ಸೆನೆಗಲ್ ವಿರುದ್ಧ 0-2 ಗೋಲುಗಳಿಂದ ಹಿನ್ನಡೆಯಲ್ಲಿದ್ದ ಬೆಲ್ಜಿಯಂ, ಪಂದ್ಯದ ಕೊನೆಯ ನಿಮಿಷಗಳಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ 3-2 ಅಂತರದಲ್ಲಿ ಜಯಗಳಿಸಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ಇನ್ನೊಂದು ಪಂದ್ಯದಲ್ಲಿ, ಬೋಸ್ನಿಯಾ ವಿರುದ್ಧ 2-0 ಅಂತರದಲ್ಲಿ ಗೆದ್ದ ಅಮೆರಿಕ ಕೂಡ ಅಂತಿಮ 16ರ ಸುತ್ತಿಗೆ ಲಗ್ಗೆ ಇಟ್ಟಿದೆ.
ಸಿಯಾಟಲ್: 85ನೇ ನಿಮಿಷದವರೆಗೂ 0-2 ಗೋಲಿನಿಂದ ಹಿನ್ನಡೆಯಲ್ಲಿದ್ದರೂ ಬಳಿಕ ಭರ್ಜರಿ ಕಮ್‌ಬ್ಯಾಕ್ ಮಾಡಿದ ಬೆಲ್ಜಿಯಂ ತಂಡ, ಈ ಬಾರಿ ಫಿಫಾ ವಿಶ್ವಕಪ್‌ನ ಅಂತಿಮ 32ರ ಸುತ್ತಿನ ಪಂದ್ಯದಲ್ಲಿ ಸೆನೆಗಲ್ ವಿರುದ್ಧ 3-2 ಅಂತರದಲ್ಲಿ ಜಯಭೇರಿ ಬಾರಿಸಿದೆ. ಈ ಮೂಲಕ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದು ಈ ವಿಶ್ವಕಪ್‌ನ ಅತ್ಯಂತ ರೋಚಕ ಕಮ್‌ಬ್ಯಾಕ್ ಪಂದ್ಯ ಎನಿಸಿಸಿಕೊಂಡಿತು.
ಹಬೀಬ್ ಡಿಯಾರ 24ನೇ ನಿಮಿಷ ಹಾಗೂ ಇಸ್ಮಾಯಿಲಾ ಸರ್ 51ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಸೆನೆಗಲ್ ಭರ್ಜರಿ ಮುನ್ನಡೆ ಒದಗಿಸಿತು. ಆ ಬಳಿಕವೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಸೆನೆಗಲ್, ಗೆಲುವಿನತ್ತ ಮುನ್ನಡೆದಿತ್ತು. ಆದರೆ ಪಂದ್ಯ ಕೊನೆಗೊಳ್ಳಲು ಇನ್ನೇನು ಕೆಲವೇ ನಿಮಿಷಗಳಿರುವಾಗ ಬೆಲ್ಜಿಯಂ ಅದ್ಭುತ ಕಮ್‌ಬ್ಯಾಕ್ ಮಾಡಿತು. 86ನೇ ನಿಮಿಷದಲ್ಲಿ ರೊಮೇಲು ಲುಕಾಕು ಗೋಲು ಬಾರಿಸಿ ಬೆಲ್ಜಿಯಂನ ಖಾತೆ ತೆರೆದರು. ಇದಾಗಿ 3 ನಿಮಿಷಗಳಲ್ಲೇ ಯೂರಿ ಟೀಲೆಮ್ಯಾನ್ಸ್ ಗೋಲು ಬಾರಿಸಿ ಪಂದ್ಯ ಸಮಬಲಗೊಳಿಸಿದರು. ಹೀಗಾಗಿ ನಿಗದಿತ 90 ನಿಮಿಷಕ್ಕೆ ಪಂದ್ಯ ಮುಗಿಯಲಿಲ್ಲ. ಹೆಚ್ಚುವರಿ 30 ನಿಮಿಷ ಆಡಿಸಲಾಯಿತು. ಅದರಲ್ಲೂ ಗೋಲು ದಾಖಲಿಲ್ಲ. ಆದರೆ ಇಂಜುರಿ ಸಮಯ(120+5ನೇ ನಿಮಿಷ)ದಲ್ಲಿ ಬೆಲ್ಜಿಯಂ ತನಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡಿತು.
2014ರಲ್ಲಿ ಕ್ವಾರ್ಟರ್ ಫೈನಲ್, 2018ರಲ್ಲಿ ಸೆಮಿಫೈನಲ್ ತಲುಪಿದ್ದ ಬೆಲ್ಜಿಯಂ ಕಳೆದ ಬಾರಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಈ ಬಾರಿ ಪ್ರಿ ಕ್ವಾರ್ಟರ್‌ನಲ್ಲಿ ಸೋಮವಾರ ಅಮೆರಿಕ ವಿರುದ್ಧ ಸೆಣಸಾಡಲಿದೆ.
125ನೇ ನಿಮಿಷ
ಬೆಲ್ಜಿಯಂನ ಯೂರಿ ಟೀಲೆಮ್ಯಾನ್ಸ್ ಪಂದ್ಯದ 125ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇದು ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅತ್ಯಂತ ತಡವಾಗಿ ದಾಖಲಾದ ಗೋಲು ಎನಿಸಿಕೊಂಡಿತು.
ಬೋಸ್ನಿಯಾ ವಿರುದ್ಧ 2-0 ಗೆದ್ದು ಪ್ರಿ ಕ್ವಾರ್ಟರ್‌ಗೇರಿದ ಅಮೆರಿಕ
ಸಾಂಟಾ ಕ್ಲಾರಾ(ಅಮೆರಿಕ): ಬೋಸ್ನಿಯಾ ಹಾಗೂ ಹರ್ಜೆಗೋವಿನಾ ವಿರುದ್ಧ 2-0 ಅಂತರದಲ್ಲಿ ಗೆದ್ದ ಅಮೆರಿಕ ತಂಡ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಅಂತಿಮ 16ರ ಸುತ್ತು ಪ್ರವೇಶಿಸಿದೆ.
45ನೇ ನಿಮಿಷದಲ್ಲಿ ಫೊಲಾರಿನ್ ಬಾಲೋಗನ್ ಗೋಲು ಬಾರಿಸಿ ಅಮೆರಿಕಕ್ಕೆ ಮುನ್ನಡೆ ಒದಗಿಸಿದರು. ಆ ಬಳಿಕ 82ನೇ ನಿಮಿಷದಲ್ಲಿ ಮಾಲಿಕ್ ಟಿಲ್‌ಮ್ಯಾನ್ ಗೋಲು ದಾಖಲಿಸಿದ ಆತಿಥೇಯ ತಂಡಕ್ಕೆ ಗೆಲುವು ಖಚಿತಪಡಿಸಿಕೊಂಡರು. ಈ ವಿಶ್ವಕಪ್‌ನಲ್ಲಿ 3ನೇ ಗೋಲು ದಾಖಲಿಸಿದ ಬಾಲೋಗನ್, 64ನೇ ನಿಮಿಷದಲ್ಲಿ ರೆಡ್ ಕಾರ್ಡ್ ಪಡೆದಿದ್ದು, ಪ್ರಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಗೈರಾಗಲಿದ್ದಾರೆ.
1930ರ ಚೊಚ್ಚಲ ವಿಶ್ವಕಪ್‌ನಲ್ಲಿ 3ನೇ ಸ್ಥಾನಿಯಾಗಿದ್ದ ಅಮೆರಿಕ ತಂಡ ಟೂರ್ನಿಯ ಇತಿಹಾಸದಲ್ಲಿ ಒಟ್ಟಾರೆ 8ನೇ ಬಾರಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದೆ.
ಇಂದಿನ ಪಂದ್ಯಗಳು
ಸ್ವಿಜರ್‌ಲೆಂಡ್-ಅಲ್ಜೀರಿಯಾ, ಬೆಳಗ್ಗೆ 8.30ಕ್ಕೆ
ಆಸ್ಟ್ರೇಲಿಯಾ-ಈಜಿಪ್ಟ್, ರಾತ್ರಿ 11.30ಕ್ಕೆ
ಅರ್ಜೆಂಟೀನಾ-ಕೇಪ್‌ವರ್ಡೆ, ರಾತ್ರಿ 3.30ಕ್ಕೆ

