Pro Kabaddi League: ಪ್ರೊ ಕಬಡ್ಡಿಗೂ ಶುರುವಾಯ್ತು ಕೋವಿಡ್ ಕಾಟ, ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..!
* ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೇಲೆ ಕೊರೋನಾ ಹೆಮ್ಮಾರಿಯ ಅಟ್ಟಹಾಸ
* ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ
* ಮಂಗಳವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಒಂದೊಂದೇ ಪಂದ್ಯ ನಡೆಯಲಿದೆ
ಬೆಂಗಳೂರು(ಜ.25): ನಗರದ ಪಂಚತಾರಾ ಹೋಟೆಲ್‌ನಲ್ಲಿ ನಡೆಯುತ್ತಿರುವ 8ನೇ ಆವೃತ್ತಿಯ ಪ್ರೊ ಕಬಡ್ಡಿಗೂ (Pro Kabaddi League) ಕೊರೋನಾ ಸೋಂಕಿನ (Coronavirus) ಕಾಟ ಶುರವಾಗಿದೆ. ಬಯೋಬಬಲ್‌ನೊಳಕ್ಕೆ ವೈರಸ್ ನುಸುಳಿದ್ದು, ಎರಡು ತಂಡಗಳು ತನ್ನ ಆಟಗಾರರನ್ನು ಕಣಕ್ಕಿಳಿಸುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಪಂದ್ಯಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯನ್ನು ಮಾಡಲಾಗಿದೆ. ಮಂಗಳವಾರದಿಂದ ಶುಕ್ರವಾರದ(ಜನವರಿ 25 ರಿಂದ ಜನವರಿ 28ರ)ವರೆಗೆ ಪ್ರತಿದಿನ ಕೇವಲ ಒಂದು ಪಂದ್ಯ ಮಾತ್ರ ನಡೆಯಲಿದೆ.
ಇನ್ನು ಶನಿವಾರ(ಜ.29) ಒಟ್ಟು 3 ಪಂದ್ಯಗಳ ಬದಲಿಗೆ ಎರಡು ಪಂದ್ಯಗಳು ನಡೆಯಲಿವೆ. ಇನ್ನು ಸೋಂಕಿಗೆ ಒಳಗಾದ ಆಟಗಾರರು ಯಾರು ಹಾಗೂ ಯಾವ ತಂಡದವರು ಎನ್ನುವ ಮಾಹಿತಿಯನ್ನು ಆಯೋಜಕರು ಬಹಿರಂಗಪಡಿಸಿಲ್ಲ. ಆಟಗಾರರ ಆರೋಗ್ಯ ಸ್ಥಿರವಾಗಿದ್ದು, ಸೋಂಕಿತರನ್ನು ಐಸೋಲೇಷನ್‌ನಲ್ಲಿ ಇಡಲಾಗಿದೆ ತಿಳಿಸಿದ್ದಾರೆ.
ಕೋವಿಡ್ ಭೀತಿಯಿಂದಾಗಿ 8ನೇ ಆವೃತ್ತಿಯನ್ನು ಬೆಂಗಳೂರಿನ (Bengaluru) ಹೊರವಲಯದಲ್ಲಿರುವ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ. ಡಿಸೆಂಬರ್ 23ಕ್ಕೆ ಆರಂಭವಾಗಿದ್ದು ಟೂರ್ನಿಯ ಮೊದಲ 76 ಪಂದ್ಯಗಳು ತೊಂದರೆಯಿಲ್ಲದೆ ನಡೆದಿವೆ.
ಪ್ರೊ ಕಬಡ್ಡಿ: ಬೆಂಗಾಲ್, ಪುಣೆ ತಂಡಗಳಿಗೆ ಜಯ
ಬೆಂಗಳೂರು: ದಬಾಂಗ್ ಡೆಲ್ಲಿ (Dabang Delhi) 8ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ 4ನೇ ಸೋಲನುಭವಿಸಿದೆ. ಸೋಮವಾರದ ಪಂದ್ಯದಲ್ಲಿ ಡೆಲ್ಲಿ, ಪುಣೇರಿ ಪಲ್ಟನ್‌ಗೆ 25-42 ಅಂಕಗಳಿಂದ ಶರಣಾಯಿತು. ಮೊದಲ 7 ಪಂದ್ಯಗಳಲ್ಲಿ ಅಜೇಯವಾಗಿದ್ದ ಡೆಲ್ಲಿ ಬಳಿಕ 6 ಪಂದ್ಯಗಳಲ್ಲಿ 4ನೇ ಸೋಲುಂಡಿದೆ. ಸದ್ಯ ಡೆಲ್ಲಿ 2ನೇ ಸ್ಥಾನದಲ್ಲಿದ್ದು, 6ನೇ ಜಯಗಳಿಸಿದ ಪಲ್ಟನ್ 10ನೇ ಸ್ಥಾನದಲ್ಲಿದೆ. ಇನ್ನು ಸೋಮವಾರದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್, ಜೈಪುರ ವಿರುದ್ಧ 41-22 ಅಂಕಗಳಿಂದ ಜಯಗಳಿಸಿದ್ದು, ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
Pro Kabaddi League : ಗೆಲುವಿನ ಹಳಿಗೆ ಬಂದ ಬೆಂಗಳೂರು ಬುಲ್ಸ್!
ಸದ್ಯ ಪವನ್ ಕುಮಾರ್ ಶೆರಾವತ್ ನೇತೃತ್ವದ ಬೆಂಗಳೂರು ಬುಲ್ಸ್ (Bengaluru Bulls) ತಂಡವು 14 ಪಂದ್ಯಗಳನ್ನಾಡಿದ್ದು, 8 ಗೆಲುವು, 5 ಸೋಲು ಹಾಗೂ 1 ಟೈ ನೊಂದಿಗೆ 46 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 43 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಇನ್ನು ಬೆಂಗಾಲ್ ವಾರಿಯರ್ಸ್(41) ಹಾಗೂ ಪಾಟ್ನಾ ಪೈರೇಟ್ಸ್(40) ಮೊದಲ ನಾಲ್ಕು ಸ್ಥಾನ ಪಡೆದಿವೆ. ಇನ್ನು ತೆಲುಗು ಟೈಟಾನ್ಸ್ ತಂಡವು 13 ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ 10 ಸೋಲು, 2 ಟೈನೊಂದಿಗೆ 19 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.
ಇಂದಿನ ಪಂದ್ಯ:
ಹರ್ಯಾಣ ಸ್ಟೀಲರ್ಸ್-ತೆಲುಗು ಟೈಟಾನ್ಸ್
ಸಂಜೆ 7.30ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್
ಏಷ್ಯನ್ ಮಹಿಳಾ ಫುಟ್ಬಾಲ್: ಭಾರತದ ಫಲಿತಾಂಶಗಳು ರದ್ದು
ಮುಂಬೈ: 12ಕ್ಕೂ ಹೆಚ್ಚು ಆಟಗಾರರಲ್ಲಿ ಕೋವಿಡ್ ಪತ್ತೆಯಾದ ಕಾರಣ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಿಂದ (AFC Asian Cup Football) ಹೊರಬಿದ್ದ ಭಾರತ ತಂಡ ಫಲಿತಾಂಶಗಳನ್ನು ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್(ಎಎಫ್‌ಸಿ) ರದ್ದುಗೊಳಿಸಿದೆ. ತಾಂತ್ರಿಕವಾಗಿ ಭಾರತ ಈ ಟೂರ್ನಿಯಲ್ಲಿ ಸ್ಪರ್ಧಿಸಲೇ ಇಲ್ಲ ಎನ್ನುವಂತಾಗಿದೆ.
ಮೊದಲ ಪಂದ್ಯದಲ್ಲಿ ಇರಾನ್ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ, ಚೈನೀಸ್ ತೈಪೆ ವಿರುದ್ಧದ ಪಂದ್ಯದಲ್ಲಿ ಆಡಿರಲಿಲ್ಲ. ಟೂರ್ನಿಯಿಂದ ಹೊರಬಿದ್ದ ಕಾರಣ 2023ರ ಫಿಫಾ ವಿಶ್ವಕಪ್‌ಗೆ (FIFA World Cup 2023) ಅರ್ಹತೆ ಪಡೆಯುವ ಕನಸೂ ಭಗ್ನಗೊಂಡಿದೆ. ಸೆಮಿಫೈನಲ್ ಪ್ರವೇಶಿಸುವ ತಂಡಗಳಿಗೆ ವಿಶ್ವಕಪ್‌ಗೆ ಅರ್ಹತೆ ಸಿಗಲಿದೆ.