ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಕ್ಲಬ್‌ಗಳು ತಮ್ಮ ತಾರಾ ಆಟಗಾರರನ್ನು ಏಷ್ಯಾಡ್‌ಗೆ ಕಳುಹಿಸಲು ನಿರಾಕರಿಸಿದ್ದರಿಂದ ಸುನಿಲ್ ಚೆಟ್ರಿ ಸೇರಿದಂತೆ ಕೆಲವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವರದಿಯಾಗಿತ್ತು.

ನವದೆಹಲಿ(ಸೆ.14): ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ತಾರಾ ಫುಟ್ಬಾಲಿಗರ ಪಾಲ್ಗೊಳ್ಳುವಿಕೆ ಬಗ್ಗೆ ಉಂಟಾಗಿದ್ದ ಸಮಸ್ಯೆ ಕೊನೆಗೂ ಬರೆಹರಿದಿದ್ದು, ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಸುನಿಲ್‌ ಚೆಟ್ರಿ ಅವರೇ ಮುನ್ನಡೆಸಲಿದ್ದಾರೆ. ಭಾರತೀಯ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌) ಬುಧವಾರ 17 ಸದಸ್ಯರ ತಂಡವನ್ನು ಘೋಷಿಸಿತು. ಆದರೆ ಗೋಲ್‌ಕೀಪರ್‌ ಗುರುಪ್ರೀತ್‌ ಸಂಧು, ತಾರಾ ಆಟಗಾರ ಸಂದೇಶ್‌ ಝಿಂಗನ್‌ ತಂಡದಲ್ಲಿಲ್ಲ.

ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಕ್ಲಬ್‌ಗಳು ತಮ್ಮ ತಾರಾ ಆಟಗಾರರನ್ನು ಏಷ್ಯಾಡ್‌ಗೆ ಕಳುಹಿಸಲು ನಿರಾಕರಿಸಿದ್ದರಿಂದ ಸುನಿಲ್ ಚೆಟ್ರಿ ಸೇರಿದಂತೆ ಕೆಲವರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವರದಿಯಾಗಿತ್ತು. ಆದರೆ ಐಎಸ್‌ಎಲ್‌ ಆಯೋಜಕರಾದ ಫುಟ್ಬಾಲ್‌ ಕ್ರೀಡಾ ಅಭಿವೃದ್ಧಿ ಲಿಮಿಟೆಡ್‌(ಎಫ್‌ಎಸ್‌ಡಿಎಲ್‌) ಅಧಿಕಾರಿಗಳ ಜೊತೆ ಎಐಎಫ್‌ಎಫ್‌ ಮಹತ್ವದ ಸಭೆ ನಡೆಸಿದ ಬಳಿಕ, ರಾಷ್ಟ್ರೀಯ ತಂಡದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಎಫ್‌ಸಿ, ಸುನಿಲ್ ಚೆಟ್ರಿ ಅನುಪಸ್ಥಿತಿಯಲ್ಲಿ ಕೆಲ ಐಎಸ್‌ಎಲ್‌ ಪಂದ್ಯಗಳನ್ನಾಡಲು ಒಪ್ಪಿಕೊಂಡಿತು.

ಏಷ್ಯಾಡ್‌: ಒಡಿಶಾದ 13 ಅಥ್ಲೀಟ್ಸ್‌ಗೆ ತಲಾ ₹10 ಲಕ್ಷ!

ಭುವನೇಶ್ವರ್: ಕ್ರೀಡಾಪಟುಗಳನ್ನು ಉತ್ತೇಜಿಸುವುದರಲ್ಲಿ ಇತರೆಲ್ಲಾ ರಾಜ್ಯಗಳಿಗಿಂತ ಮುಂಚೂಣಿಯಲ್ಲಿ ನಿಲ್ಲುವ ಒಡಿಶಾ ಸರ್ಕಾರ, ಸದ್ಯ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಅಲ್ಲಿನ 13 ಅಥ್ಲೀಟ್‌ಗಳಿಗೆ ತಲಾ 10 ಲಕ್ಷ ರು. ಸಹಾಯಧನ ನೀಡುವುದಾಗಿ ಘೋಷಿಸಿದೆ. ತರಬೇತಿ, ಕ್ರೀಡಾಕೂಟದ ಇತರ ವೆಚ್ಚ ಭರಿಸುವ ನಿಟ್ಟಿನಲ್ಲಿ ಅಥ್ಲೀಟ್‌ಗಳಿಗೆ ಹಣಕಾಸಿನ ಸಹಾಯ ಮಾಡಲು ಸರ್ಕಾರ ಮುಂದಾಗಿದೆ. ಒಡಿಶಾ ಸರ್ಕಾರದ ನಡೆಗೆ ಹಲವು ಕ್ರೀಡಾಪಟುಗಳು ಮೆಚ್ಚುಗೆ ಸೂಚಿಸಿದ್ದಾರೆ. ಕ್ರೀಡಾಕೂಟ ಚೀನಾದ ಹ್ಯಾಂಗ್ಝೂನಲ್ಲಿ ಸೆ.23ರಿಂದ ಅ.8ರ ವರೆಗೆ ನಡೆಯಲಿದೆ.

ಜ್ಯೋತಿಷಿಯ ಸಲಹೆ ಕೇಳಿ ಭಾರತ ಫುಟ್ಬಾಲ್‌ ತಂಡ ಆಯ್ಕೆ ಮಾಡುತ್ತಿದ್ದ ಕೋಚ್‌!

ಸದ್ಯಕ್ಕೆ ನಿವೃತ್ತಿ ಬಗ್ಗೆ ಯೋಚನೆ ಇಲ್ಲ: ನೆಹ್ವಾಲ್‌

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಲಯ ಕಳೆದುಕೊಂಡು ಪರದಾಡುತ್ತಿರುವ ಲಂಡನ್‌ ಒಲಿಂಪಿಕ್ಸ್‌ ಪದಕ ವಿಜೇತೆ, ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ ನಿವೃತ್ತಿ ಬಗ್ಗೆ ಸದ್ಯ ಯೋಚಿಸುತ್ತಿಲ್ಲ ಎಂದಿದ್ದಾರೆ. 

ಪದೇ ಪದೇ ಗಾಯಗೊಳ್ಳುತ್ತಿರುವ ಕಾರಣ ಸದ್ಯದಲ್ಲೇ ನಿವೃತ್ತಿ ಘೋಷಿಸಬಹುದು ಎನ್ನುವ ಸುದ್ದಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸೈನಾ, ‘ಮಂಡಿ ನೋವಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ದಿನಕ್ಕೆ ಒಂದೆರಡು ಗಂಟೆಗಳ ಅಭ್ಯಾಸ ನಡೆಸಲೂ ಆಗುತ್ತಿಲ್ಲ. ಹೀಗಾಗಿ ಮುಂದಿನ ವರ್ಷ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಸಿಗಲಿದೆ ಎನ್ನುವ ನಂಬಿಕೆ ಇಲ್ಲ. ಆದರೆ ನಿವೃತ್ತಿ ಬಗ್ಗೆ ಈಗಲೇ ಯೋಚನೆ ಮಾಡುತ್ತಿಲ್ಲ’ ಎಂದು ಸೈನಾ ಹೇಳಿದ್ದಾರೆ. ಸೈನಾ 2022ರಲ್ಲಿ 14 ಟೂರ್ನಿಗಳ ಪೈಕಿ ಒಂದರಲ್ಲಿ ಮಾತ್ರ ಕ್ವಾರ್ಟರ್‌ಗೇರಿದ್ದು, ಈ ವರ್ಷ 6 ಟೂರ್ನಿಗಳಲ್ಲೂ ಕಳಪೆ ಪ್ರದರ್ಶನ ತೋರಿದ್ದಾರೆ.

ಏಷ್ಯಾಡ್‌ನಲ್ಲಿ ಸಿಂಧು ಪದಕ ಫೇವರಿಟ್‌ ಅಲ್ಲ: ಕೋಚ್‌ ವಿಮಲ್‌ ಕುಮಾರ್‌!

ಥಾಯ್ಲೆಂಡ್‌ ವಿಶ್ವ ಗಾಲ್ಫ್: ಬೆಂಗ್ಳೂರಿನ ತನಿಷ್ಕಾ ಭಾಗಿ

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಪ್ರತಿಷ್ಠಿತ ಥಾಯ್ಲೆಂಡ್‌ ಜೂನಿಯರ್ ವಿಶ್ವ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ಆಡಲು ಬೆಂಗಳೂರು ಮೂಲದ 16 ವರ್ಷದ ತನಿಷ್ಕಾ ಪೃಥ್ವಿ ಅವರಿಗೆ ಆಹ್ವಾನ ಸಿಕ್ಕಿದೆ. 6ನೇ ವಯಸ್ಸಿನಲ್ಲೇ ಗಾಲ್ಫ್‌ ಆಡಲು ಶುರುವಿಟ್ಟ ತನಿಷ್ಕಾ 2014ರಿಂದ ಇಲ್ಲಿವರೆಗೆ 100ಕ್ಕೂ ಹೆಚ್ಚು ದಕ್ಷಿಣ ವಲಯ ಟೂರ್ನಿಯ ಪಂದ್ಯಗಳಲ್ಲಿ ಆಡಿದ್ದಾರೆ. 2019ರಿಂದ ಇಂಡಿಯನ್ ಗಾಲ್ಫ್ ಯೂನಿಯನ್‌ನಲ್ಲೂ ಆಡುತ್ತಿದ್ದಾರೆ.