ಐಎಸ್‌ಎಲ್‌ ಫುಟ್ಬಾಲ್: ಕೋಲ್ಕತಾ ಚಾಂಪಿಯನ್

6ನೇ ಆವೃತ್ತಿಯ ಐಎಸ್‌ಎಲ್ ಫುಟ್ಬಾಲ್ ಲೀಗ್‌ನಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ದಾಖಲೆಯ ಮೂರನೇ ಬಾರಿಗೆ ಕೋಲ್ಕತಾ ತಂಡವು ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ATK win their 3rd Indian Super League Title

ಗೋವಾ(ಮಾ.15): 6ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯ ಚಾಂಪಿಯನ್‌ ಆಗಿ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಹೊರಹೊಮ್ಮಿದೆ. ಶನಿವಾರ ಇಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಎಟಿಕೆ, ಚೆನ್ನೈಯಿನ್‌ ಫುಟ್ಬಾಲ್‌ ಕ್ಲಬ್‌ ವಿರುದ್ಧ 3-1 ಗೋಲುಗಳ ಭರ್ಜರಿ ಗೆಲುವು ಸಾಧಿಸಿತು. 3ನೇ ಬಾರಿಗೆ ಟ್ರೋಫಿ ಎತ್ತಿಹಿಡಿದ ಎಟಿಕೆ, ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು.

ಖಾಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. 10ನೇ ನಿಮಿಷದಲ್ಲೇ ಸ್ಪೇನ್‌ ಆಟಗಾರ ಜಾವಿ ಹರ್ನಾಂಡೆಜ್‌ ಆಕರ್ಷಕ ಗೋಲು ಬಾರಿಸಿ ಖಾತೆ ತೆರೆದರು. ರಾಯ್‌ ಕೃಷ್ಣ ನೀಡಿದ ಪಾಸ್‌ ಅನ್ನು ಹರ್ನಾಂಡೆಜ್‌ ಗೋಲಾಗಿ ಪರಿವರ್ತಿಸಿದರು. ಇದು ಈ ಆವೃತ್ತಿಯಲ್ಲಿ ಅವರು ಬಾರಿಸಿದ ಮೊದಲ ಗೋಲು.

ಐಎಸ್‌ಎಲ್‌ ಟೂರ್ನಿ: ಬೆಂಗಳೂರು ಎಫ್‌ಸಿ ಫೈನಲ್‌ ಕನಸು ಭಗ್ನ

ಮೊದಲಾರ್ಧದ ಮುಕ್ತಾಯದ ವರೆಗೂ ಎಟಿಕೆ 1-0 ಮುನ್ನಡೆ ಕಾಯ್ದುಕೊಂಡಿತು. ಅಲ್ಲದೇ ದ್ವಿತೀಯಾರ್ಧ ಆರಂಭಗೊಳ್ಳುತ್ತಿದ್ದಂತೆ ಮುನ್ನಡೆಯನ್ನು 2-0ಗೆ ಹೆಚ್ಚಿಸಿಕೊಂಡಿತು. 48ನೇ ನಿಮಿಷದಲ್ಲಿ ಎಡು ಗಾರ್ಸಿಯಾ ಆಕರ್ಷಕ ಗೋಲು ಗಳಿಸಿದರು. 69ನೇ ನಿಮಿಷದಲ್ಲಿ ಚೆನ್ನೈ ಮೊದಲ ಗೋಲು ಬಾರಿಸಿತು. ನೆರಿಯಸ್‌ ವಾಲ್ಸ್‌ಕಿಸ್‌ ಅಂತರವನ್ನು ತಗ್ಗಿಸಿದರು. ನಿಗದಿತ 90 ನಿಮಿಷಗಳ ಮುಕ್ತಾಯದ ಬಳಿಕ ಹೆಚ್ಚುವರಿ 4 ನಿಮಿಷಗಳ ಆಟ ನಡೆಸಲಾಯಿತು. ಈ ಅವಧಿಯಲ್ಲಿ ಗೋಲು ಗಳಿಸಿ ಸಮಬಲ ಸಾಧಿಸುವ ವಿಶ್ವಾಸದಲ್ಲಿದ್ದ ಚೆನ್ನೈಗೆ ಹರ್ನಾಂಡೆಜ್‌ ಆಘಾತ ನೀಡಿದರು. 90+3ನೇ ನಿಮಿಷದಲ್ಲಿ ಗೋಲು ಬಾರಿಸಿ, ಎಟಿಕೆ ಗೆಲುವನ್ನು ಖಚಿತಪಡಿಸಿದರು.

ಬ್ರೆಜಿಲ್‌ನ ಖ್ಯಾತ ಫುಟ್ಬಾಲ್ ಪಟು ರೊನಾಲ್ಡಿನೊ ಬಂಧನ!

ಲೀಗ್‌ ಹಂತದ ಮೊದಲ 5 ಪಂದ್ಯಗಳಲ್ಲಿ ಒಂದೂ ಗೋಲು ಬಾರಿಸದೆ ನಂತರ ಪುಟಿದೆದ್ದು ಫೈನಲ್‌ ತಲುಪಿದ್ದ ಚೆನ್ನೈ 3ನೇ ಬಾರಿಗೆ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು. ಬೆಂಗಳೂರು ಎಫ್‌ಸಿ ವಿರುದ್ಧ ಸೆಮಿಫೈನಲ್‌ನಲ್ಲಿ ಜಯಿಸಿ ಫೈನಲ್‌ ಪ್ರವೇಶಿಸಿದ್ದ ಕೋಲ್ಕತಾ ತಂಡ, ಟ್ರೋಫಿ ಎತ್ತಿಹಿಡಿದು ಸಂಭ್ರಮಿಸಿತು.

ಎಟಿಕೆಗೆ 8 ಕೋಟಿ ರುಪಾಯಿ ಬಹುಮಾನ!

6ನೇ ಆವೃತ್ತಿಯ ಚಾಂಪಿಯನ್‌ ಆಗಿ ಹೊರಹೊಮ್ಮಿದ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 8 ಕೋಟಿ ರುಪಾಯಿ ಬಹುಮಾನ ಪಡೆಯಿತು. ರನ್ನರ್‌-ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟ ಚೆನ್ನೈಯಿನ್‌ ಎಫ್‌ಸಿ ತಂಡಕ್ಕೆ 4 ಕೋಟಿ ಬಹುಮಾನ ದೊರೆಯಿತು. ಸೆಮಿಫೈನಲ್‌ನಲ್ಲಿ ಸೋಲುಂಡಿದ್ದ ತಂಡಗಳಿಗೆ ತಲಾ 1.5 ಕೋಟಿ ರುಪಾಯಿ ಬಹುಮಾನ ವಿತರಿಸಲಾಯಿತು.

Latest Videos
Follow Us:
Download App:
  • android
  • ios