ಫಿಫಾ ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲೇ ಕೇಪ್ ವರ್ಡೆ, ಮಾಜಿ ಚಾಂಪಿಯನ್ ಸ್ಪೇನ್ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿ ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ, ಐವರಿ ಕೋಸ್ಟ್ ತಂಡ ಈಕ್ವೆಡಾರ್ ವಿರುದ್ಧ ಅಂತಿಮ ಕ್ಷಣದಲ್ಲಿ ಗೋಲು ಬಾರಿಸಿ ಗೆದ್ದರೆ, ಸ್ವೀಡನ್ ತಂಡ ಟ್ಯುನೀಶಿಯಾ ವಿರುದ್ಧ 5-1 ಗೋಲುಗಳ ಭರ್ಜರಿ ಜಯ ದಾಖಲಿಸಿದೆ.

ಅಟ್ಲಾಂಟ(ಅಮೆರಿಕ): ಪಿಫಾ ವಿಶ್ವಕಪ್‌ನಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲೇ ಕೇಪ್‌ ವರ್ಡೆ ಅಸಾಧಾರಣ ಪ್ರದರ್ಶನ ನೀಡಿದೆ. ಸೋಮವಾರ ರಾತ್ರಿ ಮಾಜಿ ಚಾಂಪಿಯನ್‌ ಸ್ಪೇನ್‌ ವಿರುದ್ಧ ಆಫ್ರಿಕಾದ ದೇಶ ಗೋಲುರಹಿತ(0-0) ಡ್ರಾ ಸಾಧಿಸಿದೆ. ಇದು ವಿಶ್ವ ನಂ.3 ಸ್ಪೇನ್‌ ತಂಡದ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದ್ದು, ಭಾರೀ ನಿರಾಸೆಯೊಂದಿಗೆ ವಿಶ್ವಕಪ್‌ಗೆ ಕಾಲಿಟ್ಟಂತಾಗಿದೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಕೇಪ್‌ ವರ್ಡೆ ತಂಡದಿಂದ ಈ ರೀತಿ ಪ್ರದರ್ಶನ ಬಹುತೇಕರು ಊಹಿಸಿರಲಿಲ್ಲ. ಆದರೆ ಪಂದ್ಯದ ಆರಂಭದಿಂದಲೂ ಸ್ಪೇನ್‌ನ ಗೋಲು ಗಳಿಕೆಯ ಎಲ್ಲಾ ಹಾದಿಯನ್ನು ಕೇಪ್‌ ವರ್ಡೆ ಡಿಫೆಂಡರ್‌ಗಳು ಬಂದ್‌ ಮಾಡಿದರು. ಅದರಲ್ಲೂ ತಂಡದ ಗೋಲ್‌ಕೀಪರ್‌, 40 ವರ್ಷದ ವೊಜಿನ್ಹಾ ಗೋಲು ಪೆಟ್ಟಿಗೆಯ ಮುಂದೆ ಬಂಡೆಯಂತೆ ನಿಂತು ಸ್ಪೇನ್‌ನ ಹೊಡೆತಗಳನ್ನು ತಡೆದರು. ಪಂದ್ಯದಲ್ಲಿ ಅವರು 7 ಗೋಲು ಅವಕಾಶ ಸೇರಿದಂತೆ ಒಟ್ಟು 23 ಶಾಟ್‌ಗಳನ್ನು ರಕ್ಷಿಸಿ, ಕೇಪ್‌ ವರ್ಡೆಯನ್ನು ಸೋಲಿನಿಂದ ಕಾಪಾಡಿದರು. ಗೆಲ್ಲುವುದಕ್ಕಿಂತ ಸೋಲು ತಪ್ಪಿಸುವುದು ಮುಖ್ಯ ಎಂಬ ಸ್ಪಷ್ಟ ಗುರಿಯೊಂದಿಗೆ ಕಣಕ್ಕಿಳಿದಂತಿದ್ದ ಕೇಪ್‌ ವರ್ಡೆ, ಡಿಫೆಂಡಿಂಗ್‌ನತ್ತ ಹೆಚ್ಚಿನ ಗಮನ ಹರಿಸಿ ಅದರಲ್ಲಿ ಯಶಸ್ವಿಯಾಯಿತು.

ಈಕ್ವೆಡಾರ್‌ ವಿರುದ್ಧ 1-0 ಗೋಲಲ್ಲಿ ಗೆದ್ದು ಐವರಿ ಕೋಸ್ಟ್‌ ಶುಭಾರಂಭ

ಫಿಲಿಡೆಲ್ಫಿಯಾ: 90ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಈಕ್ವೆಡಾರ್‌ ವಿರುದ್ಧ ಐವರಿ ಕೋಸ್ಟ್‌ ತಂಡ 1-0 ಅಂತರದಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಈಕ್ವೆಡಾರ್‌ನ ಸತತ 19 ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್‌ ಬಿತ್ತು.

ಸೋಮವಾರ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಉಭಯ ತಂಡಗಳಿಂದ ಗೋಲು ಗಳಿಕೆಗೆ ಪ್ರಬಲ ಪೈಪೋಟಿ ಎದುರಾದವು. ಮೊದಲಾರ್ಧದಲ್ಲೇ ಈಕ್ವೆಡಾರ್‌ನ 2 ಹೊಡೆತಗಳು ಗೋಲು ಕಂಬಕ್ಕೆ ಬಿದ್ದಿದ್ದರಿಂದ ಖಾತೆ ತೆರೆಯಲಾಗಲಿಲ್ಲ. 2ನೇ ಅವಧಿಯಲ್ಲೂ ಸಾಕಷ್ಟು ಹೋರಾಟ ಕಂಡುಬಂದರೂ ಪಂದ್ಯದ ಮೊದಲು ಗೋಲು ದಾಖಲಾಗಿದ್ದು 90ನೇ ನಿಮಿಷದಲ್ಲಿ. ಅಮಡ್‌ ಡಿಯಾಲೊ ಬಾರಿಸಿದ ಗೋಲಿನಿಂದಾಗಿ ಐವರಿ ಕೋಸ್ಟ್ ಶುಭಾರಂಭ ಮಾಡಿತು. ಈಕ್ವೆಡಾರ್‌ ಇದೇ ಮೊದಲ ಬಾರಿ ವಿಶ್ವಕಪ್‌ ಆಡುತ್ತಿದ್ದರೆ, ಐವರಿ ಕೋಸ್ಟ್‌ಗೆ ಇದು 4ನೇ ವಿಶ್ವಕಪ್‌.

ಟ್ಯುನೀಶಿಯಾ ವಿರುದ್ಧ ಸ್ವೀಡನ್‌ಗೆ 5-1 ಜಯ

ಮಾಂಟೆರಿ(ಮೆಕ್ಸಿಕೊ): ಯಾಸಿನ್‌ ಅಯಾರಿ ಅವಳಿ ಗೋಲಿನ ನೆರವಿನಿಂದ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಸ್ವೀಡನ್‌ ತಂಡ ಭರ್ಜರಿ ಶುಭಾರಂಭ ಮಾಡಿದೆ. ತಂಡ ಸೋಮವಾರ ಟ್ಯುನೀಶಿಯಾ ವಿರುದ್ಧ 5-1 ಗೋಲುಗಳಿಂದ ಗೆಲುವು ಸಾಧಿಸಿತು.

ಪಂದ್ಯದ 7ನೇ ನಿಮಿಷದಲ್ಲೇ ಗೋಲು ಬಾರಿಸಿದ ಯಾಸಿನ್‌, ಹೆಚ್ಚುವರಿ (90+6) ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ಗೆಲುವಿನ ರೂವಾರಿಯಾದರು. ಇದರ ಮಧ್ಯೆ ಅಲೆಕ್ಸಾಂಡರ್‌ ಐಸಾಕ್‌ 30ನೇ ನಿಮಿಷದಲ್ಲಿ ಬಾರಿಸಿದ ಗೋಲು ಸ್ವೀಡನ್‌ಗೆ 2-1 ಮುನ್ನಡೆ ಒದಗಿಸಿದರೆ, ಟ್ಯುನೀಶಿಯಾದ ಓಮರ್‌ ರೆಕಿಕ್‌ 43ನೇ ನಿಮಿಷದಲ್ಲಿ ಗೋಲು ದಾಖಲಿಸಿ ಹಿನ್ನಡೆ ತಗ್ಗಿಸಿದರು. ಆದರೆ ದ್ವಿತೀಯಾರ್ಧದಲ್ಲಿ ಗ್ಯೋಕೆರೆಸ್(59ನೇ ನಿಮಿಷ) ಹಾಗೂ ಸ್ವಾನ್‌ಬೆರ್ಗ್‌(84ನೇ ನಿಮಿಷ) 2 ಗೋಲು ಹೊಡೆದು ತಂಡದ ಗೆಲುವಿನ ಅಂತರ ಹೆಚ್ಚಿಸಿದರು.