ಫುಟ್ಬಾಲ್ ಕ್ರೀಡಾಂಗಣಕ್ಕೆ ನುಗ್ಗುವಾಗ ಭೀಕರ ಕಾಲ್ತುಳಿತ: 8 ಮಂದಿ ದುರ್ಮರಣ..!
* ಫುಟ್ಬಾಲ್ ಪಂದ್ಯ ವೀಕ್ಷಣೆಗಾಗಿ ಕ್ರೀಡಾಂಗಣಕ್ಕೆ ನುಗ್ಗುವ ಭರದಲ್ಲಿ 8 ಮಂದಿ ಕಾಲ್ತುಳಿತದಿಂದ ಸಾವು
* ಕೆಮರೂನ್‌ನ ರಾಜಧಾನಿ ಯೌಂಡೆಯಲ್ಲಿ ನಡೆದ ದುರ್ಘಟನೆಯಲ್ಲಿ 30ಕ್ಕೂ ಅಧಿಕ ಮಂದಿಗೆ ಗಾಯ
* ಒಲೆಂಬೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಆಫ್ರಿಕನ್ ಕಪ್ ಆಫ್ ನೇಷನ್ಸ್ ಟೂರ್ನಿಯಲ್ಲಿ ದುರ್ಘಟನೆ
ಯೌಂಡೆ(ಜ.26): ಫುಟ್ಬಾಲ್ ಪಂದ್ಯ (Football Match) ವೀಕ್ಷಣೆಗಾಗಿ ಕ್ರೀಡಾಂಗಣಕ್ಕೆ ನುಗ್ಗುವ ವೇಳೆ ಉಂಟಾದ ಕಾಲ್ತುಳಿತಕ್ಕೆ 8 ಮಂದಿ ಮೃತಪಟ್ಟು, 38 ಮಂದಿಗೆ ಗಂಭೀರ ಗಾಯಗಳಾದ ಘಟನೆ ಕೆಮರೂನ್‌ನ ರಾಜಧಾನಿ ಯೌಂಡೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆಯನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಒಲೆಂಬೆ ಕ್ರೀಡಾಂಗಣದಲ್ಲಿ (Olembe Stadium) ಆಯೋಜಿಸಲಾಗಿದ್ದ ಆಫ್ರಿಕನ್ ಕಪ್ ಆಫ್ ನೇಷನ್ಸ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಆತಿಥೇಯ ಕೆಮರೂನ್ (Cameroon) ತಂಡ ಕೊಮೊರೊಸ್ (Comoros) ವಿರುದ್ಧ ಆಡುವುದನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದು, ಈ ವೇಳೆ ಕ್ರೀಡಾಂಗಣದ ಬಾಗಿಲು ಮುಚ್ಚಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಘಟನೆಯಲ್ಲಿ ಹಲವು ಮಕ್ಕಳೂ ಗಾಯಗೊಂಡಿದ್ದು, ಅಪಾರ ಸಂಖ್ಯೆಯಲ್ಲಿ ಗಾಯಾಳುಗಳು ದಾಖಲಾಗುತ್ತಿರುವ ಕಾರಣ ಆಸ್ಪತ್ರೆಗಳ ಮೇಲೆ ಒತ್ತಡ ಬೀಳುತ್ತಿದೆ ಎಂದು ವರದಿಯಾಗಿದೆ.
ಪ್ರೊ ಕಬಡ್ಡಿ: ಹರ್ಯಾಣ-ಟೈಟಾನ್ಸ್ ಪಂದ್ಯ ಟೈ
ಬೆಂಗಳೂರು: 8ನೇ ಆವೃತ್ತಿಯ ಪ್ರೊ ಕಬಡ್ಡಿಯ (Pro Kabaddi League) ಹರ್ಯಾಣ ಸ್ಟೀಲರ್ಸ್ (Haryana Steelers) ಹಾಗೂ ತೆಲುಗು ಟೈಟಾನ್ಸ್ (Telugu Titans) ನಡುವಿನ ಮಂಗಳವಾರದ ಪಂದ್ಯ 39-39 ಅಂಕಗಳಲ್ಲಿ ಟೈ ಆಯಿತು. ಇದು ಉಭಯ ತಂಡಗಳಿಗೂ ಟೂರ್ನಿಯಲ್ಲಿ ತಲಾ 3ನೇ ಟೈ. ಇದರೊಂದಿಗೆ ಹರ್ಯಾಣ 3ನೇ ಸ್ಥಾನಕ್ಕೇರಿದರೆ, ಟೈಟಾನ್ಸ್ ಕೊನೆ ಸ್ಥಾನದಲ್ಲೇ ಉಳಿದಿದೆ.
Pro Kabaddi League: ಪ್ರೊ ಕಬಡ್ಡಿಗೂ ಶುರುವಾಯ್ತು ಕೋವಿಡ್ ಕಾಟ, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!
ಆರಂಭದಿಂದಲೇ ತೀವ್ರ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಮೊದಲಾರ್ಧಕ್ಕೆ ಹರ್ಯಾಣ 20-19ರ ಅಲ್ಪ ಮುನ್ನಡೆ ಪಡೆದಿತ್ತು. ಹರ್ಯಾಣದ ವಿಕಾಸ್ ಕಂಡೋಲ ಹಾಗೂ ಟೈಟಾನ್ಸ್‌ನ ಅಂಕಿತ್ ಬೆನಿವಾಲ್ ತಲಾ 10 ರೈಡ್ ಅಂಕ ಗಳಿಸಿದರು.
ಇಂದಿನ ಪಂದ್ಯ: ಬೆಂಗಳೂರು-ಮುಂಬೈ,
ಸಮಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಭಾರತ ಹಾಕಿ ಸಂಭವನೀಯ ಟೀಂನಲ್ಲಿ ರಾಜ್ಯದ ರಾಹೀಲ್
ಬೆಂಗಳೂರು: ಮುಂಬರುವ ಎಫ್‌ಐಎಚ್ ಪ್ರೊ ಲೀಗ್ (FIH Pro League) ಸೇರಿದಂತೆ ಮಹತ್ವದ ಟೂರ್ನಿಗಳಿಗೆ ಸಿದ್ಧತೆ ನಡೆಸುವ ಸಲುವಾಗಿ ಹಾಕಿ ಇಂಡಿಯಾ (Hockey India) ಮಂಗಳವಾರ 33 ಆಟಗಾರರ ಸಂಭವನೀಯ ಪಟ್ಟಿಯನ್ನು ಪ್ರಕಟಿಸಿದ್ದು ಕರ್ನಾಟಕದ ಮೊಹಮದ್ ರಾಹೀಲ್ ಸ್ಥಾನ ಪಡೆದಿದ್ದಾರೆ.
ವಿವಿಧ ದೇಸಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ 60 ಆಟಗಾರರನ್ನು 3 ವಾರಗಳ ಶಿಬಿರಕ್ಕೆ ಒಳಪಡಿಸಲಾಗಿತ್ತು. ಆ ಶಿಬಿರದಿಂದ 33 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂಬರುವ ಟೂರ್ನಿಗಳಿಗೆ ಈಗ ಪ್ರಕಟಿಸಿರುವ ಸಂಭವನೀಯರ ಪಟ್ಟಿಯಿಂದ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುತ್ತದೆ.
ಏಷ್ಯಾಕಪ್ ಹಾಕಿ: ಇಂದು ಭಾರತ-ಕೊರಿಯಾ ಸೆಮೀಸ್
ಮಸ್ಕಟ್: ಹಾಲಿ ಚಾಂಪಿಯನ್ ಭಾರತ, ಸತತ 2ನೇ ಬಾರಿ ಏಷ್ಯಾ ಕಪ್ ಮಹಿಳಾ ಹಾಕಿ ಟೂರ್ನಿಯ (Asia Cup Women's Hockey Tournament) ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದು, ಬುಧವಾರ ಸೆಮಿಫೈನಲ್‌ನಲ್ಲಿ ದ.ಕೊರಿಯಾ ವಿರುದ್ಧ ಸೆಣಸಲಿದೆ. ಗುಂಪು ಹಂತದಲ್ಲಿ ಮಲೇಷ್ಯಾ ಹಾಗೂ ಸಿಂಗಾಪುರ್ ವಿರುದ್ಧ ಗೆದ್ದಿದ್ದ ಭಾರತ, ‘ಎ’ ಗುಂಪಿನಲ್ಲಿ ದ್ವಿತೀಯ ಸ್ಥಾನಿಯಾಗಿ ಸೆಮೀಸ್ ಪ್ರವೇಶಿಸಿದೆ.
Padma Awards 2022: ದೇವೇಂದ್ರಗೆ ಪದ್ಮಭೂಷಣ, ನೀರಜ್, ಅವನಿಗೆ ಒಲಿದ ಪದ್ಮಶ್ರೀ
ಅತ್ತ ಕೊರಿಯಾ ‘ಬಿ’ ಗುಂಪಿನಲ್ಲಿ ಮೂರು ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನಿಯಾಗಿ ಸೆಮೀಸ್‌ಗೆ ಲಗ್ಗೆ ಇಟ್ಟಿದೆ. 2 ಬಾರಿಯ ಚಾಂಪಿಯನ್ ಭಾರತ 5ನೇ ಫೈನಲ್ ನಿರೀಕ್ಷೆಯಲ್ಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಜಪಾನ್-ಚೀನಾ ಮುಖಾಮುಖಿಯಾಗಲಿವೆ.
ಭಾರತ-ಕೊರಿಯಾ ಪಂದ್ಯ: ಸಂಜೆ 6ಕ್ಕೆ