ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸ್ಪೇನ್‌ನ ರಕ್ಷಣಾ ತಂತ್ರಕ್ಕೆ ಸಿಲುಕಿ ಫ್ರಾನ್ಸ್‌ನ ಸ್ಟಾರ್ ಆಟಗಾರ ಎಂಬಾಪೆ ಮಂಕಾದರು. ಆದರೂ, 8 ಗೋಲುಗಳೊಂದಿಗೆ ಗೋಲ್ಡನ್ ಬೂಟ್ ರೇಸ್‌ನಲ್ಲಿ ಅವರು ಇನ್ನೂ ಮುಂಚೂಣಿಯಲ್ಲಿದ್ದು, ಫ್ರಾನ್ಸ್ ಈಗ 3ನೇ ಸ್ಥಾನಕ್ಕಾಗಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
ಫಿಫಾ ವಿಶ್ವಕಪ್ ಫೈನಲ್‌ಗೇರದಿದ್ದರೂ ಕೀಲಿಯನ್ ಎಂಬಾಪೆ ಈಗಲೂ ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು 8 ಗೋಲು ಬಾರಿಸಿದ್ದು, 3 ಬಾರಿ ಗೋಲು ಗಳಿಸಲು ನೆರವು(ಅಸಿಸ್ಟ್) ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ಗೂ ಮುನ್ನ ಲಿಯೋನಲ್ ಮೆಸ್ಸಿ 8 ಗೋಲು ಗಳಿಸಿದ್ದು, 2 ಅಸಿಸ್ಟ್ ನೀಡಿದ್ದಾರೆ. ಅವರು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರೂ ಟೂರ್ನಿಯಲ್ಲಿ ಇನ್ನೊಂದು ಪಂದ್ಯಗಳನ್ನಾಡಲಿದ್ದಾರೆ. ಎರ್ಲಿಂಗ್ ಹಾಲ್ಯಾಂಡ್ 7 ಗೋಲುಗಳೊಂದಿಗೆ ಅಭಿಯಾನ ಕೊನೆಗೊಳಿಸಿದ್ದಾರೆ.
ಎಂಬಾಪೆಗೆ ಸ್ಪೇನ್ ಬ್ರೇಕ್: ಟಚ್ ಕೇವಲ 34, ಗುರಿಯತ್ತ ಶಾಟ್ 0!
ಈ ಬಾರಿ ವಿಶ್ವಕಪ್‌ನ ಶ್ರೇಷ್ಠ ಆಟಗಾರ, ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಎಂಬಾಪೆಯನ್ನು ಸ್ಪೇನ್ ರಕ್ಷಣಾಪಡೆ ಅಕ್ಷರಶಃ ಕಟ್ಟಿಹಾಕಿತು. ಟೂರ್ನಿಯುದ್ದಕ್ಕೂ ಅಬ್ಬರಿಸಿ 8 ಗೋಲ್ ಬಾರಿಸಿದ್ದ 27 ವರ್ಷದ ಎಂಬಾಪೆ ಸ್ಪೇನ್ ವಿರುದ್ಧ ಮಂಕಾದರು. ಪಂದ್ಯದಲ್ಲಿ ಅವರ ಆಟ ಮತ್ತು ಅಂಕಿಅಂಶ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಪಂದ್ಯದಲ್ಲಿ ಅವರು ಕೇವಲ 34 ಬಾರಿ ಮಾತ್ರ ಚೆಂಡನ್ನು ಸ್ಪರ್ಶಿಸಿದರು. ಮೊದಲಾರ್ಧದಲ್ಲಿ 14 ಟಚ್ ಪಡೆದರೆ, ದ್ವಿತೀಯಾರ್ಧದಲ್ಲಿ 20 ಟಚ್ ಲಭಿಸಿತು. ಅವರು ಕೇವಲ 3 ಶಾಟ್‌ಗಳನ್ನು ಹೊಡೆದರು. ಗೋಲ್ ಪೋಸ್ಟ್‌ನತ್ತ ಒಂದೂ ಹೊಡೆತ ಕಂಡುಬರಲಿಲ್ಲ. 6 ಬಾರಿ ಡ್ರಿಬ್ಲಿಂಗ್‌ಗೆ ಪ್ರಯತ್ನಿಸಿದ ಅವರು ಕೇವಲ ಒಮ್ಮೆ ಮಾತ್ರ ಯಶಸ್ಸು ಪಡೆದರು.
ಎಂಬಾಪೆ ಮಾತ್ರವಲ್ಲದೆ ಇನ್ನಿಬ್ಬರು ಸ್ಟಾರ್‌ಗಳಾದ ಡೆಂಬೆಲೆ ಹಾಗೂ ಒಲೈಸ್ ಅವರನ್ನೂ ಸ್ಪೇನ್ ನಿಖರ ಯೋಜನೆಯಂತೆ ಕಟ್ಟಿಹಾಕಿತು. ಈ ಮೂವರಿಗೆ ಹೆಚ್ಚು ಬಾರಿ ಚೆಂಡು ಸಿಗದಂತೆ ನೋಡಿಕೊಂಡ ಸ್ಪೇನ್ ಅರ್ಹವಾಗಿಯೇ ಗೆಲುವು ತನ್ನದಾಗಿಸಿಕೊಂಡಿತು.-
3ನೇ ಸ್ಥಾನಕ್ಕೆ ಹೋರಾಟ:
ಫ್ರಾನ್ಸ್ ತಂಡ ಇನ್ನು 3ನೇ ಸ್ಥಾನಕ್ಕಾಗಿ ಹೋರಾಡಲಿದೆ. ಇಂಗ್ಲೆಂಡ್ ತಂಡದ ವಿರುದ್ಧ ಫ್ರಾನ್ಸ್ ಶನಿವಾರ ಸೆಣಸಾಡಲಿದೆ. ಈ ಹಿಂದೆ 1958, 1986ರಲ್ಲಿ ಫ್ರಾನ್ಸ್ 3ನೇ ಸ್ಥಾನಿಯಾಗಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ಎದುರು ರೋಚಕ ಸೋಲು ಕಂಡಿರುವ ಇಂಗ್ಲೆಂಡ್‌ಗೆ ಇದೀಗ ಫ್ರಾನ್ಸ್‌ನಿಂದ ಕಠಿಣ ಪೈಪೋಟಿ ಎದುರಾಗಲಿದೆ.

