Healthy cooking oils: ಸೋಶಿಯಲ್ ಮೀಡಿಯಾ ನೋಡಿ ಪದೇ ಪದೇ ಅಡುಗೆ ಎಣ್ಣೆ ಬದಲಿಸುತ್ತಿದ್ದೀರಾ? ಹಾಗಿದ್ದರೆ ನೀವು ಅಪಾಯಕ್ಕೆ ಸಿಲುಕಿದಂತೆ! ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಒಂದು ಎಣ್ಣೆಯೂ ನಿಮ್ಮ ಆರೋಗ್ಯವನ್ನು ಅದ್ಭುತವಾಗಿ ಬದಲಿಸಲು ಸಾಧ್ಯವಿಲ್ಲ. ಹಾಗಾದರೆ ನಮ್ಮ ಅಡುಗೆಗೆ ಯಾವ ಎಣ್ಣೆ ಬಳಸಬೇಕು? 'ಸ್ಮೋಕ್ ಪಾಯಿಂಟ್' ಅಂದರೇನು? ಹೃದಯದ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ಎಣ್ಣೆ ಬಳಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಜೀವನಶೈಲಿಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿರುವುದು ನಿಜ. ಆದರೆ ಅದೇ ಸಮಯದಲ್ಲಿ, ಯಾವ ಅಡುಗೆ ಎಣ್ಣೆ ಬಳಸಬೇಕು ಎನ್ನುವ ಗೊಂದಲವೂ ಅಷ್ಟೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ವಾರವೂ ಒಂದು ಹೊಸ ಎಣ್ಣೆ 'ಸೂಪರ್‌ಫುಡ್' ಆಗಿ ಪರಿಚಯಿಸಲ್ಪಡುತ್ತದೆ. ಒಂದು ವಾರ ಆಲಿವ್ ಆಯಿಲ್ ಅಮೃತ ಎಂದರೆ, ಇನ್ನೊಂದು ವಾರ ಕೊಬ್ಬರಿ ಎಣ್ಣೆ ಅಥವಾ ಸಾಸಿವೆ ಎಣ್ಣೆ ಒಳಿತು ಎಂಬ ಪ್ರಚಾರಗಳು ನಡೆಯುತ್ತವೆ. ಆದರೆ ಪೌಷ್ಟಿಕಾಂಶ ತಜ್ಞರ ಪ್ರಕಾರ, ಯಾವುದೇ ಒಂದು ಎಣ್ಣೆಯೂ ರಾತ್ರೋರಾತ್ರಿ ನಿಮ್ಮ ಆರೋಗ್ಯವನ್ನು ಸುಧಾರಿಸುವುದಿಲ್ಲ. ಮಾರುಕಟ್ಟೆಯ ಈ ಭ್ರಮೆಗಳನ್ನು ಪಕ್ಕಕ್ಕಿಟ್ಟು, ವೈಜ್ಞಾನಿಕವಾಗಿ ಎಣ್ಣೆಯನ್ನು ಹೇಗೆ ಆಯ್ಕೆ ಮಾಡಬೇಕು ಎಂದು ತಿಳಿಯುವುದು ಮುಖ್ಯ.

ಭಾರತೀಯರು ಎಂದಿಗೂ ಒಂದೇ ರೀತಿಯ ಎಣ್ಣೆಯ ಮೇಲೆ ಅವಲಂಬಿತರಾಗಿರಲಿಲ್ಲ. ನಮ್ಮ ದೇಶದ ಪ್ರಾದೇಶಿಕ ಹವಾಮಾನ ಮತ್ತು ಅಲ್ಲಿನ ಬೆಳೆಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಎಣ್ಣೆಗಳನ್ನು ಬಳಸಲಾಗುತ್ತಿತ್ತು.
ಉತ್ತರ ಭಾರತ: ಘಾಟಾದ ಸಾಸಿವೆ ಎಣ್ಣೆ.
ದಕ್ಷಿಣ ಭಾರತ: ಶುದ್ಧ ಕೊಬ್ಬರಿ ಎಣ್ಣೆ.
ಪಶ್ಚಿಮ ಭಾರತ: ಶೇಂಗಾ (ಕಡಲೆಕಾಯಿ) ಮತ್ತು ಎಳ್ಳೆಣ್ಣೆ.
ಈ ವೈವಿಧ್ಯತೆಯ ಹಿಂದೆ ನಮ್ಮ ಪೂರ್ವಜರ ಆಳವಾದ ಆಹಾರ ವಿಜ್ಞಾನ ಅಡಗಿದೆ. ಆದ್ದರಿಂದ ಇಂಟರ್ನೆಟ್‌ನಲ್ಲಿ ಸಿಗುವ ಅರೆಬರೆ ಮಾಹಿತಿಯನ್ನು ನಂಬಿ ನಮ್ಮ ಸಾಂಪ್ರದಾಯಿಕ ಎಣ್ಣೆಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ನಿರ್ಲಕ್ಷಿಸುವ ಅಗತ್ಯವಿಲ್ಲ.
ಅಡುಗೆಗೆ 'ಸ್ಮೋಕ್ ಪಾಯಿಂಟ್' ಮುಖ್ಯ
ಭಾರತೀಯ ಅಡುಗೆ ಪದ್ಧತಿಯಲ್ಲಿ ಅತಿ ಹೆಚ್ಚು ತಾಪಮಾನದಲ್ಲಿ ಎಣ್ಣೆಯನ್ನು ಕಾಯಿಸುವುದು ಅಥವಾ ಹುರಿಯುವುದು ಸಾಮಾನ್ಯ. ಆದ್ದರಿಂದ ಎಣ್ಣೆಯನ್ನು ಆರಿಸುವಾಗ ಅದರ 'ಸ್ಮೋಕ್ ಪಾಯಿಂಟ್' (ಹೊಗೆ ಬರುವ ಹಂತ) ಅತ್ಯಂತ ಪ್ರಮುಖವಾದುದು.
ಸಾಸಿವೆ ಎಣ್ಣೆ ಮತ್ತು ಶೇಂಗಾ ಎಣ್ಣೆ
ಇವುಗಳ ಸ್ಮೋಕ್ ಪಾಯಿಂಟ್ ಹೆಚ್ಚಿರುತ್ತದೆ. ಆದ್ದರಿಂದ ನಮ್ಮ ದೇಶೀಯ ಅಡುಗೆಗಳಿಗೆ ಮತ್ತು ಪದಾರ್ಥಗಳನ್ನು ಕರಿಯಲು ಇವು ಅತ್ಯಂತ ಸೂಕ್ತ.
ಎಕ್ಸ್‌ಟ್ರಾ ವರ್ಜಿನ್ ಆಲಿವ್ ಆಯಿಲ್
ಇದರ ಸ್ಮೋಕ್ ಪಾಯಿಂಟ್ ತುಂಬಾ ಕಡಿಮೆ ಇರುತ್ತದೆ. ಇದನ್ನು ಹೆಚ್ಚು ಕಾಯಿಸಿದರೆ ಪೋಷಕಾಂಶಗಳು ನಾಶವಾಗುತ್ತವೆ. ಆದ್ದರಿಂದ ಇದನ್ನು ಕೇವಲ ಸಲಾಡ್‌ಗಳಿಗೆ ಅಥವಾ ಕಡಿಮೆ ಉರಿಯಲ್ಲಿ ಮಾಡುವ ಅಡುಗೆಗಳಿಗೆ ಮಾತ್ರ ಬಳಸಬೇಕು.
ರಿಫೈನ್ಡ್ ಎಣ್ಣೆಗಳು ಸುರಕ್ಷಿತವೇ?
ರಿಫೈನ್ಡ್ ಎಣ್ಣೆ ಎಂದರೆ ಆರೋಗ್ಯಕ್ಕೆ ಕೆಟ್ಟದ್ದು ಎನ್ನುವ ಟಾಕ್ ಇದೆ. ಆದರೆ Refining ಎಂಬುದು ಎಣ್ಣೆಯಲ್ಲಿರುವ ಅನಗತ್ಯ ಕಲ್ಮಶಗಳನ್ನು, ವಾಸನೆಯನ್ನು ಮತ್ತು ಆಮ್ಲೀಯತೆಯನ್ನು ತೆಗೆದುಹಾಕಿ, ಅಡುಗೆಗೆ ಬಳಸಲು ಯೋಗ್ಯವಾಗಿಸುವ ಒಂದು ಪ್ರಕ್ರಿಯೆ ಮಾತ್ರ. ಆದರೆ ಅತಿಯಾದ ರಾಸಾಯನಿಕ ಪ್ರಕ್ರಿಯೆಗೆ ಒಳಗಾದ ಎಣ್ಣೆಗಳಿಗಿಂತ, ಕಡಿಮೆ ಸಂಸ್ಕರಣೆಗೊಳಗಾದ 'ವರ್ಜಿನ್' ಅಥವಾ 'ಕೋಲ್ಡ್ ಪ್ರೆಸ್ಡ್' (ಗಾಣದ ಎಣ್ಣೆ) ಎಣ್ಣೆಗಳನ್ನು ಬಳಸುವುದರಿಂದ ಹೆಚ್ಚಿನ ಪೋಷಕಾಂಶ ಪಡೆಯಬಹುದು ಎಂದು ತಜ್ಞರು ಸೂಚಿಸುತ್ತಾರೆ.
ತಜ್ಞರು ಹೇಳೋದೇನು?
ಆರೋಗ್ಯಕರ ಹೃದಯಕ್ಕಾಗಿ ತಜ್ಞರು ಎರಡು ಪ್ರಮುಖ ಸೂತ್ರಗಳನ್ನು ತಿಳಿಸಿದ್ದಾರೆ..
ಆಯಿಲ್ ರೊಟೇಶನ್ (ಬದಲಾವಣೆ)
ಯಾವಾಗಲೂ ಒಂದೇ ಎಣ್ಣೆಯನ್ನು ಬಳಸಬೇಡಿ. ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಅಡುಗೆ ಎಣ್ಣೆಯನ್ನು ಬದಲಿಸುತ್ತಿರಿ (ಉದಾಹರಣೆಗೆ ಒಂದು ತಿಂಗಳು ಶೇಂಗಾ ಎಣ್ಣೆ ಬಳಸಿದರೆ, ಇನ್ನೊಂದು ತಿಂಗಳು ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆ ಬಳಸುವುದು). ಇದರಿಂದ ದೇಹಕ್ಕೆ ಬೇಕಾದ ವಿವಿಧ ಕೊಬ್ಬಿನಾಮ್ಲಗಳು ಸಮತೋಲಿತವಾಗಿ ದೊರೆಯುತ್ತವೆ.
ಪರಿಮಾಣ (Quantity)
ಎಣ್ಣೆ ಯಾವುದಾದರೇನು, ಬಳಸುವ ಪ್ರಮಾಣವೇ ಮುಖ್ಯ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಕೇವಲ 15 ರಿಂದ 20 ಮಿಲಿ ಲೀಟರ್ ಎಣ್ಣೆಯನ್ನು ಮಾತ್ರ ಸೇವಿಸಬೇಕು.


