ವಿನಿಶಿಯಸ್ ಜೂನಿಯರ್ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಬ್ರೆಜಿಲ್ ತಂಡವು ಸ್ಕಾಟ್ಲೆಂಡ್ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 'ಸಿ' ಗುಂಪಿನಲ್ಲಿ ಅಜೇಯವಾಗಿ ಉಳಿದ ಬ್ರೆಜಿಲ್, ನಾಕೌಟ್‌ ಹಂತಕ್ಕೆ ಪ್ರವೇಶಿಸಿದೆ. ಗಾಯದಿಂದ ಚೇತರಿಸಿಕೊಂಡ ನೇಯ್ಮರ್ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿದಿದ್ದರು.

ಮಿಯಾಮಿ ಗಾರ್ಡನ್ಸ್‌(ಅಮೆರಿಕ): ವಿನಿಶಿಯಸ್‌ ಜೂನಿಯರ್‌ ಬಾರಿಸಿದ 2 ಗೋಲುಗಳ ನೆರವಿನಿಂದ ಬ್ರೆಜಿಲ್‌ ತಂಡ ಸ್ಕಾಟ್ಲೆಂಡ್ ವಿರುದ್ಧ 3-0 ಗೆಲುವು ಸಾಧಿಸಿದ್ದು, ‘ಸಿ’ ಗುಂಪಿನಲ್ಲಿ ಅಜೇಯವಾಗಿ ನಾಕೌಟ್‌ ಪ್ರವೇಶಿಸಿದೆ. ತಂಡ ಗುಂಪು ಹಂತದ 3 ಪಂದ್ಯಗಳಲ್ಲಿ 2 ಗೆಲುವು, 1 ಡ್ರಾಗೊಂದಿಗೆ 7 ಅಂಕ ಸಂಪಾದಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರಂಭಿಕ 2 ಪಂದ್ಯಗಳಲ್ಲಿ ತಲಾ 1 ಗೋಲು ಬಾರಿಸಿದ್ದ ವಿನಿಶಿಯಸ್‌, ಈ ಪಂದ್ಯದಲ್ಲಿ 7ನೇ ಮತ್ತು ಮೊದಲಾರ್ಧದ ಹೆಚ್ಚುವರಿ ಅವಧಿ(45+3ನೇ ನಿಮಿಷ)ಯಲ್ಲಿ ಗೋಲು ದಾಖಲಿಸಿ ಗೆಲುವಿನ ರೂವಾರಿಯಾದರು. ಮತ್ತೊಂದು ಗೋಲು ಮ್ಯಾಥ್ಯೂಸ್‌ ಕುನ್ಹಾ ಅವರಿಂದ 60ನೇ ನಿಮಿಷದಲ್ಲಿ ದಾಖಲಾಯಿತು.

ಹೈಟಿ ವಿರುದ್ಧ ಗೆದ್ದಿದ್ದ ಸ್ಕಾಟ್ಲೆಂಡ್‌ ತಂಡ ಮೊರಾಕ್ಕೊ ಹಾಗೂ ಬ್ರೆಜಿಲ್‌ ವಿರುದ್ಧ ಸೋತಿದ್ದು, 3 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇತರ ಗುಂಪಿನ 3ನೇ ಸ್ಥಾನ ಪಡೆದ ತಂಡಗಳ ಫಲಿತಾಂಶ ಆಧರಿಸಿ ಸ್ಕಾಟ್ಲೆಂಡ್‌ಗೆ ನಾಕೌಟ್ ಪ್ರವೇಶಿಸುವ ಅವಕಾಶವಿದೆ.

ಈ ವಿಶ್ವಕಪ್‌ನಲ್ಲಿ ಮೊದಲ ಬಾರಿ ಆಡಿದ ನೇಯ್ಮರ್‌

ಬ್ರೆಜಿಲ್‌ ಫುಟ್ಬಾಲ್‌ ತಾರೆ ನೇಯ್ಮರ್‌ ಈ ಬಾರಿ ವಿಶ್ವಕಪ್‌ನಲ್ಲಿ ಕೊನೆಗೂ ಆಡಿದ್ದಾರೆ. ಅವರು ಬುಧವಾರ ಸ್ಕಾಟ್ಲೆಂಡ್‌ ವಿರುದ್ಧ ಪಂದ್ಯದಲ್ಲಿ 76ನೇ ನಿಮಿಷದಲ್ಲಿ ಸಬ್‌ಸ್ಟಿಟ್ಯೂಟ್‌ ಆಟಗಾರನಾಗಿ ಕಣಕ್ಕಿಳಿದರು. ಆದರೆ ಅವರಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಗಾಯದಿಂದ ಬಳಲುತ್ತಿದ್ದ 34 ವರ್ಷದ ನೇಯ್ಮರ್‌ ಆರಂಭಿಕ 2 ಪಂದ್ಯಗಳಲ್ಲೂ ಆಡಿರಲಿಲ್ಲ.

ಆತಿಥೇಯ ಮೆಕ್ಸಿಕೊಗೆ ಹ್ಯಾಟ್ರಿಕ್‌ ಜಯದ ಸಿಹಿ

ಮೆಕ್ಸಿಕೊ ಸಿಟಿ: ಈ ಬಾರಿ ಫುಟ್ಬಾಲ್‌ ವಿಶ್ವಕಪ್‌ ಆತಿಥ್ಯ ವಹಿಸುತ್ತಿರುವ 3 ದೇಶಗಳ ಪೈಕಿ ಒಂದಾಗಿರುವ ಮೆಕ್ಸಿಕೊ ಗುಂಪು ಹಂತದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ತಂಡ ಗುರುವಾರ ಚೆಕ್‌ ಗಣರಾಜ್ಯದ ವಿರುದ್ಧ 3-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಫಿಫಾ ವಿಶ್ವಕಪ್‌ ಇತಿಹಾಸದಲ್ಲೇ ಮೆಕ್ಸಿಕೊ ತಂಡ ಇದೇ ಮೊದಲ ಬಾರಿ ಗುಂಪು ಎಲ್ಲಾ 3 ಪಂದ್ಯಗಳಲ್ಲೂ ಗೆದ್ದ ಸಾಧನೆ ಮಾಡಿದೆ. ಈ ಹಿಂದೆ 1986 ಹಾಗೂ 2002ರಲ್ಲಿ ಗುಂಪು ಹಂತದಲ್ಲಿ ತಲಾ 2 ಗೆಲುವು, 1 ಡ್ರಾ ಸಾಧಿಸಿತ್ತು.

ಮೆಕ್ಸಿಕೊದ ಬಾತುಕೋಳಿಗೆ ಕ್ರೀಡಾಂಗಣ ಪ್ರವೇಶವಿಲ್ಲ!

ಮೆಕ್ಸಿಕೊ ಸಿಟಿ: ಈ ಬಾರಿ ಫಿಫಾ ವಿಶ್ವಕಪ್‌ನ ಮೆಕ್ಸಿಕೊ ತಂಡದ ಆರಂಭಿಕ ಪಂದ್ಯದ ವೇಳೆ ತಂಡದ ಹಸಿರು ಬಣ್ಣದ ಜೆರ್ಸಿ ಧರಿಸಿ ಅಲ್ಲಿನ ನಗರದ ಬೀದಿಗಳಲ್ಲಿ ಓಡಾಡುವ ಮೂಲಕ ಭಾರೀ ವೈರಲ್‌ ಆಗಿದ್ದ ಬಾತುಕೋಳಿಗೆ ಕ್ರೀಡಾಂಗಣ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ. ಭಾರೀ ಜನಪ್ರಿಯತೆ ಗಿಟ್ಟಿಸಿದ್ದ ಈ ಬಾತುಕೋಳಿಗೆ ಮೆಕ್ಸಿಕೊ-ಚೆಕ್‌ ಗಣರಾಜ್ಯದ ಪಂದ್ಯದ ವೇಳೆ ಕ್ರೀಡಾಂಗಣಕ್ಕೆ ಪ್ರವೇಶ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು. ಆದರೆ ಫಿಫಾ ನಿಯಮದ ಪ್ರಕಾರ ಪಂದ್ಯದ ವೇಳೆ ಪ್ರಾಣಿಗಳಿಗೆ ಅವಕಾಶವಿಲ್ಲದ ಕಾರಣ ಬಾತುಕೋಳಿಗೆ ಕ್ರೀಡಾಂಗಣ ಪ್ರವೇಶ ನಿರಾಕರಿಸಲಾಯಿತು.

ಬೋಸ್ನಿಯಾಗೆ ಸೋತು ಕತಾರ್‌ ತಂಡ ಹೊರಕ್ಕೆ

ಸಿಯಾಟಲ್‌: ಬೋಸ್ನಿಯಾ-ಹೆರ್ಜೆಗೋವಿನಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 1-3 ಗೋಲುಗಳ ಅಂತರದಲ್ಲಿ ಪರಾಭವಗೊಂಡ ಕತಾರ್‌ ತಂಡ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದೆ. ತಂಡ ಆಡಿರುವ 3 ಪಂದ್ಯಗಳಲ್ಲಿ 1ರಲ್ಲಿ ಡ್ರಾ ಸಾಧಿಸಿದ್ದು, ಮತ್ತೆರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಗುಂಪು ಹಂತದ ಕೊನೆ ಪಂದ್ಯದಲ್ಲಿ ಗೆದ್ದ ಬೋಸ್ನಿಯಾ ತಂಡ ನಾಕೌಟ್‌ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ. ತಂಡ 4 ಅಂಕಗಳೊಂದಿಗೆ ಈಗ 3ನೇ ಸ್ಥಾನದಲ್ಲಿದೆ.

ಕಾಲು ಮುರಿದ ಕತಾರ್‌ನ ಅಸಿಂ 5 ಪಂದ್ಯಕ್ಕೆ ಬ್ಯಾನ್‌

ಇತ್ತೀಚೆಗೆ ಕೆನಡಾದ ಮಿಡ್‌ಫೀಲ್ಡರ್ ಇಸ್ಮಾಯಿಲ್ ಕೋನೆ ಅವರ ಕಾಲಿಗೆ ಬಲವಾಗಿ ಒಡೆದು, ಕಾಲು ಮುರಿತಕ್ಕೆ ಕಾರಣವಾಗಿದ್ದ ಕತಾರ್ ಮಿಡ್‌ಫೀಲ್ಡರ್ ಅಸಿಮ್ ಮಡಿಬೊಗೆ ಐದು ಪಂದ್ಯಗಳ ನಿಷೇಧ ಹೇರಲಾಗಿದೆ. ಸದ್ಯ ಕೋನೆ ಅವರ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.