ಘಾನಾ ವಿರುದ್ಧದ ಫುಟ್ಬಾಲ್ ಪಂದ್ಯದಲ್ಲಿ ಇಂಗ್ಲೆಂಡ್ ಗೋಲು ರಹಿತ ಡ್ರಾ ಸಾಧಿಸಿತು. ಘಾನಾದ ಮಂತ್ರವಾದಿಯೊಬ್ಬ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಹ್ಯಾರಿ ಕೇನ್‌ರನ್ನು ಗೋಲು ಬಾರಿಸದಂತೆ ಕಟ್ಟಿಹಾಕಿದ್ದಾಗಿ ಹೇಳಿಕೊಂಡಿದ್ದು, ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಬೋಸ್ಟನ್‌: ಘಾನಾ ವಿರುದ್ಧ ಇಂಗ್ಲೆಂಡ್‌ ಗೋಲು ರಹಿತ ಡ್ರಾನ ಆಘಾತ ಎದುರಿಸಿತು. ಮೊದಲ ಪಂದ್ಯದಲ್ಲಿ ಕ್ರೊವೇಷಿಯಾ ವಿರುದ್ಧ ಗೆದ್ದಿದ್ದ ಇಂಗ್ಲೆಂಡ್‌, ಸತತ 2ನೇ ಜಯದೊಂದಿಗೆ ನಾಕೌಟ್‌ ಹಂತಕ್ಕೇರುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಿತು. ಆದರೆ, ಘಾನಾದ ಅತ್ಯುತ್ತಮ ಡಿಫೆನ್ಸ್‌ನ ಎದುರು ಗೋಲು ಗಳಿಸಲು ಇಂಗ್ಲಿಷ್‌ ಆಟಗಾರರಿಗೆ ಸಾಧ್ಯವಾಗಲಿಲ್ಲ. ಆದರೂ, ಆಫ್ರಿಕನ್‌ ರಾಷ್ಟ್ರಗಳ ವಿರುದ್ಧ ಇಂಗ್ಲೆಂಡ್‌ ಅಜೇಯವಾಗಿ ಉಳಿಯಿತು ಎನ್ನುವುದೊಂದೇ ಆ ದೇಶದ ಅಭಿಮಾನಿಗಳಿಗೆ ಸಮಾಧಾನ ತಂದ ವಿಷಯ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಗ್ಲೆಂಡ್‌ಗೆ ಪಂದ್ಯದ ಕೊನೆಯಲ್ಲಿ ಗೋಲು ಬಾರಿಸಲು ಉತ್ತಮ ಅವಕಾಶ ಸಿಕ್ಕಿತ್ತು. 86ನೇ ನಿಮಿಷದಲ್ಲಿ ನಿಕೊ ಒ ರೈಲಿ ಅವರ ಹೆಡ್ಡರ್‌, ಗೋಲುಪೆಟ್ಟಿಗೆಯ ಮೇಲ್ಭಾಗಕ್ಕೆ ಬಡಿದು ಹಿಂದಿರುಗಿತು. ಅದನ್ನು ಗೋಲಾಗಿಸುವ ಹ್ಯಾರಿ ಕೇನ್‌ರ ಪ್ರಯತ್ನ ಕೂಡ ವಿಫಲವಾಯಿತು. ಒಟ್ಟಾರೆ, ಪಂದ್ಯದಲ್ಲಿ ಇಂಗ್ಲೆಂಡ್‌ನ 3 ಗೋಲು ಗಳಿಸುವ ಪ್ರಯತ್ನವನ್ನು ಘಾನಾದ ಗೋಲ್‌ಕೀಪರ್‌ ಬೆನ್ಜಮಿನ್‌ ಅಸಾರೆ ವಿಫಲಗೊಳಿಸಿ, ಗಮನ ಸೆಳೆದರು.

ಇಂಗ್ಲೆಂಡ್‌ಗೆ ಘಾನಾ ಮಂತ್ರವಾದಿ ಕಾಟ?

ಘಾನಾದ ಮಂತ್ರವಾದಿ ನಾನಾ ಕ್ವಾಕು ಇಂಗ್ಲೆಂಡ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಹೇಳಿದ್ದು ನಿಜವಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಪನಾಮ ವಿರುದ್ಧ ಆಡುವಾಗ, ಕ್ವಾಕು ಎದುರಾಳಿ ಆಟಗಾರರ ಮೇಲೆ ವಶೀಕರಣ ಪ್ರಯೋಗ ಮಾಡುತ್ತಿದ್ದ ದೃಶ್ಯಗಳು ಗಮನ ಸೆಳೆದಿದ್ದವು. ಆ ಬಳಿಕ ಇಂಗ್ಲೆಂಡ್‌ ಇಂಗ್ಲೆಂಡ್ ತಂಡವನ್ನು, ಪ್ರಮುಖವಾಗಿ ಹ್ಯಾರಿ ಕೇನ್‌ರನ್ನು ಗೋಲು ಬಾರಿಸದಂತೆ ಕಟ್ಟಿಹಾಕುತ್ತೇನೆ ಎಂದು ಕ್ವಾಕು ಹೇಳಿದ್ದರು. ಬುಧವಾರ ನಡೆದ ಪಂದ್ಯದಲ್ಲಿ ಕ್ವಾಕು ಹೇಳಿದಂತೆಯೇ ಆಯಿತು. ಪಂದ್ಯದಲ್ಲಿ ಇಂಗ್ಲೆಂಡ್‌ ಗೋಲು ಬಾರಿಸಲಿಲ್ಲ. ಕೇನ್‌ ಸುಲಭ ಅವಕಾಶ ಕೈಚೆಲ್ಲಿದರು.

ಪಂದ್ಯದ ಬಳಿಕ ವಿಡಿಯೋವೊಂದನ್ನು ಹರಿಬಿಟ್ಟಿರುವ ಕ್ವಾಕು, ತಾವು ಇಂಗ್ಲೆಂಡ್‌, ಕೇನ್‌ರನ್ನು ತಮ್ಮ ಕಪಿಮುಷ್ಠಿಯಿಂದ ಬಿಡುಗೊಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಮುಂದಿನ ಪಂದ್ಯದಲ್ಲಿ ಕೇನ್‌ ಗೋಲು ಬಾರಿಸುವುದಾಗಿ ಭವಿಷ್ಯ ನುಡಿದಿದ್ದಾರೆ.