FIFA World Cup 3ನೇ ಬಾರಿ ಚಾಂಪಿಯನ್ ಪಟ್ಟಕ್ಕೆ ಫ್ರಾನ್ಸ್-ಅರ್ಜೆಂಟೀನಾ ಸೆಣಸು
ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಫ್ರಾನ್ಸ್-ಅರ್ಜೆಂಟೀನಾ ಫೈಟ್
ಮೂರನೇ ಟ್ರೋಫಿ ಗೆಲ್ಲಲು ಉಭಯ ತಂಡಗಳು ಕಾತರ
ಸತತ ಎರಡನೇ ಬಾರಿಗೆ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಫ್ರಾನ್ಸ್
ದೋಹಾ(ಡಿ.16): ಪಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಭಾನುವಾರ(ಡಿ.18) ನಡೆಯಲಿದ್ದು, ಫ್ರಾನ್ಸ್-ಅರ್ಜೆಂಟೀನಾ ಪ್ರಶಸ್ತಿಗಾಗಿ ಸೆಣಸಲಿವೆ. ಫ್ರಾನ್ಸ್ 4ನೇ ಬಾರಿ ಫೈನಲ್‌ಗೇರಿ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, 60 ವರ್ಷದಲ್ಲೇ ಸತತ 2ನೇ ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಇನ್ನು 6ನೇ ಫೈನಲ್ ಆಡುತ್ತಿರುವ ಅರ್ಜೆಂಟೀನಾ ಕೂಡಾ 3ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಕಾತರದಲ್ಲಿದೆ. ತಂಡ 1978, 1986ರಲ್ಲಿ ಚಾಂಪಿಯನ್ ಆಗಿದ್ದರೆ, 1930, 1990 ಹಾಗೂ 2014ರಲ್ಲಿ ರನ್ನರ್-ಆಪ್ ಆಗಿತ್ತು. ಅರ್ಜೆಂಟೀನಾ, 2002ರಲ್ಲಿ ಬ್ರೆಜಿಲ್ ಬಳಿಕ ಪ್ರಶಸ್ತಿ ಗೆದ್ದ ದಕ್ಷಿಣ ಅಮೆರಿಕದ ಮೊದಲ ತಂಡ ಎನಿಸಿಕೊಳ್ಳುವ ತವಕದಲ್ಲಿದೆ. ಕಳೆದ 4 ಆವೃತ್ತಿಗಳಲ್ಲಿ ಯುರೋಪಿನ ತಂಡಗಳು(ಸ್ಪೇನ್, ಇಟಲಿ, ಜರ್ಮನಿ, ಫ್ರಾನ್ಸ್) ಚಾಂಪಿಯನ್ ಆಗಿದ್ದವು.
ಫ್ರೆಂಚ್ ಡಿಫೆನ್ಸ್ ಮುಂದೆ ಮಂಕಾದ ಮೊರಾಕ್ಕೊ!
ಫ್ರಾನ್ಸ್ ತಾನೇಕೆ ಹಾಲಿ ಚಾಂಪಿಯನ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಟೂರ್ನಿಯಲ್ಲಿ ಈ ವರೆಗೂ ಫ್ರಾನ್ಸ್‌ನ ಆಕ್ರಮಣಕಾರಿ ಆಟವನ್ನು ಹೆಚ್ಚಾಗಿ ನೋಡಿದ್ದ ಅಭಿಮಾನಿಗಳಿಗೆ ಈ ಪಂದ್ಯದಲ್ಲಿ ತಂಡದ ಬಲಶಾಲಿ ಡಿಫೆನ್ಸ್‌ನ ದರ್ಶನವಾಯಿತು. ಪಂದ್ಯದುದ್ದಕ್ಕೂ ಅತ್ಯಾಕರ್ಷಕ ರಕ್ಷಣಾ ಕೌಶಲ್ಯ ಪ್ರದರ್ಶಿಸಿದ ಫ್ರಾನ್ಸ್ ಆಟಗಾರರು ಮೊರಾಕ್ಕೊ ತಂಡದ ಹಲವು ಗೋಲು ಬಾರಿಸುವ ಅವಕಾಶಗಳಿಗೆ ಕಡಿವಾಣ ಹಾಕಿದರು.
ಮೊರಾಕ್ಕೊ ಫೈನಲ್ ಕನಸು ಭಗ್ನ, ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್ ಫ್ರಾನ್ಸ್..!
ಶೇ.62ರಷ್ಟು ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ, ಫ್ರಾನ್ಸ್‌ಗೆ ಹೋಲಿಸಿದರೆ 200ಕ್ಕೂ ಹೆಚ್ಚು ಪಾಸ್‌ಗಳನ್ನು ಪೂರೈಸಿದರೂ ಮೊರಾಕ್ಕೊ ಒಂದೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಫ್ರಾನ್ಸ್‌ನ ನಾಯಕ ಹಾಗೂ ಗೋಲ್ ಕೀಪರ್ ಹ್ಯುಗೊ ಲೊರಿಸ್ ಅವರ ಮುಂದಾಳತ್ವದ ರಕ್ಷಣಾ ಪಡೆಯನ್ನು ವಂಚಿಸಲು ಮೊರಾಕ್ಕೊ ಫಾರ್ವರ್ಡ್ಸ್ ಹಾಗೂ ಮಿಡ್‌ಫೀಲ್ಡರ್‌ಗಳು ವಿಫಲರಾದರು.
3ನೇ ಸ್ಥಾನಕ್ಕೆ ನಾಳೆ ಮೊರಾಕ್ಕೊ, ಕ್ರೊವೇಷಿಯಾ ಮುಖಾಮುಖಿ
ಶನಿವಾರ 3ನೇ ಸ್ಥಾನಕ್ಕೆ ನಡೆಯುವ ಪಂದ್ಯದಲ್ಲಿ ಕ್ರೊವೇಷಿಯಾ ಹಾಗೂ ಮೊರಾಕ್ಕೊ ಸೆಣಸಾಡಲಿವೆ. ಕಳೆದ ಆವೃತ್ತಿ ರನ್ನರ್-ಅಪ್ ಕ್ರೊವೇಷಿಯಾ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೋಲುಂಡಿತ್ತು.
ಪಿಎಸ್‌ಜಿ ತಂಡ ಸೇರಿದ ಆಟಗಾರನಿಗೆ ಅದೃಷ್ಟ?
ಫ್ರೆಂಚ್ ಲೀಗ್‌ನ ಪ್ಯಾರಿಸ್ ಸೇಂಟ್ ಜರ್ಮೈನ್(ಪಿಎಸ್‌ಜಿ) ತಂಡಕ್ಕೆ ಸೇರಿದರೆ ವಿಶ್ವಕಪ್ ಗೆಲ್ಲುವ ಅದೃಷ್ಟಒಲಿಯುತ್ತಾ ಎನ್ನುವ ಚರ್ಚೆಯೊಂದು ಸಾಮಾಜಿಕ ತಾಣಗಳಲ್ಲಿ ನಡೆಯುತ್ತಿದೆ. 2001ರಲ್ಲಿ ರೊನಾಲ್ಡಿನೋ ಪಿಎಸ್‌ಜಿ ಸೇರಿದ್ದರು 2002ರಲ್ಲಿ ಬ್ರೆಜಿಲ್ ಚಾಂಪಿಯನ್ ಆಗಿತ್ತು. 2017ರಲ್ಲಿ ಕಿಲಿಯಾನ್ ಎಂಬಾಪೆ ಪಿಎಸ್‌ಜಿ ತಂಡಕ್ಕೆ ಸೇರ್ಪಡೆಗೊಂಡಿದ್ದರು, 2018ರಲ್ಲಿ ಫ್ರಾನ್ಸ್ ಚಾಂಪಿಯನ್ ಆಗಿತ್ತು. 2021ರಲ್ಲಿ ಲಿಯೋನೆಲ್ ಮೆಸ್ಸಿ ಪಿಎಸ್‌ಜಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿ ತಂಡ ಕೂಡಿಕೊಂಡಿದ್ದರು. 2022ರಲ್ಲಿ ಅರ್ಜೆಂಟೀನಾ ಫೈನಲ್ ಪ್ರವೇಶಿಸಿ ಪ್ರಶಸ್ತಿ ನಿರೀಕ್ಷೆಯಲ್ಲಿದೆ.
ಸಂಭ್ರಮಾಚರಣೆ ವೇಳೆ ಫ್ರಾನ್ಸ್‌ನ 14ರ ಬಾಲಕ ಸಾವು
ಫ್ರಾನ್ಸ್‌ನ ಮಾಂಟ್‌ಪೆಲಿಯರ್ ನಗರದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಕಾರು ಹರಿದ ಪರಿಣಾಮ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಸ್ಥಳದಿಂದ ಪರಾರಿಯಾದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.