Story Of Lionel Messi: ಕುಬ್ಜನಾಗುವ ಹಾದಿಯಲ್ಲಿದ್ದ ಮೆಸ್ಸಿಯನ್ನು ಎಳೆದು, ಬಿಗಿ ಮಾಡಿದ್ದ ಬಾರ್ಸಿಲೋನಾ ಎಫ್‌ಸಿ!
ಥಂಬ್ಸ್ ಅಪ್ ಸ್ಟೈಲ್‌ನಲ್ಲಿರುವ ದಕ್ಷಿಣ ಅಮೆರಿಕದಲ್ಲಿ ಹೆಬ್ಬೆರಳಿನ ಆಕೃತಿಯಲ್ಲಿರುವ ದೇಶ ಅರ್ಜೆಂಟೀನಾ. ಕೇಂದ್ರ ಅರ್ಜೆಂಟೀನಾದ ಪ್ರಮುಖ ನಗರವಾದ ರೊಸಾರಿಯೋದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅಂದರೆ ಲಿಯೋನೆಲ್ ಮೆಸ್ಸಿ. ಪ್ರಸ್ತುತ ವಿಶ್ವದ ಸರ್ವಶ್ರೇಷ್ಠ ಆಟಗಾರ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಮೆಸ್ಸಿ ಫುಟ್ಬಾಲ್ ಲೋಕದಲ್ಲಿ ತನ್ನ ಛಾಪು ಮೂಡಿಸಿದ ರೀತಿಗೆ ತನ್ನದೇ ಆದ ಕಥೆಯಿದೆ.
ಬೆಂಗಳೂರು (ಡಿ. 17): ದಕ್ಷಿಣ ಅಮೆರಿಕಾದ ದಕ್ಷಿಣ ಭಾಗದಲ್ಲಿ ಸುಮಾರು 50 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಅರ್ಜೆಂಟೀನಾ ಇಂದು ಸಂತೋಷ ಅಲೆಯಲ್ಲಿದೆ. ಯಾಕೆಂದರೆ, ವಿಶ್ವದಲ್ಲಿಯೇ ಗರಿಷ್ಠ ಜನರು ವೀಕ್ಷಿಸುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿ ಗೆಲ್ಲುವ ಕನಸಿನಿಂದ ಬರೀ ಒಂದು ಹೆಜ್ಜೆ ದೂರದಲ್ಲಿದೆ. ಇನ್ನು ಅರ್ಜೆಂಟೀನಾ ದೇಶಕ್ಕೆ ಪ್ರತಿ ಬಾರಿ ವಿಶ್ವಕಪ್ ಕನಸನ್ನು ಕೊಟ್ಟ ವ್ಯಕ್ತಿ ಕೂಡ ಈ ಬಾರಿಯೂ ತಂಡದಲ್ಲಿದ್ದಾರೆ. ಸಾಲು ಸಾಲು ವಿಶ್ವಕಪ್ ಸೋಲುಗಳ ನಡುವೆಯೂ ವಿಶ್ವದ ಶ್ರೇಷ್ಠ ಐಕಾನ್‌ಗಳಲ್ಲಿ ಒಂದಾಗಿರುವ ಹೆಸರು ಲಿಯೋನೆಲ್ ಮೆಸ್ಸಿ. ಅರ್ಜೆಂಟೀನಾದ ಇತಿಹಾಸದ ಬಗ್ಗೆ ಕಣ್ಣು ಹಾಯಿಸುವುದಾದರೆ, ಅರ್ಜೆಂಟೀನಾ ಯಾವಾಗಲೂ ರಾಜಕೀಯ ಹಾಗೂ ಆರ್ಥಿಕ ತೊಂದರೆಗಳಿಂದ ಬಳಲಿದ ದೇಶ. ಅರ್ಜೆಂಟೀನಾ ಪಾಲಿಗೆ ಸ್ಪಷ್ಟವೆನಿಸಿದ ಪ್ರಜಾಪ್ರಭುತ್ವ ಬಂದಿದ್ದೇ 1983ರಲ್ಲಿ. ಅದಕ್ಕೂ ಮುನ್ನ 6 ಬಾರಿ ಚುನಾಯಿತ ಸರ್ಕಾರ ಅಧಿಕಾರಕ್ಕೆ ಬಂದರೂ, ದೇಶದ ಸೇನೆಯು ದಂಗೆ ಮಾಡಿ ಅಧಿಕಾರವನ್ನು ವಶಪಡಿಸಿಕೊಂಡಿತ್ತು. 1983ರಲ್ಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ವಿಶ್ವದ ಎದುರು ಬಂದ ಅರ್ಜೆಂಟೀನಾ ಇಂದಿಗೂ ಅದೇ ರೀತಿಯ ರಾಜಕೀಯ ವ್ಯವಸ್ಥೆಯಲ್ಲಿದೆ.
1983ರಿಂದ ಆಂತರಿಕ ಕಲಹಗಳಿಂದಾದ ಗಾಯವನ್ನು ಅರ್ಜೆಂಟೀನಾ ಗುಣ ಮಾಡಿಕೊಳ್ಳುತ್ತಾ ಸಾಗಿತು. 1978ರಲ್ಲಿ ವಿಶ್ವಕಪ್ ಗೆಲುವು ಸಾಧಿಸಿದ್ದ ಅರ್ಜೆಂಟೀನಾ, 1986ರಲ್ಲಿ ಮತ್ತೊಮ್ಮೆ ವಿಜಯ ಸಾಧಿಸಿತು. ನೋವುಗಳ ಸಂಕಷ್ಟದಲ್ಲೇ ಮುಳುಗಿದ್ದ ದೇಶಕ್ಕೆ ನಲಿವು ತಂದಿದ್ದು ಫುಟ್‌ಬಾಲ್. ಆದರೆ, 2ನೇ ಬಾರಿಗೆ ವಿಶ್ವಕಪ್ ಗೆದ್ದ ಮರು ವರ್ಷವೇ ಅರ್ಜೆಂಟೀನಾದ ಹೆಸರನ್ನು ಜಗತ್ತಿನ ಮೂಲೆಮೂಲೆಗೂ ಪಸರಿಸಿದ ವ್ಯಕ್ತಿ, ರೊಸಾರಿಯೋದ ಗ್ರಾಮಾಂತರದ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ್ದ. ಲಿಯೋನೆಲ್ ಆಂಡ್ರೆಸ್ ಮೆಸ್ಸಿ ಅಂದರೆ ಲಿಯೋನೆಲ್ ಮೆಸ್ಸಿ. ಇಂದು ವಿಶ್ವದ ಅತ್ಯಂತ ಜನಪ್ರಿಯ ಫುಟ್‌ಬಾಲ್ ತಾರೆಗಳಲ್ಲಿ ಒಬ್ಬರು. ಮಧ್ಯಮವರ್ಗದ ಕುಟುಂಬದಿಂದ ಬಂದು ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಟಗಾರನಲ್ಲಿ ಅದಕ್ಕಿಂತಲೂ ದೊಡ್ಡ ಹೋರಾಟದ ಕಥೆಯಿದೆ.
ಲಿಯೋನೆಲ್ ಮೆಸ್ಸಿಯ ತಂದೆ ರೊಸಾರಿಯೋದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಹೋಟೆಲ್‌ನಲ್ಲಿ ಕ್ಲೀನರ್ ಆಗಿದ್ದರು. ಆದರೆ, ಮೆಸ್ಸಿ ತಂದೆ ಫುಟ್‌ಬಾಲ್ ಕ್ಲಬ್‌ಗೆ ಕೋಚ್ ಆಗಿದ್ದ ಕಾರಣಕ್ಕೆ ಅವರ ಮನೆಯಲ್ಲಿ ಫುಟ್‌ಬಾಲ್‌ನ ವಾತಾವರಣ ಎಂದಿಗೂ ಇರುತ್ತಿತ್ತು. ಇದೇ ಸಮಯದಲ್ಲಿ ತನ್ನ 5ನೇ ವರ್ಷದಲ್ಲಿಯೇ ಮೆಸ್ಸಿ ಫುಟ್‌ಬಾಲ್ ಕ್ಲಬ್‌ಗೆ ಸೇರಿಕೊಂಡಿದ್ದರು. ಅಲ್ಲಿ ಫುಟ್‌ಬಾಲ್‌ನ ಮೂಲ ಪಾಠಗಳನ್ನು ಮೆಸ್ಸಿ ಕಲಿತಿದ್ದರು. 8ನೇ ವರ್ಷದ ವೇಳೆಗಾಗಲೇ ಮೆಸ್ಸಿ, ಫುಟ್‌ಬಾಲ್ ಕ್ಲಬ್ ಬದಲಿಸುವಷ್ಟು ಪ್ರಖಾಂಡನಾಗಿದ್ದ. ಅದರಂತೆ ನೀವೆಲ್ ಓಲ್ಡ್ ಬಾಯ್ಸ್ ಕ್ಲಬ್‌ಗೆ ಸೇರಿಕೊಂಡ ಬೆನ್ನಲ್ಲಿಯೇ, ಮೆಸ್ಸಿಗೆ ಗಂಭೀರ ಕಾಯಿಲೆ ಇರೋದು ಗೊತ್ತಾಗಿತ್ತು.
11ನೇ ವಯಸ್ಸಿನ ವೇಳೆಗೆ ಲಿಯೋನೆಲ್ ಮೆಸ್ಸಿಗೆ ಬೆಳವಣಿಗೆ ಹಾರ್ಮೋನ್ ಕೊರತೆ ಗೊತ್ತಾಗಿತ್ತು. ಅದಾಗಲೇ ಸಣ್ಣ ಮಟ್ಟದಲ್ಲಿ ತನ್ನ ಲಕ್ಷಣವನ್ನೂ ತೋರಿಸಲು ಆರಂಭಿಸಿತ್ತು. ಹಾಗೇನಾದರೂ, ಈ ರೋಗ ಮೆಸ್ಸಿಯಲ್ಲಿ ಇನ್ನಷ್ಟು ಬಾಧಿಸಿದ್ದರೆ, ಖಂಡಿತವಾಗಿ ವಿಶ್ವವು ಶ್ರೇಷ್ಠ ಫುಟ್‌ಬಾಲ್ ಆಟಗಾರನನ್ನು ಕಳೆದುಕೊಳ್ಳುತ್ತಿತ್ತು. ಬೆಳವಣಿಗೆ ಹಾರ್ಮೋನ್ ಕೊರತೆ ಅಂದರೆ ಗ್ರೋತ್ ಹಾರ್ಮೋನ್ ಡೆಫಿಸಿಟಿ ಇದ್ದಲ್ಲಿ ವ್ಯಕ್ತಿ ಬೆಳೆಯೋದಿಲ್ಲ. 11ನೇ ವರ್ಷಕ್ಕೆ ಮೆಸ್ಸಿ ಇದರ ಹಿಡಿತಕ್ಕೆ ಬಂದಿದ್ದರೆ, ಬಹುಶಃ ಅವರು ಕುಬ್ಜರಾಗಿಯೇ ಉಳಿದುಬಿಡುತ್ತಿದ್ದರು. ಕಾಯಿಲೆ ಇರೋದು ಮೆಸ್ಸಿ ಕುಟುಂಬಕ್ಕೆ ಗೊತ್ತಾದರೂ ಅದಕ್ಕೆ ಚಿಕಿತ್ಸೆ ಕೊಡಿಸುವಷ್ಟು ಸ್ಥಿತಿವಂತ ಕುಟುಂಬ ಅವರದಾಗಿರಲಿಲ್ಲ.
ಒಂದೆಡೆ ರೋಗ ಲಕ್ಷಣ ಕಂಡರೆ, ಇನ್ನೊಂಡೆ ಫುಟ್‌ಬಾಲ್ ಆಟಗಾರನಾಗಿ ಮೆಸ್ಸಿ ಮಾಂತ್ರಿಕವಾಗಿ ಆಡುತ್ತಿದ್ದ. ರಿವರ್ ಪ್ಲೇಟ್ ಕ್ಲಬ್, ಮೆಸ್ಸಿಯನ್ನು ತನ್ನೊಂದಿಗೆ ಇರಿಸಿಕೊಳ್ಳುವ ಮಾತನಾಡಿತ್ತು. ಆದರೆ, ಕ್ಲಬ್ ವೈದ್ಯಕೀಯ ವೆಚ್ಚ ಭರಿಸುವುದಾಗಿ ಹೇಳಿದ್ದರೂ, ಔಷಧಗಳ ವೆಚ್ಚ ಪೋಷಕರೇ ಭರಿಸಬೇಕು ಎಂದಿತ್ತು. ಆದರೆ, ಮೆಸ್ಸಿ ಪಾಲಕರಿಗೆ ಅದೂ ಕೂಡ ಸಾಧ್ಯವಿರಲಿಲ್ಲ. ಆದರೆ, ಮೆಸ್ಸಿ ಪಾಲಿಗೆ ಅದೃಷ್ಟ ಎನ್ನುವುದು ಸ್ಪೇನ್‌ನಲ್ಲಿ ಕಾದಿತ್ತು. ತನ್ನ ಚಾಣಾಕ್ಷ ಆಟದ ಮೂಲಕ ಆಗಲೇ ಫುಟ್‌ಬಾಲ್ ಲೋಕದ ಗಮನಸೆಳೆದಿದ್ದ ಮೆಸ್ಸಿ ಹೆಸರು ಸ್ಪೇನ್‌ನ ವಿಶ್ವಪ್ರಸಿದ್ಧ ಬಾರ್ಸಿಲೋನಾ ಎಫ್‌ಸಿ ಟ್ಯಾಲೆಂಟ್ ಹಂಟ್ ಟೀಮ್‌ನ ಕಿವಿಗೆ ಬಿದಿತ್ತು. ರೊಸಾರಿಯೋಗೆ ಬಂದು ಸಣ್ಣ ಪಟ್ಟಣ, ಶಾಲೆ, ಕಾಲೇಜು ಹಾಗೂ ಭಿನ್ನ ಕ್ಲಬ್‌ಗಳಲ್ಲಿ ಟ್ಯಾಲೆಂಟ್ ಹಂಟ್ ಮಾಡಿತು.
ಅದಾಗಲೇ ಮೆಸ್ಸಿ ಆಟದ ಬಗ್ಗೆ ತಿಳಿದಿದ್ದ ಬಾರ್ಸಿಲೋನಾ ಎಫ್‌ಸಿಯ ಕ್ರೀಡಾ ನಿರ್ದೇಶಕ ಕಾರ್ಲ್ಸ್ ರಜಾಕ್, ಮೆಸ್ಸಿಯನ್ನು ಕ್ಲಬ್‌ಗೆ ಸೇರಿಸಿಕೊಳ್ಳುವ ನಿರ್ಧಾರವನ್ನು ಒಂದೇ ಕ್ಷಣದಲ್ಲಿ ಮಾಡಿಬಿಟ್ಟಿದ್ದರು. ಆತನ ಕಾಯಿಲೆ ಬಗ್ಗೆಯೂ ಮಾಹಿತಿ ಪಡೆದುಕೊಂಡ ಅವರು, ಔಷಧಿಗಳು ಮಾತ್ರವಲ್ಲ, ಆತನ ಸಂಪುರ್ಣ ಚಿಕಿತ್ಸಾ ವೆಚ್ಚ ಹುಡುಗನ ಆಗು ಹೋಗುಗಳ ಎಲ್ಲಾ ವೆಚ್ಚ ಭರಿಸುವುದಾಗಿ ಹೇಳಿತ್ತು. ಅದಕ್ಕಾಗಿ ಮುಂದಿಟ್ಟಿದ್ದು ಒಂದೇ ಷರತ್ತು. ಇನ್ನು ಮುಂದೆ ಲಿಯೋನೆಲ್ ಮೆಸ್ಸಿಯ ಊರು ರೊಸಾರಿಯೋ ಆಗಿರೋದಿಲ್ಲ. ಆತನ ಊರು ಬಾರ್ಸಿಲೋನಾ ಆಗಿರುತ್ತದೆ ಎನ್ನುವುದು. ಮಗ ಎಲ್ಲಿದರೆ ಏನು, ಹುಷಾರಾದರೆ ಸಾಕು ಎನ್ನುವಂತಿದ್ದ ತಂದೆ-ತಾಯಿ ಒಪ್ಪಿಗೆ ಸೂಚಿಸಿದರು. ಅಲ್ಲಿಂದ ಆರಂಭವಾಗಿದ್ದು ಮೆಸ್ಸಿನ ಅವಿಸ್ಮರಣೀಯ ಫುಟ್‌ಬಾಲ್ ಜೀವನ.
FIFA World Cup: 234 ಕೋಟಿ ಮೌಲ್ಯದ 4 ಬಂಗಲೆ, ಮನೆಯಲ್ಲೇ ಫುಟ್‌ಬಾಲ್ ಗ್ರೌಂಡ್, ಇದು ಮೆಸ್ಸಿಯ ಐಷಾರಾಮಿ ಜೀವನ!
2001-02ರಲ್ಲಿ ಹೆಚ್ಚುನ ಸಮಯವನ್ನು ಮೆಸ್ಸಿ ಯುರೋಪ್‌ನಲ್ಲಿ ನೆಲೆಸಲು ಕಳೆದಿದ್ದರು. ಕ್ಲಬ್ ವರ್ಗಾವಣೆಯ ಔಪಚಾರಿಕತೆ ಪೂರ್ಣವಾಗಲು ಬಹಳ ಸಮಯ ಹಿಡಿಯಿತು. ಅದರ ಬೆನ್ನಲ್ಲಿಯೇ ಬಾರ್ಸಿಲೋನಾ-ಬಿ ಟೀಮ್‌ಗೆ ಮೆಸ್ಸಿ ಆಯ್ಕೆ ಆಗಿದ್ದರು. ಬಹುಶಃ ತಂಡ ಆಡಿದ ಪ್ರತಿ ಪಂದ್ಯದಲ್ಲೂ ಮೆಸ್ಸಿ ಕನಿಷ್ಠ 1 ಗೋಲು ಬಾರಿಸಿದ್ದರು. ಆ ಋತುವಿನಲ್ಲಿ ಆಡಿದ 30 ಪಂದ್ಯಗಳಿಂದ 35 ಗೋಲು ಅವರ ಕಾಲಿನಿಂದ ಬಂದಿತ್ತು. 14ನೇ ವರ್ಷದ ವೇಳೆ ಇದೇ ತಂಡದೊಂದಿಗೆ ಮುಂದುವರಿದ್ದ ಮೆಸ್ಸಿ, ಆಡಿದೆಲ್ಲಾ ಪಂದ್ಯಗಳಲ್ಲೂ ದಾಖಲೆ ಮಾಡಿದರು. ಸಣ್ಣ ಸಣ್ಣ ಲೀಗ್‌ಗಳನ್ನೂ ಮೆಸ್ಸಿ ಹೆಸರು ಮಾಡುತ್ತಿದ್ದರೆ, ಇನ್ನೊಂದೆಡೆ ಆತನ ಕಾಯಿಲೆ ಗುಣಮುಖವಾಗುವ ಹಾದಿಯಲ್ಲಿತ್ತು. ಎಲ್ಲರಂತೆ ಸ್ವಸ್ಥವಾಗಿ ಆತ ಬೆಳೆಯುತ್ತಿದ್ದ.
FIFA World Cup 3ನೇ ಬಾರಿ ಚಾಂಪಿಯನ್ ಪಟ್ಟಕ್ಕೆ ಫ್ರಾನ್ಸ್-ಅರ್ಜೆಂಟೀನಾ ಸೆಣಸು
2004-05ರಲ್ಲಿ ತಮ್ಮ 17ನೇ ವರ್ಷದಲ್ಲಿ ಮೆಸ್ಸಿ ಬಾರ್ಸಿಲೋನಾ ಕ್ಲಬ್‌ಗೆ ಪಾದಾರ್ಪಣೆ ಮಾಡಿದ್ದ. ಬಾರ್ಸಿಲೋನಾ ಪರವಾಗಿ ಫುಟ್‌ಬಾಲ್ ಆಡಿದ ಮೂರನೇ ಅತ್ಯಂತ ಕಿರಿಯ ಆಟಗಾರ ಅವರಾಗಿದ್ದರು. 2005ರ ಮೇ 1 ರಂದು ಸೀನಿಯರ್ ತಂಡದ ಪರವಾಗಿ ಮೆಸ್ಸಿ ಮೊದಲ ಗೋಲು ಬಾರಿಸಿದ್ದರು. ಅದೇ ವರ್ಷದ ಜೂನ್ 24 ರಂದು ಬಾರ್ಸಿಲೋನಾ ಕ್ಲಬ್‌ನ ಸೀನಿಯರ್ ಪ್ಲೇಯರ್ ಆಗಿ ಮೆಸ್ಸಿ ಸಹಿ ಮಾಡಿದರು. ನಂತರ ಆಗಿದೆಲ್ಲವೂ ಇತಿಹಾಸ.
ಹಾಗೇನಾದರೂ ಭಾನುವಾರ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಅರ್ಜೆಂಟೀನಾ ಮಣಿಸಿದರೆ, ಬ್ರೆಜಿಲ್‌ನ ದಿಗ್ಗಜ ಪೀಲೆ, ಅರ್ಜೆಂಟೀನಾದ ಡೀಗೋ ಮರಡೋನಾ ಸಾಲಿಗೆ ಅವರು ಸೇರ್ಪಡೆಯಾಗಲಿದ್ದಾರೆ.