ಫುಟ್ಬಾಲ್ ಎಎಫ್‌ಸಿ ಕಪ್: ಬಿಎಫ್‌ಸಿಗಿಂದು ಬಾಂಗ್ಲಾದ ಕಿಂಗ್ಸ್ ಸವಾಲು
* ಎಎಫ್‌ಸಿ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಎರಡನೇ ಪಂದ್ಯಕ್ಕೆ ಸಜ್ಜಾದ ಬಿಎಫ್‌ಸಿ
* ಬಿಎಫ್‌ಸಿ ತಂಡಕ್ಕಿಂದು ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ಸವಾಲು
* ಇನ್ನುಳಿದ 2 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ ಬಿಎಫ್‌ಸಿ
ಮಾಲೆ(ಆ.21): 2021ರ ಎಎಫ್‌ಸಿ ಕಪ್ ಗುಂಪು ಹಂತದಲ್ಲಿ ಆರಂಭಿಕ ಆಘಾತ ಅನುಭವಿಸಿದ್ದ ಬೆಂಗಳೂರು ಎಫ್‌ಸಿ ತಂಡ, ಶನಿವಾರ ‘ಡಿ’ ಗುಂಪಿನ 2ನೇ ಪಂದ್ಯದಲ್ಲಿ ಬಾಂಗ್ಲಾದೇಶದ ಬಶುಂಧರ ಕಿಂಗ್ಸ್ ತಂಡದ ವಿರುದ್ಧ ಸೆಣಸಲಿದೆ.
ಅಂತರ ವಲಯ ಸೆಮಿಫೈನಲ್ ಪ್ಲೇ-ಆಫ್ ಪಂದ್ಯಕ್ಕೆ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಬಿಎಫ್‌ಸಿ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮೊದಲ ಪಂದ್ಯದಲ್ಲಿ ಭಾರತದ್ದೇ ತಂಡ ಎಟಿಕೆ ಮೋಹನ್ ಬಗಾನ್ ವಿರುದ್ಧ ಸುನಿಲ್ ಚೆಟ್ರಿ ಪಡೆ 0-2 ಗೋಲುಗಳಲ್ಲಿ ಪರಾಭವಗೊಂಡಿತ್ತು. ಇದೀಗ ಮಾಲ್ಡೀವ್ಸ್ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಚಾಂಪಿಯನ್ ಬಶುಂಧರ ಕಿಂಗ್ಸ್ ಸುನಿಲ್ ಚೆಟ್ರಿ ಪಡೆಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ.
ಎಎಫ್‌ಸಿ ಕಪ್: ಎಟಿಕೆ ಎದುರು ಮುಗ್ಗರಿಸಿದ ಬೆಂಗಳೂರು ಎಫ್‌ಸಿ
‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ಮಾತ್ರ ಅಂತರ ವಲಯ ಸೆಮೀಸ್ ಪ್ಲೇ-ಆಫ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಹೀಗಾಗಿ ಬಿಎಫ್‌ಸಿ ಕೊನೆ 2 ಪಂದ್ಯಗಳಲ್ಲಿ ಗೆದ್ದು, ಎಟಿಕೆ ಒಂದು ಪಂದ್ಯದಲ್ಲಿ ಸೋತರಷ್ಟೇ ಬಿಎಫ್‌ಸಿಗೆ ಮುಂದಿನ ಹಂತಕ್ಕೇರುವ ಅವಕಾಶ ಇರಲಿದೆ.