ಅಬ್ಬಬ್ಬಾ..ಏರ್‌ಪೋರ್ಟ್‌ನಲ್ಲಿ ಒಂದು ಪ್ಲೇಟ್ ಮ್ಯಾಗಿ ಬೆಲೆ ಇಷ್ಟೊಂದಾ?
ಏರ್‌ಪೋರ್ಟ್‌ಗಳಲ್ಲಿ ಎಲ್ಲವೂ ಕಾಸ್ಟ್ಲೀ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಇಲ್ಲೊಬ್ಬ ಮಹಿಳೆ ಶೇರ್ ಮಾಡಿರುವ ಫುಡ್ ಬಿಲ್ ಮಾತ್ರ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ. ಇದರಲ್ಲಿ ಒಂದು ಪ್ಲೇಟ್ ಮ್ಯಾಗಿಗೆ 193 ರೂ. ನಿಗದಿಪಡಿಸಲಾಗಿದೆ.
ಮ್ಯಾಗಿ ಬಹುತೇಕ ಹೆಚ್ಚಿನವರ ಫೇವರಿಟ್. ಮಾಡೋದು ಈಝಿ, ಐದೇ ನಿಮಿಷದಲ್ಲಿ ರೆಡಿಯಾಗುತ್ತೆ ಅನ್ನೋ ಕಾರಣಕ್ಕೆ ಕೇವಲ ಬ್ಯಾಚುಲರ್ಸ್ ಮಾತ್ರವಲ್ಲ ಎಲ್ಲರೂ ಇದನ್ನು ಇಷ್ಟಪಡುತ್ತಾರೆ. ಚೀಪ್ ಅಂಡ್ ಬೆಸ್ಟ್ ಆಗಿರುವ ಕಾರಣ ಸ್ಟ್ರೀಟ್‌ನಲ್ಲಿ ಸಿಗೋ ಮ್ಯಾಗಿಯನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಐದು ಅಥವಾ ಹತ್ತು ರೂಪಾಯಿಯ ಮ್ಯಾಗಿಯ ಪ್ಯಾಕೆಟ್ ತಂದು ಬಿಸಿನೀರಿಗೆ ಹಾಕಿ ಮಸಾಲೆ ಹಾಕಿ ಮಿಕ್ಸ್ ಮಾಡಿದರಾಯಿತು, ಮ್ಯಾಗಿ ಸಿದ್ಧವಾಗುತ್ತದೆ. ಅಗತ್ಯವಿದ್ದರೆ ಮಾತ್ರ ತರಕಾರಿಗಳನ್ನು ಸೇರಿಸಬಹುದು. ಹತ್ತು-ಇಪ್ಪತ್ತು ರೂಪಾಯಿಲ್ಲಿ ಒಂದು ಬೌಲ್ ಸಿದ್ಧವಾಗಿ ಬಿಡುತ್ತದೆ. ಆದರೆ ಇಲ್ಲೊಂದು ಏರ್‌ಪೋರ್ಟ್‌ನಲ್ಲಿ ಮ್ಯಾಗಿಗೆ 193 ರೂ. ನಿಗದಿಪಡಿಸಲಾಗಿದ್ದು, ಈ ಬಿಲ್ ಎಲ್ಲೆಡೆ ವೈರಲ್ ಆಗ್ತಿದೆ.
ಏರ್‌ಪೋರ್ಟ್‌ನಲ್ಲಿ ಮ್ಯಾಗಿ ನೂಡಲ್ಸ್‌ನ ಅಧಿಕ ಬೆಲೆಯ ಪ್ಲೇಟ್ ಕುರಿತು ಮಹಿಳೆ (Woman)ಯೊಬ್ಬರು ಇತ್ತೀಚೆಗೆ ಮಾಡಿದ ಟ್ವೀಟ್ ವೈರಲ್ ಆಗಿದ್ದು, ಜನರಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ವಿಮಾನ ನಿಲ್ದಾಣದಲ್ಲಿ (Airport) ಒಂದು ಪ್ಲೇಟ್ ಮ್ಯಾಗಿಯ ಬೆಲೆ 193 ರೂ.ಎಂದು ತಿಳಿದು ಜನರು ಗಾಬರಿಯಾಗಿದ್ದಾರೆ. ಪಿವಿಆರ್ ಮತ್ತು ವಿಮಾನ ನಿಲ್ದಾಣಗಳ ಮಳಿಗೆಗಳಲ್ಲಿರುವ ತಿಂಡಿತಿನಿಸು ಮತ್ತು ಪೇಯಗಳ ಗುಣಮಟ್ಟ, ಬೆಲೆಯ ಕುರಿತು ಆಗಾಗ ನೆಟ್ಟಿಗರು ತಮ್ಮ ಬೇಸರ, ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಈ ಫುಡ್ ಬಿಲ್ ಮಾತ್ರ ಎಲ್ಲರ ಊಹೆಗೂ ಮೀರುವಂತಿದೆ.
Viral Food : ಮ್ಯಾಗಿ ಬ್ರೆಡ್ ಪಕೋಡಾದಲ್ಲಿ ಇದು ಆಲೂ ಬದಲು ತುಂಬಿದ್ದೇನು?
ಮ್ಯಾಗಿ ವಿಮಾನಕ್ಕೆ ಬಳಸುವ ಇಂಧನದಿಂದ ತಯಾರಿಸ್ತಾರಾ ಎಂದು ಟೀಕಿಸಿದ ನೆಟ್ಟಿಗರು
ಅಂತಾರಾಷ್ಟ್ರೀಯ ಮಟ್ಟದ ಭಾಷಣಕಾರ್ತಿ ಮತ್ತು ಯೂಟ್ಯೂಬರ್ ಆಗಿರುವ ಸೇಜಲ್ ಸೂದ್ ಈ ಟ್ವೀಟ್ ಮಾಡಿದ್ದಾರೆ. ನಾನು ಈಗಷ್ಟೇ 193 ರೂ.ಗೆ ಒಂದು ಪ್ಲೇಟ್ ಮ್ಯಾಗಿಯನ್ನು ವಿಮಾನ ನಿಲ್ದಾಣದಲ್ಲಿ ಖರೀದಿಸಿದೆ. ಇದರ ಬೆಲೆ ನೋಡಿ ಗಾಬರಿಯಾದೆ. ಮ್ಯಾಗಿಯಂಥ ಖಾದ್ಯಕ್ಕೆ ಇಷ್ಟೊಂದು ಬೆಲೆ ಏರಿಸಿ ಮಾರಾಟ ಮಾಡುವುದಾದರೂ ಏಕೆ ಎಂದು ಗೊತ್ತಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಮೊನ್ನೆಯಷ್ಟೇ ಮಾಡಲಾದ ಈ ಟ್ವೀಟ್ ಅನ್ನು ಈತನಕ 2ಮಿಲಿಯನ್ಗಿಂತಲೂ ಹೆಚ್ಚು ಜನ ನೋಡಿದ್ದಾರೆ. 5,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 500 ಜನರು ರೀಟ್ವೀಟ್ ಮಾಡಿದ್ದಾರೆ.
ಪೋಸ್ಟ್ ಒಂದು ಮಿಲಿಯನ್ ವೀಕ್ಷಣೆಗಳು, 283 ರಿಟ್ವೀಟ್‌ಗಳು, 376 ಕಾಮೆಂಟ್ಸ್, 3,387 ಇಷ್ಟಗಳು ಮತ್ತು 78 ಬುಕ್‌ಮಾರ್ಕ್‌ಗಳನ್ನು ಪಡೆದುಕೊಂಡಿದೆ. 'ಇಂಡಿಗೋದಲ್ಲಿ ಇದು ರೂ. 250ಕ್ಕೆ ಸಿಗುತ್ತಿದೆ. ನನಗನಿಸಿದಂತೆ ಈ ಮ್ಯಾಗಿಯನ್ನು ವಿಮಾನಕ್ಕೆ (Flight) ಬಳಸುವ ಇಂಧನದಿಂದ ತಯಾರಿಸಲಾಗುತ್ತದೆಯೇನೋ' ಎಂದು ಬಳಕೆದಾರರೊಬ್ಬರು (User) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, 'ಮ್ಯಾಗಿಯನ್ನು ವಿಮಾನ ನಿಲ್ದಾಣದಲ್ಲಿ ಮಾರಾಟ ಮಾಡಲು ಸಾಕಷ್ಟು ಖರ್ಚಾಗುತ್ತದೆ. ಏಕೆಂದರೆ ಮ್ಯಾಗಿ ಮಾರಾಟ ಮಳಿಗೆ ಮತ್ತು ಬಾಣಸಿಗರ ನಿರ್ವಹಣೆಗಾಗಿ ಆದಾಯದ (Income) ಹಣವನ್ನು ವಿನಿಯೋಗಿಸಲಾಗುತ್ತದೆ' ಎಂದು ತಿಳಿಸಿದ್ದಾರೆ.
ಮೆಟ್ರೋದಲ್ಲಿ ಮ್ಯಾಗಿ ಶೇರಿಂಗ್: ಹುಡುಗರ ವೀಡಿಯೋದಿಂದ ಹಳೆಯ ನೆನಪಲ್ಲಿ ಮಿಂದೆದ್ದ ನೆಟ್ಟಿಗರು!
ಇದೇ ರೀತಿ ಪಿವಿಆರ್ ಮತ್ತು ದೊಡ್ಡ ದೊಡ್ಡ ಹೋಟೆಲ್, ರೆಸ್ಟೋರೆಂಟ್ಗಳಲ್ಲಿಯೂ ಆದಾಯದ ಹಣದಿಂದಲೇ ಸಿಬ್ಬಂದಿ ಮತ್ತಿತರೇ ವೆಚ್ಚವನ್ನು ನೀಗಿಸಲಾಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ. 'ವಿಮಾನ ನಿಲ್ದಾಣಕ್ಕೆ ಹೋಗುವಾಗ ನೀವು ಮನೆಯಿಂದಲೇ ತಿಂಡಿ ಕಟ್ಟಿಕೊಂಡು ಹೋಗಿ' ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.
ಒಟ್ನಲ್ಲಿ ಈ ಘಟನೆಯು ಆನ್‌ಲೈನ್‌ನಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ವಿಮಾನ ನಿಲ್ದಾಣದ ಬೆಲೆ ಪದ್ಧತಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ ಮತ್ತು ಇಂಥಾ ಹೆಚ್ಚುವರಿ ಶುಲ್ಕಗಳಿಂದ ಗ್ರಾಹಕರನ್ನು ರಕ್ಷಿಸಲು ನಿಯಮಗಳ ಅವಶ್ಯಕತೆಯಿದೆ ಎಂದು ಜನರು ಹೇಳಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವಿಮಾನ ನಿಲ್ದಾಣಗಳಲ್ಲಿ ನ್ಯಾಯಯುತ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಾರೋಎಂಬುದನ್ನು ಕಾದು ನೋಡಬೇಕಾಗಿದೆ.