* ಪ್ಯಾರಾಲಿಂಪಿಕ್ಸ್‌ ಪದಕ ವಿಜೇತ ದೇವೇಂದ್ರ ಝಾಝರಿಯಾಗೆ ಪದ್ಮ ಭೂಷಣದ ಗರಿ* ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಪಾತ್ರರಾದ ದೇವೇಂದ್ರ* ದೇಶದ 9 ಕ್ರೀಡಾಪಟುಗಳಿಗೆ ಒಲಿದ 2021ನೇ ಸಾಲಿನ ಪದ್ಮ ಪ್ರಶಸ್ತಿ

ನವದೆಹಲಿ(ಜ.26): 2021ನೇ ಸಾಲಿನ ಪದ್ಮ ಪ್ರಶಸ್ತಿಗಳ ಸಾಲಿನಲ್ಲಿ ದೇಶದ 9 ಕ್ರೀಡಾಪಟುಗಳಿಗೆ ಸ್ಥಾನ ಸಿಕ್ಕಿದೆ. 2 ಚಿನ್ನ ಸೇರಿ 3 ಪ್ಯಾರಾಲಿಂಪಿಕ್ಸ್‌ ಪದಕ ವಿಜೇತ ಜಾವಲಿನ್ ಥ್ರೋ ಪಟು ದೇವೇಂದ್ರ ಝಾಝರಿಯಾಗೆ ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಟೋಕಿಯೋ ಒಲಿಂಪಿಕ್‌ಸ್ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ನೀರಜ್ ಚೋಪ್ರಾ, ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೂವರು, ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಬ್ರಹ್ಮಾನಂದ, ಭಾರತ ಹಾಕಿ ತಂಡದ ತಾರಾ ಆಟಗಾರ್ತಿ ವಂದನಾ, ಜಮ್ಮು-ಕಾಶ್ಮೀರದ ಮಾರ್ಷಲ್ ಆರ್ಟ್ಸ್‌ ಕೋಚ್ ಫೈಸಲ್, ಕೇರಳದ 93 ವರ್ಷದ ಕಳರಿಪಯಟ್ಟು ಪಟು ಶಂಕರ ನಾರಾಯಣ ಮೆನನ್ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ದೇವೇಂದ್ರ ಝಾಝರಿಯಾ
ಭಾರತದ ಅತ್ಯಂತ ಯಶಸ್ವಿ ಪ್ಯಾರಾ ಕ್ರೀಡಾಪಟು. 2004ರ ಅಥೆನ್ಸ್‌, 2016ರ ರಿಯೋ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದಿದ್ದರು. 2020ರ ಟೋಕಿಯೋ ಪ್ಯಾರಾಲಿಂಪಿಕ್ಸ್‌ ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಪದಕ ಗೆದ್ದಿದ್ದಾರೆ.

ನೀರಜ್ ಚೋಪ್ರಾ
ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲಿಗ. ಟೋಕಿಯೋ ಗೇಮ್ಸ್‌ನ ಜಾವೆಲಿನ್ ಥ್ರೋನಲ್ಲಿ ಚಿನ್ನದ ಸಾಧನೆ. ಕಾಮನ್‌ವೆಲ್ತ್ ಗೇಮ್ಸ್‌, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ, 2024ರ ಒಲಿಂಪಿಕ್ಸ್‌ನಲ್ಲೂ ಭಾರತದ ಪದಕ ಭರವಸೆ.

ಅವನಿ ಲೇಖರಾ 
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ತಲಾ ಒಂದು ಚಿನ್ನ, ಕಂಚು ಗೆದ್ದ 20 ವರ್ಷದ ಶೂಟರ್. ರಾಜಸ್ಥಾನದ ಅವನಿ, 10 ಮೀ. ಏರ್ ರೈಫಲ್ ಎಸ್‌ಎಚ್ 1ನಲ್ಲಿ ಚಿನ್ನ, 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಕಂಚು ಜಯಿಸಿದ್ದರು. 2021ರಲ್ಲಿ ಖೇಲ್ ರತ್ನ ಪ್ರಶಸ್ತಿ ಲಭಿಸಿತು.

Neeraj Chopra : ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾಗೆ PVSM ಗೌರವ!

ಸುಮಿತ್ ಅಂತಿಲ್‌
ಹರ್ಯಾಣದ 23 ವರ್ಷದ ಸುಮಿತ್, ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಎಫ್ 64 ವಿಭಾಗದ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದರು. 68.55 ಮೀ. ದೂರಕ್ಕೆ ಜಾವೆಲಿನ್ ಎಸೆದು ವಿಶ್ವದಾಖಲೆ ಬರೆದರು. 2021ರಲ್ಲಿ ಕೇಂದ್ರ ಸರ್ಕಾರ ಖೇಲ್ ರತ್ನ ಗೌರವ ನೀಡಿತು.

ಪ್ರಮೋದ್ ಭಗತ್
ಒಡಿಶಾದ 33 ವರ್ಷದ ಪ್ರಮೋದ್, ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 5 ಚಿನ್ನ, 1 ಬೆಳ್ಳಿ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರೆ. ಎಸ್‌ಎಲ್ 3 ವಿಭಾಗದಲ್ಲಿ ವಿಶ್ವ ನಂ.1 ಸ್ಥಾನದಲ್ಲಿದ್ದಾರೆ.

ವಂದನಾ ಕಟಾರಿಯಾ
ಉತ್ತರಾಖಂಡದ ವಂದನಾ ಭಾರತ ಪರ 248 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳನ್ನು ಆಡಿದ್ದು 68 ಗೋಲು ಬಾರಿಸಿದ್ದಾರೆ. 2014,2018ರ ಏಷ್ಯನ್ ಗೇಮ್ಸ್‌ ಪದಕ ವಿಜೇತ ತಂಡದಲ್ಲಿದ್ದರು. ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ

ಬ್ರಹ್ಮಾನಂದ
ಗೋವಾದ 67 ವರ್ಷದ ಬ್ರಹ್ಮಾನಂದ ಸಂಖ್ವಾಲ್ಕರ್ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ. 1983ರಿಂದ 1986ರ ವರೆಗೂ ಅವರು ನಾಯಕರಾಗಿದ್ದರು. ಭಾರತದ ಶ್ರೇಷ್ಠ ಗೋಲ್‌ಕೀಪರ್‌ಗಳಲ್ಲಿ ಇವರೂ ಒಬ್ಬರು. 1997ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರು

ಫೈಸಲ್‌ ಅಲಿ
ಜಮ್ಮು-ಕಾಶ್ಮೀರದ ಮಾಜಿ ಟೆಕ್ವಾಂಡೋ ಚಾಂಪಿಯನ್ ಫೈಸಲ್ ಅಲಿ ದರ್, ಬಂಡಿ ಪೋರಾ ಜಿಲ್ಲೆಯಲ್ಲಿ 4,000ಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಮಾರ್ಷಲ್ ಆರ್ಟ್ಸ್‌ ಕಲಿಸಿದ್ದಾರೆ. ಇವರು ಕಿಕ್‌ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಹಲವು ಪದಕಗಳನ್ನು ಗೆದ್ದಿದ್ದಾರೆ.