಂಬಲ ಇಲ್ಲದಿದ್ದರೂ ಎದೆಗುಂದದ ಪರಮ್, ಫುಟ್‌ಬಾಲ್‌ ಪ್ಲೇಯರ್‌ ಕಿಟ್‌, ಪ್ರಯಾಣದ ವೆಚ್ಚ ಮತ್ತು ತರಬೇತಿ ಶಿಬಿರಗಳಿಗಾಗಿ ತಮ್ಮ ಸ್ವಂತ ಹೆಸರಿನಲ್ಲಿ 10 ಲಕ್ಷ ರೂ. ಸಾಲ ಮಾಡಿದರು. ಸಂಪನ್ಮೂಲಗಳ ಕೊರತೆಯಿಂದ ಪ್ರತಿಭೆಗಳು ಕಮರಿ ಹೋಗಬಾರದು ಎಂಬುದು ಅವರ ಏಕೈಕ ಉದ್ದೇಶವಾಗಿತ್ತು. ಅವರ ಈ ರಿಸ್ಕ್ ಈಗ 'ಡಿಸ್ಟ್ರಿಕ್ಟ್ ರೈಸೇನ್ ಫುಟ್‌ಬಾಲ್ ಕ್ಲಬ್' (DRFC) ಐಡಬ್ಲ್ಯೂಎಲ್ ಕ್ವಾಲಿಫೈಯರ್‌ನಲ್ಲಿ ನೀಡಿದ ಭರ್ಜರಿ ಪ್ರದರ್ಶನದ ಮೂಲಕ ಸಾರ್ಥಕವಾಗಿದೆ.

ಒಡಿಶಾ ವಿರುದ್ಧದ ಗೆಲುವು ಐತಿಹಾಸಿಕ

ಬಲಿಷ್ಠ ಮತ್ತು ಅನುಭವಿ ತಂಡಗಳ ವಿರುದ್ಧ ಸೆಣಸಾಡಿದ DRFC, ತನ್ನ ಪೂಲ್‌ನಲ್ಲಿ ಒಂದು ಗೆಲುವು ಮತ್ತು ಒಂದು ಡ್ರಾ ಸಾಧಿಸುವ ಮೂಲಕ ಜಂಟಿ ಮೂರನೇ ಸ್ಥಾನ ಪಡೆಯಿತು. ವಿಶೇಷವಾಗಿ, ಬಲಿಷ್ಠ 'ಒಡಿಶಾ ಎಫ್‌ಸಿ' ತಂಡವನ್ನು 1-0 ಅಂತರದಿಂದ ಸೋಲಿಸಿದ್ದು ಎಲ್ಲರ ಗಮನ ಸೆಳೆದಿದೆ. ಈ ಪಂದ್ಯದಲ್ಲಿ ಸೋನಿ ಮುಂಡಾ ಹೊಡೆದ ನಿರ್ಣಾಯಕ ಗೋಲು, ಅಡೆತಡೆಗಳ ವಿರುದ್ಧ ತಂಡ ಸಾಧಿಸಿದ ಜಯದ ಸಂಕೇತವಾಗಿ ಹೊರಹೊಮ್ಮಿತು.

ಆಟಗಾರ್ತಿಯರ ಪಾಲಿನ 'ಸ್ಪೂರ್ತಿ' ಪರಮ್

ತಂಡದ ಆಟಗಾರ್ತಿಯರಿಗೆ ಇದು ಕೇವಲ ಫುಟ್‌ಬಾಲ್ ಗೆಲುವಲ್ಲ, ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿದ ಕ್ಷಣ. "ಯಾರೂ ನಮ್ಮನ್ನು ನಂಬದಿದ್ದಾಗ ಪರಮ್ ಸರ್ ನಮ್ಮನ್ನು ನಂಬಿದರು" ಎಂದು ಆಟಗಾರ್ತಿಯರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಮುಂದಿನ ಸೀಸನ್‌ನಲ್ಲಿ ಪ್ರಶಸ್ತಿ ಗೆಲ್ಲುವುದೇ ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.

ಸಾಲದ ಬಗ್ಗೆ ಕೋಚ್ ಹೇಳಿದ್ದೇನು?

ತಮ್ಮ ಮೇಲಿರುವ ಹಣಕಾಸಿನ ಹೊರೆಯ ಬಗ್ಗೆ ಪರಮ್ ಅವರಿಗೆ ಕಿಂಚಿತ್ತೂ ಚಿಂತೆಯಿಲ್ಲ. "ನಾನು ಈ ಸಾಲವನ್ನು ಹೇಗೆ ತೀರಿಸುತ್ತೇನೆ ಎಂದು ನನಗೂ ಗೊತ್ತಿಲ್ಲ, ಆದರೆ ಅದು ಗೌಣ. ಈ ಹೆಣ್ಣುಮಕ್ಕಳಿಗೆ ಒಂದು ಅವಕಾಶ ನೀಡುವುದು ನನಗೆ ಮುಖ್ಯ. ತಂಡದ ಬೆಳವಣಿಗೆಗಾಗಿ ನಾನು ಮತ್ತಷ್ಟು ಸಾಲ ಮಾಡಲು ಸಿದ್ಧನಿದ್ದೇನೆ" ಎಂದು ಅವರು ವೃತ್ತಿಪರ ಬದ್ಧತೆ ಮೆರೆದಿದ್ದಾರೆ. ಮಧ್ಯಪ್ರದೇಶ ಫುಟ್‌ಬಾಲ್ ಸಂಸ್ಥೆಯು DRFC ಸಾಧನೆಯನ್ನು ರಾಜ್ಯದ ಮಹಿಳಾ ಫುಟ್‌ಬಾಲ್ ಇತಿಹಾಸದ ಮೈಲಿಗಲ್ಲು ಎಂದು ಬಣ್ಣಿಸಿದೆ. ಕೇವಲ ಹಣವೊಂದೇ ಸಾಧನೆಗೆ ಮಾನದಂಡವಲ್ಲ, ದೃಢಸಂಕಲ್ಪವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈ ತಂಡವೇ ಸಾಕ್ಷಿಯಾಗಿದೆ.