ತಂಡ ಗೆಲ್ಲುತ್ತದೆ ಎಂಬ ಮೂಢನಂಬಿಕೆಯಿಂದಾಗಿ ಅರ್ಜೆಂಟೀನಾದ ಅಧ್ಯಕ್ಷ ಹಾವಿಯರ್ ಮಿಲೈ, ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ನಿರಾಕರಿಸಿದ್ದಾರೆ. 1990ರಿಂದಲೂ ಅರ್ಜೆಂಟೀನಾದ ಅಧ್ಯಕ್ಷರು ಈ ಸಂಪ್ರದಾಯವನ್ನು ಪಾಲಿಸುತ್ತಿದ್ದು, ಲ್ಯಾಟಿನ್ ಅಮೆರಿಕದಲ್ಲಿ ಇಂತಹ ನಂಬಿಕೆಗಳು ಸಾಮಾನ್ಯವಾಗಿದೆ.
ಬ್ಯೂನಸ್ ಐರಿಸ್(ಅರ್ಜೆಂಟೀನಾ): ಮನೆಯಲ್ಲಿ ಕೂತು ಪಂದ್ಯ ವೀಕ್ಷಿಸಿದರೆ ಅರ್ಜೆಂಟೀನಾ ಗೆಲ್ಲುತ್ತೆ ಎಂಬ ಮೂಢನಂಬಿಕೆಯ ಕಾರಣದಿಂದಾಗಿ ಈ ಬಾರಿ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಲು ಅರ್ಜೆಂಟೀನಾ ಅಧ್ಯಕ್ಷ ಹಾವಿಯರ್ ಮಿಲೈ ನಿರಾಕರಿಸಿದ್ದಾರೆ.
ತಮ್ಮ ಆಪ್ತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೂಡಿ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ವೀಕ್ಷಿಸಲು ಹೋಗುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಿಲೈ, ‘ನಾನು ಕ್ರೀಡಾಂಗಣಕ್ಕೆ ಹೋಗಲ್ಲ. ಎಲ್ಲಾ 7 ಪಂದ್ಯಗಳನ್ನು ಮನೆಯಲ್ಲೇ ಕೂತು ವೀಕ್ಷಿಸಿದ್ದೇನೆ. ಚಳಿ ಇರುವುದರಿಂದ ಜಾಕೆಟ್ ಧರಿಸಿರುತ್ತೇನೆ. ಸ್ವಿಜರ್‌ಲೆಂಡ್ ವಿರುದ್ಧ ಪಂದ್ಯದಲ್ಲಿ ಜಾಕೆಟ್ ತೆಗೆದಾಗ ನಮ್ಮ ವಿರುದ್ಧ ಅವರು ಗೋಲು ಬಾರಿಸಿದ್ದರು. ಹಾಗಾಗಿ ನಾನು ಜಾಕೆಟ್ ಧರಿಸಿಯೇ ಇರುತ್ತೇನೆ’ ಎಂದಿದ್ದಾರೆ.
ಮೈದಾನಕ್ಕಿಲ್ಲ ಅಧ್ಯಕ್ಷರು:
ಅರ್ಜೆಂಟೀನಾದ ಅಧ್ಯಕ್ಷರು ಮಹತ್ವದ ಪಂದ್ಯಗಳಿಗೆ ಕ್ರೀಡಾಂಗಣಕ್ಕೆ ಬರುವುದನ್ನು ತಪ್ಪಿಸಿಕೊಳ್ಳುವುದು ಇದು ಮೊದಲೇನಲ್ಲ. 1990ರ ವಿಶ್ವಕಪ್‌ನಲ್ಲಿ ಕ್ಯಾಮರೂನ್ ವಿರುದ್ಧ ಅರ್ಜೆಂಟೀನಾ ಸೋತ ಪಂದ್ಯವನ್ನು ಆಗಿನ ಅಧ್ಯಕ್ಷ ಕಾರ್ಲೊಸ್ ಮೆನೆಮ್ ಕ್ರೀಡಾಂಗಣದಲ್ಲಿ ನೇರವಾಗಿ ವೀಕ್ಷಿಸಿದ್ದರು. ಆ ಬಳಿಕ ಯಾವುದೇ ಅಧ್ಯಕ್ಷರು ಮೈದಾನಕ್ಕೆ ಆಗಮಿಸಿಲ್ಲ.
ಮೂಢನಂಬಿಕೆ ಹೆಚ್ಚು:
ಲ್ಯಾಟಿನ್ ಅಮೆರಿಕದಲ್ಲಿ, ಅದರಲ್ಲೂ ಅರ್ಜೆಂಟೀನಾದಲ್ಲಿ ಮೂಢನಂಬಿಕೆ ಹೆಚ್ಚಾಗಿದೆ. ಕೆಲವರು ಪ್ರತಿ ಪಂದ್ಯಕ್ಕೂ ಒಂದೇ ಬಟ್ಟೆಯನ್ನು, ತೊಳೆಯದೆ ಧರಿಸುತ್ತಾರೆ. ಕೆಲವರು ಎಲ್ಲಾ ಪಂದ್ಯವನ್ನು ಒಂದೇ ಸ್ಥಳದಲ್ಲಿ ನಿಂತು ನೋಡುತ್ತಾರೆ. ಮೊದಲ ಪಂದ್ಯವನ್ನು ಬಸ್ ನಿಲ್ದಾಣ, ಬಾತ್‌ರೂಮ್, ಮನೆಯ ಹೊರಭಾಗದಲ್ಲಿ ವೀಕ್ಷಿಸಿದ್ದರೆ, ಉಳಿದೆಲ್ಲಾ ಪಂದ್ಯಗಳನ್ನು ಅಲ್ಲೇ ನಿಂತು ನೋಡುವ ಪರಿಪಾಟವಿದೆ.
1958ರ ಫುಟ್ಬಾಲ್ ವಿಶ್ವಕಪ್ ಫೈನಲ್‌ನಲ್ಲಿ ಪೀಲೆ ತೊಟ್ಟಿದ್ದ ಜೆರ್ಸಿ ₹47 ಕೋಟಿಗೆ ಹರಾಜು
ನ್ಯೂಯಾರ್ಕ್: ಈ ಬಾರಿ ಫುಟ್ಬಾಲ್ ವಿಶ್ವಕಪ್ ಫೈನಲ್‌ನ ಸಂದರ್ಭದಲ್ಲೇ ಬ್ರೆಜಿಲ್ ಫುಟ್ಬಾಲ್ ದಂತಕಥೆ ಪೀಲೆ ಅವರು 1958ರ ವಿಶ್ವಕಪ್ ಫೈನಲ್‌ನಲ್ಲಿ ಧರಿಸಿದ್ದ ಜೆರ್ಸಿ ನಂ.10 ಹರಾಜಿನಲ್ಲಿ ದಾಖಲೆಯ 47.2 ಕೋಟಿ ರು.ಗೆ ಬಿಕರಿಯಾಗಿದೆ. ಇದು ಇದುವರೆಗೆ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಜೆರ್ಸಿ ಎನಿಸಿಕೊಂಡಿದೆ. 2022ರಲ್ಲಿ ಅರ್ಜೇಂಟೀನಾದ ಡಿಯಾಗೋ ಮರಡೋನಾ ಅವರ ಜೆರ್ಸಿ 89.56 ಕೋಟಿ ರು.ಗೆ ಮಾರಾಟವಾಗಿತ್ತು.
1958ರಲ್ಲಿ ಸ್ಟಾಕ್‌ಹೋಮ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಬ್ರೆಜಿಲ್ ತಂಡ ಸ್ವೀಡನ್ ವಿರುದ್ಧ 5-2 ಅಂತರದಲ್ಲಿ ಗೆದ್ದಿತ್ತು. ಆಗ ಪೀಲೆ ಕೇವಲ 17 ವರ್ಷದವರಾಗಿದ್ದರು. ಅವರು ಎರಡು ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.

